Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಹೊಸದಾಗಿ ಬದುಕು ಕಟ್ಟಲೇಬೇಕು, ಏಕೆಂದರೆ…

Wednesday, 05.04.2017, 3:48 AM       No Comments

ಒಬ್ಬ ಮಗನ ನೋವನ್ನು ನಿವಾರಿಸಲು ಹೋಗಿ 400ಕ್ಕೂ ಅಧಿಕ ಮಕ್ಕಳ ಪಾಲಿಗೆ ತಾಯಿಯಾದ ವಾತ್ಸಲ್ಯಮಯಿ ಹೆಣ್ಣಿನ ಕಥೆಯಿದು. ಹೆಣ್ಣಿನ ವಾತ್ಸಲ್ಯದ ಜಗತ್ತು, ತಾಯಿಯ ಮಮತೆಯ ಅಂಗಳ ಹೇಗೆ ಸಮಾಜದ ಮುಂದೆ ಹೊಸ ಆದರ್ಶಗಳನ್ನು ಬಿತ್ತಬಲ್ಲದು ಎಂಬುದಕ್ಕೆ ಈ ಅಮ್ಮನ ಜೀವನವೇ ಸಾಕ್ಷಿ. ಆ ಮಹಾತಾಯಿಯ ಹೆಸರು ಪುಷ್ಪಾ ಶಿರ್ಕೆ. ಹುಟ್ಟಿ ಬೆಳೆದಿದ್ದು ಛತ್ತೀಸ್​ಗಢ ರಾಜ್ಯದ ಭಿಲಾಯಿಯಲ್ಲಿ. ಆರಂಭದಲ್ಲಿ ಇವರ ಬದುಕು ಸಾಮಾನ್ಯ ಹೆಣ್ಣುಮಗಳಂತೆಯೇ ಇತ್ತು. ಪದವಿವರೆಗೆ ಶಿಕ್ಷಣ ಪಡೆದ ನಂತರ ಹೆತ್ತವರು ಮಗಳನ್ನು ಧಾರೆ ಎರೆದುಕೊಟ್ಟರು. ಮದುವೆಯಾದ ಎರಡು ವರ್ಷಕ್ಕೆ ಮುದ್ದಾದ ಗಂಡು ಮಗು ಜನಿಸಿತು (1986). ತಾಯ್ತನ ಎಂಬುದು ಹೆಣ್ಣಿನ ಪಾಲಿಗೆ ಸಂಭ್ರಮ ಹಾಗೂ ಸಾರ್ಥಕತೆಯ ಸಂಗತಿಯೇ. ಪುಷ್ಪಾ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಮಗುವಿಗೆ ಅಮೋಲ್ ಎಂದು ಹೆಸರಿಟ್ಟು ತೊಡೆಯ ಮೇಲೆ ಅದನ್ನು ಮುದ್ದಾಡಿಸುತ್ತಾ ‘ಚಂದಾ ಹೈ ತೂ, ಮೇರಾ ಸೂರಜ್ ಹೈ ತೂ…’ ಎಂದು ಹಾಡುತ್ತಿದ್ದರೆ ಮನೆಯಲ್ಲೆಲ್ಲ ಸಂತಸದ ಹೊನಲು, ನಂದಗೋಕುಲದಂಥ ವಾತಾವರಣ. ಆ ಮಗುವಿನ ಮುದ್ದಾದ ನಗೆಯಲ್ಲಿ ತನ್ನೆಲ್ಲ ನೋವುಗಳನ್ನೂ ಮರೆಯುತ್ತಿದ್ದ ಪುಷ್ಪಾ ಅಮೋಲ್​ನತ್ತ ನೋಡಿ ‘ನೀನು ನನ್ನ ಪಾಲಿನ ದೇವ್ರಪ್ಪಾ’ ಎಂದ್ಹೇಳಿ ಖುಷಿಯಿಂದ ಭಾವುಕರಾಗುತ್ತಿದ್ದರು.

ಆದರೆ, ಈ ಸಂತಸ ಬಹುಕಾಲ ಉಳಿಯಲಿಲ್ಲ. ವಿಧಿ ವಿಚಿತ್ರವಾದ ಪರೀಕ್ಷೆಯನ್ನು ತಂದೊಡ್ಡಿತು. ಅಮೋಲ್ ಮೂರು ವರ್ಷದವನಿದ್ದಾಗ ಆತ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂಬ ಸಂಗತಿ ಬರಸಿಡಿಲಿನಂತೆ ಬಂದೆರಗಿತು. ಮಗನನ್ನು ಚೆನ್ನಾಗಿ ಓದಿಸಬೇಕು, ಅವನ ಸಾಧನೆಗಳನ್ನು ಕಣ್ತುಂಬಿಕೊಳ್ಳಬೇಕು ಎಂದೆಲ್ಲ ಕನಸುಗಳನ್ನು ಹೆಣೆದಿದ್ದ ತಾಯಿಗೆ ನಿಂತ ಭೂಮಿಯೇ ಬಾಯ್ತೆರೆದಂತಾಯಿತು. ಜತೆಗೆ ಕುಟುಂಬಸ್ಥರೂ ಬದಲಾಗಿಬಿಟ್ಟರು! ಗಂಡ ಸೇರಿದಂತೆ ಅತ್ತೆ ಮನೆಯವರೆಲ್ಲ ‘ಎಂಥ ಮಗನನ್ನು ಹೆತ್ತುಬಿಟ್ಟೆ…!’ ಎಂದು ದಿನಂಪ್ರತಿ ಕೊಂಕುಮಾತಿನಿಂದ ಇರಿಯತೊಡಗಿದರು. ಮೊದಲೇ ಜಜ್ಜರಿತಳಾಗಿದ್ದ ಆ ತಾಯಿ, ಗಂಡನ ಮನೆಯವರ ಮಾತು ಕೇಳಿ ಮತ್ತಷ್ಟು ಕುಸಿದಳು. ಆದರೂ, ದೇವರೇ ಸೋಲೊಪ್ಪಿಕೊಂಡರೂ ತಾಯಿಹೃದಯ ಸೋಲೊಪ್ಪಿಕೊಳ್ಳುವುದಿಲ್ಲ. ಅವಳು ತನ್ನ ಮಕ್ಕಳಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧಳಾಗಿರುತ್ತಾಳೆ. ಕಣ್ಣೀರು ಒರೆಸಿಕೊಂಡು ಪುಷ್ಪಾ ತಮಗೇ ತಾವೇ ಧೈರ್ಯ ಹೇಳಿಕೊಂಡರು. ಅಮೋಲ್​ನನ್ನು ಎತ್ತಿಕೊಂಡು ಹತ್ತಾರು ವೈದ್ಯರ ಬಳಿ ಹೋದರು, ಲೆಕ್ಕವಿಲ್ಲದಷ್ಟು ದೇವಸ್ಥಾನಗಳನ್ನು ಸುತ್ತಿದರು. ‘ಇಲ್ಲಮ್ಮಾ, ಇದಕ್ಕೆಲ್ಲ ಶಾಶ್ವತ ಚಿಕಿತ್ಸೆ ಇಲ್ಲ. ಯೋಗ ಥೆರಪಿ ಮೂಲಕ ಅವನ ಅಂಗಾಂಗದ ಕಾರ್ಯನಿರ್ವಹಣೆ ಹೆಚ್ಚಿಸಲು ಪ್ರಯತ್ನಿಸಬಹುದಷ್ಟೇ. ಇದನ್ನು ಬಿಟ್ಟು ಬೇರೇನು ಮಾಡಲೂ ಸಾಧ್ಯವಿಲ್ಲ’ ಎಂದು ವೈದ್ಯರೂ ಕೈಚೆಲ್ಲಿದರು.

ಮಗ ಹೇಗೇ ಇದ್ದರೂ ಅವನನ್ನು ಚೆನ್ನಾಗಿ ಓದಿಸಬೇಕು ಎಂದು ಬಯಸಿ ಹಲವು ಶಾಲೆಗಳ ಕದ ಬಡಿದರು ಪುಷ್ಪಾ. ಭಿಲಾಯಿ, ರಾಯ್ಪುರ ಅಲ್ಲಿಂದ ದಿಲ್ಲಿ ಹೀಗೆ ಹಲವು ಊರು ಸುತ್ತಿದರೂ ‘ನಮ್ಮಲ್ಲಿ ಇಂಥ ಮಕ್ಕಳಿಗೆ ಪ್ರವೇಶವಿಲ್ಲ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಕಳುಹಿಸಿದವು ಶಾಲಾ ಆಡಳಿತ ಮಂಡಳಿಗಳು. ದುಃಖ ಉಮ್ಮಳಿಸಿ ಬಂದಾಗಲೆಲ್ಲ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದ ಆ ತಾಯಿ ಮನಸ್ಸಿಗೆ ಮತ್ತೆ ತಾವೇ ಸಾಂತ್ವನ ಹೇಳುತ್ತಿದ್ದರು. ಈ ಅವಮಾನ, ಓಡಾಟ, ಹತಾಶೆ, ಜಿಗುಪ್ಸೆಗಳ ನಡುವೆಯೇ ಒಂದು ಹೊಸ ಚಿಂತನೆ ಜನ್ಮತಳೆಯಿತು! ಉಳಿದ ಶಾಲೆಗಳು ಪ್ರವೇಶ ನೀಡದಿದ್ದರೇನಂತೆ… ತಾನೇ ಯಾಕೆ ಒಂದು ಶಾಲೆ ಆರಂಭಿಸಬಾರದು ಎಂದು ಪ್ರಶ್ನಿಸಿಕೊಂಡರು. ಆದರೆ ಈ ಕನಸು ನನಸಾಗಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಕಾರಣ, ಗಂಡನ ಮನೆಯವರೇ ಇದಕ್ಕೆ ವಿರುದ್ಧವಾಗಿದ್ದರು. ‘ನೌಕರಿ ಮಾಡುವ ಇಚ್ಛೆಯಿದ್ದರೆ ಮಾಡು. ಆದರೆ ಶಾಲೆ ತೆಗೆಯುವ ಗೋಜಿಗೆಲ್ಲ ಹೋಗಬೇಡ. ನಾನು ಅದನ್ನೆಲ್ಲ ಸಹಿಸಿಕೊಳ್ಳುವುದಿಲ್ಲ’ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿಬಿಟ್ಟ ಗಂಡ. ಆದಾಗ್ಯೂ ಪುಪ್ಪಾ ಶಾಲೆ ಆರಂಭಿಸಲು ಸಂಕಲ್ಪ ಮಾಡಿಬಿಟ್ಟಿದ್ದರು. ಗಂಡ ಕಚೇರಿಗೆ ಹೋದೊಡನೆ, ವಿಶೇಷ ಮಕ್ಕಳಿಗಾಗಿ ಕಾರ್ಯನಿರ್ವಹಿಸುವ ಸಂಘ-ಸಂಸ್ಥೆಗಳನ್ನು ಭೇಟಿಮಾಡಿ ಮಾಹಿತಿ ಪಡೆಯತೊಡಗಿದರು. ಈ ಮುಂಚೆ ಎಂದೂ ಮನೆಯಿಂದ ಹೊರಬರದ ಅವರಿಗೆ ಇದೆಲ್ಲ ಹೊಸಜಗತ್ತು ಕಂಡ ಅನುಭವವಾಗಿತ್ತು. ಭಿಲಾಯಿ ನಗರದ ರಸ್ತೆಗಳೂ ಚೆನ್ನಾಗಿ ಪರಿಚಿತವಾಗಿರಲಿಲ್ಲ. ಆಟೋದವರಿಗೆ ವಿಳಾಸ ಹೇಳಿ ಓಡಾಡುತ್ತಾ ಮಾಹಿತಿ ಕ್ರೋಡೀಕರಿಸಿದರು. ಹೀಗೆ ಸಂಚರಿಸುವಾಗ ಇಬ್ಬರು ‘ವಿಶೇಷ ಮಕ್ಕಳು’ ಜತೆಯಾದರು. 1991ರಲ್ಲಿ ಮಗ ಅಮೋಲ್​ನನ್ನೇ ಮೊದಲ ವಿದ್ಯಾರ್ಥಿಯಾಗಿಸಿ ಈ ಇಬ್ಬರು ಮಕ್ಕಳೊಂದಿಗೆ ಶಾಲೆ ಆರಂಭಿಸಿದರು. ಮನೆಯವರ ವಿರೋಧದ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ಕೆಲಸ ಮುಂದುವರಿಸಿದರು. ದೈಹಿಕ ಅಂಗವಿಕಲತೆ, ಬುದ್ಧಿಮಾಂದ್ಯತೆ, ಬಹುಅಂಗಾಂಗ ವೈಫಲ್ಯದಿಂದ ಬಳಲುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪೋಷಿಸತೊಡಗಿದರು. ನಿಧಾನವಾಗಿ ಮಕ್ಕಳ ಸಂಖ್ಯೆ ಹೆಚ್ಚತೊಡಗಿತು. ಮನೆಯ ಕಿರಿದಾದ ಜಾಗದಲ್ಲಿ ಶಾಲೆ ನಡೆಸುವುದು ಕಷ್ಟವಾಗತೊಡಗಿತು. ಆ ಹೊತ್ತಿಗಾಗಲೇ ಪುಷ್ಪಾ ಅವರ ಸೇವಾಭಾವದ ವೈಶಿಷ್ಟ್ಯ ಅಕ್ಕಪಕ್ಕದವರಿಗೆ ಮನದಟ್ಟಾಗಿತ್ತು. ಹಾಗಾಗಿ ಹಲವು ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ನೆರವಿಗೆ ಬಂದರು. ಇದೆಲ್ಲದರ ಫಲವಾಗಿ ‘ಸ್ನೇಹಸಂಪದ’ ಎಂಬ ಸಂಸ್ಥೆ ಹುಟ್ಟುಹಾಕಿದರು. ಯಾರೂ ದಿಕ್ಕಿಲ್ಲದ ‘ವಿಶೇಷ ಮಕ್ಕಳು’, ಬಡ ಕುಟುಂಬದ ಅಂಗವಿಕಲ ಮಕ್ಕಳು ಇಲ್ಲಿ ಹೊಸಬದುಕು ಕಾಣಲಾರಂಭಿಸಿದರು. ಇಲ್ಲಿ ಈ ಮಕ್ಕಳ ಶೈಕ್ಷಣಿಕ ಪಾಠದ ಜತೆಗೆ ಅವರ ಪಾಲನೆ, ಪೋಷಣೆಯ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಂಡಿತು. ಯಾವುದೇ ಆಧಾರವಿಲ್ಲದ ಮಕ್ಕಳಿಗೆ ಇಲ್ಲೇ ವಸತಿ ಒದಗಿಸಲಾಯಿತು. ‘ನಾವೂ ನಿಮ್ಮ ಜತೆ ಕೆಲಸ ಮಾಡ್ತೀವಿ. ನಮ್ಗೂ ಒಂದಿಷ್ಟು ಪುಣ್ಯ ಬರುತ್ತೆ’ ಅಂತ ಹೇಳಿ 10-15 ಮಹಿಳೆಯರು ಕೈಜೋಡಿಸಿದರು. ಸಂಸ್ಥೆ ಬೆಳೆಯುತ್ತಾ, ಮಕ್ಕಳ ಭವಿಷ್ಯ ಅರಳುತ್ತಾ ಸಾಗಿತ್ತು.

ಆದರೆ ವಿಧಿಯ ಕ್ರೂರಚೇಷ್ಟೆ ಇಲ್ಲಿಗೇ ಮುಗಿಯಲಿಲ್ಲ. ತನ್ನ ಬಾಳಿನ ಸರ್ವಸ್ವ ಎಂದುಕೊಂಡು ಯಾರಿಗಾಗಿ ಪುಷ್ಪಾ ಸಮಸ್ತ ಸಂಕಷ್ಟಗಳನ್ನು ಎದುರಿಸುತ್ತಾ ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದರೋ ಆ ಮಗು ಅಮೋಲ್ ಕೊನೆಯುಸಿರೆಳೆಯಿತು. ಬದುಕಿಗಿದ್ದ ಭಾವನಾತ್ಮಕ ಆಸರೆಯೇ ಹೊರಟುಹೋದ ಮೇಲೆ ಅವರ ಬದುಕಲ್ಲಿ ಉಳಿದಿದ್ದು ಬರೀ ನೈರಾಶ್ಯವೇ. ‘ಇನ್ನು ಅವನೇ ಇಲ್ಲ ಎಂದ ಮೇಲೆ ಈ ಸಾಮ್ರಾಜ್ಯವೆಲ್ಲ ಏಕೆ’ ಎಂದು ಪ್ರಶ್ನಿಸಿಕೊಂಡು ಒಂದುಹಂತದಲ್ಲಿ ತಮ್ಮೆಲ್ಲ ಸಾಮಾಜಿಕ ಚಟುವಟಿಕೆಗಳನ್ನು ಕೊನೆಗೊಳಿಸಲು ನಿರ್ಧರಿಸಿದರು. ಆದರೆ ಕೂಡಲೇ ಅವರು ಅಂತರಾತ್ಮದ ಕರೆಗೆ ಓಗೊಡಬೇಕಾಯಿತು. ಈ ಮಕ್ಕಳಲ್ಲೇ ತನ್ನ ಮಗನನ್ನು ಕಾಣಲು ನಿಶ್ಚಯಿಸಿದರು. ಆಧಾರವಿಲ್ಲದ ಇವರಿಗೆ ಆಸರೆ ನೀಡಿ ನಿಜಾರ್ಥದಲ್ಲಿ ತಾಯಿಯಾಗಲು ಸಂಕಲ್ಪಿಸಿದರು. ಅದರ ಫಲವಾಗಿಯೇ ಸ್ನೇಹಸಂಪದ ಸಂಸ್ಥೆಯಲ್ಲಿ ಈವರೆಗೆ 400 ಮಕ್ಕಳು ಓದಿ ಶೈಕ್ಷಣಿಕ ಸಾಧನೆಯತ್ತ ಮುಖಮಾಡಿದ್ದಾರೆ. ಪ್ರಸಕ್ತ ವರ್ಷ 74 ಮಕ್ಕಳು ಓದುತ್ತಿದ್ದಾರೆ. ಇಂಥ ಮಕ್ಕಳು ಏನೂ ಮಾಡಲು ಸಾಧ್ಯವಿಲ್ಲ ಎಂಬ ವೈದ್ಯರ ಹೇಳಿಕೆಯನ್ನೇ ಸುಳ್ಳಾಗಿಸಿದ್ದು, ಇಲ್ಲಿ ಬೆಳೆದ ಎಂಟು ಮಕ್ಕಳು ಈಗ ಸ್ನೇಹಸಂಪದ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಾ, ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ‘ಸ್ನೇಹಸಂಪದ ಸಂಸ್ಥೆ ಹಾಗೂ ಪುಷ್ಪಾ ತಾಯಿ ಅವರು ನಮಗೆ ಹೊಸಬದುಕನ್ನೇ ನೀಡಿದ್ದಾರೆ. ನಾವು ಅಂಗವಿಕಲರು ಎಂಬ ಕಾರಣಕ್ಕೆ ಮನೆಯವರೇ ಅಸಡ್ಡೆಯಿಂದ ಕಾಣುತ್ತಿದ್ದರು. ಆದರೆ ನಮಗೆ ಇಲ್ಲಿ ಜೀವನದ ದಿಕ್ಕು ಸಿಕ್ಕಿತು. ಹಾಗಾಗಿಯೇ ಈ ಋಣ ತೀರಿಸಲು ಇದೇ ಸಂಸ್ಥೆಯಲ್ಲಿ, ಇದೇ ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಅತೀವ ಸಂತೃಪ್ತಿ ತಂದಿದೆ’ ಎನ್ನುತ್ತಾರೆ ಆ ಎಂಟು ಜನ ಮಾಜಿ ವಿದ್ಯಾರ್ಥಿಗಳು.

15 ಜನ ಶಿಕ್ಷಕ/ಕಿಯರ ತಂಡವೂ ಸಮರ್ಪಣಾಭಾವದಿಂದ ಕಾರ್ಯ ನಿರ್ವಹಿಸುತ್ತಿದೆ. ಪುಷ್ಪಾ ಅವರ ಎರಡನೇ ಪುತ್ರ ಹಾಗೂ ಸೊಸೆ ಈ ಕಾರ್ಯಕ್ಕೆ ಜತೆಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಂಸ್ಥೆಗೆ ಸರ್ಕಾರದ ಅನುದಾನ ಸಿಗುತ್ತಿದೆಯಾದರೂ ಅದು ಅತ್ಯಲ್ಪ. ಶಿಕ್ಷಕರ ಸಂಬಳ, ಕಲಿಕಾ ಉಪಕರಣಗಳ ಖರ್ಚನ್ನು ದಾನಿಗಳು ನೀಡುವ ನೆರವಿನಿಂದ ನಿಭಾಯಿಸಲಾಗುತ್ತಿದೆ. ಹಲವು ಬಾರಿ ಆರ್ಥಿಕ ಸಮಸ್ಯೆ ಕಾಡಿದ್ದಿದೆ. ಆದರೆ ಎಲ್ಲ ಬಿಕ್ಕಟ್ಟುಗಳ ಸಂದರ್ಭದಲ್ಲೂ ದೇವರು ದಾರಿ ತೋರಿದ್ದಾನೆ. ಸಮಾಜದ ಸಜ್ಜನ ಬಂಧುಗಳು ನೆರವಾಗಿದ್ದಾರೆ ಎನ್ನುವ ಪುಷ್ಪಾ ಈ ಮಕ್ಕಳಲ್ಲೇ ಅಮೋಲ್​ನನ್ನು ಕಾಣುತ್ತಾ, ನೂರಾರು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಇದು ತಾಯಿಯ ಮಮತೆಗಿರುವ ಶಕ್ತಿ! ಸಂಕಷ್ಟಗಳಿಗೆ ಕುಗ್ಗದೆ ಸ್ಥೈರ್ಯದಿಂದ ಮುನ್ನಡೆಯುವ ಇಂಥ ಮಹಾತಾಯಂದಿರ ಸಂಖ್ಯೆ ಹೆಚ್ಚಲಿ, ಸಮಾಜ ಇಂಥವರ ಜತೆ ನಿಲ್ಲಲಿ ಎಂಬುದೇ ಆಶಯ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top