Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಹೊಂದಿಕೊಳ್ಳುವುದು ಎಂಬ ವ್ಯಸನ…

Thursday, 07.09.2017, 3:01 AM       No Comments

| ಅನಿತಾ ನರೇಶ್​ ಮಂಚಿ

 ನಿತ್ಯಜೀವನದ ಅನೇಕ ಸಂಗತಿಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದೇ ಇಲ್ಲ. ನಮಗ್ಯಾಕೆ ಬಿಡು ಎಂಬ ಧೋರಣೆ. ತಪ್ಪುಗಳನ್ನು ಕಂಡಲ್ಲಿ ಪ್ರತಿಭಟಿಸಲು ನಮಗೆ ಅಂಜಿಕೆ. ಯಾರೇನು ಹೇಳುತ್ತಾರೋ ಎಂಬ ಯೋಚನೆ. ಹೀಗಾಗಿ ವ್ಯವಸ್ಥೆಯ ತಪ್ಪುಗಳು ಹಾಗೇ ಉಳಿದುಬಿಡುತ್ತವೆ.

 ಸಂಜೆಯ ಹೊತ್ತು. ಬಸ್ಸಿನ ಬದಿಯ ಸೀಟಿನಲ್ಲಿ ಕುಳಿತಿದ್ದ ಕಾರಣ ಪ್ರಯಾಣಿಕರನ್ನು ಇಳಿಸಲೆಂದು ನಿಂತಿದ್ದ ಬಸ್ಸಿನ ಬದಿಯಿಂದ ರಿಕ್ಷಾವೊಂದು ಬಸ್ಸಿಗೆ ಇನ್ನೇನು ತಾಗಿಯೇ ಬಿಡುತ್ತದೇನೋ ಎಂಬಂತೆ ಹತ್ತಿರ ಬಂದು ವೇಗದಲ್ಲಿ ದಾಟಿ ಹೋಗಿದ್ದು ಕಾಣಿಸಿ ಒಮ್ಮೆಗೆ ಹೃದಯ ಬಡಿತ ನಿಂತಂತಾಯ್ತು. ಅದರ ತುಂಬೆಲ್ಲಾ ಪುಟ್ಟ ಮಕ್ಕಳು ಅರೆಬರೆ ತಲೆ ಕೈ ಕಾಲುಗಳನ್ನು ಹೊರಗೆ ಹಾಕುತ್ತಾ ಕೆಲವರು ಕುಳಿತ, ಇನ್ನು ಕೆಲವರು ನಿಂತ ಸ್ಥಿತಿಯಲ್ಲಿದ್ದರು. ಎದುರಿನ ಕಿಟಕಿಯ ಪಕ್ಕ ಕುಳಿತಿದ್ದ ಮಹಿಳೆ ತಿರುಗಿ ‘ನಮ್ಮದು’ ಎಂದು ಹೆಮ್ಮೆಯಿಂದ ಹೇಳಿದಳು. ನನ್ನ ಪಕ್ಕದಲ್ಲೇ ಕುಳಿತಿದ್ದ ಮಹಿಳೆ ಹೊರಗಿಣುಕಿ, ‘ಕರ್ಮ ಮಾರಾಯ್ತಿ, ನಮ್ಮ ಆ ರಿಕ್ಷಾ ದಿನಾ ತಡ ಆಗ್ತದೆ’ ಎಂದು ಗೊಣಗಿದಳು. ‘ನನ್ನ ಮಗ ದಿನಾ ಬೇಗ ಬರ್ತಾನೆ. ಬೇಕಿದ್ರೆ ಹೇಳು ಇದರಲ್ಲೇ ಹೋಗುವ ವ್ಯವಸ್ಥೆ ಮಾಡಬಹುದು, ಕೇಳ್ಬೇಕಾ..’ ಎದುರಿನವಳ ಸ್ವರ.

‘ಹುಂ .. ಬರುವ ತಿಂಗಳಿಂದ.. ಹೇಳಿಟ್ಟಿರು’ ಎಂಬ ಉತ್ತರ ನನ್ನ ಹತ್ತಿರ ಕುಳಿತವಳದ್ದು.

ಪಕ್ಕನೆ ನೆನಪಿಗೆ ಬಂದಿದ್ದು ವರ್ಷದ ಕೆಳಗೆ ಕುಂದಾಪುರದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಪುಟ್ಟ ಪುಟ್ಟ ಶಾಲಾ ಮಕ್ಕಳು.. ಆ ಓಮ್ನಿ ಕಾರಿನಲ್ಲಿ ಇದ್ದದ್ದು ಹದಿನೆಂಟು ಮಕ್ಕಳು! ಸುದ್ದಿ ಓದಿದಾಗ ಆ ಅಮಾಯಕ ಮಕ್ಕಳ ಸಾವಿಗೆ ನೇರ ಕಾರಣವಾದ ನಮ್ಮ ವ್ಯವಸ್ಥೆಯ ಬಗ್ಗೆಯೇ ರೇಜಿಗೆ ಹುಟ್ಟಿತ್ತು.

ಇಂತಹ ದುರ್ಘಟನೆಗಳಾದಾಗ ನಿದ್ರೆಯಲ್ಲಿದ್ದ ಇಲಾಖೆಯೊಮ್ಮೆ ಎಚ್ಚೆತ್ತಂತೆ ಮಾಡಿ, ಮತ್ತೆ ಮಲಗಿ ಬಿಡುತ್ತದೆ. ಜನ ಸಮುದಾಯ ಇನ್ನೊಬ್ಬರ ಕಡೆಗೆ ಬೆಟ್ಟು ತೋರಿಸುತ್ತಾ ತಪ್ಪು ಅವರದ್ದೇ ಎಂದು ತಿಪ್ಪೆ ಸಾರಿಸಿ ಬಿಡುತ್ತದೆ. ಒಂದೆರಡು ದಿನಗಳಲ್ಲಿ ಮತ್ತೆ ಎಲ್ಲವೂ ಮೊದಲಿನಂತೆ. ಶಾಲಾವಾಹನ ಎಂಬ ಬೋರ್ಡ್ ಹೊತ್ತ ಬಸ್ಸುಗಳು, ಆಟೋಗಳು, ವ್ಯಾನುಗಳು ಅಸಾಮಾನ್ಯ ವೇಗದಲ್ಲಿ ನುಗ್ಗುತ್ತಿರುತ್ತವೆ. ಆಟೋ, ಕಾರುಗಳಲ್ಲೆಲ್ಲಾ ಮಕ್ಕಳ ಚೀಲಗಳು ಮಾರಾಟಕ್ಕಿಟ್ಟ ಸರಕಿನಂತೆ ನೇತಾಡುತ್ತಿರುತ್ತವೆ. ನಮಗೇನೂ ಅನಿಸದೇ ಹೀಗೇ ಇರುವುದು ಪ್ರಪಂಚ ಎಂದು ನಂಬಿಕೊಂಡುಬಿಟ್ಟಿದ್ದೇವೆ.

ನಾವು ಹೊಂದಿಕೊಂಡು ಹೋಗುವುದು ಎಂಬ ಬೆನ್ನುಮೂಳೆಯಿಲ್ಲದ ವ್ಯವಸ್ಥೆಗೆ ಎಷ್ಟು ಚೆನ್ನಾಗಿ ಅಂಟಿಕೊಂಡಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಮಕ್ಕಳು ಶಾಲೆಗೆ ಹೋಗುವ ಹೊತ್ತಿನಲ್ಲಿ ರಸ್ತೆ ಬದಿಯಲ್ಲಿ ನಿಂತು ನೋಡಬೇಕು. ಒಂದೊಂದು ಆಟೋದಲ್ಲು ಅಷ್ಟು ಮಕ್ಕಳು ತುಂಬಿ ತುಳುಕುತ್ತಿರುತ್ತಾರೆ. ಅಂತಹ ವಾಹನವೊಂದು ನಮ್ಮೆದುರು ನಿಂತಾಗ ಬಿಗಿಯಾಗಿ ಹಿಡಿದಿದ್ದ ನಮ್ಮದೇ ಮಗುವಿನ ಕೈಯನ್ನು ಕೊಡವಿಕೊಂಡು ಅಂತಹ ವಾಹನಕ್ಕೇರಿಸಿ ಇನ್ನು ಸಂಜೆಯವರೆಗೆ ನಿರಾಳ ಎಂಬ ಮನಸ್ಥಿತಿಯಲ್ಲಿ ಮನೆಗೆ ಮರಳುತ್ತೇವೆ.

‘ಇದು ತಪ್ಪಲ್ವಾ.. ಇಷ್ಟು ಮಕ್ಕಳನ್ನು ಹೀಗೆ ಕೂರಿಸ್ಕೊಂಡು ಹೋಗೋದು ಕಾನೂನು ಪ್ರಕಾರ ಅಪರಾಧ ಅಲ್ವಾ’ ಇಂತಹ ಮಾತುಗಳು ನಮ್ಮ ತುಟಿಯಂಚಿನಲ್ಲೂ ಬಂದು ನಿಲ್ಲಲಾರದು. ನಾಳೆ ನಮ್ಮ ಮಗುವನ್ನು ಕರೆದೊಯ್ಯಲು ಯಾವ ವಾಹನವೂ ಸಿಗದಿದ್ದರೆ ಎಂಬ ಚಿಂತೆ, ನಮಗ್ಯಾಕೆ ಬಿಡು ಎಂಬ ಧೋರಣೆ. ತಪ್ಪುಗಳನ್ನು ಕಂಡಲ್ಲಿ ಪ್ರತಿಭಟಿಸಲು ನಮಗೆ ಅಂಜಿಕೆ. ಯಾರೇನು ಹೇಳುತ್ತಾರೋ ಎಂಬ ಯೋಚನೆ. ಇವೆಲ್ಲದರಿಂದಾಗಿ ಪ್ರತಿಭಟಿಸುವ ಬದಲು ಅದು ಇರುವುದೇ ಹೀಗೆ ಎಂದು ಅದಕ್ಕೆ ಹೊಂದಿಕೊಂಡು ಬಿಡುತ್ತೇವೆ. ಇದು ಕೇವಲ ಇಂತಹ ವಿಷಯಗಳಲ್ಲಿ ಎಂದಲ್ಲ. ನಿತ್ಯಜೀವನದ ಹಲವಾರು ಸಾಮಾನ್ಯ ಘಟನೆಗಳು ಇದರ ನಡುವೆ ಸಿಲುಕಿ ಸದ್ದಿಲ್ಲಗೆ ಘಟಿಸಿ ಮರೆಯಾಗಿಬಿಡುತ್ತದೆ.

ನಾನಾಗ ಮಂಗಳೂರಿನ ಮನೆಗೆ ಬಂದ ಹೊಸತು. ನಗರದ ಹೊರವಲಯದಲ್ಲಿದ್ದ ನಮ್ಮ ಮನೆಯ ಹತ್ತಿರದಲ್ಲೇ ಇದ್ದ ದಿನಸಿ ಅಂಗಡಿಯೇ ನಮ್ಮೆಲ್ಲರ ವ್ಯಾಪಾರ ಕೇಂದ್ರ. ಅಲ್ಲಿ ಅವರು ಕೊಡುವ ಸಾಮಗ್ರಿಗಳು ಯಾವ ಸ್ಥಿತಿಯಲ್ಲಿದ್ದರೂ ಅದನ್ನೇ ಕೊಂಡುತಂದು ಅಡುಗೆಗೆ ಬಳಸಿಕೊಳ್ಳುವುದು ಸುತ್ತಮುತ್ತಲಿನ ಮನೆಗಳಲ್ಲಿ ಸಾಮಾನ್ಯವಾಗಿತ್ತು. ಅದೊಂದು ದಿನ ಬಾಯಿರುಚಿಗಾಗಿ ಹುಳಿ ಗೊಜ್ಜು ಮಾಡೋಣ ಎಂದು ಡಬ್ಬದಲ್ಲಿ ಹುಳಿಯನ್ನು ತಡಕಾಡಿದರೆ ಪಾತ್ರೆ ತಳ ಸೇರಿತ್ತು. ಯಾವತ್ತೂ ಊರಿನಿಂದಲೇ ಹುಣಸೇ ಹಣ್ಣು ತರುವುದು ರೂಢಿ. ಈಗ ಅವಸರಕ್ಕೆಂದು ಸ್ವಲ್ಪ ತಂದಿಟ್ಟುಕೊಳ್ಳೋಣ ಎಂದು ಅಂಗಡಿಯ ಕಡೆಗೆ ನಡೆದೆ. ಮನೆಗೆ ಬಂದು ಹುಣಸೇ ಹಣ್ಣಿನ ಕಟ್ಟನ್ನು ಬಿಡಿಸಿ ನೋಡಿದರೆ ಹುಣಸೇ ಹುಳಿಯಲ್ಲಿ ನೂರಾರು ಹುಳಗಳು ಕುಣಿದಾಡುತ್ತಿದ್ದವು. ಅಸಹ್ಯದಿಂದ ಮುಖ ಸಿಂಡರಿಸಿಕೊಂಡು ಅದನ್ನು ಹಾಗೇ ಕಟ್ಟಿಟ್ಟು ಪಕ್ಕದ ಮನೆಯ ಗೃಹಿಣಿಯ ಹತ್ತಿರ ‘ಹುಣಸೇ ಹಣ್ಣಿದ್ದರೆ ಕೊಡಿ, ಬರುವ ವಾರ ಊರಿಂದ ಬರುವಾಗ ಹಿಡ್ಕೊಂಡು ಬರ್ತೇನೆ, ಈಗ ಸ್ವಲ್ಪ ಕೊಟ್ಟಿರಿ’ ಎಂದೆ.

ಅಷ್ಟು ಒಳ್ಳೇದಿಲ್ಲ.. ನೋಡಿ ಎಂದು ಆಕೆ ಒಂದು ಸಣ್ಣ ಬೌಲ್​ನಲ್ಲಿ ಇಟ್ಟು ಕೊಟ್ಟರು. ಬಗ್ಗಿ ನೋಡಿದರೆ ನನ್ನ ಹತ್ತಿರ ಇದ್ದ ಹುಣಸೇ ಹಣ್ಣಿಗೂ ಇದಕ್ಕೂ ಏನೂ ವ್ಯತ್ಯಾಸವಿರಲಿಲ್ಲ. ‘ಇಲ್ಲಿ ಒಳ್ಳೆದು ಸಿಗೋದೇ ಇಲ್ಲ.. ಮತ್ತೇನ್ಮಾಡೋದು ಹೇಳಿ. ಇದನ್ನೇ ನೀರಿಗೆ ಹಾಕಿ ಒಂದ್ಸಲ ಬೇಗ ತೊಳೆದುಕೊಂಡರೆ ಹುಳ ಎಲ್ಲಾ ಹೋಗುತ್ತೆ. ಮತ್ತೆ ಬಳಸಬಹುದು’ ಎಂದರು. ಇದೂ ಆ ಅಂಗಡಿಯಿಂದಲೇ ತಂದಿದ್ದಾ ಎಂದು ಕೇಳಿದೆ. ‘ಹೌದು ಅಲ್ಲಿಂದಲೇ.. ಮಾಲು ಒಳ್ಳೇದಿಲ್ಲ. ಆದರೆ ಅಂಗಡಿಯವರತ್ರ ನಿಷ್ಠುರ ಮಾಡಿಕೊಂಡ್ರೆ ಅವಸರಕ್ಕೆ ಸಾಮಾನು ತರ್ಲಿಕ್ಕೆ ಎಲ್ಲಿಗೆ ಹೋಗೋದು ಅಲ್ವಾ.. ನಮ್ಮವ್ರು ಬೇರೆ ಹೊರಗಡೆ ಕೆಲಸದಲ್ಲಿರೋದು. ವಾರಕ್ಕೊಮ್ಮೆ ಮನೆಗೆ ಬರ್ತಾರಷ್ಟೆ. ಬಂದ ದಿನ ಮನೆಯ ಕೆಲ್ಸ ಅಂಟಿಸಲು ಬೇಸರ ಆಗುತ್ತೆ. ಹಾಗಾಗಿ ಅದನ್ನೇ ಅಡ್ಜಸ್ಟ್ ಮಾಡ್ಕೋಳ್ಳೋದು’ ಎಂದರು. ಅಲ್ಲಿಂದ ಮರಳಿದ ನಾನು ಮನೆಗೆ ಬಂದು ಹುಣಸೇ ಹಣ್ಣಿನ ಕಟ್ಟು ಹಿಡಿದು ಅಂಗಡಿಗೆ ಹೊರಟೆ. ಅಂಗಡಿ ತುಂಬಾ ಜನರಿದ್ದರು. ಅಂಗಡಿಯವರಿಗೆ ನನ್ನ ಪರಿಚಯ ಇದ್ದ ಕಾರಣ ಹಿಂದಿನಿಂದ ನನ್ನ ತಲೆ ಕಂಡು ‘ಏನು ಬೇಕಿತ್ತಾಮ್ಮಾ‘ಎಂದರು. ಒಂದರೆಕ್ಷಣ ಸಂಕೋಚ ಕಾಡಿತು. ಇಷ್ಟು ಜನರೆದುರು ಹೇಗೆ ಹೇಳುವುದು? ಅವಮಾನವಾದಂತಾದರೆ? ಸುಮ್ಮನೇ ಏನಾದರು ಜಗಳವಾದರೆ? ಅಷ್ಟು ಹೊತ್ತಿಗೆ ಅವರು ಅಂಗಡಿಯ ಸಹಾಯಕನನ್ನು ಕರೆದು ಗಿರಾಕಿಯೊಬ್ಬನ ಕಡೆ ಬೊಟ್ಟು ಮಾಡುತ್ತಾ ‘ನೋಡಪ್ಪಾ ಇವ್ರಿಗೆ ಕಾಲು ಕೇಜಿ ಹುಣಸೇ ಹಣ್ಣಂತೆ ಕೊಡು’ ಅಂದರು.

ನನ್ನ ಧ್ವನಿಗೀಗ ಶಕ್ತಿ ತುಂಬಿತು. ಹಿಂದಿನಿಂದ ಸ್ವರವೆತ್ತರಿಸಿ ಅದಕ್ಕೊಂದಿಷ್ಟು ನಗು ಬೆರೆಸಿ ಹೇಳಿದೆ ‘ನಾನು ಆಗ ನಿಮ್ಮ ಹತ್ತಿರ ಹುಣಸೇ ಹುಳಿ ಕೇಳಿದ್ದು ನೀವು ಹುಣಸೇ ಹುಳ ಕೊಟ್ಟಿದ್ದೀರಿ, ನೋಡಿ ಇಲ್ಲಿ’ ಎಂದು ಕಟ್ಟನ್ನು ಎಲ್ಲರೆದುರೇ ತೆರೆದು ಹಿಡಿದೆ. ಅವರ ಮುಖ ಗ್ರಹಣಗ್ರಸ್ತವಾಯಿತು. ಕೂಡಲೇ ಸಾವರಿಸಿಕೊಂಡು ‘ಓಹ್..ಇದು ಹಾಳಾಗಿದೆ ಅಂತ ಬೇರೆ ಇಟ್ಟಿದ್ದೆವು.. ಈ ಹುಡುಗ್ರಿಗೆ ಏನು ಹೇಳಿದ್ರು ಬುದ್ಧಿಯಿಲ್ಲ.. ನೋಡಿದನ್ನು ಬದಲಾಯಿಸಿ ಕೊಡು’ ಎಂದು ಸಹಾಯಕನನ್ನು ಗದರುತ್ತಾ ನನ್ನ ಕೈಯಿಂದ ಹುಣಸೇ ಹುಳಿಯ ಕಟ್ಟನ್ನು ತೆಗೆದುಕೊಳ್ಳಲು ಹೊರಟರು. ‘ಅಯ್ಯೋ ಇದು ಮನುಷ್ಯರು ತಿನ್ನಲು ಸಾಧ್ಯವಿಲ್ಲ ಬಿಡಿ.. ಇಲ್ಲೇ ಹಾಕ್ತೇನೆ’ ಎಂದು ಅಂಗಡಿಯ ಹೊರಗಿದ್ದ ಡಸ್ಟ್ ಬಿನ್ನಿಗೆಸೆದೆ. ಆಗಷ್ಟೇ ಹುಣಸೇ ಹಣ್ಣು ಬೇಕೆಂದಿದ್ದ ಗಿರಾಕಿ ತನ್ನ ಕೈಗೆ ಸೇರಿದ ಹುಣಸೇ ಹಣ್ಣಿನ ಕಟ್ಟನ್ನು ತೆರೆದರು. ಅದೂ ಹುಳದಿಂದ ತುಂಬಿತ್ತು. ‘ನಂಗೂ ಬೇರೆ ಕೊಡಿ ಇದು ಬೇಡ’ ಎಂದು ಅವರು ಅದನ್ನು ಕಸದ ಬುಟ್ಟಿಯ ಕಡೆಗೆ ತೂರಿದರು.

ಅದಾದ ನಂತರ ನಾನು ಆ ಅಂಗಡಿಯ ಕಡೆ ತಲೆ ಹಾಕುವುದು ಬಿಟ್ಟಿದ್ದೆ. ಆದರೆ ಈ ಹುಣಸೇ ಹುಳಿಯ ಎಪಿಸೋಡ್ ಬಾಯಿಂದ ಬಾಯಿಗೆ ಪ್ರಚಾರವಾಗಿತ್ತು. ಅವರಿಗೆ ಗುಣಮಟ್ಟದ ಸಾಮಗ್ರಿಗಳನ್ನು ಕೊಡುವುದೀಗ ಅನಿವಾರ್ಯವಾಗಿತ್ತು ಎನ್ನುವುದು ಪಕ್ಕದ ಮನೆಯ ಗೃಹಿಣಿ ‘ಈಗ ಅಂಗಡಿಯಲ್ಲಿ ಒಳ್ಳೇ ಸಾಮಾನು ಸಿಗ್ತದೆ ಮಾರ್ರೇ..’ ಎಂದು ಹೇಳಿದಾಗ ತಿಳಿದಿತ್ತು.

ಮೊನ್ನೆಯಷ್ಟೇ ಬಸ್ಸಿನಲ್ಲಿ ನಡೆದ ಘಟನೆ. ಹಣ ತೆಗೆದುಕೊಂಡ ಕಂಡಕ್ಟರ್ ಟಿಕೆಟ್ ಕೊಟ್ಟಿರಲಿಲ್ಲ. ಕೇಳಿದೆ. ಇದ್ಯಾವ ಗ್ರಹದ ಜೀವಿಯೋ ಎಂಬಂತೆ ನೋಡಿ ಹಳೆಯ ಟಿಕೆಟ್ ಪುಸ್ತಕದ ಹಿಂಭಾಗದಲ್ಲಿ ನಾನು ಕೊಟ್ಟ ಹಣವನ್ನು ನಮೂದಿಸಿ ಕೈಗೆ ನೀಡಿದರು. ಪ್ರೈವೇಟ್ ಬಸ್ ಆದ ಕಾರಣ ಡ್ರೈವರಿನ ಸೀಟಿನ ಹಿಂಭಾಗದಲ್ಲಿ ಬಸ್ಸಿನ ನಂಬರ್ ಜೊತೆಗೆ ಬಸ್ಸಿನ ಓನರ್ ನಂಬರ್ ಕೂಡಾ ಇತ್ತು. ಅದನ್ನು ನೋಟ್ ಮಾಡಿಕೊಂಡು ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರೆ ‘ಓಹ್.. ನೀವು ಹೇಳಿದ್ದು ಒಳ್ಳೆಯದಾಯ್ತು ನಾನು ವಿಚಾರಿಸ್ತೇನೆ’ ಎಂಬ ಉತ್ತರ ದೊರಕಿತು. ಅದ್ಯಾಕೋ ಸಮಾಧಾನವಾಗದೆ ಅದೇ ವಿಷಯವನ್ನು ಪೊಲೀಸ್ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡುತ್ತಿರುವ ನೆಂಟರೊಬ್ಬರಿಗೆ ಹೇಳಿದ್ದೆ. ಅವರು ಹೇಳಿದ ವಿಷಯ ಕೇಳಿ ಗಾಬರಿಯಾಯಿತು. ಆ ಬಸ್ಸು ಕೇವಲ ಕಾಂಟ್ರಾಕ್ಟ್ ಬೇಸಿಸ್​ನಲ್ಲಿ ಚಲಿಸಲು ಮಾತ್ರ ಪರವಾನಗಿ ಪಡೆದಿದ್ದು. ಹೀಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ತಪ್ಪಾಗಿತ್ತು. ಎಲ್ಲಾ ಕಡೆಯೂ ಟ್ರಾಫಿಕ್ ಪೊಲೀಸರನ್ನು ಹಾದು ಬರುತ್ತಿದ್ದ ಅದನ್ನು ತಡೆಯುವ ಯಾವ ವ್ಯವಸ್ಥೆಯೂ ನಮ್ಮಲ್ಲಿಲ್ಲ. ಈ ಹಗಲುಗಳ್ಳತನ ರಾಜಾರೋಷವಾಗಿ ನಡೆಯುತ್ತಿದ್ದರೂ ಈಗ ಯಾರೂ ಮಾತನಾಡುವುದಿಲ್ಲ. ಏನಾದರೂ ಅನಾಹುತಗಳಾದಾಗ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಸಮಜಾಯಿಶಿಕೆ ಸಿಗುತ್ತದಷ್ಟೇ.. ಸಿಕ್ಕಿಬೀಳುವವರೆಗೆ ಅವರು ಸುಭಗರೇ. ಗುಣಮಟ್ಟದ ಸೇವೆ ನಮ್ಮ ಹಕ್ಕು. ಅವರು ಕೊಡದಿದ್ದಲ್ಲಿ ಕೇಳಿ ಪಡೆಯೋಣ. ಸಾಧ್ಯವಿಲ್ಲದಿದ್ದಲ್ಲಿ ಪ್ರತಿಭಟನೆಯ ಪುಟ್ಟ ಹೆಜ್ಜೆಯನ್ನಾದರೂ ಇಡೋಣ. ನೀವೇನಂತೀರಾ..

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top