More

    ಹಳೇ ಬೇರು, ಹೊಸ ಚಿಗುರು

    ಕಾರವಾರ: ಸಮನಾದ ಮತ ಬಿದ್ದರೂ ಗೆಲುವು, ಮರು ಎಣಿಕೆಯಲ್ಲಿ ಗೆಲುವು, ಹೀಗೆ ಹಲವು ರೋಚಕ ಅಂಶಗಳಿರುವ ಗ್ರಾಮ ಕದನ ಸಮಾಪ್ತಿಯಾಗಿದೆ. ಇನ್ನು ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ, ಆಯ್ಕೆ ಎಂಬ ಕುತೂಹಲಕಾರಿ ಬಾಕಿ ಉಳಿದಿದೆ.

    ಬುಧವಾರ ತಡ ರಾತ್ರಿಯವರೆಗೂ ಶ್ರಮಿಸಿದ ಅಧಿಕಾರಿ ವರ್ಗ ಅಂತೂ ಅಂತಿಮ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗಿದೆ. ಅಲ್ಲಲ್ಲಿ, ಸಣ್ಣಪುಟ್ಟ ಗಲಾಟೆಗಳನ್ನು ಬಿಟ್ಟರೆ ಬಹುತೇಕ ಶಾಂತಿಯುತವಾಗಿ ಚುನಾವಣೆ ಮುಕ್ತಾಯವಾಗಿದೆ. ಒಟ್ಟಾರೆ ಫಲಿತಾಂಶವನ್ನು ನೋಡಿದರೆ, ಹಳೇ ಬೇರು, ಹೊಸ ಚಿಗುರು ಸೇರಿ ನವಗ್ರಾಮ ಕಟ್ಟುವ ಸಂಕಲ್ಪಕ್ಕೆ ಗ್ರಾಪಂ ಚುನಾವಣೆ ನಾಂದಿ ಹಾಡಿದಂತಿದೆ. ಈ ಬಾರಿ ಗ್ರಾಪಂ ಕಣದಲ್ಲಿ ಪದವೀಧರರು, ಯುವಕರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಶಹರದಲ್ಲಿ ಉದ್ಯೋಗದಲ್ಲಿರುವವರೂ ಸ್ವಂತ ಊರಿನಲ್ಲಿ ಗೆದ್ದು ಉದ್ಧಾರದ ಕನಸು ಕಂಡಿದ್ದಾರೆ.

    ಎಚ್ಚರಿಕೆ ಗಂಟೆ: ಈ ಚುನಾವಣೆಯಲ್ಲಿ ಪಕ್ಷ, ಪಕ್ಷದ ಚಿಹ್ನೆ ಇಲ್ಲ. ಆದರೆ, ಸ್ಪರ್ಧಿಸಿರುವವರಲ್ಲಿ ಶೇ. 90 ರಷ್ಟು ಅಭ್ಯರ್ಥಿಗಳು ಯಾವುದಾದರೂ ಒಂದು ಪಕ್ಷದ ಸದಸ್ಯರಾಗಿರುತ್ತಾರೆ. ಇದರಿಂದ ಬೂತ್ ಮಟ್ಟದ ಪಕ್ಷ ಸಂಘಟನೆಗೆ ಗ್ರಾಪಂ ಚುನಾವಣೆಯಿಂದ ಹೆಚ್ಚು ಅನುಕೂಲವಾಗಲಿದೆ.

    ಉತ್ತರ ಕನ್ನಡದ ಗ್ರಾಮೀಣ ಚುನಾವಣೆಗಳಲ್ಲಿ ಕಾಂಗ್ರೆಸ್ ಇದುವರೆಗೆ ಭದ್ರ ಕೋಟೆ ಹೊಂದಿತ್ತು. ತಾಪಂ, ಜಿಪಂಗಳಲ್ಲೂ ಕಾಂಗ್ರೆಸ್ ಪಾರಮ್ಯವಿತ್ತು. ಆದರೆ, ಈ ಬಾರಿ ಬಿಜೆಪಿ ಗೆದ್ದು ಬೀಗಿದೆ. 2015 ರ ಗ್ರಾಪಂ ಚುನಾವಣೆ ಫಲಿತಾಂಶಕ್ಕೆ ಹೋಲಿಸಿದರೆ 480 ರಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ 550 ರಷ್ಟು ಸ್ಥಾನ ಕಳೆದುಕೊಂಡಿದ್ದು, ಆ ಪಕ್ಷದ ಬುನಾದಿ ಜಿಲ್ಲೆಯಲ್ಲಿ ಅಲುಗಾಡುತ್ತಿರುವ ಮುನ್ಸೂಚನೆಯನ್ನು ಈ ಚುನಾವಣೆ ನೀಡಿದೆ. ಇನ್ನು ಜೆಡಿಎಸ್ ಮತ್ತಷ್ಟು ಕುಸಿದು ಅಸ್ತಿತ್ವ ಕಳೆದುಕೊಳ್ಳುತ್ತಿರುವುದನ್ನು ತೋರ್ಪಡಿಸಿದೆ. ಪಕ್ಷಗಳಿಗೆ ಇದೊಂದು ಎಚ್ಚರಿಕೆಯ ಗಂಟೆ ಎಂದೇ ಹೇಳಬಹುದು.

    ಮೀಸಲಾತಿಯತ್ತ ಎಲ್ಲರ ಚಿತ್ತ: ಗ್ರಾಪಂ ಚುನಾವಣೆ ಗೆದ್ದವರ ಎಲ್ಲರ ಚಿತ್ತ ಈಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯತ್ತ ನೆಟ್ಟಿದೆ.ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಅದನ್ನು ಘೊಷಣೆ ಮಾಡಬೇಕಿದೆ.

    ಪಕ್ಷಾಂತರ ಶುರು: ಈಗಲೇ ಪಕ್ಷಾಂತರವೂ ಶುರುವಾಗಿದೆ. ನಿನ್ನೆವರೆಗೂ ಒಂದು ಪಕ್ಷದ ನಾಯಕರ ಜತೆ ಓಡಾಡುತ್ತಿದ್ದವರು ಬುಧವಾರದ ಫಲಿತಾಂಶ ಹೊರ ಬೀಳುತ್ತಿದ್ದಂತೆ ವರಸೆ ಬದಲಾಯಿಸಿಬಿಟ್ಟಿದ್ದಾರೆ. ಸಹಜವಾಗಿಯೇ ಆಡಳಿತ ಪಕ್ಷ ಬಿಜೆಪಿ ಜತೆ ಗುರುತಿಸಿಕೊಂಡು ಮಾಲೆ ಹಾಕಿಸಿ ಜಾಲತಾಣಗಳಲ್ಲಿ ಫೋಟೋ ಹರಿಬಿಡುತ್ತಿರುವುದು ಸಾಮಾನ್ಯವಾಗಿದೆ.

    ಐದು ಸ್ಥಾನ ಖಾಲಿ: ಜಿಲ್ಲೆಯಲ್ಲಿ ಇನ್ನೂ 5 ಸ್ಥಾನಗಳು ಚುನಾವಣೆ ನಡೆಯದೇ ಖಾಲಿ ಉಳಿದಿವೆ. ಕಾರವಾರದ ವೈಲವಾಡದಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರಿಂದ ಒಂದು ಸ್ಥಾನ ಖಾಲಿ ಇದೆ. ಕುಮಟಾ ಬರ್ಗಿ ಪಂಚಾಯಿತಿಯ ಪಡುವಣಿ ಅನುಸೂಚಿತ ಪಂಗಡದ ಮಹಿಳೆಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಸದಸ್ಯೆಯ ಜಾತಿ ಪ್ರಮಾಣಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಸಿಂಧು ಎಂದು ಘೊಷಿಸಿದ್ದರಿಂದ ಆ ಸ್ಥಾನ ಖಾಲಿ ಉಳಿದಿದೆ. ಅಂಕೋಲಾದ ಡೋಂಗ್ರಿ ಕನಕನಹಳ್ಳಿಯ ಹಿಂದುಳಿದ ಅ ವರ್ಗದ ಮಹಿಳಾ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದ್ದು, ಸ್ಥಾನ ಖಾಲಿ ಉಳಿದಿದೆ. ಹೊನ್ನಾವರದ ಮಾಗೋಡ ಗ್ರಾಪಂನ ಮಾಗೋಡ ವಾರ್ಡ್​ನ ಎಸ್​ಟಿ ಮಹಿಳೆ ಮೀಸಲು ಸ್ಥಾನ ಹಾಗೂ ಜೊಯಿಡಾದ ಕುಂಬಾರವಾಡದ ಕುಂಡಲ ವಾರ್ಡ್​ನ ಎಸ್​ಟಿ ಮಹಿಳಾ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts