More

    ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ತಹಸೀಲ್ದಾರ್ ಕಚೇರಿ ಎದುರು ಕಸಾಘಟ್ಟ ಗ್ರಾಮಸ್ಥರ ಪ್ರತಿಭಟನೆ

    ದೊಡ್ಡಬಳ್ಳಾಪುರ: ತಾಲೂಕಿನ ಕಸಾಘಟ್ಟ ಗ್ರಾಮದ ಕೆರೆ ಸೇರಿ ಸರ್ಕಾರಿ ಜಾಗಗಳನ್ನು ಬಲಾಢ್ಯರು ಮಾಡಿಕೊಂಡಿರುವ ಒತ್ತುವರಿ ತೆರವುಗೊಳಿಸಿ, ಜಾನುವಾರುಗಳಿಗೆ ಮೇವು ದೊರೆಯುವಂತೆ ಮಾಡಬೇಕು. ಜತೆಗೆ ಕೆರೆಗೆ ಬರುವ ರಸ್ತೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

    ಕಸಾಘಟ್ಟದಲ್ಲಿ ಸರ್ಕಾರಿ ಗುಂಡುತೋಪಿನಲ್ಲಿ 4 ಎಕರೆ, ಗೋಮಾಳದಲ್ಲಿ 184 ಎಕರೆ, ಗೋಕಟ್ಟೆಯಲ್ಲಿ 3 ಎಕರೆ, ಕೆರೆಯಂಗಳದಲ್ಲಿ 62 ಎಕರೆ, ಸರ್ಕಾರಿ ತೋಪು 8 ಎಕರೆ ಇದೆ. ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರಿ ಜಾಗ ಬಳಕೆಯಾಗಬೇಕಿತ್ತು. ಆದರೆ ಗ್ರಾಮದ ಬಲಾಢ್ಯರು ಅವೆಲ್ಲವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಜಾನುವಾರುಗಳು ಮೇಯಲು ಜಾಗವಿಲ್ಲದಂತೆ ಮಾಡಲಾಗಿದೆ. ಗ್ರಾಮದ ಸರ್ವೇ ನಂ.36ರಲ್ಲಿ 62 ಎಕರೆ ಕೆರೆ ಇದ್ದು, ಕೆರೆಯ ಅಂಚಿನಲ್ಲಿರುವ ರೈತರು ಕೆರೆಯ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಒತ್ತುವರಿ ಮಾಡಿದ ಜಾಗದಲ್ಲಿ ಅಡಕೆ, ಜೋಳ, ರಾಗಿ, ಸೊಪ್ಪು ಬೆಳೆಯಲಾಗುತ್ತಿದೆ. ಒತ್ತುವರಿ ಜಾಗದಲ್ಲಿ ಜಾನುವಾರುಗಳು ಮೇಯಲು ಹೋದಾಗ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ ಎಂದು ಡಿಎಸ್‌ಎಸ್ ಮುಖಂಡ ಅಂಜನಕುಮಾರ್ ದೂರಿದರು.

    ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವು: ಪ್ರತಿಭಟನಾಕಾರರು ನೀಡಿದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಟಿ.ಎಸ್. ಶಿವರಾಜ್, ಕೆರೆಯಂಗಳ ಹಾಗೂ ಗೋ ಕಟ್ಟೆ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಒತ್ತುವರಿದಾರರಿಗೆ ಈಗಾಗಲೆ ನೋಟಿಸ್ ನೀಡಲಾಗಿದೆ. ವಾರದೊಳಗೆ ಗ್ರಾಮಕ್ಕೆ ಭೇಟಿ ನೀಡಿ ಸರ್ವೇ ಮಾಡಿಸಿ, ಒತ್ತುವರಿ ಆಗಿರುವ ಜಾಗವನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts