More

    ಸಾಂಪ್ರದಾಯಿಕ ಕಲಾ ವೈಭವದೊಂದಿಗೆ ಶ್ರೀ ಶಾರದೆ ಮಹಾರಥೋತ್ಸವ

    ಶೃಂಗೇರಿ: ನವರಾತ್ರಿ ಪ್ರಯುಕ್ತ ಶ್ರೀ ಶಾರದಾಂಬಾ ಮಹಾರಥೋತ್ಸವ ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.

    ಆಂಧ್ರಪ್ರದೇಶ, ತಮಿಳುನಾಡು, ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ ಮುಂತಾದ ಪ್ರದೇಶಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವ ಹಾಗೂ ಜಗದ್ಗುರುಗಳ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಮುಖ್ಯಬೀದಿಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಮಠದಿಂದ ಆಗಮಿಸಿದ ಶ್ರೀ ಶಾರದೆ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವ ಪ್ರಾರಂಭಗೊಂಡಿತು.
    ತಳಿರು-ತೋರಣ, ರಂಗವಲ್ಲಿ, ಅಲಂಕೃತ ಆನೆಗಳು, ಅಶ್ವಗಳು, ಮಠದ ಛತ್ರಿ-ಚಾಮರಗಳು, ತಟ್ಟಿರಾಯಗಳು, ವೇದ-ವಾದ್ಯಘೋಷಗಳು, ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಅನಾವರಣಗೊಳಿಸಿದ ಸ್ತಬ್ಧಚಿತ್ರಗಳು ಉತ್ಸವಕ್ಕೆ ಮೆರುಗು ನೀಡಿದ್ದವು.
    ಮೆರವಣಿಗೆಯಲ್ಲಿ ಭಜನಾ ಮಂಡಳಿಗಳು, ಸೋಮ್ಲಪುರ ಪಂಚಲಿಂಗೇಶ್ವರ ನಾಸಿಕ್ ಡೋಲ್, ಅಡ್ಡಗದ್ದೆ ಗ್ರಾಪಂ ಮಕ್ಕಳ ದೇವಿಯ ವಿವಿಧ ರೂಪಗಳ ಸ್ತಬ್ಧಚಿತ್ರ, ಕೂತುಗೋಡು ಗ್ರಾಪಂ ಹಾಗೂ ಕರ್ನಾಟಕ ಜಾನಪದ ಪರಿಷತ್ ಅನಾವರಣಗೊಳಿಸಿದ ಜಾನಪದ ಕಲಾವೈಭವ, ಗೋಚವಳ್ಳಿ ಯುವಕ ಸಂಘದ ಮರಗಾಲು ಕುಣಿತ, ನಾಟ್ಯವೈಭವ ನೃತ್ಯ ಅಕಾಡೆಮಿ ಅವರ ನೃತ್ಯ ವೈಭವ, ರಕ್ತೇಶ್ವರಿ ವರ್ಕ್ಸ್ ಅವರ ಆದಿಶಂಕರಾಚಾರ್ಯರ ಸ್ತಬ್ಧಚಿತ್ರ, ಕಿಕ್ರೆಹೊಂಡ ಅವರ ಹಳ್ಳಿಕಟ್ಟೆ ಚಿತ್ರಣ, ಗೀರ್ವಾಣಿ ಮಹಿಳಾ ಮಂಡಳಿ ಹಾಗೂ ಪಟ್ಟಣ ವ್ಯಾಪ್ತಿಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಕಮಲಶಿಲೆ ಅವರ ಚೆಂಡೆ ವಾದನ ಇತ್ಯಾದಿ ಮಹಾರಥೋತ್ಸವದ ಹಿರಿಮೆಗೆ ಸಾಕ್ಷಿಯಾದವು. ಭಕ್ತರು ಜಗದ್ಗುರುಗಳಿಗೆ ಹಣ್ಣು ಸಮರ್ಪಿಸಿ, ಆರತಿ ಬೆಳಗಿ ಆಶೀರ್ವಾದ ಪಡೆದರು.
    ಮಠದಲ್ಲಿ ಬುಧವಾರ ನಡೆದ ಹಗಲು ದರ್ಬಾರಿನಲ್ಲಿ ಸಂಪ್ರದಾಯಕ್ಕೆ ಅನುಗುಣವಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ದೇವಾಲಯ ಪ್ರವೇಶಿಸಿದ ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿ ಶ್ರೀ ಶಾರದಾ ಮೂರ್ತಿಯನ್ನು ಬಂಗಾರದ ರಥದಲ್ಲಿ ಕುಳ್ಳಿರಿಸಿ ದೇವಾಲಯದ ಒಳಪ್ರಾಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ೋಷಗಳೊಂದಿಗೆ ಉತ್ಸವ ನೆರವೇರಿಸಲಾಯಿತು. ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ವೇದಗಳ ಪಾರಾಯಣ, 13 ಅಧ್ಯಾಯಗಳ ಸಪ್ತಶತಿ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ, ಸರ್ವವಾದ್ಯಸೇವೆ ನಡೆಯಿತು. ದೇವಿಗೆ ಮಹಾಮಂಗಳಾರತಿ ನೆರವೇರಿತು. ಶ್ರೀಗಳು ಭಕ್ತರಿಗೆ ತೀರ್ಥ ನೀಡಿ ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts