More

    ಶಿಸ್ತುಬದ್ಧ ಜೀವನ ಶೈಲಿ ಅಗತ್ಯ

    ಹೊಸದುರ್ಗ: ಆರೋಗ್ಯ ಸಮಸ್ಯೆ ಉಂಟಾದಾಗ ಚಿಂತಿಸುವ ಬದಲು ಅನಾರೋಗ್ಯ ಕಾಡದಂತೆ ಎಚ್ಚರಿಕೆ ವಹಿಸಿದರೆ ಉತ್ತಮ ಜೀವನ ನಡೆಸಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಘವೇಂದ್ರ ಪ್ರಸಾದ್ ತಿಳಿಸಿದರು.

    ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸೋಮವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ಒತ್ತಡದ ಬದುಕು ಹಾಗೂ ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಅನಾರೋಗ್ಯ ಕಾಡುತ್ತಿದೆ. ತಿನ್ನುವ ಆಹಾರ ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಆರೋಗ್ಯ ರಕ್ಷಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

    ಸನಾತನ ಪರಂಪರೆಯ ಆಯುರ್ವೇದ ವೈದ್ಯಕೀಯ ಪದ್ಧತಿಯು ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಯೋಗ, ಪ್ರಾಣಾಯಾಮ ಮತ್ತಿತರ ಚಿಕಿತ್ಸಾ ಪದ್ಧತಿಯನ್ನು ಒಳಗೊಂಡಿರುವ ಪ್ರಕೃತಿ ಚಿಕಿತ್ಸೆಯು ಹಲವಾರು ರೋಗಗಳು ಬರದಂತೆ ತಡೆಯುವ ಶಕ್ತಿ ಹೊಂದಿವೆ ಎಂದು ಹೇಳಿದರು.

    ಅನಾರೋಗ್ಯ ಸಮಸ್ಯೆ ಉಂಟಾದಾಗ ಸ್ವಯಂ ವೈದ್ಯ ಚಿಕಿತ್ಸೆ ಪಡೆಯುವ ಬದಲು ವೈದ್ಯರನ್ನ ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದರೆ ಅಡ್ಡ ಪರಿಣಾಮಗಳಿಗೆ ಕಡಿವಾಣ ಹಾಕಬಹುದು ಎಂದರು.

    ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಎಸ್.ಬಾಹುಬಲಿ ಮಾತನಾಡಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳು ಔಷಧ ನೀಡದೆ ಆರೋಗ್ಯವನ್ನು ಸರಿಪಡಿಸುವ ಉತ್ತಮ ವೈದ್ಯ ಪದ್ಧತಿಯಾಗಿದೆ. ನಿಗದಿತ ಪ್ರಮಾಣದ ಶುಚಿಯಾದ ಆಹಾರವನ್ನು ಸೇವಿಸುವುದರಿಂದ ಬಹಳಷ್ಟು ರೋಗಗಳನ್ನ ಹತೋಟಿಯಲ್ಲಿ ಇಡಬಹುದು ಎಂದು ಹೇಳಿದರು.

    ಡಾ. ಪ್ರಶಾಂಶ್ ಶೆಟ್ಟಿ, ಡಾ.ಚಂದ್ರಕಾಂತ್, ಡಾ.ನಾಗಚೈತನ್ಯ, ಡಾ.ಪವನ್‌ಕುಮಾರ್, ಎಂ.ಎಚ್.ಕೃಷ್ಣಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts