Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ನಾಯಿಗೆ ಸ್ನಾನ ಮಾಡಿಸಿದರೆ ಒಳ್ಳೆಯ ವಿದ್ಯಾರ್ಥಿ..!

Tuesday, 19.06.2018, 3:03 AM       No Comments

| ಶ್ರೀಕಾಂತ ಶೇಷಾದ್ರಿ ಬೆಂಗಳೂರು /ಅರವಿಂದ ಅಕ್ಲಾಪುರ ಶಿವಮೊಗ್ಗ

ಸಮಾನತೆಯ ಮಂತ್ರ ಸಾರಿದ್ದ ರಾಷ್ಟ್ರಕವಿ ಕುವೆಂಪು ಹೆಸರಿನ ಕನ್ನಡ ಅಧ್ಯಯನ ಕೇಂದ್ರದಲ್ಲೀಗ ಶೋಷಣೆಯೇ ಕೇಂದ್ರಬಿಂದು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿ ನಡೆಯುತ್ತಿರುವ ಈ ಕೇಂದ್ರದ ಸಂಶೋಧನಾರ್ಥಿಗಳು ಏನನ್ನೂ ಹೇಳಲಾಗದೆ, ಎಲ್ಲವನ್ನೂ ಅನುಭವಿಸಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷ ಸ್ನಾತಕೋತ್ತರ ವ್ಯಾಸಂಗಕ್ಕೆ ಬಂದವರು ಅನುಭವಿಸಿದ ಕಷ್ಟ ಇವರನ್ನು ಮೌನವಾಗಿಸಿಬಿಟ್ಟಿದೆ.

ಪಿಎಚ್​ಡಿ ಸಂಶೋಧನೆಗೆಂದು ಬಂದ ವಿದ್ಯಾರ್ಥಿಗಳ ಮೇಲೆ ಯಾವಾಗಲೂ ಹದ್ದಿನಗಣ್ಣು. ಒಳಗಿನ ಸತ್ಯ ಎಲ್ಲಿ ಹೊರ ಹಾಕುವರೋ ಎಂಬ ಪ್ರಾಧ್ಯಾಪಕರ ಆತಂಕವೇ ಇದಕ್ಕೆ ಕಾರಣ. ಇದಕ್ಕಾಗಿ ಅವರು ಅನುಸರಿಸಿದ್ದು ಒಡೆದು ಆಳುವ ನೀತಿ. ವಿದ್ಯಾರ್ಥಿಗಳ ಪೈಕಿ ಯಾರಾದರೂ ವಾಸ್ತವಾಂಶ ಬಹಿರಂಗಪಡಿಸಲು ಮುಂದಾದರೆ ಮತ್ತೋರ್ವ ವಿದ್ಯಾರ್ಥಿ ಅದನ್ನು ಪ್ರಾಧ್ಯಾಪಕರ ಗಮನಕ್ಕೆ ತರುತ್ತಾನೆ.

ಅತಂತ್ರ ವಿದ್ಯಾರ್ಥಿಗಳು: ಕಳೆದ ವರ್ಷ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಬಂದ ವಿದ್ಯಾರ್ಥಿಗಳ ಪಾಡು ಪಿಎಚ್​ಡಿಗೆಂದು ಬಂದ ವಿದ್ಯಾರ್ಥಿಗಳಿಗಿಂತಲೂ ಶೋಚನೀಯ. ರಸಋಷಿಯ ಹೆಸರಿನ ಆಕರ್ಷಣೆಯಿಂದ ಬಂದವರಿಗೆ ಎದುರಾಗಿದ್ದು ಸಂಪೂರ್ಣ ನಿರಾಸೆ. ಮೂಲಸೌಕರ್ಯ ಇಲ್ಲ ಎಂಬ ಕೊರಗು ಒಂದೆಡೆಯಾದರೆ ಪ್ರಾಧ್ಯಾಪಕರ ಮನೆಗೆಲಸ ಮಾಡಬೇಕಾದ ಅನಿವಾರ್ಯತೆ ಬೇರೆ.

ಪ್ರಾಧ್ಯಾಪಕರ ಮನೆ ನಾಯಿಯ ಆರೈಕೆ ಜತೆಗೆ ಅವರ ಮನೆಯ ನಿತ್ಯದ ಕೆಲಸವೂ ಎಂಎ ವಿದ್ಯಾರ್ಥಿಗಳ ಹೆಗಲೇರಿತ್ತು. ಅದನ್ನೆಲ್ಲ ಮಾಡಿದರೆ ಮಾತ್ರ ಎಂಎ ಪರೀಕ್ಷೆಗೆ ಅವಕಾಶವೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು. ಸರಿಯಾಗಿ ತರಗತಿಗಳು ನಡೆಯದಿದ್ದರೂ ಪ್ರಾಧ್ಯಾಪಕರ ಮನೆಗೆಲಸ ಮಾತ್ರ ಸುಸೂತ್ರವಾಗಿ ನಡೆಯುತ್ತಿತ್ತು.

ನಿಧಾನವಾಗಿ ವಿದ್ಯಾರ್ಥಿಗಳು ವಿವಿ ವಿರುದ್ಧ ಅಸಮಾಧಾನ ಹೊರಹಾಕಲಾರಂಭಿಸಿದರು. ಇದೇ ಕಾರಣಕ್ಕೆ ವಸತಿ ಸೌಲಭ್ಯ ಕಡಿತಗೊಳಿಸಿದ ಹಂಪಿ ಕನ್ನಡ ವಿವಿ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೈಚೆಲ್ಲಿತು. ಆದರೆ ದೂರದ ಊರುಗಳಿಂದ ಬಂದ ಬಡ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಮನೆಗೆಲಸ ಮಾಡಿಕೊಂಡು ಹೇಗೋ ಅಲ್ಲೇ ಉಳಿದುಕೊಂಡರು. ಏಳು ವಿದ್ಯಾರ್ಥಿಗಳ ಪೈಕಿ ಮೊದಲ ಸೆಮಿಸ್ಟರ್ ಬರೆದಿದ್ದು ಓರ್ವ ವಿದ್ಯಾರ್ಥಿ ಮಾತ್ರ. ಎರಡನೇ ಸೆಮಿಸ್ಟರ್​ಗೆ ಉಳಿದ ಆರು ಮಂದಿಯೂ ಚಾಕರಿ ಮಾಡಲಾಗದೆ ಊರು ಸೇರಿಕೊಂಡರು.

ವಿದ್ಯಾರ್ಥಿಯ ಅಳಲು

ಕುವೆಂಪು ಕನ್ನಡ ಅಧ್ಯಯನ ಕೇಂದ್ರದಿಂದ ಎಂಎ ಪದವಿ ಪಡೆಯಲು ಪ್ರಾಧ್ಯಾಪಕರ ಮನೆಯಾಳಾಗಿ ದುಡಿಯಲೇಬೇಕು. ಅವರ ಮನೆ ನಾಯಿಗೆ ನಿತ್ಯವೂ ಸ್ನಾನ ಮಾಡಿಸಿ, ಊಟ ಹಾಕಿ, ಅದನ್ನು ಕಾಯಬೇಕು. ಆಗ ಪದವಿ, ಪಿಎಚ್​ಡಿ ಸಿಗುತ್ತದೆ ಎಂಬುದು ವಿದ್ಯಾರ್ಥಿಯೊಬ್ಬನ ಅಳಲು. ತರಗತಿಗಳು ಸರಿಯಾಗಿ ನಡೆಯುವುದಿಲ್ಲ. ಬೆಳಗ್ಗೆ 6ರಿಂದಲೇ ಉಪನ್ಯಾಸಕರ ಚಾಕರಿ ಮಾಡಬೇಕು. ಆರು ಗಂಟೆಗೆ ಎದ್ದು ನೀರು ಹೊರುವುದು, ಪಾತ್ರೆ ತೊಳೆಯುವುದು, ತಿಂಡಿ ಸಿದ್ಧಪಡಿಸುವುದು.. ಹೀಗೆ ಎಲ್ಲ ಕೆಲಸ ಮುಗಿಸುವಾಗ 11 ಗಂಟೆ. ಮತ್ತೆ 12 ಗಂಟೆಯಿಂದ ಮಧ್ಯಾಹ್ನದ ಊಟಕ್ಕೆ ತಯಾರಿ. ಆ ಎಂಜಲು ಬಳಿದು, ಪಾತ್ರೆ ಶುಚಿಗೊಳಿಸುವಾಗ ಗಂಟೆ ನಾಲ್ಕಾಗಿರುತ್ತದೆ. ಪುನಃ ಸಂಜೆ 6ರಿಂದ 10ರವರೆಗೆ ರಾತ್ರಿಯ ಊಟೋಪಚಾರ ಎಂದು ವಿದ್ಯಾರ್ಥಿಯೊಬ್ಬ ದಿನಚರಿ ವಿವರಿಸುವಾಗ ಆತ ಪಟ್ಟ ಯಾತನೆ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಸ್ಪಂದಿಸದ ಕುಲಪತಿ

ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಅವ್ಯವಸ್ಥೆ, ಪ್ರಾಧ್ಯಾಪಕರು ನಡೆಸುತ್ತಿರುವ ಶೋಷಣೆ ಕುರಿತು ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಅವರಿಗೆ ಜೂ.7ರಂದೇ ಕೆಲ ವಿದ್ಯಾರ್ಥಿಗಳು ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರೂ ಇದುವರೆಗೂ ಉತ್ತರ ಬಂದಿಲ್ಲ. ಕಡೇಪಕ್ಷ ದೂರು ನೀಡಿದವರನ್ನು ಕರೆಸಿ ವಾಸ್ತವಾಂಶ ತಿಳಿಯಲೂ ಮುಂದಾಗದ್ದಕ್ಕೆ ನೊಂದ ವಿದ್ಯಾರ್ಥಿಗಳು ಮತ್ತಷ್ಟು ಬೇಸರಗೊಂಡಿದ್ದಾರೆ.

ರಾಜ್ಯಪಾಲರಿಗೂ ದೂರು ರವಾನೆ

ಯಾವಾಗ ಹಂಪಿ ಕನ್ನಡ ವಿವಿ ಸ್ಪಂದಿಸುವುದಿಲ್ಲವೆಂಬುದು ಖಾತ್ರಿಯಾಯಿತೋ ಆಗ ವಿದ್ಯಾರ್ಥಿಗಳು ನೇರವಾಗಿ ರಾಜ್ಯಪಾಲರಿಗೆ ಇ-ಮೇಲ್ ಮಾಡಿದ್ದು, ಅವರ ಪ್ರತಿಕ್ರಿಯೆ ಬಗ್ಗೆ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top