More

    ಅಧಿಕಾರಿಗಳ ಗೈರಿಗೆ ಸಭೆ ರದ್ದು, ತಾಲೂಕು ಆಡಳಿತದ ವಿರುದ್ಧ ದಲಿತ ಮುಖಂಡರ ಪ್ರತಿಭಟನೆ

    ನೆಲಮಂಗಲ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಗೆ ಅಧಿಕಾರಿಗಳು ಗೈರಾಗಿದ್ದಾರೆಂದು ಸಭೆ ರದ್ದುಪಡಿಸಿದ ಜತೆಗೆ ತಾಲೂಕು ಆಡಳಿತದ ವಿರುದ್ಧ ದಲಿತ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯಿಂದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆ ಕರೆಯಲಾಗಿತ್ತು. ನಗರಸಭೆ ಪೌರಾಯುಕ್ತರು ಗೈರಾಗಿರುವುದಕ್ಕೆ ಆಕ್ಷೇಪಿಸಿದ ಪರಿಶಿಷ್ಟ ಜಾತಿ, ಪಂಗಡಗಳ ವಿವಿಧ ಸಂಘಟನೆಗಳ ಮುಖಂಡರು ಸಭೆ ರದ್ದುಪಡಿಸಿ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

    ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್ ಮಾತನಾಡಿ, ನಗರ ಠಾಣೆ ಮತ್ತು ಡಾ.ಬಾಬು ಜಗಜೀವನರಾಂ ಭವನಕ್ಕೆ ಭೂಮಿ ಕಾಯ್ದಿರಿಸುವುದು ಸೇರಿ ನಗರಸಭೆ ವ್ಯಾಪ್ತಿಯ ಹಲವು ಸಮಸ್ಯೆ ಚರ್ಚಿಸಿ ಪರಿಹಾರ ಒದಗಿಸಬೇಕಿದ್ದ ಪೌರಾಯುಕ್ತರೇ ಸಭೆಗೆ ಗೈರಾಗಿದ್ದಾರೆ. ಸಮುದಾಯದ ಸಮಸ್ಯೆಗಳು ಸಭೆಯಲ್ಲಿ ಚರ್ಚೆಗೆ ಮಾತ್ರ ಸೀಮಿತವಾಗುತ್ತಿವೆ ಹೊರತು ಪರಿಹಾರ ದೊರೆಯುತ್ತಿಲ್ಲ. ಆದ್ದರಿಂದ ನಗರಸಭೆ ಪೌರಾಯುಕ್ತರು, ಸರ್ಕಾರದ ಎಲ್ಲ ಇಲಾಖೆ ಮುಖ್ಯಸ್ಥರು ಹಾಜರಾಗುವವರೆಗೂ ಸಭೆ ಮುಂದೂಡಬೇಕು ಗೈರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಮುಖಂಡರನ್ನು ಮನವೊಲಿಸುವ ಅಧಿಕಾರಗಳು ಯತ್ನಿಸಿದರೂ ಲ ನೀಡಲಿಲ್ಲ.

    ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಮಾತನಾಡಿ, ಕೆಲ ವ್ಯಕ್ತಿಗಳು ಉದ್ದೇಶ ಪೂರ್ವಕವಾಗಿ ಸಭೆ ಮುಂದೂಡುವ ಪ್ರಯತ್ನ ಮಾಡಿದ್ದಾರೆ. ಸರ್ಕಾರದ ಯಾವುದೇ ಇಲಾಖೆಯ ಮುಖ್ಯಸ್ಥರು ಭಯಪಡುವ ಅಗತ್ಯ ಬೇಡ. ಸಭೆ ನಡೆದಿದ್ದರೆ ಕ್ಷೇತ್ರವ್ಯಾಪ್ತಿ ಇರುವ ಸಮಸ್ಯೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿತ್ತು ಎಂದರು.

    ಸಮುದಾಯ, ಸಂಘಟನೆ ಮುಖಂಡರು ಸಭೆಯಿಂದ ಹೊರ ನಡೆದ ಕಾರಣ ಸಭೆ ಮುಂದೂಡಲಾಗಿದೆ. ಮುಂದಿನ ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾಗಳು ಕಡ್ಡಾಯವಾಗಿ ಹಾಜರಾಗುವಂತೆ ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

    ಗ್ರಾಮವಾಸ್ಥವ್ಯ: ಮಾರ್ಚ್ ತಿಂಗಳ 3ನೇ ಶನಿವಾರ ತಾಲೂಕಿನ ಸೊಲದೇವನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಗ್ರಾಮವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ತಾಲೂಕುಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಹಾಗೂ ಅರ್ಹರ ಪಟ್ಟಿ ಸಿದ್ಧಪಡಿಸಕೊಂಡಿರಬೇಕು ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

    ವಿಶೇಷ ತಹಸೀಲ್ದಾರ್ ಪ್ರಕಾಶ್, ತಾಲೂಕು ಪಂಚಾಯಿತಿ ಇಒ ಲಕ್ಷ್ಮೀನಾರಾಯಣ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್.ಶಿವಣ್ಣ, ಡಿವೈಎಸ್‌ಪಿ ಜಗದೀಶ್, ಎಸ್‌ಐ ಎನ್.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್, ಕಾರ್ಮಿಕ ನಿರೀಕ್ಷಕ ಸಿ.ಡಿ.ನಾಗರತ್ನಾ, ರಾಜಸ್ವ ನಿರೀಕ್ಷಕ ರವಿಕುಮಾರ್ ಮತ್ತಿತರರು ಉಪಸ್ಥಿತರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts