Thursday, 24th May 2018  

Vijayavani

Breaking News

ಖಾಸಗಿ ವೈದ್ಯರ ಮುಷ್ಕರ: ಬುಧವಾರ ಮತ್ತೆ ಆರು ಜೀವ ಬಲಿ

Wednesday, 15.11.2017, 3:40 PM       No Comments

>> ಗುರುವಾರ ಒಪಿಡಿ ಸೇವೆ ಕೂಡ ಸ್ಥಗಿತಗೊಳಿಸಿ ಪ್ರತಿಭಟಿಸಲು ಯೋಚಿಸುತ್ತಿರುವ ವೈದ್ಯರು

ಬೆಂಗಳೂರು: ಖಾಸಗಿ ವೈದ್ಯರ ಮುಷ್ಕರ ರೋಗಿಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಸೂಕ್ತ ಚಿಕಿತ್ಸೆ ಸಿಗದೆ ಬುಧವಾರ ಮತ್ತೆ 6 ಜನ ಮೃತಪಟ್ಟಿದ್ದಾರೆ.

ಸೋಮವಾರದಿಂದ ಪ್ರಾರಂಭವಾದ ವೈದ್ಯರ ಮುಷ್ಕರದ ಪರಿಣಾಮ ಬುಧವಾರ ಬೆಳಿಗ್ಗೆ ವರೆಗೆ ಮೂರು ಮಕ್ಕಳು ಸೇರಿದಂತೆ 11 ರೋಗಿಗಳು ಮೃತಪಟ್ಟಿದ್ದರು. ಸಮಸ್ಯೆ ಉಲ್ಭಣಗೊಳ್ಳುತ್ತಲೇ ಸಾಗುತ್ತಿದ್ದು ಬುಧವಾರ ಮತ್ತೆ 6 ಜನ ಬಲಿಯಾಗಿದ್ದಾರೆ.

ಹಾವೇರಿಯಲ್ಲಿ ಮಗು ಸೇರಿ ಇಬ್ಬರ ಸಾವು

ಹಾವೇರಿ ಜಿಲ್ಲೆಯಲ್ಲಿ 4 ತಿಂಗಳ ಮಗು ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಮಗು ಜೀವನ ಹಿರೇಮಠ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದೆ. ಸಮಯಕ್ಕೆ ಸರಿಯಾಗಿ ತಜ್ಞ ವೈದ್ಯರು ಸಿಗದೆ ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದ್ದು ಹಾವೇರಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಇನ್ನು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೃಷ್ಣ ಗೊರ್ಖಾ ಎಂಬುವವರು ಬುಧವಾರ ಮೃತಪಟ್ಟಿದ್ದಾರೆ. ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು, ಈ ವೇಳೆ ಫಿಟ್ಸ್​ ಬಂದು ಅವರು ಮೃತಪಟ್ಟಿದ್ದಾರೆ.

ನೇಪಾಳ ಮೂಲದ ಕೃಷ್ಣ ಗೊರ್ಖಾ ಅಪ್ಪಟ ಕನ್ನಡ ಅಭಿಮಾನಿಯಾಗಿದ್ದರು. ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಸುಮುಧುರವಾಗಿ ಕನ್ನಡ ಗೀತೆಗಳನ್ನು ಹಾಡುತ್ತಿದ್ದರು. ದಿಗ್ವಿಜಯ ನ್ಯೂಸ್​ನಲ್ಲಿ ಅವರ ಕಾರ್ಯಕ್ರಮ ಕೂಡ ಪ್ರಸಾರವಾಗಿತ್ತು.

ಬಾಗಲಕೋಟೆಯಲ್ಲಿ 3 ದಿನದಲ್ಲಿ 8 ಸಾವು

ಬಾಗಲಕೋಟೆ ಜಿಲ್ಲೆಯಲ್ಲಿ ಕೂಡ ಮರಣಮೃದಂಗ ಮುಂದುವರೆದಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಮಂಗಳವಾರದವರೆಗೆ 5 ಜನ ಬಲಿಯಾಗಿದ್ದರು. ಬುಧುವಾರದಂದು ಈ ಸಂಖ್ಯೆ 8ಕ್ಕೆ ಏರಿದೆ. ಬುಧವಾರ ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡ ಕಾರಣ ವಿಠಲ ಭಜಂತ್ರಿ ಎಂಬುವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೂಕ್ತ ಚಿಕಿತ್ಸೆ ದೊರೆಯದೆ 39 ವರ್ಷದ ವಿಠಲ ಕೊನೆಯುಸಿರೆಳೆದಿದ್ದಾರೆ.

ಇನ್ನು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿಯಲ್ಲಿ ಕೂಡ ಇಬ್ಬರು ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಈರಪ್ಪ ಮಂಟೂರ (43) ಹಾಗೂ ಲಿಯಾಖತ್​ ಮಾಲದಾರ (67) ಎಂಬುವರು ಹೃದಯಾಘಾತಕ್ಕೊಳಗಾಗಿದ್ದಾರೆ. ಮುಷ್ಕರ ಹಿನ್ನೆಲೆಯಲ್ಲಿ ಚಿಕಿತ್ಸೆ ದೊರೆಯದೆ ಕೊನೆಯುಸಿರೆಳೆದಿದ್ದಾರೆ.

ಎದೆನೋವಿಗೆ ಚಿಕಿತ್ಸೆ ಸಿಗದೆ ಚಾಮರಾಜನಗರದಲ್ಲಿ ಒಂದು ಸಾವು

ಚಾಮರಾಜನಗರದಲ್ಲಿ ನಾಗಮಲ್ಲೇಶ್​ (33) ಎಂಬುವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ತಡವಾಗಿ ಬಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಮಾರ್ಗ ಮಧ್ಯದಲ್ಲಿಯೇ ನಾಗಮಲ್ಲೇಶ್​ ಮೃತಪಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top