Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

10ನೇ ತರಗತಿವರೆಗೆ ಕನ್ನಡ ಕಲಿತವರೂ ಕನ್ನಡಿಗರು!

Friday, 07.04.2017, 5:00 AM       No Comments
  • ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಹತ್ತನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿತಿದ್ದರೆ ಸಾಕು. ಅವರು ಇನ್ಮುಂದೆ ಕನ್ನಡಿಗರಾಗುತ್ತಾರೆ!

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳನ್ನು ಕಡ್ಡಾಯ ಮಾಡುವ ಸಲುವಾಗಿ ರೂಪಿಸುತ್ತಿರುವ ನಿಯಮಾವಳಿಗಳಲ್ಲಿ ಕನ್ನಡಿಗ ಪರಿಭಾಷೆಯನ್ನು ಸ್ಪಷ್ಟಗೊಳಿಸಿ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಇಂಥದ್ದೊಂದು ಹೊಸ ವ್ಯಾಖ್ಯಾನ ನೀಡಲು ಸರ್ಕಾರ ಮುಂದಾಗಿದೆ.

ಡಾ.ಸರೋಜಿನಿ ಮಹಿಷಿ ವರದಿಯಲ್ಲಿ ತಿದ್ದುಪಡಿ ತಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದೆ. ಅದರಲ್ಲಿ ಖಾಸಗಿ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಉದ್ಯೋಗಗಳನ್ನು ನೀಡಲು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಸರ್ಕಾರ ಬದ್ಧವೆಂಬ ಘೊಷಣೆ ಮಾಡಿದ ಬೆನ್ನಲ್ಲೇ ಸಚಿವ ಸಂತೋಷ್​ಲಾಡ್ ಸೂಚನೆಯ ಹಿನ್ನೆಲೆಯಲ್ಲಿ ಕಾರ್ವಿುಕ ಇಲಾಖೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಸಂಬಂಧ ಕಾನೂನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ರಾಜ್ಯದಿಂದ ಜಲ, ನೆಲ, ಮೂಲಸೌಕರ್ಯ ನೀಡಿದರೂ ಅನೇಕ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗಾವಕಾಶ ಗಳನ್ನೇ ನೀಡುತ್ತಿಲ್ಲ. ಅದಕ್ಕೆ ಕಡಿವಾಣ ಹಾಕಲು ಕಾನೂನೂ ರೂಪಿಸಲು ಸರ್ಕಾರ ಮುಂದಾಗಿದೆ.

ಏಪ್ರಿಲ್ ಅಂತ್ಯಕ್ಕೆ ಸಿದ್ಧ: ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಬೇಕು ಎಂಬ ಉದ್ದೇಶದಿಂದ ಈಗಾಗಲೇ ಕಾರ್ವಿುಕ ಇಲಾಖೆ ಕಾನೂನು ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ. ಕರಡು ಸಿದ್ಧವಾದ ಕೂಡಲೇ ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳಲಾಗುತ್ತದೆ. ಆ ನಂತರ ವಿಧಾನಮಂಡಲದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ನ್ಯಾಯಾಲಯಕ್ಕೆ ಹೋದರೂ ಸಮಸ್ಯೆಯಾಗದಂತೆ ಕಾನೂನು ಸಿದ್ಧಪಡಿಸುವ ಸಲುವಾಗಿ ಕಾನೂನು, ಸಂಸದೀಯ ವ್ಯವಹಾರಗಳ ಇಲಾಖೆಯ ನಿವೃತ್ತ ಕಾರ್ಯದರ್ಶಿಯೊಬ್ಬರ ಸಹಕಾರವನ್ನು ಪಡೆಯಲಾಗುತ್ತಿದೆ.

ಮಹಿಷಿ ವರದಿ ಹೇಳಿದ್ದೇನು?

ಕನ್ನಡಿಗರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡಲು ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ನೀಡಿದ ಒಟ್ಟು 56 ಶಿಫಾರಸುಗಳ ಪೈಕಿ 48ಕ್ಕೆ ಸಮ್ಮತಿ ದೊರೆತಿತ್ತು. ಆದರೆ ಉದ್ಯೋಗಕ್ಕೆ ಸಂಬಂಧಿಸಿದ ಶಿಫಾರಸುಗಳ ಜಾರಿಗೆ ಸಮಸ್ಯೆಗಳಿದ್ದವು.

ಪ್ರಮುಖ ಶಿಫಾರಸು

ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಶೇ. 100 ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಶೇ. 65 ಎ ದರ್ಜೆ ಹುದ್ದೆಗಳು, ಶೇ. 80 ಬಿ ದರ್ಜೆ ಹುದ್ದೆಗಳು, ಶೇ. 100 ಸಿ ಮತ್ತು ಡಿ ದರ್ಜೆಯ ಹುದ್ದೆಗಳು ಕನ್ನಡಿಗರಿಗೆ ಮೀಸಲಿರಿಸಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ ಜಾರಿಗೆ ಬರಲೇ ಇಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗಗಳು ಲಭ್ಯವಾಗಿವೆ ಎಂಬ ಮಾಹಿತಿಯೇ ಇಲ್ಲ. ಮಹಿಷಿ ವರದಿ ಖಾಸಗಿಗೆ ಸಂಬಂಧಿಸಿದಂತೆ ಹೇಳಿರಲಿಲ್ಲ. ಇದೀಗ ಖಾಸಗಿ ವಲಯದಲ್ಲಿಯೇ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದಲೇ ಸಿ ಮತ್ತು ಡಿ ದರ್ಜೆಯ ಹುದ್ದೆಗಳು ಕನ್ನಡಿಗರಿಗೆ ಸಿಗಬೇಕೆಂದು ಶಿಫಾರಸು ಮಾಡಲಾಗಿದೆ. ಸರ್ಕಾರ ನಡೆಸಿರುವ ಹೂಡಿಕೆದಾರರ ಸಮಾವೇಶದ ಪ್ರಕಾರ 1201 ಉದ್ದಿಮೆಗಳು ರಾಜ್ಯದಲ್ಲಿ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದ್ದು, ಅದರಲ್ಲಿ ಸುಮಾರು 7 ಲಕ್ಷ ಉದ್ಯೋಗಗಳು ಲಭ್ಯವಾಗಲಿವೆ.

ಅನ್ನದ ಭಾಷೆಯಾಗಿ ಕನ್ನಡ

ಮಾತೃಭಾಷಾ ಮಾಧ್ಯಮದ ವಿಚಾರದಲ್ಲಿ ನ್ಯಾಯಾಲಯದ ಮುಂದೆ ಪದೇ ಪದೆ ಸೋಲಾಗುತ್ತಿದೆ. ಕೇಂದ್ರ ಸರ್ಕಾರ ಸಂವಿಧಾನದ ತಿದ್ದುಪಡಿ ಮಾಡುವುದೊಂದೇ ಉಳಿದಿರುವ ದಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸುವಲ್ಲಿಯೂ 10ನೇ ತರಗತಿ ತನಕ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿತರೆ ಸಾಕು ಎಂಬ ನಿಲುವು ಸಾಕಷ್ಟು ದೂರಗಾಮಿ ಪರಿಣಾಮ ಉಂಟು ಮಾಡುತ್ತದೆ. ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸದ, ಕನ್ನಡವನ್ನು ಒಂದು ಭಾಷೆಯನ್ನಾಗಿಯೂ ಕಲಿಸದ ಪಾಲಕರು ಇನ್ಮುಂದೆ ಕನ್ನಡವನ್ನು ಕಲಿಸುವುದು ಅನಿವಾರ್ಯವಾಗುತ್ತದೆ.

ಕನ್ನಡ ಓದಲು, ಬರೆಯಲು, ಮಾತನಾಡಲು ಬಂದರೆ ಅವರೇ ಕನ್ನಡಿಗರು, ಒಕ್ಕೂಟ ವ್ಯವಸ್ಥೆಯಲ್ಲಿ ಅವರು ಯಾವುದೇ ರಾಜ್ಯದಿಂದ ಬೇಕಾದರೂ ಬಂದು ಕರ್ನಾಟಕದಲ್ಲಿ ವಾಸ ಮಾಡುತ್ತಿರಲಿ.

| ಡಾ. ಮುಖ್ಯಮಂತ್ರಿ ಚಂದ್ರು ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಸರ್ಕಾರ ಈ ರೀತಿ ಒತ್ತಡ ತರುವುದು ಸರಿಯಲ್ಲ. ಉದ್ದಿಮೆ ಸ್ಥಾಪನೆ ಮಾಡುವವರು ನಾವೇ ಆಗಿರುವುದರಿಂದ ನಮಗೆ ಬೇಕಾದವರಿಗೆ ಕೆಲಸ ಕೊಡುತ್ತೇವೆ. ಅವರ ಕೌಶಲವನ್ನು ಗಮನಿಸುತ್ತೇವೆಯೇ ಹೊರತು, ಅವರು ಯಾವ ಭಾಷೆಯವರು ಎಂದಲ್ಲ. ಕನ್ನಡಿಗರಿಗೆ ಉದ್ಯೋಗ ಎಂಬುದನ್ನು ಕಡ್ಡಾಯ ಮಾಡಬಾರದು.

| ಜೆ. ಕ್ರಾಸ್ಟ ಸಹ ಅಧ್ಯಕ್ಷ, ಅಸೋಚಾಮ್ (ದಕ್ಷಿಣ ವಲಯ)

ಕನ್ನಡಿಗರೆಂದರೆ ಯಾರು?

ಸರೋಜಿನಿ ಮಹಿಷಿ ಸರ್ಕಾರ ನೀಡಿರುವ ವರದಿಯಲ್ಲಿ 20 ವರ್ಷಗಳ ಕಾಲ ರಾಜ್ಯದಲ್ಲಿ ವಾಸ ಮಾಡುವವರು ಕನ್ನಡಿಗರಾಗುತ್ತಾರೆ ಎಂಬ ಅಂಶವನ್ನು ಉಲ್ಲೇಖಿಸಿತ್ತು. ಆದರೆ ವಾಸ ದೃಢೀಕರಣ ಪತ್ರ ಪಡೆಯುವುದು ಒಂದೆಡೆ ಕಷ್ಟವಾದರೆ, ಕನ್ನಡದಲ್ಲಿ ಓದಲು ಹಾಗೂ ಬರೆಯಲು ಬರದವರೂ ದೃಢೀಕರಣ ಪತ್ರ ಪಡೆಯುವ ಸಾಧ್ಯತೆಗಳಿತ್ತು. ಇದನ್ನು ತಪ್ಪಿಸುವ ಸಲುವಾಗಿಯೇ ಸರ್ಕಾರ ಈಗ ಒಂದರಿಂದ ಹತ್ತನೇ ತರಗತಿಯ ತನಕ ಕನ್ನಡವನ್ನು ಒಂದು ವಿಷಯವಾಗಿ ಓದಿದ್ದವರೂ ಕನ್ನಡಿಗರಾಗುತ್ತಾರೆ ಎಂಬರ್ಥದಲ್ಲಿ ತಿದ್ದುಪಡಿ ಮಾಡಲು ತೀರ್ವನಿಸಿದೆ. ಕನಿಷ್ಠ 10ನೇ ತರಗತಿಯವರೆಗೆ ಕನ್ನಡವನ್ನು ಒಂದು ವಿಷಯವಾಗಿ ಓದಿದವರು ಬರೆಯಬಲ್ಲರು, ಮಾತನಾಡಬಲ್ಲರು ಹಾಗೂ ಓದಬಲ್ಲರು ಎಂಬ ಕಾರಣಕ್ಕೆ ಈ ರೀತಿಯಲ್ಲಿ ತಿದ್ದುಪಡಿ ಮಾಡಲಾಗುತ್ತದೆ.

ಐಟಿ-ಬಿಟಿ ಸೇರ್ಪಡೆ

ಸರ್ಕಾರದ ಮೇಲೆ ಒತ್ತಡ ತಂದು ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಪ್ರಕ್ರಿಯೆಯಿಂದ ಜಾರಿಕೊಳ್ಳುವ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಂಸ್ಥೆಗಳನ್ನೂ ಕಾನೂನಿನ ಚೌಕಟ್ಟಿಗೆ ಒಳಪಡಿಸುವ ಉದ್ದೇಶದಿಂದ ಸರ್ಕಾರ ಮತ್ತಷ್ಟು ಕಠಿಣ ಕ್ರಮ ರೂಪಿಸುತ್ತಿರುವುದಾಗಿ ಮೂಲಗಳು ಖಚಿತಪಡಿಸಿವೆ.

ಸಂಪುಟದಲ್ಲಿ ಮಂಡನೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಒಪ್ಪಿಗೆ ಪಡೆದಲ್ಲಿ ಕಾರ್ವಿುಕ ಇಲಾಖೆ ಸಿದ್ಧಪಡಿಸುತ್ತಿರುವ ವಿಧೇಯಕಕ್ಕೆ ಕಾನೂನಿನ ಬಲ ಸಿಗುತ್ತದೆ. ವಿಧೇಯಕ ಸಿದ್ಧವಾಗುವ ವೇಳೆಗೆ ಪರಿಷ್ಕೃತ ವರದಿಗೆ ಸಂಪುಟದ ಒಪ್ಪಿಗೆ ಪಡೆಯುವಂತೆ ಮಾಡಲಾಗುತ್ತದೆ ಎಂದು ಕಾರ್ವಿುಕ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಒಂದರಿಂದ ಹತ್ತನೇ ತರಗತಿಯತನಕ ಕನ್ನಡವನ್ನು ಒಂದು ಭಾಷೆಯನ್ನಾಗಿ ಓದಿದ್ದರೆ ಸಾಕು ಎಂಬುದನ್ನು ಪ್ರಾಧಿಕಾರವೇ ಪರಿಷ್ಕೃತ ವರದಿಯಲ್ಲಿ ಹೇಳಿದೆ. ವಾಸದ ಧೃಡೀಕರಣ ಪತ್ರದ ಅಗತ್ಯವೇ ಬೇಕಾಗಿಲ್ಲ. ಇದೀಗ ಕಾರ್ವಿುಕ ಇಲಾಖೆ ಕಾನೂನು ರೂಪಿಸಲು ಮುಂದಾಗಿರುವುದು ಸ್ವಾಗತರ್ಹ.

| ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

 

 

Leave a Reply

Your email address will not be published. Required fields are marked *

Back To Top