Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಹೊತ್ತಿ ಉರಿದ ಬಸ್​ನಲ್ಲಿ ಮಹಿಳೆ ಸಜೀವ ದಹನ

Wednesday, 22.02.2017, 7:19 AM       No Comments

ನೆಲಮಂಗಲ: ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಮಹಿಳೆಯೊಬ್ಬರು ಬಸ್​ನಲ್ಲೇ ಸಜೀವ ದಹನವಾಗಿದ್ದಾರೆ. ಮತ್ತೊಬ್ಬ ಮಹಿಳೆ ಮತ್ತು ಮಗು ಸೇರಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶೃಂಗೇರಿಯಿಂದ ಚಿಕ್ಕಮಗಳೂರು ಮೂಲಕ ಬೆಂಗಳೂರಿಗೆ ಬಸ್ ಬರುತ್ತಿತ್ತು. ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಬಳಿ ಸೋಮವಾರ ನಡುರಾತ್ರಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬಸ್ ಹೊತ್ತಿ ಉರಿದಿದೆ.

ಪೀಣ್ಯ 8ನೇ ಮೈಲಿಕಲ್ಲಿನ ಮಹದೇಶ್ವರನಗರ ನಿವಾಸಿ ಭಾಗ್ಯಮ್ಮ (55) ಮೃತರು. ಕೆಂಗೇರಿ ನಿವಾಸಿ ಮಮತಾ (35) ಮತ್ತು ಅವರ ಪುತ್ರ ಯಶಸ್​ಗೆ (5) ತೀವ್ರಸ್ವರೂಪದ ಗಾಯಗಳಾಗಿವೆ. ಇವರೂ ಸೇರಿ 10 ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಪ್ರಯಾಣಿಕ ದಿನೇಶ್ ಎಂಬುವರನ್ನು ಹೆಸರುಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯರಾತ್ರಿ ಆಗಿದ್ದೇನು?: ಸೋಮವಾರ ಮಧ್ಯರಾತ್ರಿ 12 ಗಂಟೆಯಲ್ಲಿ ನೆಲಮಂಗಲದ ಟೋಲ್​ನಿಂದ ಮುಂದೆ ಬರುತ್ತಿದ್ದಂತೆ ಬಸ್​ನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ವಿಷಯವನ್ನು ಪ್ರಯಾಣಿಕರು ಚಾಲಕನ ಗಮನಕ್ಕೆ ತಂದರೂ, ಬಸ್ ನಿಲ್ಲಿಸದೆ ಅಂದಾಜು 2 ಕಿ.ಮೀವರೆಗೆ ಚಲಾಯಿಸಿಕೊಂಡು ಬಂದು ಅರಿಶಿನಕುಂಟೆ ಬಳಿ ನಿಲ್ಲಿಸಿದ್ದಾನೆ. ಅಷ್ಟರಲ್ಲಾಗಲೇ ಬೆಂಕಿ ಬಸ್​ನ ಒಳಭಾಗಕ್ಕೆ ಆವರಿಸಿತ್ತು.

ಗಾಬರಿಯಾದ ಪ್ರಯಾಣಿಕರು ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಬಸ್​ನ ಮುಂಭಾಗದಲ್ಲಿ ಡ್ರೖೆವರ್ ಸೀಟ್​ನ ಹಿಂಭಾಗದಲ್ಲಿ ಕೂತಿದ್ದ ಭಾಗ್ಯಮ್ಮ ಹೊರಬರಲು ಸಾಧ್ಯವಾಗದೆ ಹೊತ್ತಿ ಉರಿಯುತ್ತಿರುವ ಬಸ್​ನಲ್ಲಿ ಸಜೀವವಾಗಿ ದಹನವಾದರು. ಮೃತರ ಸಂಬಂಧಿಯೊಬ್ಬರು ಭಾಗ್ಯಮ್ಮ ಅವರನ್ನು ಕಾಪಾಡುವಂತೆ ಮನವಿ ಮಾಡಿಕೊಂಡರು. ಆದರೆ, ಅಷ್ಟರಲ್ಲಿ ಬೆಂಕಿ ಜ್ವಾಲೆ ಬಸ್ ಅನ್ನು ಸಂಪೂರ್ಣವಾಗಿ ವ್ಯಾಪಿಸಿತ್ತು. ಹೀಗಾಗಿ ಅವರನ್ನು ರಕ್ಷಿಸಲು ಯಾರೂ ಮುಂದಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಚಂದ್ರಮ್ಮ ‘ವಿಜಯವಾಣಿ’ಗೆ ತಿಳಿಸಿದರು.

ಕೆಎಸ್​ಆರ್​ಟಿಸಿ ಬಸ್ ಚಾಲಕ ದಿನೇಶ್ ಮತ್ತು ನಿರ್ವಾಹಕ ರೇಣುಕಾಪ್ರಸಾದ್ ವಿರುದ್ಧ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರಂತ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್​ಪಿ ಅಮಿತ್​ಸಿಂಗ್ ಹಾಗೂ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಅಂತ್ಯಕ್ರಿಯೆ ಮುಗಿಸಿ ಬಂದವರೂ ಸ್ಮಶಾನಕ್ಕೆ: ಚಾಮರಾಜನಗರದಲ್ಲಿರುವ ಸಹೋದರಿ ಪತಿಯ ಅಂತ್ಯಕ್ರಿಯೆ ಮುಗಿಸಿಕೊಂಡು ಭಾಗ್ಯಮ್ಮ ಸಹೋದರನ ಕಾರಿನಲ್ಲಿ ಕುಣಿಗಲ್ ತಾಲೂಕಿನ ಬೆಳ್ಳೂರು ಕ್ರಾಸ್​ಗೆ ಬಂದಿಳಿದಿದ್ದರು. ಇಲ್ಲಿಂದ ಬೆಂಗಳೂರಿಗೆ ತೆರಳಲು ನತದೃಷ್ಟ ಬಸ್ ಹತ್ತಿದ್ದರು. ನೆಲಮಂಗಲ ಟೋಲ್ ಮುಗಿಯುತ್ತಿದ್ದಂತೆ ಮಗನಿಗೆ ಕರೆ ಮಾಡಿ 8ನೇ ಮೈಲಿ ಬಳಿ ಬರುವಂತೆ ತಿಳಿಸಿದ್ದರು. ಆದರೆ, ಅಮ್ಮನ ನಿರೀಕ್ಷೆಯಲ್ಲಿದ್ದ ಮಗನಿಗೆ ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಘಟನಾ ಸ್ಥಳಕ್ಕೆ ಹೋಗುವಷ್ಟರಲ್ಲಿ ತಾಯಿ ಸುಟ್ಟು ಕರಕಲಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಮೃತದೇಹವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ಪತಿಗಾಗಿ ಹಂಬಲಿಸುತ್ತಿರುವ ಮಹಿಳೆ

ತಾಯಿಯನ್ನು ಭೇಟಿಯಾಗಲು ಹಾಸನದ ವೀರಾಪುರಕ್ಕೆ ಹೋಗಿದ್ದ ಮಮತಾ, ಪುತ್ರನ ಜತೆ ಇದೇ ಬಸ್​ನಲ್ಲಿ ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ತಕ್ಷಣವೇ ಬಸ್​ನಿಂದ ಹೊರಬರಲಾಗದೆ ಇವರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಶೇ.75 ಸುಟ್ಟ ಗಾಯಗಳಾಗಿರುವ ಮಮತಾ ಬದುಕುವ ಸಾಧ್ಯತೆ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೀವನ್ಮರಣದ ಹೋರಾಟ ನಡೆಸುತ್ತಿರುವ ಆಕೆ, ತಮ್ಮ ಪತಿ ಸುರೇಶ್​ನನ್ನು ನೋಡಲು ಹಂಬಲಿಸುತ್ತಿದ್ದಾರೆ. ಕೌಟುಂಬಿಕ ಕಲಹದ ಕಾರಣ ಪತಿಯಿಂದ ಆರು ತಿಂಗಳ ಹಿಂದೆ ಬೇರೆಯಾಗಿದ್ದರು. ಕೆಂಗೇರಿಯಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಸುರೇಶ್ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದರು ಎಂಬುದು ದಂಪತಿ ನಡುವಿನ ಕಲಹಕ್ಕೆ ಕಾರಣವಾಗಿತ್ತು. ಆದರೆ, ಜೀವನದ ಕೊನೆಯ ಕ್ಷಣದಲ್ಲಿ ಪತಿಯನ್ನು ನೋಡಲು ಹಂಬಲಿಸುತ್ತಿದ್ದಾರೆ. ಎಲ್ಲಿದ್ದರೂ ದಯವಿಟ್ಟು ಬನ್ನಿ ಎಂದು ಅಂಗಲಾಚುತ್ತಿದ್ದಾರೆ.

‘ಎಲ್ಲಿದ್ದರೂ ದಯಮಾಡಿ ಬಂದು ಒಮ್ಮೆ ನೋಡಿ, ಮಮತಾ ನಿಮ್ಮನ್ನು ಭೇಟಿಯಾಗಲು ಬಯಸಿದ್ದಾಳೆ. ಕೊನೆಯ ಬಾರಿಗೆ ಆಕೆಯನ್ನು ಮಾತನಾಡಿಸಿ, ನಿಮಗಾಗಿ ಕನವರಿಸುತ್ತಿದ್ದಾಳೆ. ಮಮತಾ ಪ್ರಜ್ಞಾಹೀನಸ್ಥಿತಿಯಲ್ಲಿ ಇದ್ದಾಳೆ, ಆಕೆ ಬದುಕುವ ಭರವಸೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಒಮ್ಮೆ ಬಂದು ನೋಡಿಕೊಂಡು ಹೋಗಿ’ ಎಂದು ಮಾಧ್ಯಮಗಳ ಮೂಲಕ ಮಮತಾಳ ಸಹೋದರ ಕೃಷ್ಣೇಗೌಡ ಸುರೇಶ್​ಗೆ ಮನವಿ ಮಾಡಿಕೊಂಡಿದ್ದಾರೆ.

ತಾಂತ್ರಿಕ ದೋಷ ಕಾರಣವಲ್ಲ

ಚಿಕ್ಕಮಗಳೂರು ಡಿಪೋಗೆ ಸೇರಿದ್ದ ಕೆಎ 18 ಎಫ್ 640 ನೋಂದಣಿ ಸಂಖ್ಯೆಯುಳ್ಳ ಕೆಎಸ್​ಆರ್​ಟಿಸಿ ಬಸ್ ಸೋಮವಾರ ಮಧ್ಯಾಹ್ನ 3.30ಕ್ಕೆ ಶೃಂಗೇರಿಯಿಂದ ಬೆಂಗಳೂರಿಗೆ ಹೊರಟಿತ್ತು. ಆದರೆ, ತಡರಾತ್ರಿ ಸಂಭವಿಸಿದ ಅಗ್ನಿ ಅವಘಡಕ್ಕೆ ಬಸ್​ನಲ್ಲಿನ ತಾಂತ್ರಿಕ ದೋಷ ಕಾರಣವಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಕೆಎಸ್​ಆರ್​ಟಿಸಿಯ ಮುಖ್ಯತಾಂತ್ರಿಕ ಅಧಿಕಾರಿ ಗಂಗಣ್ಣಗೌಡ ತಿಳಿಸಿದ್ದಾರೆ. ಚಾಲಕ ಮತ್ತು ನಿರ್ವಾಹಕರ ತಪ್ಪು ಕಂಡುಬಂದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

 ಬಸ್​ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿಲ್ಲ. ಟೈರ್​ಗಳು, ಬ್ಯಾಟರಿಗಳು ಮತ್ತು ಡೀಸೆಲ್ ಟ್ಯಾಂಕ್ ಎಲ್ಲವೂ ಸುಸ್ಥಿತಿಯಲ್ಲಿವೆ. ಬಸ್​ನಲ್ಲಿ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಮಾಹಿತಿ ಇದೆ. ಅಲ್ಲದೆ ತೆಂಗಿನಚಿಪ್ಪಿನ ಚೀಲದಲ್ಲಿ ಸೀಮೆ ಎಣ್ಣೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಪ್ರಯಾಣಿಕರಿಂದ ಸಿಕ್ಕಿದೆ. ಬಸ್​ನ ಮಧ್ಯಭಾಗದ ಪ್ಲಾಟ್​ಫಾರಂನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ. ಇನ್ನು ಮುಂದೆ ಸಂಸ್ಥೆಯ ಎಲ್ಲ ಬಸ್​ಗಳಲ್ಲೂ ಅಗ್ನಿಶಾಮಕ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

| ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

5 ಲಕ್ಷ ರೂ. ಪರಿಹಾರ

ಸಜೀವವಾಗಿ ದಹನವಾದ ಭಾಗ್ಯಮ್ಮ (60) ಕುಟುಂಬಕ್ಕೆ ಕೆಎಸ್​ಆರ್​ಟಿಸಿ 5 ಲಕ್ಷ ರೂ. ಪರಿಹಾರ ಘೊಷಿಸಿದೆ. ಈವರೆಗೆ 3 ಲಕ್ಷ ರೂ. ಇದ್ದ ಪರಿಹಾರದ ಮೊತ್ತವನ್ನು ಈ ಪ್ರಕರಣದಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ. ಗಾಯಗೊಂಡಿರುವವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನೂ ಭರಿಸುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಟಾರಿಯಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top