More

    ಅನಧಿಕೃತ ಅಂಗಡಿ ತೆರವು

    ಧಾರವಾಡ: ನಗರದ ಸೂಪರ್ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ವಿುಸಿದ್ದ ಕೆಲ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತೆರವುಗೊಳಿಸಿದರು.
    ಮಾರುಕಟ್ಟೆ ರಸ್ತೆ ಅತಿಕ್ರಮಿಸಿ ಅಂಗಡಿ ನಿರ್ವಿುಸಿದ್ದ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ಅಂಗಡಿಕಾರರು ಮಾತ್ರ ಕಿವಿಗೊಟ್ಟಿರಲಿಲ್ಲ. ಹೀಗಾಗಿ, ಕೆಲ ದಿನಗಳ ಹಿಂದಷ್ಟೇ ಮಾಲೀಕರ ಸಭೆ ನಡೆಸಿ, ಅಂಗಡಿಗಳ ತೆರವಿಗೆ ಎರಡ್ಮೂರು ದಿನಗಳ ಕಾಲ ಅವಕಾಶ ನೀಡಿದ್ದರು. ಆದರೂ ಸ್ವಯಂ ಪ್ರೇರಿತವಾಗಿ ತೆರವುಗೊಳಿಸದ ಹಿನ್ನೆಲೆಯಲ್ಲಿ ವಲಯ ಕಚೇರಿ ನಂ. 2ರ ಸಹಾಯಕ ಆಯುಕ್ತ ಎಂ.ಬಿ. ಸಬರದ ನೇತೃತ್ವದಲ್ಲಿ ಶಹರ ಠಾಣೆ ಪೊಲೀಸರ ಬಂದೋಬಸ್ತ್​ನಲ್ಲಿ ಸುಮಾರು 40 ಅಂಗಡಿಗಳನ್ನು ತೆರವುಗೊಳಿಸಲಾಯಿತು.
    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಂಗಡಿ ಮಾಲೀಕರು, ಲಾಕ್​ಡೌನ್ ಮಧ್ಯೆ ಅಂಡಿಗಳ ತೆರವು ಕಾರ್ಯ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಾಲೀಕರ ಪರ ವಕೀಲ ಎಂ.ಎಂ. ಚೌಧರಿ ಅವರು ನ್ಯಾಯಾಲಯ ನೀಡಿರುವ ಆದೇಶವನ್ನು ತೋರಿಸಿದರೂ ಪಾಲಿಕೆ ಅಧಿಕಾರಿಗಳು ಕಿವಿಗೊಡಲಿಲ್ಲ. ಹೀಗಾಗಿ, ಅಧಿಕಾರಿಗಳು ಹಾಗೂ ಚೌಧರಿ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ಚೌಧರಿ ಅವರನ್ನು ವಶಕ್ಕೆ ಪಡೆದು ಕಾರ್ಯಾಚರಣೆಗೆ ಅನುವು ಮಾಡಿದರು.
    ನಂತರ ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಸ್ಥಳಕ್ಕೆ ಆಗಮಿಸಿ ಪಾಲಿಕೆ ವಿರುದ್ಧ ಹರಿಹಾಯ್ದರು. ಸಂಕಷ್ಟದ ಸಮಯದಲ್ಲಿ ತೆರವು ಕಾರ್ಯ ನಡೆಸುವುದು ಸರಿಯಲ್ಲ. ಮೊದಲು ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕ ತೆರವು ನಡೆಸಿ ಎಂದು ಆಗ್ರಹಿಸಿದರು. ಆದರೆ, ಅಧಿಕಾರಿಗಳು ಯಾರ ಮಾತಿಗೂ ಜಗ್ಗಲಿಲ್ಲ.
    ಕೊನೆಗೆ ಕೆಲ ಅಂಗಡಿಕಾರರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದರು. ಕೆಲವರು ತೆರವಿಗೆ ಸಮಯ ಕೇಳಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು 2 ದಿನಗಳ ಸಮಯ ನೀಡಿದ್ದು, ಅಷ್ಟರಲ್ಲಿ ತೆರವು ಮಾಡದಿದ್ದರೆ ಪಾಲಿಕೆ ಸಿಬ್ಬಂದಿ ಮುಲಾಜಿಲ್ಲದೆ ಎಲ್ಲ ಅಂಗಡಿ ತೆರವು ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
    ಬಡವರ ಮೇಲೆ ಪ್ರಹಾರ
    ಧಾರವಾಡ: ಸರ್ಕಾರ ಕರೊನಾ ನಿಯಂತ್ರಿಸುವುದನ್ನು ಬಿಟ್ಟು ಬಡವರ ಮೇಲೆ ಪ್ರಹಾರ ಮಾಡುತ್ತಿದೆ ಎಂದು ದೀಪಕ ಚಿಂಚೋರೆ ಹರಿಹಾಯ್ದರು.
    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸಂದರ್ಭದಲ್ಲಿ ತೆರವು ಕಾರ್ಯ ನಡೆಸುವುದಿಲ್ಲ ಎಂದು ಹೇಳಲಾಗಿತ್ತು. ದಿಢೀರನೆ ತೆರವು ಮಾಡಿದರೆ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಕುರಿತು ಪಾಲಿಕೆ ಆಯುಕ್ತರಿಗೆ ದೂರವಾಣಿ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಸರ್ಕಾರ ಹೇರಿರುವ ನಿಯಮಗಳನ್ನು ಪಾಲಿಕೆ ಅಧಿಕಾರಿಗಳು, ಪೊಲೀಸರು ಪಾಲಿಸಿಲ್ಲ. ಜಿಲ್ಲಾಧಿಕಾರಿ ಪಾಲಿಕೆ ಅಧಿಕಾರಿಗಳ ಹಾಗೂ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಕಾಂಗ್ರೆಸ್ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಮಾತನಾಡಿ, ಅಂದಾಜು 25 ವರ್ಷಗಳಿಂದ ಸೂಪರ್ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಕನಸು ನನಸಾಗಿಯೇ ಉಳಿದಿದೆ. ಆದರೆ, ಆಗಾಗ ವ್ಯಾಪಾರಸ್ಥರಿಗೆ ಪಾಲಿಕೆ ಅಧಿಕಾರಿಗಳಿಂದ ಮಾತ್ರ ಕಿರುಕುಳ ತಪ್ಪಿಲ್ಲ. ಈ ಪ್ರಕರಣ ನ್ಯಾಯಾಲಯವರೆಗೂ ಹೋಗಿದ್ದು, ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳ ನೀಡಿ ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿದೆ. ಪಾಲಿಕೆ ಅಧಿಕಾರಿಗಳು ಈ ಕಾರ್ಯ ಮಾಡದೆ ಲಾಕ್​ಡೌನ್​ನಲ್ಲಿ ನಿಯಮ ಉಲ್ಲಂಘಿಸಿ, ನೋಟಿಸ್ ನೀಡದೆ ತೆರವು ಮಾಡಿದ್ದು ತಪ್ಪು ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts