Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

50 ವರ್ಷ, 300 ಸಿನಿಮಾ, ಶ್ರೀದೇವಿ ಸಿನಿಸಂಭ್ರಮ

Wednesday, 05.07.2017, 3:05 AM       No Comments

ತನ್ನ 4ನೇ ವಯಸ್ಸಿನಲ್ಲೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿಯ 300ನೇ ಚಿತ್ರ ‘ಮಾಮ್ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. 1967ರಲ್ಲೇ ತಮಿಳು ಚಿತ್ರ ‘ತುನೈವೆನ್’ ಮೂಲಕ ಮೊದಲ ಬಾರಿ ಬಣ್ಣ ಹಚ್ಚಿದ್ದ ಶ್ರೀದೇವಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 50ನೇ ಸುವರ್ಣ ವರ್ಷ ಇದು.

 ಆಕೆ ದೇವಲೋಕದ ದೊರೆ ಇಂದ್ರನ ಮಗಳು ಇಂದ್ರಜಾ. ಗೆಳತಿಯರೊಂದಿಗೆ ಹಿಮಾಲಯದ ಮಾನಸ ಸರೋವರ ವಿಹಾರಕ್ಕೆ ಬಂದಾಗ ಆಕೆಯ ಬೆರಳಲ್ಲಿದ್ದ ದೈವಿ ಉಂಗುರ ಕಳೆದುಹೋಗುತ್ತದೆ. ಆ ಉಂಗುರವಿಲ್ಲದೆ ಆಕೆಗೆ ದೇವಲೋಕಕ್ಕೆ ಮರುಪ್ರವೇಶವಿಲ್ಲ. ಕಾರ್ತೀಕ ಪೌರ್ಣಮಿ ಒಳಗೆ ಆ ಉಂಗುರ ಸಹಿತ ಮರಳದಿದ್ದರೆ ಶಾಶ್ವತವಾಗಿ ದೈವತ್ವ ಕಳೆದುಕೊಂಡು ಮನುಷ್ಯಳಾಗಿಯೇ ಇರಬೇಕಾಗುತ್ತದೆ ಎಂದು ದೇವಗುರು ಬೃಹಸ್ಪತಿ ಎಚ್ಚರಿಸುತ್ತಾರೆ. ಇತ್ತ ಸಂನ್ಯಾಸಿಯೊಬ್ಬರ ಸೂಚನೆಯಂತೆ ಸಿದ್ಧ ಔಷಧೀಯ ಸಸ್ಯಗಳನ್ನು ಹುಡುಕಿಕೊಂಡು ಮಾನಸ ಸರೋವರಕ್ಕೆ ಬಂದಿದ್ದ ರಾಜು ಎಂಬ ಕಥಾನಾಯಕನಿಗೆ ಆ ಉಂಗುರ ಸಿಗುತ್ತದೆ. ದೇವಲೋಕದ ಸುಂದರಿ ಇಂದ್ರಜಾ ಉಂಗುರದ ಸಲುವಾಗಿ ಮನುಷ್ಯ ಲೋಕದಲ್ಲಿ ಪರದಾಡುವ, ಕೊನೆಗೆ ಮಾನವ ಪ್ರೀತಿಗೆ ಸೋತು ಭೂಲೋಕದಲ್ಲೇ ಉಳಿಯುವ ಕಥೆಯನ್ನು ರೋಚಕವಾಗಿ, ರಮ್ಯವಾಗಿ ನಿರೂಪಿಸುವ ಚಿತ್ರವೇ ಜಗದೇಕ ವೀರುಡು ಅತಿಲೋಕ ಸುಂದರಿ.

ಜಗದೇಕ ವೀರುಡು ಚಿತ್ರದಲ್ಲಿ ಚಿರಂಜೀವಿ ಜೊತೆ ಮೊಟ್ಟಮೊದಲ ಬಾರಿ ಅಭಿನಯಿಸಿದ್ದ ಅತಿಲೋಕ ಸುಂದರಿ ಶ್ರೀದೇವಿ. ಭಾರತೀಯ ಚಿತ್ರರಸಿಕರಿಗೆ ಶ್ರೀದೇವಿ ಮಾಡಿದ್ದ ಮೋಡಿ ಅದೆಷ್ಟು ಗಾಢವಾಗಿತ್ತೆಂದರೆ, ಈ ಸೌಂದರ್ಯದ ಖನಿ ದೇವಲೋಕದಿಂದಿಳಿದ ಶಾಪಗ್ರಸ್ಥ ದೇವತೆಯ ಅಪರಾವತಾರವೇ ಎಂಬ ಅತಿಶಯ ಭಾವನೆ ಅಭಿಮಾನಿಗಳಲ್ಲಿದ್ದ ಕಾಲಘಟ್ಟವದು. ಐಶ್ವರ್ಯ ರೈ ವಿಶ್ವ ಸುಂದರಿ ಕಿರೀಟ ಗೆದ್ದಿದ್ದು 1994ರಲ್ಲಿ. ಆದರೆ, ಅದಕ್ಕೆ ಮುನ್ನವೇ ಶ್ರೀದೇವಿಯನ್ನು ಜಗದೇಕ ಸುಂದರಿ ಎಂದು ಜನ ಒಪ್ಪಿಕೊಂಡಾಗಿತ್ತು. ಭಾರತೀಯ ಚಿತ್ರರಂಗ ಕಂಡ ಮೊಟ್ಟ ಮೊದಲ ಮಹಿಳಾ ಸೂಪರ್​ಸ್ಟಾರ್, 1990ರ ದಶಕದಲ್ಲೇ ಕೋಟಿ ಸಂಭಾವನೆ ಕಂಡ ಏಕೈಕ ಮಹಿಳೆ… ವೃತ್ತಿಜೀವನದ ಉತ್ತುಂಗ ದಿನಗಳಲ್ಲಿ ಬಾಲಿವುಡ್ ಬಾದ್​ಷಾ ಅಮಿತಾಬ್ ಬಚ್ಚನ್ ಜೊತೆ ನಟಿಸಲು ನಿರಾಕರಿಸಿದಂಥ ಏಕೈಕ ನಟಿ ಎಂದರೆ ಶ್ರೀದೇವಿ ಮಾತ್ರ.

‘ಬಾಲಿವುಡ್​ನ ಎಲ್ಲ ಖಾನ್​ಗಳಿಗಿಂತ ದೊಡ್ಡ ಸೂಪರ್​ಸ್ಟಾರ್ ಶ್ರೀದೇವಿ’ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟ ಸಲ್ಮಾನ್ ಖಾನ್ ಹೊಗಳಿದ್ದರು. ‘ನಾನು, ಆಮೀರ್, ಶಾರುಖ್, ಅಕ್ಷಯ್ (ಕುಮಾರ್) ಎಲ್ಲರೂ ನಟಿಸಿರುವ ಚಿತ್ರಗಳನ್ನು ಒಟ್ಟುಗೂಡಿಸಿದರೂ 250-275ರ ಗಡಿ ದಾಟುವುದಿಲ್ಲ. ಆದರೆ, ಈ ಪ್ರತಿಭಾವಂತ ಅಭಿನೇತ್ರಿ 300 ಚಿತ್ರಗಳಲ್ಲಿ ನಟಿಸಿಬಿಟ್ಟಿದ್ದಾರೆ. ಇವರ ಎದುರು ನಾವೆಲ್ಲ ತೃಣಸಮಾನ’ ಎಂದು ಸಲ್ಮಾನ್ ಆ ದಿನ ಹೇಳಿದ್ದರು.

ನಿಜ. ತನ್ನ 4ನೇ ವಯಸ್ಸಿನಲ್ಲೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿಯ 300ನೇ ಚಿತ್ರ ‘ಮಾಮ್ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. 1967ರಲ್ಲೇ ತಮಿಳು ಚಿತ್ರ ‘ತುನೈವೆನ್’ ಮೂಲಕ ಮೊದಲ ಬಾರಿ ಬಣ್ಣ ಹಚ್ಚಿದ್ದ ಶ್ರೀದೇವಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 50ನೇ ಸುವರ್ಣ ವರ್ಷ ಇದು. ಭಾರತೀಯ ಚಿತ್ರರಂಗದಲ್ಲಿ ಇಷ್ಟು ಸುದೀರ್ಘ ಕಾಲ ಅಂದರೆ ನಾಯಕಿಯಾಗಿ ಜನಮಾನಸದಲ್ಲಿ ಬೇರೂರಿರುವ ಮತ್ತೋರ್ವ ನಟಿ ಸಿಗುವುದಿಲ್ಲ. ಶ್ರೀದೇವಿಗೆ ಶ್ರೀದೇವಿಯೇ ಸಾಟಿ.

1963ರಲ್ಲಿ ಶಿವಕಾಶಿಯ ವಕೀಲರ ಕುಟುಂಬದಲ್ಲಿ ತಮಿಳು ತಂದೆ, ತೆಲುಗು ಮೂಲದ ತಾಯಿಗೆ ಜನಿಸಿದ ಶ್ರೀದೇವಿ ಚಿತ್ರರಂಗಕ್ಕೆ ದೇವರ ವರ ಎಂದರೂ ತಪ್ಪಲ್ಲ. ಬಾಲನಟಿಯಾಗಿ, ಮೋಹಕ ನಾಯಕಿಯಾಗಿ, ಚಿತ್ರರಂಗವನ್ನಾಳಿದ ಸಾಮ್ರಾಜ್ಞಿಯಾಗಿ ಇದೀಗ 54ರ ಹರೆಯದಲ್ಲೂ ಅದೇ ಕಲಾವಂತಿಕೆ, ಸೌಂದರ್ಯ, ಜನಾನುರಾಗ ಉಳಿಸಿಕೊಂಡಿರುವ ಈ ಕಲಾವಿದೆ ಕೇವಲ ಸೃಜನಶೀಲತೆ ಮೂಲಕ ಬೇಡಿಕೆ ಕಾಪಾಡಿಕೊಂಡಿರುವ ಸಿರಿವನಿತೆ. ಈ ನಟಿ ಕನ್ನಡದ ಪ್ರೇಕ್ಷಕರಿಗೂ ಅತ್ಯಂತ ಪ್ರೀತಿಪಾತ್ರರಾಗಿರುವುದಕ್ಕೆ ಕಾರಣವಿದೆ. 1974ರಲ್ಲಿ ತೆರೆಕಂಡ ಡಾ. ರಾಜ್​ಕುಮಾರ್ ಅವರ ಸರ್ವಶ್ರೇಷ್ಠ ಚಿತ್ರಗಳಲ್ಲೊಂದಾದ ‘ಭಕ್ತ ಕುಂಬಾರ’ದಲ್ಲಿ ಮುಕ್ತಾಬಾಯಿಯ ಪಾತ್ರ ನಿರ್ವಹಿಸಿದ್ದವರು ಆಗಿನ್ನೂ 11ರ ಬಾಲಕಿಯಾಗಿದ್ದ ಶ್ರೀದೇವಿ.

ತಮಿಳು, ತೆಲುಗು, ಮಲಯಾಳಿ, ಕನ್ನಡ ಸಹಿತ ಬಹುಭಾಷೆಗಳಲ್ಲಿ ನಟಿಸಿರುವ ಶ್ರೀದೇವಿ ಸಾರ್ವಕಾಲಿಕ ನೆಲೆ ಕಂಡುಕೊಂಡಿದ್ದು ಮಾತ್ರ ಬಾಲಿವುಡ್​ನಲ್ಲಿ. 1975ರಲ್ಲಿ ‘ಜೂಲಿ’ ಚಿತ್ರದ ಮೂಲಕ ಜೂಲಿ ಲಕ್ಷ್ಮೀ ತಂಗಿಯ ಪಾತ್ರದಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, 1979ರಲ್ಲಿ ಸೋಲ್ವ ಸಾವನ್ ಚಿತ್ರದ ಮೂಲಕ ನಾಯಕಿಯಾದರು. ಇದಕ್ಕೆ ಮುನ್ನ 13ನೇ ವಯಸ್ಸಿನಲ್ಲೇ ಖ್ಯಾತ ದಿಗ್ದರ್ಶಕ ಕೆ. ಬಾಲಚಂದರ್ ಅವರ ‘ಮೂಂಡ್ರು ಮುಡಿಚ್ಚು’ ತಮಿಳು ಚಿತ್ರದಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಬಾಲಿವುಡ್​ನಲ್ಲಿ ಶ್ರೀದೇವಿಗೆ ಪ್ರಖ್ಯಾತಿ ತಂದುಕೊಟ್ಟ ಮೊದಲ ಚಿತ್ರ 1983ರಲ್ಲಿ ಬಿಡುಗಡೆಯಾದ ‘ಹಿಮ್ಮತ್​ವಾಲಾ’. ಜಿತೇಂದ್ರ ನಾಯಕರಾಗಿದ್ದ ಈ ಚಿತ್ರದ ಮೂಲಕ ಶ್ರೀದೇವಿ ಸಿಡಿಲ ತೊಡೆಗಳ ನಟಿ ಎಂದೇ ಪ್ರೇಕ್ಷಕರ ನಿದ್ರೆ ಕೆಡಿಸಿದ್ದರು. ಆದರೆ, ಇಂಥ ಸೌಂದರ್ಯದ ಖನಿಗೆ ಅದ್ಭುತ ನಟನೆಯೂ ಗೊತ್ತಿದೆ ಎಂದು ಜಗತ್ತು ಗುರುತಿಸಿದ್ದು ಕಮಲಹಾಸನ್ ನಾಯಕ ನಟರಾಗಿದ್ದ ‘ಸದ್ಮಾ’ ಚಿತ್ರದ ಮೂಲಕ. 1982ರಲ್ಲಿ ಮೂಂಡ್ರಮ್ ಪಿರೈ ಹೆಸರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್ ಹಿಟ್ ಆಗಿದ್ದ ಈ ಚಿತ್ರದ ಹಿಂದಿ ಅವತರಣಿಕೆ 1983ರಲ್ಲಿ ‘ಸದಾ’ ಹೆಸರಲ್ಲಿ ಬಿಡುಗಡೆಯಾಯಿತು. ಮಾನಸಿಕ ಅಸ್ವಸ್ಥೆಯ ಪಾತ್ರದಲ್ಲಿ ಶ್ರೀದೇವಿ ನಟನೆ ಅದ್ಭುತ.

ಮಾಧ್ಯಮಗಳಿಗೆ ಸಂದರ್ಶನ ನೀಡಲು ಸದಾ ಹಿಂಜರಿಯುತ್ತಿದ್ದ, ವರ್ತಮಾನದ ನಟಿಮಣಿಯರಂತೆ ಗಾಸಿಪ್, ಗಿಮಿಕ್, ನಖರಾಗಳಿಂದ ದೂರ ಇರುವ ಶ್ರೀದೇವಿ, ಯಾವತ್ತೂ ಪಾತ್ರದ ಮೂಲಕವೇ ಸುದ್ದಿಯಲ್ಲಿರಬೇಕು ಎಂದು ಬಯಸಿದವರು. ಜಯಪ್ರದಾ ತಿರಸ್ಕರಿಸಿದ್ದ ನಗೀನಾ, ರೇಖಾ ನಿರಾಕರಿಸಿದ್ದ ಚಾಂದಿನಿ ಚಿತ್ರಗಳ ಮೂಲಕ ಸದಾ ನೆನಪಿನಲ್ಲುಳಿಯುವಂತೆ ನಟಿಸಿದ್ದ ಈ ಕಲಾವಿದೆಯ ‘ಮಿಸ್ಟರ್ ಇಂಡಿಯಾ’ ಬಾಲಿವುಡ್​ನ ಅದ್ಭುತ ಚಿತ್ರಗಳಲ್ಲೊಂದು. ಈ ಚಿತ್ರದಲ್ಲಿ ‘ಹವಾ ಹವಾಯಿ…’ ಹಾಡಿನ ಮೂಲಕ ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿದ್ದರು. ಇದೇ ಚಿತ್ರದ ‘ಕಾಟೆ ನಹಿ ಕಟ್ ತೆ…’ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಮಳೆ ಹಾಡುಗಳಲ್ಲೊಂದೆಂದು ಮೆಚ್ಚುಗೆ ಪಡೆದಿದೆ.

ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಎಲ್ಲ ದೊಡ್ಡ ನಟರೊಂದಿಗೆ ಕಾಣಿಸಿಕೊಂಡಿರುವ ಶ್ರೀದೇವಿ ಕಮಲಹಾಸನ್ ಜೊತೆ ಅತೀ ಹೆಚ್ಚು 13 ಚಿತ್ರಗಳಲ್ಲಿ ನಟಿಸಿರುವುದು ದಾಖಲೆ. ಹಿಂದಿಯಲ್ಲಿ ಜಿತೇಂದ್ರ ಮತ್ತು ಅನಿಲ್ ಕಪೂರ್ ಜೊತೆ ತಲಾ 9 ಚಿತ್ರಗಳಲ್ಲಿ ನಾಯಕಿಯಾಗಿರುವುದು ಗರಿಷ್ಠ. ಎಲ್ಲ ಪ್ರಮುಖ ಸ್ಟಾರ್ ನಟರೊಂದಿಗೆ ಕನಿಷ್ಠ ಒಂದಾದರೂ ಹಿಟ್ ಚಿತ್ರ ನೀಡಿರುವ ಶ್ರೀಗೆ ನಟನೆಯೆಂದರೆ, ಲೈಟ್ ಸ್ವಿಚ್ ಆನ್-ಆಫ್ ಮಾಡಿದಷ್ಟು ಸಲೀಸು ಎನ್ನುವುದು ಮಿ. ಇಂಡಿಯಾ ನಿರ್ದೇಶಕ ಶೇಖರ್ ಕಪೂರ್ ಅಭಿಪ್ರಾಯ. ಚಾಂದಿನಿ, ಲಮ್ಹೆಯಂಥ ದಾಖಲಾರ್ಹ ಚಿತ್ರಗಳ ಮೂಲಕ ಶ್ರೀದೇವಿ ವೃತ್ತಿಬದುಕಿಗೆ ತಿರುವು ನೀಡಿದ ಯಶ್ ಚೋಪ್ರಾ ತಮ್ಮ ಚಿತ್ರಗಳಲ್ಲಿ ನಟಿಸಿದ ನಾಯಕಿಯರೆಲ್ಲರ ಪೈಕಿ ಪ್ರಥಮ ಸ್ಥಾನವನ್ನು ನೀಡಿದ್ದು ಇದೇ ಸುಂದರಿಗೆ.

ನಿಜ ಜೀವನದಲ್ಲಿ ಮಿತಭಾಷಿಯಾದ ಶ್ರೀದೇವಿ ತೆರೆಯ ಮೇಲೆ ಎಂಥ ಪಾತ್ರವನ್ನೂ ನೀರು ಕುಡಿದಷ್ಟು ಸಲೀಸಾಗಿ ನಟಿಸುತ್ತಿದ್ದರು. ಹಾಸ್ಯವಿರಲಿ, ಗಂಭೀರವಿರಲಿ, ಆವೇಶ, ಆಕ್ರೋಶದ ಪಾತ್ರಗಳಿರಲಿ ಶ್ರೀದೇವಿ ಕ್ಯಾಮೆರಾ ಎದುರು ನಿಂತರೆ ಅವರ ತನ್ಮಯತೆ ಬೆರಗುಗೊಳಿಸುವಂಥದ್ದು. ಅದಕ್ಕೆ ತಕ್ಕಂತೆ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಎಲ್ಲ ಬಗೆಯ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದು ಅವರ ಹೆಗ್ಗಳಿಕೆ. ಕೇವಲ ಶ್ರೀದೇವಿ ನಟಿಸಿದರೆ ಸಾಕು ಚಿತ್ರ ಗೆಲ್ಲುತ್ತದೆ ಎಂಬ ಭಾವನೆ ಬೇರೂರಿದ್ದ 80-90ರ ದಶಕಗಳಲ್ಲಿ ಕಷ್ಟದಲ್ಲಿದ್ದ ಅದೆಷ್ಟೋ ನಿರ್ವಪಕರ ಚಿತ್ರದಲ್ಲಿ ಉಚಿತವಾಗಿ ನಟಿಸಿ ಅವರ ಕಷ್ಟ ನೀಗಲು ನೆರವಾದ ಉದಾಹರಣೆಯೂ ಇದೆ.

1980ರ ದಶಕದಲ್ಲಿ ಆಗಿನ ಡ್ಯಾನ್ಸಿಂಗ್ ಸ್ಟಾರ್ ಮಿಥುನ್ ಚಕ್ರವರ್ತಿ – ಶ್ರೀದೇವಿ ಪ್ರೇಮಸಂಬಂಧ ಚರ್ಚೆಯ ವಿಷಯವಾಗಿತ್ತು. ಇಬ್ಬರೂ ಗೌಪ್ಯವಾಗಿ ಮದುವೆಯಾಗಿದ್ದಾರೆಂಬ ವರದಿಗಳೂ ಇದ್ದವು. ಆದರೆ, ನಟ ಅನಿಲ್ ಕಪೂರ್ ಸಹೋದರ, ನಿರ್ವಪಕ ಬೋನಿ ಕಪೂರ್​ರನ್ನು 1996ರಲ್ಲಿ ವಿವಾಹವಾದ ಶ್ರೀದೇವಿ ಬಳಿಕ ಸುಮಾರು 15 ವರ್ಷ ಕಾಲ ನೇಪಥ್ಯದಲ್ಲಿದ್ದರು. 2012ರಲ್ಲಿ ‘ಇಂಗ್ಲಿಷ್​ವಿಂಗ್ಲಿಷ್’ ಮೂಲಕ ಭರ್ಜರಿ ಪುನರಾಗಮನಗೈದರು. ಮತ್ತೆ 5 ವರ್ಷ ತೆರೆಮರೆಯಲ್ಲಿದ್ದ ಅವರು ಇದೀಗ ‘ಮಾಮ್ ಎಂಬ ಹೊಸ ಅವತಾರದಲ್ಲಿ ಮರಳುತ್ತಿದ್ದಾರೆ. ಈ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ‘ಮಿಸ್ಟರ್ ಇಂಡಿಯಾ’ ಭಾಗ-2 ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ. ಶ್ರೀದೇವಿಯ ಮತ್ತೊಂದು ಇನಿಂಗ್ಸ್ ಕಣ್ತುಂಬಿಕೊಳ್ಳಲು ಅಭಿಮಾನಿಗಳಂತೂ ಕಾತರರಾಗಿದ್ದಾರೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top