More

    ಗಟ್ಟಿ ಮಾತುಗಳೆಲ್ಲ ಲೋಕೋಕ್ತಿಗಳಾಗಿ ಪ್ರಸಿದ್ಧ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಪಂಪನ ವಿಕ್ರಮಾರ್ಜುನ ವಿಜಯ, ಆದಿಪುರಾಣ, ಪಂಚತಂತ್ರದ ಕಥೆಗಳು, ಜಗನ್ನಾಥ ವಿಜಯ ಅಥವಾ ಇನ್ನಾವುದೇ ಪ್ರಾಚೀನ ಕಾವ್ಯಗಳಿರಬಹುದು. ಅವುಗಳಲ್ಲಿಯ ಮಾರ್ಗದರ್ಶನ ಮಾಡುವಂತಹ ಸಂದರ್ಭ, ಸನ್ನಿವೇಶ ಅವಲಂಬಿಸಿ ಉದ್ಭವಿಸಿದ, ಹೊರಬಂದ ಪ್ರಾದೇಶಿಕ, ಸ್ಥಳೀಯ ಜಾನಪದರ ಮಾತುಗಳೇ ಲೋಕೋಕ್ತಿಗಳ ರೂಪದಲ್ಲಿ ಪ್ರಾಚೀನ ಕಾವ್ಯಗಳಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿವೆ ಎಂದು ಕರ್ನಾಟಕ ಕಲಾ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ. ಚಿದಾನಂದ ಮಾಸನಕಟ್ಟಿ ಅಭಿಪ್ರಾಯವ್ಯಕ್ತಪಡಿಸಿದರು.
    ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟದ ಆಶ್ರಯದಲ್ಲಿ ಇಲ್ಲಿನ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಾಚೀನ ಕಾವ್ಯಗಳಲ್ಲಿ ಲೋಕೋಕ್ತಿಗಳು ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಅಮೃತದಂತಹ ಊಟಮಾಡಿ ಗೋಮೂತ್ರದಿಂದ ಬಾಯಿ ತೊಳೆದುಕೊಂಡಂತೆ, ಮುಳ್ಳಿನಿಂದ ಮುಳ್ಳು ತೆಗೆಯುವುದು, ಹೇಡಿಯ ಮುಂದೆ ಹಾವು ಹೊರಟಂತೆ, ತಾನಿದ್ದರೆ ಮೂರು ಲೋಕ, ಶೆಟ್ಟಿಯ ಬಳ್ಳ ಕಿರಿದು, ಅತ್ತ ಪುಲಿ, ಇತ್ತದರಿ, ಇತರ ಸಾಮಾಜಿಕ, ಧಾರ್ಮಿಕ ಹಾಗೂ ಇನ್ನೂ ಅನೇಕ ಹಿನ್ನೆಲೆಗಳುಳ್ಳ ಗಟ್ಟಿ ಮಾತುಗಳೆಲ್ಲ ಲೋಕೋಕ್ತಿಗಳಾಗಿ ಪ್ರಸಿದ್ಧವಾಗಿವೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಪ್ರೊ. ಶಾಂತಿನಾಥ ದಿಬ್ಬದ ಮಾತನಾಡಿ, ಭಿನ್ನ ಭಿನ್ನ ಪ್ರದೇಶ, ಭಿನ್ನ ಭಿನ್ನ ಸಂಸ್ಕೃತಿಗಳ ದೇಶಿ ಪ್ರಜ್ಞೆಯನ್ನೊಳಗೊಂಡ ಅನುಭವ ಜನ್ಯವಾದ, ಒಳಗಿನ ಒತ್ತಡ ಮೀರಿದಾಗ ಹೊರಬಂದ ಮಾತುಗಳೇ ಲೋಕೋಕ್ತಿಗಳಾಗಿವೆ. ಜನ ಬದುಕಲೆಂದೇ ನಾನು ಕಾವ್ಯ ಬರೆಯುತ್ತೇನೆಂಬ ರಾಘವಾಂಕನ ಮಾತು, ನನ್ನ ಜನತೆಗೆ ದೇವರ ಬಳಿ ಹೋಗಲು ನಾನು ಬರೆಯುತ್ತೇನೆ ಎಂಬ ಮಿಲ್ಟನ್ ಮಹಾಕವಿ ಮಾತುಗಳೆಲ್ಲ ಇದಕ್ಕೆ ಪೂರಕವಾಗಿ ನಿಲ್ಲುತ್ತವೆ ಎಂದರು.
    ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಡಾ. ಹ. ವೆಂ. ಕಾಖಂಡಕಿ, ರಾಜೀವ ಪಾಟೀಲ ಕುಲಕರ್ಣಿ, ಶ್ರೀನಿವಾಸ ವಾಡಪ್ಪಿ, ಎಸ್.ಬಿ. ದ್ವಾರಪಾಲಕ, ಜಿ.ಆರ್. ಭಟ್ಟ, ಅನಂತ ಸಿದ್ದೇಶ್ವರ, ಎಂ.ಬಿ. ಸದಾನಂದ, ಶ್ರೀಧರ ಗಾಂವಕರ, ರಮೇಶ ನಾಡಗೀರ, ಎಂ.ಜಿ. ಸಿಂದಗಿ, ಕೆ.ಇ. ಬಾಗಲವಾಡಿ, ಬಿ.ಜಿ. ಗುಂಡೂರ, ಡಾ. ಶಾಲಿನಿ ರಘುನಾಥ, ಡಾ. ಮಂದಾಕಿನಿ ಪುರೋಹಿತ, ಸೀಮಾ ಪರಾಂಜಪೆ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts