Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಕಾಂಗ್ರೆಸ್ ನಾಯಕರಿಗೆ ಸಮೀಕ್ಷೆ ಟೆನ್ಷನ್

Wednesday, 14.03.2018, 3:04 AM       No Comments

|ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಬಿಜೆಪಿಯ ಕಾರ್ಯತಂತ್ರವನ್ನು ಸಮರ್ಥವಾಗಿ ಎದುರಿಸಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ರಣೋತ್ಸಾಹದಲ್ಲಿ ಸಿದ್ಧತೆ ನಡೆಸಿದ್ದ ಕಾಂಗ್ರೆಸ್​ಗೆ

ಇತ್ತೀಚಿನ ಸಮೀಕ್ಷೆ ಫಲಿತಾಂಶ ಆತಂಕ ಉಂಟುಮಾಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ ಎಂಬುದು ಇದುವರೆಗೂ ಪಕ್ಷ ನಡೆಸಿದ್ದ ಸಮೀಕ್ಷೆಗಳಿಂದ ತಿಳಿದುಬಂದಿತ್ತು. ಆದರೆ ಇತ್ತೀಚೆಗೆ ಹೊರ ಬಂದಿರುವ ಸಮೀಕ್ಷೆಯ ಮಾಹಿತಿ ಕೈ ಪಾಳಯದಲ್ಲಿ ತಲ್ಲಣವನ್ನುಂಟು ಮಾಡಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಪಕ್ಷದ ಹೈಕಮಾಂಡ್​ಗೆ ಸಮೀಕ್ಷಾ ವರದಿ ಸಲ್ಲಿಕೆಯಾಗಿದ್ದು, ಪಕ್ಷದ ಬಲ ಕುಸಿದಿರುವ ಬಗ್ಗೆ ಇದರಲ್ಲಿ ಮಾಹಿತಿ ಇದೆ.

ಕಾಂಗ್ರೆಸ್ ಹಿನ್ನಡೆಗೆ ಕಾರಣ: ಪ್ರಧಾನಿ ಮೋದಿ ರಾಜ್ಯ ಪ್ರವಾಸ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರೂಪಿಸುತ್ತಿರುವ ಕಾರ್ಯತಂತ್ರ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಭಾಷಣ ಕಾಂಗ್ರೆಸ್​ನ ಬಲ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಪಕ್ಷದಲ್ಲಿನ ಆಂತರಿಕ ಕಚ್ಚಾಟ, ಪಕ್ಷದ ಮುಖಂಡರಲ್ಲಿ ಮೂಡದ ಒಮ್ಮತ, ಮುಖಂಡರು ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳು, ವಿವಿಧ ಆರೋಪ ಹೊತ್ತಿದ್ದ ಆನಂದ ಸಿಂಗ್, ನಾಗೇಂದ್ರ ಹಾಗೂ ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು, ಪರಿಶಿಷ್ಟರ ಮೀಸಲಾತಿ ಮರು ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿನ ದ್ವಂದ್ವ ನಿಲುವು, ಹೊರಬರದ ಜಾತಿವಾರು ಗಣತಿ ವರದಿ, ಸರ್ಕಾರದ ಯೋಜನೆಗಳ ಬಗ್ಗೆ ಇನ್ನೂ ಸಮರ್ಪಕವಾಗಿ ಆಗದ ಪ್ರಚಾರ, ಸರ್ಕಾರದ ವಿರುದ್ಧ ಬಿಜೆಪಿಯ ನಿರಂತರ ಆರೋಪಪಟ್ಟಿಗಳು, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಕಾಂಗ್ರೆಸ್​ನ ಬಲ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ. ಇವುಗಳನ್ನು ತಿದ್ದುಪಡಿ ಮಾಡಿಕೊಳ್ಳುವಂತೆಯೂ ಸಮೀಕ್ಷೆ ಎಚ್ಚರಿಕೆ ನೀಡಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಎಚ್ಚರಿಕೆಗಳೇನು?: ಈ ಸಮೀಕ್ಷೆ ಪಕ್ಷ ತೆಗೆದುಕೊಳ್ಳಬೇಕಾದ ಮುನ್ನೆ ಚ್ಚರಿಕೆಗಳ ಬಗ್ಗೆಯೂ ಹೇಳಿದೆ. ಬಿಜೆಪಿ ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ಆಸಕ್ತಿ ಕೇಂದ್ರೀಕರಿಸಿದೆ. ಅಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕಡೆ ಗಮನ ಹರಿಸಬೇಕಾಗಿದೆ. ಕಳೆದ ಬಾರಿ ಉತ್ತಮ ಸಾಧನೆ ಮಾಡಿದ್ದ ಜಿಲ್ಲೆಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡ ಬಾರದು, ರಾಹುಲ್ ಗಾಂಧಿ ಅವರ ರೋಡ್ ಶೋಗಳಿಗೆ ಹಾಗೂ ಸಭೆಗಳಿಗೆ ಸೇರಿದ್ದ ಜನಸಮೂಹವನ್ನು ಮತಗಳಾಗಿ ಪರಿವರ್ತನೆ ಮಾಡುವ ಪ್ರಯತ್ನ ಇನ್ನಷ್ಟು ಚುರುಕಾಗಬೇಕು ಎಂಬ ಸೂಚನೆ ನೀಡಿದೆ.

ಸಿಎಂ ಭಯಕ್ಕೆ ಇದೇ ಕಾರಣ

ಅಹಿಂದ ವರ್ಗ ತಮ್ಮ ಕೈ ಬಿಡುತ್ತಿದೆ ಎಂಬ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಭಯ ವ್ಯಕ್ತಪಡಿಸುವುದಕ್ಕೆ ಈ ಸಮೀಕ್ಷೆಯ ವರದಿಯೇ ಮೂಲ ಕಾರಣವೆಂದು ಹೇಳಲಾಗುತ್ತಿದೆ.

ಚಾಮುಂಡೇಶ್ವರಿಯಲ್ಲಿ ಹೈವೋಲ್ಟೇಜ್ ಕದನ

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರ ಹೈವೋಲ್ಟೇಜ್ ಆಗಲಿದೆ ಎಂಬುದನ್ನು ಸಹ ಸಮೀಕ್ಷೆ ಹೇಳಿದೆ. ಹಿಂದೆ ನಡೆದ ಉಪ ಚುನಾವಣೆಯ ಮಾದರಿಯಲ್ಲಿಯೇ ಈ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯ ಅವರು ಸಾಕಷ್ಟು ಶ್ರಮಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿದುಬಂದಿದೆ. ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿ ಕಾಂಗ್ರೆಸ್ ಕಟ್ಟಿ ಹಾಕುವ ಪ್ರಯತ್ನ ಮಾಡಲಿವೆ. ಎಲ್ಲಿಯೂ ಸಿದ್ದರಾಮಯ್ಯ ಮೈ ಮರೆಯಬಾರದು ಎಂಬುದನ್ನು ಗ್ರಾಮವಾರು ಅಂಕಿಅಂಶಗಳ ಸಹಿತ ಸಮೀಕ್ಷೆ ನೀಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕಾರ್ಯತಂತ್ರ ಬದಲಾವಣೆ

ಸಮೀಕ್ಷೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರದಲ್ಲಿಯೂ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಸದ್ಯದಲ್ಲಿಯೇ ಬೆಂಗಳೂರಿಗೆ ಬರಲಿದ್ದು, ಆ ನಂತರ ರಾಜ್ಯ ಮುಖಂಡರು ಸಭೆ ನಡೆಸಿ ಏನೇನು ಮಾಡಬೇಕು ಎಂಬುದನ್ನು ಅಂತಿಮಗೊಳಿಸಲಿದ್ದಾರೆ.

Leave a Reply

Your email address will not be published. Required fields are marked *

Back To Top