Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸಾಹಿತಿ ಎಂಬುದು ಬೈಗುಳ ಶಬ್ದವಾದಾಗ

Tuesday, 12.12.2017, 3:02 AM       No Comments

 ಗ್ರೀಕರಲ್ಲಿ ದ್ವಿಭಾಷಿಗಳಿಗೆ Hypocrites ಎನ್ನುತ್ತಿದ್ದರು. ಒಂದು ಭಾಷೆಯ ಒಬ್ಬನ ಭಾಷಣವನ್ನು ಅರ್ಥವ್ಯತ್ಯಾಸ ಮಾಡದೆ, ಭಾಷಾಂತರ ಮಾಡುವವನನ್ನು ‘ಎರಡು ಭಾಷೆ ಬಲ್ಲವನು’ ಎಂಬ ಯೋಗ್ಯ, ಗೌರವಾರ್ಥದಲ್ಲಿ ಹಾಗೆ ಕರೆಯುತ್ತಿದ್ದರು. ಈಗ? ‘ಒಳಗೊಂದು, ಹೊರಗೊಂದು ಭಾಷೆಯ ಮೋಸಗಾರ’ ಎಂಬ ವಿರುದ್ಧಾರ್ಥ ಹೇಗೆ ಬಂದಿತು? ಸಾಹಿತಿ ಎಂಬುದು ಬೈಗುಳ ಶಬ್ದವಾದಾಗ!

ಶಬ್ದಗಳಿಗೆ ರೂಢಮೂಲಾರ್ಥಗಳೂ, ಆರೂಢಾರ್ಥಗಳೂ, ಆರೋಪಿತಾರ್ಥಗಳೂ, ಅನ್ಯಥಾ ಅಪಾರ್ಥಗಳೂ, ಅವರೋಪಿತ (devalued) ಅರ್ಥಗಳೂ ಬರುವುದು ಲೋಕದ ಜನರ ಬಳಕೆಗಳಿಂದ, ಕಾಲಮಹಿಮೆಯಿಂದ, ಕಾಲಕ್ರೌರ್ಯದಿಂದ, ಜನರ ಒಳ್ಳೆಯ-ಕೆಟ್ಟ ನಡವಳಿಕೆಗಳಿಂದ ಎಂಬುದು ಅನುಭವದ ಮಾತು! Accountability ಎಂಬ ‘ಇದಕ್ಕೆ ಇದೇ ಅರ್ಥ ಹೊರತು ಬೇರೆಯದಲ್ಲ’ ಎಂಬ ಮೂಲದ, ಹುಟ್ಟಿನ, etymology ಎಂಬ ಧಾತು, ನಾಮ ಉತ್ಪತ್ತಿಗಳ ರೀತಿಯ ಲೆಕ್ಕಾಚಾರ ಸಂಸ್ಕೃತ ಭಾಷೆಯ ವೈಶಿಷ್ಟ್ಯ. ಯಾವುದೋ ಮಾತಿಗೆ ಏನೋ ಬೇಕಾಬಿಟ್ಟಿ ಅರ್ಥವನ್ನು ಇಲ್ಲಿ ಹೇಳುವಂತಿಲ್ಲ. ಅದು ವೇದದ ‘ನಿಗದ’ ಅರ್ಥ- ಅದೇ ಕನ್ನಡದ ‘ನಿಗದಿ’ ಶಬ್ದದ ಮೂಲ.

ಅಲ್ಪಪ್ರಾಣ, ಮಹಾಪ್ರಾಣಗಳ ವ್ಯತ್ಯಾಸವಾದರೆ ಅರ್ಥವೇ ಬದಲಾಗುತ್ತದೆ. ‘ಧಾತಾ’ ಎಂದರೆ ‘ಧರಿಸುವವನು’. ‘ದಾತಾ’ ಎಂದರೆ ‘ಕೊಡುವವನು’, ದಾನಿ. ‘ಸಕೃತ್’= ಒಂದಾವರ್ತಿ, ‘ಶಕೃತ್’= ಸಗಣಿ. ಭಗವಂತನು ಒಲಿದು ಪ್ರತ್ಯಕ್ಷನಾಗುವುದು ‘ಧಾತು’ಪ್ರಸಾದದಿಂದಲೋ? ‘ಧಾತುಃ’ ಪ್ರಸಾದದಿಂದಲೋ? ಮೊದಲನೆಯದು ಇಂದ್ರಿಯಗಳ ಶಮನದಿಂದ ಎಂದಾದರೆ, ಎರಡನೆಯದು ‘ಧಾರಕಸ್ಯ ಪರಮಾತ್ಮನಃ’ ಎಂಬಂತೆ ಭಗವಂತನ ಪ್ರಸಾದದಿಂದ ಎಂದು ಕಠೋಪನಿಷತ್ತಿನಲ್ಲಿ ಅರ್ಥವ್ಯತ್ಯಾಸವಾಗುತ್ತದೆ. ‘ಅಪತ್ನೀಕ, ಸಪತ್ನೀಕ’ ಶಬ್ದಗಳ, ಕಿಷ್ಕಿಂಧಾಕಾಂಡದ ಸಂದರ್ಭದ ಪ್ರಯೋಗದಲ್ಲಿ, ವಾಲಿಯ ಹೆಂಡತಿಯನ್ನು ‘ಪತ್ನೀ?’ ಎನ್ನಬಹುದೇ? ಎಂದು ಕೇಳಿಕೊಂಡು, ‘ಯಜ್ಞಸಂಯೋಗವಿದ್ದರೆ ಮಾತ್ರ ಈ ಶಬ್ದ ಅರ್ಥವುಳ್ಳದ್ದು’ ಎಂದು ವಿವರಿಸುತ್ತಾ, ಕಪಿ ಎಂಬ ಕುಲದ ವಾನರರು ಯಜ್ಞಾಧಿಕಾರ ಪಡೆದಿದ್ದ (ಪೌಲಸ್ಱ ಗೋತ್ರದ) ಬ್ರಾಹ್ಮಣರು ಎಂಬ ವಿವರಣೆಯನ್ನು ವ್ಯಾಖ್ಯಾನಕಾರರು ತೋರಿಸುತ್ತಾರೆ.

ಇದೆಲ್ಲ ಸಂಸ್ಕೃತದ ಮಾತಾಯ್ತು. ಅವೇ ಶಬ್ದಗಳು ಬೇರೆ ಭಾಷೆಯಲ್ಲಿ ಬಂದಾಗ ಇವೇ ಅರ್ಥಪ್ರಯೋಗಗಳು ಇದ್ದರೆ ‘ಸ + ಅರ್ಥಕ= ಸಾರ್ಥಕ’. ಇಲ್ಲವಾದರೆ ವಿರೂಪ, ವಿಕೋಪ, ವಿಕೃತಿ, ಭ್ರಂಶ ಆಗಿಬಿಡುತ್ತವೆ. ‘ಸಾಹಿತ್ಯ’ ಎಂದರೆ ಶಬ್ದ+ಅರ್ಥಗಳ ಕೂಡಿರುವಿಕೆ, ‘ಸಹಿತೌ’, ಕಾವ್ಯ ಎಂದು ಮೀಮಾಂಸಕರು ಹೇಳುತ್ತಾರೆ. ‘ಶಬ್ದವಿದೆ, ಅರ್ಥವಿಲ್ಲ’ ಎಂದಾದಾಗ, ಬೇಂದ್ರೆ ಹೇಳುವಂತೆ, ‘ಸೌಂಡಿನೊಳಗೆ ಸೆನ್ಸು ಇಲ್ಲ, ಬರೀ ಹಾರ್ನ, ನಾನ್​ಸೆನ್ಸು’ (‘ಹೆಟರೋಡಾಕ್ಸಿ’ ಎಂಬ ಕವನದಲ್ಲಿ) ಎಂದಾಗಿ, ಅನರ್ಥವೂ, ಸಮಾಜದಲ್ಲಿ ಕೋಲಾಹಲವೂ, ಗೊಂದಲ, ದ್ವೇಷ, ಕಲಹಗಳೂ ಆಗಿಬಿಡುತ್ತವೆ. ಹಾಗಾಗಿದೆ ಇಂದು.

ಇಂದಿನ ಪರಿಸ್ಥಿತಿಯಲ್ಲಿ ‘ಮಾನವಂತರಿಗೆ’ (ಚಾರಿತ್ರ್ಯದ ಮಾನದಂಡಕ್ಕೆ ಅಳವಡುವ ‘ಮಾನ್ಯ’ರಿಗೆ) ‘ಸಾಹಿತಿ’ ಎಂದು ಕರೆದರೆ ‘ಅಪ+ಮಾನ’ degraded, derogatory ರೀತಿಯ ಬೈಗುಳವಾಗುವ ಕಾಲ ಬಂದಿದೆ. ಏಕೆ? ಆಗಲೇ ಹೇಳಿದೆನಲ್ಲ? ಯಾವುದೋ ಶಬ್ದಕ್ಕೆ ಬೇರಾವುದೋ ಅರ್ಥ ಬಂದರೆ ಏನು ಹೇಳೋಣ. ‘ಯಜಮಾನ’ ಎಂದರೆ (ಯಜ್ ಧಾತುವಿನಿಂದ) ಯಜ್ಞಶೀಲ ಎಂದರ್ಥ. ಈಗ ‘ಯಜಮಾನರೇ! ಸುಮ್ಮನೆ ಬಾಯಿಮುಚ್ಚಿಕೊಳ್ಳಿ’ ಎಂದರೆ ಹೀನಾಯಾರ್ಥ ಆಗುವುದಿಲ್ಲವೇ? ‘ಪರಿಷತ್ತು’ ಎಂದರೆ ‘ಪರಿತಃ’= ಸುತ್ತಲೂ, ‘ಸತ್’ ಪುರುಷರು, ಚಾರಿತ್ರ್ಯಶೀಲವುಳ್ಳವರು ಕೂಡಿದ ಸಭೆ ಎಂಬುದು ಮೂಲಾರ್ಥ. (ಪರಿ+ಸತ್= ಪರಿಷತ್ ಆದಾಗ ‘ಷ’ ಬರುವುದು ವ್ಯಾಕರಣದ ನಿಯಮ. ಹಿಂದಲ ಅಕ್ಷರ ‘ರ’ ಆದರೆ, ಮುಂದಿನ ‘ಸ’, ‘ಷ’ ಆಗುತ್ತದೆ, ಸಂಸ್ಕೃತದಲ್ಲಿ). ‘ಸಂಮ್ಮೇಳನ’ ಎಂದರೂ ‘ಸಂಮ್ಯಕ್’= ಚೆನ್ನಾಗಿ, ‘ಮಿಲನ’, ‘ಮೇಳನ’= ಕೂಡುವುದು, ಸಭ್ಯರು ಕೂಡಿದ, ಯೋಗ್ಯಜನರ ಸಭೆ, ಕೂಟ ಆಗಬೇಕು. ‘ದೊಂಬಿ’ ಎಂಬುದು ಇದರ ಅರ್ಥವಲ್ಲ. ‘ಸಂತೆ’ ಎಂದಾಗ ಅಲ್ಲಿ ಸಭೆ ಇರುವುದಿಲ್ಲ. ಮೀನನ್ನು ಮಾರುತ್ತಾರೆ, ಮಡಕೆ, ಮೆಣಸಿನಕಾಯಿ, ಉಪು್ಪ, ಹಗ್ಗ- ಏನೆಲ್ಲ ಮಾರುತ್ತಾರೆ. ಒಂದೇ ಸರಕೂ ಇಲ್ಲ, ಒಂದೇ ಮಾತೂ ಇಲ್ಲ. ‘ಸಂಮ್ಮೇಳನ’ ಎಂದಾಗ ‘ಸಂತೆ’ಯಾಗಿಬಿಟ್ಟರೆ, ಆಗ ಶಬ್ದವು ಅರ್ಥ ಕಳಕೊಂಡು ಪರಿಷತ್ತು, ಕುರಿ ಕಡಿಯುವ ಮಾರಿಗುಡಿ ಆಗುತ್ತದೆ. ಅಲ್ಲಿ ತಮಟೆ ಬಡಿಯುತ್ತಾರೆ, ಕುಡಿದು, ಕುಣಿದು, ಕೇಕೆಹಾಕಿ, ಪ್ರಾಣಿಗೆ ಭಯತರಿಸಿ, ಬಲಿ ಕೊಡುವುದನ್ನು ‘ಸಂಮ್ಮೇಳನ’ ಎಂದರೆ ನೀವು ಮೂಢರಾಗುತ್ತೀರಿ! ಭಾಷೆಯನ್ನು ನೀವು ಸಾಯಿಸಿದರೆ, ಅದು ಸಮುದಾಯ, ಸಮಾಜವನ್ನೇ ಸಾಯಿಸುತ್ತದೆ.

ಗ್ರೀಕರಲ್ಲಿ ದ್ವಿಭಾಷಿಗಳಿಗೆ Hypocrites ಎನ್ನುತ್ತಿದ್ದರು. ಒಂದು ಭಾಷೆಯ ಒಬ್ಬನ ಭಾಷಣವನ್ನು ಅರ್ಥವ್ಯತ್ಯಾಸ ಮಾಡದೆ, ಭಾಷಾಂತರ ಮಾಡುವವನನ್ನು ‘ಎರಡು ಭಾಷೆ ಬಲ್ಲವನು’ ಎಂಬ ಗೌರವಾರ್ಥದಲ್ಲಿ ಹಾಗೆ ಕರೆಯುತ್ತಿದ್ದರು. ಈಗ? ‘ಒಳಗೊಂದು, ಹೊರಗೊಂದು ಭಾಷೆಯ ಮೋಸಗಾರ’ ಎಂಬ ವಿರುದ್ಧಾರ್ಥ ಹೇಗೆ ಬಂದಿತು? ನನ್ನ ಪ್ರಾಧ್ಯಾಪಕ ದಿನಗಳಲ್ಲಿ, ನನ್ನ ಕಾಲೇಜಿಗೆ ಒಬ್ಬ ಆಂಗ್ಲ ಯುವ ಅಧ್ಯಾಪಕ ಡೆಪ್ಯುಟೇಶನ್ ಮೇಲೆ ಬಂದಿದ್ದರು. ಹೆಸರು ಗಾರ್ನರ್. ನನ್ನ ಸಹೋದ್ಯೋಗಿಗಳೊಡನೆ ಇವನನ್ನು ಮನೆಗೆ ಕರೆದು ಪುಳಿಯೋಗರೆ, ಮೊಸರನ್ನ ಅವನಿಗೂ ಇತ್ತೆ. ಅವನ ಜನ್ಮದಲ್ಲಿ ಪುಳಿಯೋಗರೆ ತಿಂದಿರದಿದ್ದ ಆಂಗ್ಲನಿಗೆ ಅದು ತುಂಬಾ ರುಚಿಕರವಾಗಿ ಇನ್ನಷ್ಟು ಕೇಳಿದಾಗ, ನನ್ನ ಇನ್ನೊಬ್ಬ ಸಹಾಧ್ಯಾಪಕ ಹೇಳಿದ ‘ಈ —ಳೀ ಮಗನಿಗೆ ಇನ್ನಷ್ಟು ಕೊಡಿ, ತಿಂದು ಮುಖ ಇನ್ನಷ್ಟು ಕೆಂಪಾಗಲಿ’ ಅಂತ. ಕನ್ನಡ ಬಾರದ ಆಂಗ್ಲ ಕೇಳಿದ, ‘–ಳೀ ಮಗ ಎಂದರೇನು?’ ಅಂತ. ಇನ್ನೊಬ್ಬ ಹೇಳಿದ ‘ದೊಡ್ಡ ಮನುಷ್ಯ’ ಅಂತ, ತಿರುಚಿ! ಆಂಗ್ಲ, ಈಗ ಈ ಶಬ್ದಪ್ರಯೋಗಿಗೆ ಹೊಗಳಿ “Well ಮಗನೇ!, I thank you’ ಅಂತ ಹೇಳಿದ. ಈ ಅನರ್ಥ ಬೇಕಿತ್ತೆ? ಇವನು ಪೆಚ್ಚಾದ! ಹೊಗಳಿಕೆಗೆ ಇವನೇಕೆ ಪೆಚ್ಚಾದ? ಅಂತ ಆಂಗ್ಲನಿಗೆ ತಿಳಿಯಲಿಲ್ಲ. ಎಲ್ಲರೂ ನಕ್ಕರು!

ಉತ್ತರಭಾರತದಲ್ಲಿ ತಮಿಳುನಾಡಿನ ಯಾರೋ ಯಾವಾಗಲೋ ಮೋಸ ಮಾಡಿದ್ದರಿಂದ ಇಡಿಯ ದಾಕ್ಷಿಣಾತ್ಯರಿಗೇ ‘ಮದ್ರಾಸೀ’ ಎಂಬ ಬೈಗುಳಶಬ್ದ ಉಂಟಾಯಿತು. ‘ದಡ್ಡರು’ ಎಂಬರ್ಥದಲ್ಲಿ ತಮಿಳರು ಕನ್ನಡದವರನ್ನು ‘ಕರ್ನಾಟಕಮಾ?’ ಎಂದು ಮೂಗುಮುರಿಯುವುದೂ ಹೀಗೇ! ಈ ಪುರಾಣ ಬೆಳೆಯುತ್ತಲೇ ಹೋಗುತ್ತದೆ. ಇದನ್ನೆಲ್ಲ ಬರೆಯಬೇಕಾದ ಸಂದರ್ಭ ಬಂದದ್ದು ನಿಮಗೆ ತಿಳಿದಿರಬೇಕು. ಒಂದೂರು. ಒಂದು ಕಾಲದ ಸಾಂಸ್ಕೃತಿಕ ರಾಜಧಾನಿ. ಅಲ್ಲೊಂದು ‘ಸಾಹಿತ್ಯ ಸಂಮ್ಮೇಳನ’. ಅಲ್ಲಿ ‘ಪ್ರತಿಷ್ಠಿತರು’ (ಕೂರಿಸಲ್ಪಟ್ಟವರು) ರಾಮನನ್ನೂ, ರಾಮಾಯಣವನ್ನೂ, ಸಂಸ್ಕೃತವನ್ನೂ, ಸಂಸ್ಕೃತಿಯನ್ನೂ ಹಿಗ್ಗಾಮುಗ್ಗ ಬೈದರು. ಸಂಮ್ಮೇಳನದ ಅಧ್ಯಕ್ಷರು- ‘ಮುಂದಿನ ಚುನಾವಣೆಯಲ್ಲಿ ಯಾರಿಗೆ ವೋಟು’ ಹಾಕಬೇಕೆಂದು ತಾಕೀತು ಮಾಡಿದರು! ಅದು ರಾಜಕೀಯ ವೇದಿಕೆಯಾಗಿರಲಿಲ್ಲ (ಅಂದಹಾಗೆ ‘ವೇದಿಕೆ’= ಯಜ್ಞಮಾಡುವ ‘ವೇದೋಕ್ತ’ ಪೀಠ, altar ಎಂಬ ಸನಿಹಾರ್ಥದ ಮೂಲಾರ್ಥದ ಗೌರವಾರ್ಥದ ಶಬ್ದ. ವೇದ, ವೇದಿ, ವೈದಿಕ, ವೇದಿಕೆ ಎಲ್ಲ ಒಂದೇ ಮೂಲದವು! ಒಂದು ಬೇಕು, ಒಂದು ಬೇಡ ಎಂಬುವನು ಪರಮಮೂಢ). ಅಲ್ಲಿ ಸೇರಿದ್ದವರಿಗೆ ಅಸಹ್ಯವಾಯ್ತು. ಪೇಪರಿನಲ್ಲೂ ಇವರ ಜನ್ಮಜಾಲಾಡಿದರು. ಅದಕ್ಕೆ ಅವರು ಉತ್ತರಿಸಿದ ಬಗೆ- ‘ಸಾಹಿತ್ಯ ಸಂಮ್ಮೇಳನದಲ್ಲಿ ರಾಜಕೀಯ ತರದೆ ಭಜನೆ ಮಾಡಬೇಕಿತ್ತೆ?’ ಅಂತ. ಅಯ್ಯಾ! ಭಜನೆ ಮಾಡು ಎಂದವರಾರು? ಸರಿಯಾಗಿ ಸಂದರ್ಭ, ಔಚಿತ್ಯ ನೋಡಿ, ಸಾಹಿತ್ಯಾತ್ಮಕ ವಿಷಯ, ಭಾಷೆ, ನೆಲ, ಜಲ, ಗಡಿ ಸಂರಕ್ಷಣೆ ವಿಷಯಗಳಲ್ಲಿ ಮಾತಾಡು ಎಂದರೆ, ತಪ್ಪೆ? ಭಜನೆಯ ವೇದಿಕೆ ಬೇರೆ ಎಂಬುದು ಗೊತ್ತಿಲ್ಲವೇ? ಅತಿರೇಕ ಉದ್ರೇಕ, ಆಕ್ರೋಶ ಏಕೆ? ಹೇಳಿ. pertinent, relevant ಎಂದು ನಿರೀಕ್ಷಿಸುವುದು ತಪ್ಪಾಗುವ ಕಾಲವಯ್ಯ! ಬೈಯಬೇಕಾದಲ್ಲಿ ಹೊಗಳುವುದು, ಹೊಗಳುವಲ್ಲಿ ಬೈಯುವುದು- ಇದು ಷೇಕ್ಸ್​ಪಿಯರನ ‘ಜ್ಯೂಲಿಯೆಸ್ ಸೀಸರ್’ ನಾಟಕದ ಮಾರ್ಕ್ ಆಂಟೊನಿ ಎಂಬ ನರಿಬುದ್ಧಿಯ, ಸಂದರ್ಭವಾದಿಯ ರೀತಿ. ನಮ್ಮೂರಲ್ಲಿ ಒಬ್ಬ ಗಣ್ಯರು ಸತ್ತಾಗ, ಅವರ ಹೆಂಡತಿ ‘ನಾನೊಬ್ಬಳೇ ವಿಧವೆಯಾಗಬೇಕೆ? ನನ್ನ ವಾರಿಗೆಯವರೆಲ್ಲ ಸುಮಂಗಲಿಯರಾಗೇ ಇರುವಾಗ ನನಗೆ ಈ ದೌರ್ಭಾಗ್ಯವೇ?’ ಎಂದು ಅತ್ತಳು! ಇದು ಬುದ್ಧಿಗೇಡಿತನವಲ್ಲವೇ? ಇನ್ನೊಂದೂರಲ್ಲಿ, ನನ್ನೆದುರೇ ಒಬ್ಬ ಬಾಯಿಬಡುಕರು ಜತೆಯವರನ್ನು ‘ಇಲ್ಲಿ ಸತ್ತರೂ ಹೆಣ ಎತ್ತುವವರಿಲ್ಲ’ ಎಂದು ಶುಭಸಂದರ್ಭದಲ್ಲಿ ಬೈದರು. ಒಬ್ಬ ಹಿರಿಯರು ರೇಗಿ ಹೇಳಿದ್ದು- ‘ಸ್ವಾಮಿ! ನೀವು ಮೊದಲು ಸಾಯಿರಿ! ಆಮೇಲೆ ನಾವು ನಿಮ್ಮ ಹೆಣ ಎತ್ತುತ್ತೇವೋ ಇಲ್ಲವೋ ಎಂದು ನೋಡಿ’ ಎಂದು ಹೇಳಬೇಕಾಯ್ತು. ಇನ್ನೊಬ್ಬರು- ಈ ಮುನ್ನದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ‘ದೋಸ್ತಿ’ ಹೇಳುತ್ತಾರೆ- ‘ತಪ್ಪೇನು? ಯಾರು ಎಲ್ಲಿ ಬೇಕಾದರೂ ಏನಾದರೂ ಹೇಳಬಹುದು. ಉಡುಪಿಯ ಧರ್ಮಸಂಸತ್ತಿನಲ್ಲಿ ರಾಜಕೀಯದ ಮಾತು ಬರಲಿಲ್ಲವೇ?’ ಅಂತ! ಗೋವಿಂದಾ! ರಾಮರಾಮ! ಅಲ್ಲಿ ಧರ್ಮಸಂಮ್ಮೇಳನದ ವಿಷಯವೇ ಹಿಂದು ಸಂಘಟನೆ ಆಗಿತ್ತು. ರಾಮಜನ್ಮಭೂಮಿ ವಿಷಯ. ಅದು ನಿಮಗೆ ಬರೀ ರಾಜಕೀಯ, ನಮಗೆ ಧಾರ್ವಿುಕ ವಿಷಯ. ದೇವಾಲಯ, ಧರ್ಮಗ್ರಂಥಗಳು, ಹಿಂದು ಸಮಾಜ ಸಮಸ್ಯೆಗಳ ಪರಿಹಾರ, ಸಂಘಟನೆ, ನಮ್ಮ ಅನಾಚಾರಗಳ ಆತ್ಮಶೋಧ- ಉದಾಹರಣೆಗೆ ಅಸ್ಪಶ್ಯತೆ ಎಂಬ ಮಹಾಪಾಪದ ನಿವಾರಣೆಯ ಯತ್ನ- ಮತಾಂತರ ತಡೆ, ಹಿಂದು, ಭಾರತೀಯ ಸಮಾಜದ ಸಮಗ್ರತೆ, ತನ್ಮೂಲಕ ರಾಷ್ಟ್ರ ಸಾರ್ವಭೌಮತೆಯ ರಕ್ಷಣೆ- ಇವೆಲ್ಲ ‘ಧರ್ಮ’ದಡಿಯಲ್ಲೇ ಬರುತ್ತವೆ. ಧರ್ವಧಾರಿತ (ಅಧರ್ಮ ಅನ್ಯಾಯ ವರ್ಜಿತ) ಆಡಳಿತ ಬೇಕೆಂಬುದು ಇಲ್ಲಿ ಮೌಲ್ಯ!

ಶ್ರೀ ರಾಮಾಯಣ, ಮಹಾಭಾರತ, ಭಾಗವತ, ಗೀತೆಗಳ ವಿಷಯ ಇದೇ. ಇಲ್ಲಿ ಜಿಹಾದ್ ಇಲ್ಲ, ಝೆಸಿಯಾ ಇಲ್ಲ, ಇಲ್ಲಿ ಆಕ್ರಮಣ ಇಲ್ಲ- ಸಂರಕ್ಷಣೆ ಇದೆ. ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಗೌರವ ಚಿಂತನೆ ಮಾಡಿದ್ದರೆ ಔಚಿತ್ಯ ಇರುತ್ತಿತ್ತು. ಕನ್ನಡ ಶತ್ರುಗಳು ಸ್ವಾರ್ಥಿ ರಾಜಕಾರಣಿಗಳು, ಜಾತಿ ರಾಜಕಾರಣ ಹೊರತು- ಸಂಸ್ಕೃತ, ಇಂಗ್ಲಿಷು ಅಲ್ಲ! ರಾಯರೇ! ನಿಮಗೆ ಕಣ್ಣು ತೆರೆಸುವ ಧಾರ್ವಿುಕ ಶಕ್ತಿ, ಪವಾಡಶಕ್ತಿ ನನಗಿಲ್ಲ. ‘ಎಲ್ಲರನ್ನೂ ತಿದ್ದಿಯೇನು’ ಎಂಬ ಹಮ್ಮು, ಬಿಮ್ಮು ನನಗಿಲ್ಲ. ಕೃಷ್ಣನೇ ಕಾಪಾಡಲಾಗದ ಕೌರವರನ್ನು ಭೀಷ್ಮಾದಿಗಳು ಕಾಪಾಡಿದರೇ? ಹಾಗೆ. ಸರಿಯಾಗಿ ಸಂಮ್ಮೇಳನ ನಡೆಸಲಾಗದಿದ್ದರೆ, ಬಿಟ್ಟುಬಿಡಿ. ಹಣ ಪೋಲು ಬೇಡ. ಭಾಷೆ ಸಾಯುತ್ತಿದೆ, ನಿಮ್ಮಂತಹವರಿಂದಲೇ! ಸಮಾಜವೇ ಸತ್ತಾಗ ಭಾಷೆ, ಸಂಸ್ಕೃತಿ ಉಳಿದಾವೇ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top