Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

108 ಅಡಿ ಎತ್ತರದ ರಾಜಗೋಪುರ

Thursday, 12.10.2017, 3:01 AM       No Comments

| ಭಾವೂರಾಜ ಕೆ. ಈಸರಗೊಂಡ ವಿಜಯಪುರ

ಸಿದ್ಧರು ವಾಸಿಸುವ, ಸಕಲರಿಗೂ ಮೋಕ್ಷ ನೀಡುವ ಪವಿತ್ರ ಕ್ಷೇತ್ರ ಹೊರ್ತಿ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರುವ ಈ ಕ್ಷೇತ್ರದ ಪುರಾತನ ಹೆಸರು ಸಿದ್ಧಪುರ. ಇಲ್ಲಿನ 15 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಪುರಾತನ ಇತಿಹಾಸಪ್ರಸಿದ್ಧ ಶ್ರೀ ರೇವಣಸಿದ್ಧೇಶ್ವರ ದೇವಾಲಯವಿದೆ.

ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಪರಶಿವನ ಅಪ್ಪಣೆಯ ಮೇರೆಗೆ ಭೂಲೋಕದಲ್ಲಿ 1400 ವರ್ಷಗಳ ಹಿಂದೆ ಸುಕ್ಷೇತ್ರ ಆಂಧ್ರಪ್ರದೇಶದ ಕೊಲ್ಲಿಪಾಕಿ ಎಂಬಲ್ಲಿ ಸೋಮನಾಥ ಲಿಂಗದೊಳಗೆ ಜನ್ಮ ತಳೆದು ಉದ್ಭವಮೂರ್ತಿಗಳಾಗಿ ಅವತರಿಸಿದರು. ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಮಂತ್ರದೊಂದಿಗೆ ದೇಶಸಂಚಾರವನ್ನು ಕೈಗೊಂಡರು. ಸದಾ ಕಾಲ ಮನುಕುಲಕ್ಕೆ ಮಾರ್ಗದರ್ಶನ ಮಾಡುತ್ತಾ ವೀರಶೈವ ಧರ್ಮದ ಚಕ್ರವರ್ತಿ ಎಂದು ಕರೆಸಿಕೊಂಡರು.

ಈ ದೇವಾಲಯದಲ್ಲಿ ಅನೇಕ ಸಿದ್ಧಪುರುಷರು ತಪಸ್ಸುಗೈಯುತ್ತಿದ್ದಾಗ ಆದಿ ಮಾಯೆ ತಪೋಭಂಗ ಉಂಟುಮಾಡುತ್ತಿದ್ದಳು. ಆಗ ಸಿದ್ಧಪುರುಷರೆಲ್ಲರೂ ರೇವಣಸಿದ್ಧರನ್ನು ನೆನೆದಾಗ ಅವರು ಪ್ರತ್ಯಕ್ಷರಾಗಿ ಆದಿಮಾಯೆಯ ಗರ್ವಹರಣ ಮಾಡಿ ಅವಳಲ್ಲಿದ್ದ ಅಹಂಕಾರವನ್ನು ತೊಲಗಿಸಿ ಶಿವತತ್ವ ಬೋಧನೆಯನ್ನು ನೀಡುವದರ ಮೂಲಕ ತಪ್ಪಿನ ಅರಿವನ್ನು ಮೂಡಿಸಿ ಭಕ್ತಳನ್ನಾಗಿ ಸ್ವೀಕರಿಸಿದರು. ಅಲ್ಲದೆ ದೇವಸ್ಥಾನದ ಎದುರಿನ ಬೆಟ್ಟದಲ್ಲಿ ನೆಲೆಸಲು ಅವಕಾಶ ಕಲ್ಪಿಸಿದರು. ಆದ್ದರಿಂದ ಆ ಬೆಟ್ಟಕ್ಕೆ ಮಾಳಮ್ಮನ ಗುಡ್ಡ ಎಂದು ಕರೆಯುತ್ತಾರೆ. ಅಲ್ಲದೆ ಗ್ರಾಮಕ್ಕೆ ‘ಹೊರತಿ’ (ಹೊರ್ತಿ) ಎಂದು ಕರೆಯಲಾರಂಭಿಸಿದರು. ಅಂದಿನಿಂದ ಇಂದಿನವರೆಗೆ ಶ್ರಾವಣ ಮಾಸದ ಪ್ರತಿ ಸೋಮವಾರ ಹಾಗೂ ಛಟ್ಟಿ ಅಮವಾಸ್ಯೆಯ ಹನ್ನೊಂದನೆಯ ದಿನ ರೇವಣಸಿದ್ಧೇಶ್ವರರು ಭಕ್ತರಿಗೆ ದರ್ಶನ ನೀಡುವುದಕ್ಕಾಗಿ ಪಲ್ಲಕ್ಕಿ ಮೆರವಣಿಗೆ ಹೊರಡುವುದು.

ಈ ಕ್ಷೇತ್ರದಲ್ಲಿ ಜಾತ್ರೆ ಆರಂಭವಾದಾಗಿಂದಲೂ ಭಕ್ತ ಹಂಚಿನಾಳ ಬಸಪ್ಪನು ಪ್ರತಿವರ್ಷ ರೇವಣಸಿದ್ಧರ ದರ್ಶನಕ್ಕೆ ನೈವೇದ್ಯದೊಂದಿಗೆ ಬರುತ್ತಿದ್ದನು. ಒಂದು ದಿನ ನಡೆಯಲೂ ಆಗದೆ ದಾರಿಯಲ್ಲೇ ಪ್ರಾಣ ಬಿಟ್ಟನು. ರೇವಣಸಿದ್ಧರಿಗೆ ಈ ವಿಚಾರ ಗೊತ್ತಾಗಿ ಅಲ್ಲಿಗೆ ಹೋಗಿ ದರ್ಶನ ನೀಡಿದರು. ಗುಡ್ಡದ ಮೇಲಿರುವ ಮಾಳಮ್ಮನ ದರ್ಶನಕ್ಕೆ ಗುಡ್ಡ ಏರುವ ದಿನದಂದು ಹೊರ್ತಿ ಜಾತ್ರೆ ಜರುಗುವುದು. ಈ ಜಾತ್ರೆಯು ಉತ್ತರ ಕರ್ನಾಟಕದಲ್ಲಿ ವರ್ಷದ ಮೊದಲ ಜಾತ್ರೆಯಾಗಿರುವದರಿಂದ ಜಾತ್ರೆಗಳ ಹೆಬ್ಬಾಗಿಲು ಎಂದು ಕರೆಯಲ್ಪಡುತ್ತದೆ. ಈ ಜಾತ್ರೆಗೆ ಕರ್ನಾಟಕದಿಂದಲ್ಲದೆ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ವಿವಿಧ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಭಕ್ತರ ಉದಾರ ಸಹಾಯ-ಸಹಕಾರದಿಂದ ರೇವಣಸಿದ್ಧೇಶ್ವರ ದೇವಸ್ಥಾನದ ಜೀಣೋದ್ಧಾರ ನಡೆದಿದ್ದು, ಎರಡು ಕೋಟಿ ವೆಚ್ಚದಲ್ಲಿ 108 ಅಡಿ ಎತ್ತರದ ರಾಜಗೋಪುರ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕ- ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಅತ್ಯಂತ ಎತ್ತರದ ಹೊರ್ತಿ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದ ಈ ರಾಜಗೋಪುರದ ಉದ್ಘಾಟನೆಯು ಇದೇ ಅಕ್ಟೋಬರ್ 20ರಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಜಗದ್ಗುರುಗಳಿಂದ ಜರುಗಲಿದೆ. ಅಲ್ಲದೆ ಲಕ್ಷದೀಪೋತ್ಸವ ಕಾರ್ಯಕ್ರಮವೂ ನಡೆಯಲಿದೆ.

Leave a Reply

Your email address will not be published. Required fields are marked *

Back To Top