Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

25 ವರ್ಷ ಕಾವೇರಿಗಾಗಿ ಹೋರಾಡಿದ ದಿವಾನ್

Tuesday, 21.03.2017, 9:26 AM       No Comments

| ಕೆ. ರಾಘವ ಶರ್ಮ, ನವದೆಹಲಿ

ಕಾನೂನು, ಸಂವಿಧಾನ ತಜ್ಞ, ಕಾವೇರಿ ಜಲವಿವಾದ ಪ್ರಕರಣದಲ್ಲಿ ರಾಜ್ಯದ ಪರ 25 ವರ್ಷಗಳ ಕಾಲ (1992-2017) ವಕೀಲರಾಗಿ ಸೇವೆ ಸಲ್ಲಿಸಿದ ಅನಿಲ್ ದಿವಾನ್ (87) ಅನಾರೋಗ್ಯದಿಂದಾಗಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕಾವೇರಿ ಜಲ ವ್ಯಾಜ್ಯ ಪ್ರಕರಣದಲ್ಲಿ ಅನೇಕ ಬಾರಿ ತಮಿಳುನಾಡು ಸರ್ಕಾರದ ಬೆವರಿಳಿಸಿದ್ದ ದಿವಾನ್, ಕೃಷ್ಣಾ ಮತ್ತು ಮಹದಾಯಿ ಜಲ ವಿವಾದಗಳಲ್ಲೂ ರಾಜ್ಯವನ್ನು ಪ್ರತಿನಿಧಿಸಿದ್ದರು. ಮತ್ತೋರ್ವ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್​ಗೆ ಸಮಕಾಲೀನರಾಗಿದ್ದ ದಿವಾನ್, ನಾರಿಮನ್ ಅನುಪಸ್ಥಿತಿಯಲ್ಲಿ ಹಲವು ಬಾರಿ ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡಿದ್ದುಂಟು. ಕೃಷ್ಣಾ ನದಿ ನೀರನ್ನು ಹೊಸದಾಗಿ ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸರ್ಕಾರ ಕೃಷ್ಣಾ ನ್ಯಾಯಾಧಿಕರಣಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಲ್ಲಿ ಯಶಸ್ವಿಯಾಗಿದ್ದ ದಿವಾನ್, ನೀರಿನ ಮರು ಹಂಚಿಕೆ ಆಂಧ್ರ-ತೆಲಂಗಾಣಕ್ಕೆ ಸೀಮಿತ. ಇದರಲ್ಲಿ ಕರ್ನಾಟಕ-ಮಹಾರಾಷ್ಟ್ರಕ್ಕೆ ಯಾವುದೇ ಪಾತ್ರ ಇಲ್ಲ ಎಂಬುದನ್ನು ನ್ಯಾ. ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧಿಕರಣಕ್ಕೆ ಮನವರಿಕೆ ಮಾಡಿದ್ದರು.

ಯಾವುದೇ ಪ್ರಕರಣ ಇರಲಿ, ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದೆ ನ್ಯಾಯಮೂರ್ತಿಗಳ ಮುಂದೆ ಅವರು ಮಾತನಾಡಿದ್ದಿಲ್ಲ. ಕಾನೂನು-ಸಾಂವಿಧಾನಿಕ ವಿಷಯ ಗಳ ಮೇಲೆ ಅರಳುಹುರಿದಂತೆ ಮಾತನಾಡುತ್ತಿದ್ದ ದಿವಾನ್​ರನ್ನು ಕಂಡರೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೂ ಎಲ್ಲಿಲ್ಲದ ಗೌರವ.

ಕುರುವೈ ಬೆಳೆ ಪ್ರದೇಶ ಕಡಿತ: ತಮಿಳುನಾಡಿನ ಕಾವೇರಿಯ 15 ಲಕ್ಷ ಎಕರೆ ಮುಖಜ ಭೂಮಿಯಲ್ಲಿ 6 ಲಕ್ಷ ಎಕರೆ ಪ್ರದೇಶದಲ್ಲಿ ಹಬ್ಬಿದ್ದ ಕುರುವೈ ಬೆಳೆಯನ್ನು 2 ಲಕ್ಷ ಎಕರೆಗೆ ಇಳಿಸುವಲ್ಲಿ ದಿವಾನ್ ಪಾತ್ರ ಬಹು ಮಹತ್ವದ್ದು. ಕುರುವೈ ಬೆಳೆಗೆ ಅತಿ ಹೆಚ್ಚು ಪ್ರಮಾಣದಲ್ಲಿ ನೀರಿನ ಅಗತ್ಯವಿರುವುದರಿಂದ ಈ ಬೆಳೆ ಈಶಾನ್ಯ ಮುಂಗಾರಿಗೆ ಹೊಂದಿಕೆಯಾಗುವುದಿಲ್ಲ. ಇದನ್ನು 2 ಲಕ್ಷ ಎಕರೆಗೆ ಇಳಿಸಬೇಕು ಎಂದು ಅಂಕಿ-ಅಂಶಗಳ ಮೂಲಕ ವಾದಿಸಿದ್ದನ್ನು ಕಾವೇರಿ ನ್ಯಾಯಾಧಿಕರಣ ಕೂಡ ಪುರಸ್ಕರಿಸಿತ್ತು. ಇದರಿಂದಾಗಿ ತಮಿಳುನಾಡು ಏಕ ಬೆಳೆಗೆ (ಸಾಂಬಾ) ಹೆಚ್ಚು ಒತ್ತು ನೀಡಬೇಕಾಗಿ ಬಂತು. ತಂಜಾವೂರು ಕಾವೇರಿ ಪ್ರಾಂತ್ಯದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಿರುವುದನ್ನು ಪತ್ತೆ ಹಚ್ಚಿದ ದಿವಾನ್, ರಾಜ್ಯದಿಂದ ಹೆಚ್ಚಿನ ಪಾಲು ಕಾವೇರಿ ನೀರು ತಮಿಳುನಾಡಿಗೆ ಹರಿಯುವುದನ್ನು ತಡೆಯುವಲ್ಲೂ ಯಶಸ್ವಿಯಾಗಿದ್ದರು. ನೀರಿನ ಸ್ಥಿತಿಗತಿ ಬಗ್ಗೆ 2012-13ರ ಸಂಕಷ್ಟ ವರ್ಷದಲ್ಲಿ ತಮಿಳುನಾಡು ಸುಳ್ಳು ದಾಖಲೆ ನೀಡಿದ್ದನ್ನು ರಾಜ್ಯದ ಕೃಷಿ ವಿದ್ಯಾಲಯದ ತಜ್ಞರ ಮೂಲಕ ಸಂಶೋಧನೆ ನಡೆಸಿದ್ದು ಸುಪ್ರೀಂಕೋರ್ಟ್ ಗಮನಸೆಳೆದಿತ್ತು. ಇದರಿಂದಾಗಿ ಆ ವರ್ಷದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ರಾಜ್ಯದ ಪರ ಮೃದು ಧೋರಣೆ ತಾಳಲು ಸಾಧ್ಯವಾಯಿತು.

ಕೃಷ್ಣ ಪಾದಯಾತ್ರೆ ಸಮರ್ಥನೆ: 2002-03ರಲ್ಲಿ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದರು, ಇದು ನ್ಯಾಯಾಂಗ ನಿಂದನೆಗೆ ಗುರಿಯಾಗಿತ್ತು. ಆದರೆ ರಾಜ್ಯದ ನಡೆಯನ್ನು ಸಮರ್ಥಿಸಿ, ಎಸ್.ಎಂ. ಕೃಷ್ಣ ಪರ ಸುದೀರ್ಘ ವಾದ ಮಂಡಿಸಿದ್ದ ಅನಿಲ್ ದಿವಾನ್, ಕಾವೇರಿ ಕಣಿವೆ ರೈತರ ಸ್ಥಿತಿ ಮತ್ತು ನೀರಿನ ಅಭಾವದ ಬಗ್ಗೆ ವಿವರಿಸಿ, ಕಾವೇರಿ ಕಣಿವೆಯ ಇಡೀ ಭೌಗೋಳಿಕ ಚಿತ್ರಣವನ್ನೇ ಸುಪ್ರೀಂಕೋರ್ಟ್ ಮುಂದಿಟ್ಟಿದ್ದರು. ಅಂದು ಮಂಡ್ಯ ಕಾಂಗ್ರೆಸ್ ಮುಖಂಡ ಅಂಬರಿಷ್ ಸೇರಿದಂತೆ 25 ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಹಾಜರಿದ್ದು, ದಿವಾನ್ ವಾದ ಮಂಡನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಎಸ್.ಎಂ. ಕೃಷ್ಣ ಕ್ಷಮೆ ಕೇಳಿದ್ದರಿಂದಾಗಿ ಪ್ರಕರಣ ಇತ್ಯರ್ಥಗೊಂಡಿತ್ತು.

ಪಿಐಎಲ್ ಸಂಸ್ಥೆ

ಸೆಂಟರ್ ಫಾರ್ ಪಬ್ಲಿಕ್ ಇಂಟ್ರೆಸ್ಟ್ ಲಿಟಿಗೇಷನ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಂಸ್ಥೆಯ ಸಂಸ್ಥಾಪಕರಲ್ಲಿ ಪ್ರಮುಖರಾಗಿದ್ದ ಅನಿಲ್ ದಿವಾನ್, ಹವಾಲಾ ಹಗರಣದಲ್ಲಿ ಹಣಕಾಸು ವ್ಯವಹಾರ ನಡೆದ ಬಗೆಯನ್ನು ಸುಪ್ರೀಂಕೋರ್ಟ್​ಗೆ

ವಿವರಿಸುವ ಮೂಲಕ ಇಡೀ ಹಗರಣದ ಅಗಾಧತೆಯನ್ನು ದೇಶದ ಮುಂದೆ ತೆರೆದಿಟ್ಟಿದ್ದರು. ಹಗರಣದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್, ಬಿಜೆಪಿಯ ರಾಜಕಾರಣಿಗಳನ್ನು ನಡುಗಿಸಿ, ಅವರ ಕೆಂಗಣ್ಣಿಗೂ ಗುರಿಯಾಗಿದ್ದರು. ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನ ಅಮಿಕಸ್ ಕ್ಯೂರಿಯಾಗಿ ಕಾರ್ಯನಿರ್ವಹಿಸಿ, ಸಮಗ್ರ ತನಿಖೆ ನಡೆಯುವಂತೆಯೂ ನೋಡಿಕೊಂಡರು. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಸಿಬಿಐ ಅಧಿಕಾರ ವ್ಯಾಪ್ತಿ ವಿಸ್ತರಿಸಲು ಕಾನೂನು ಹೋರಾಟ ನಡೆಸಿ, ಸರ್ಕಾರ, ಸಚಿವರ ಮೇಲೂ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಎಂಬ ಕಾನೂನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು. ಈ ಎಲ್ಲಾ ಹೋರಾಟಗಳಿಗೆ ಅವರ ಸೆಂಟರ್ ಫಾರ್ ಪಬ್ಲಿಕ್ ಇಂಟ್ರೆಸ್ಟ್ ಲಿಟಿಗೇಷನ್ ವೇದಿಕೆ ಒದಗಿಸಿತು.

Leave a Reply

Your email address will not be published. Required fields are marked *

Back To Top