Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಹೆಗಲೇರಿದ ಕ್ರಾಂತಿ ನಾಯಕತ್ವದ ಹೊಣೆ

Thursday, 14.09.2017, 3:03 AM       No Comments

ಬಾಘಾ ಜತೀನ್ ಅಥವಾ ಜತೀಂದ್ರನಾಥ ಮುಖ್ಯೋಪಾಧ್ಯಾಯ ಎಂಬ ಮಹಾ ಕ್ರಾಂತಿಕಾರಿಯ ಕುರಿತು ಕಳೆದ ಅಂಕಣದಲ್ಲಿ ಗಮನಿಸಿದ್ದೆವು. ಅರವಿಂದ ಘೋಷ್ ಹಾಗೂ ಅವರ ಸೋದರ ಬಾರೀಂದ್ರ ಘೊಷ್ ಸಂಪರ್ಕ ಜತೀನ್ ಬಂದಿದ್ದ. ಆದರೆ ವಿಚಿತ್ರ ಸ್ವಭಾವ ಹಾಗೂ ನಡವಳಿಕೆಗಳ ಬಾರೀಂದ್ರನಿಗೆ ಜತೀನನ ಬಗ್ಗೆ ಒಂದು ಬಗೆಯ ಅಸೂಯೆ ಉಂಟಾಯಿತು. ಇದರಿಂದಾಗಿ, ಅರವಿಂದರ ಸಲಹೆಯಂತೆ ಜತೀನ್ ಸ್ವಲ್ಪ ಕಾಲ ನೇಪಥ್ಯದಲ್ಲಿಯೇ ಇರಬೇಕಾಗಿ ಬಂದಿತ್ತು. ಆಲಿಪುರ ಬಾಂಬ್ ಮೊಕದ್ದಮೆಯ ಸಂಬಂಧ ಅರವಿಂದ, ಬಾರೀಂದ್ರರಾದಿಯಾಗಿ ಸುಮಾರು ಮೂವತ್ತೈದಕ್ಕೂ ಹೆಚ್ಚು ಕ್ರಾಂತಿಕಾರಿಗಳು ಆಲಿಪುರ ಸೆರೆಮನೆ ಸೇರಿದಾಗ ಸಹಜವಾಗಿ ಯುಗಾಂತರದ ಹೊಣೆಗಾರಿಕೆ ಜತೀನನಿಗೆ ವರ್ಗಾವಣೆಯಾಯಿತು.

ಪರಕೀಯ ಶತ್ರುಗಳ ದಬ್ಬಾಳಿಕೆಯಿಂದ ಭಾರತವನ್ನು ಮುಕ್ತಗೊಳಿಸಬೇಕಾದರೆ ಅವರ ಮೇಲೆ ನಿರಂತರವಾಗಿ ಪೆಟ್ಟುಗಳ ಮೇಲೆ ಪೆಟ್ಟುಗಳು ಬೀಳುತ್ತಲೇ ಇರಬೇಕೆಂಬುದು ಕ್ರಾಂತಿಕಾರಿಗಳ ನಂಬಿಕೆ. ಬ್ರಿಟಿಷರಿಗೆ ಒಮ್ಮೆಯೂ ತಾವು ಆರಾಮವಾಗಿರುವರೆಂಬ ಭಾವನೆ ಬರಬಾರದು. ಪ್ರತಿ ಕ್ಷಣವೂ ಆತಂಕದಿಂದ ಕೂಡಿರುವ ಅಸ್ಥಿರ ಸ್ಥಿತಿ ಅವರದಾಗಿರಬೇಕೆಂಬ ನಿಲುವು ಕ್ರಾಂತಿಕಾರಿಗಳದಾಗಿತ್ತು. ರಷ್ಯಾದ ಕ್ರಾಂತಿಕಾರಿಗಳಾಗಲಿ, ಫ್ರಾನ್ಸಿನ ಬೊನ್ನೊಟ್ ಕ್ರಾಂತಿಕಾರಿಗಳಾಗಲಿ, ಇಟಲಿಯ ಮ್ಯಾಝಿನಿ, ಗ್ಯಾರಿಬಾಲ್ಡಿಗಳಾಗಲಿ ಇದೇ ನಿಲುವನ್ನು ಹೊಂದಿ ಕಾರ್ಯನಿರತರಾಗಿದ್ದರು. ಈ ವಿಚಾರದ ಪರಿಣಾಮವಾಗಿಯೇ ಜತೀನನ ನಾಯಕತ್ವದ ಕಾಲದಲ್ಲಿ ಚಾರುಚಂದ್ರ ಬೋಸ್, ಬೀರೇಂದ್ರ ದತ್ತಗುಪ್ತರಿಂದ ದೇಶದ್ರೋಹಿಗಳ ಸಂಹಾರ ಪ್ರಸಂಗಗಳು ನಡೆದಿದ್ದು.

ಸೈನಿಕರನ್ನು ದಂಗೆ ಎಬ್ಬಿಸುವ ಪ್ರಯತ್ನ: ಯುಗಾಂತರದ ನಾಯಕತ್ವ ತನ್ನ ಪಾಲಿಗೆ ಬಂದ ಮೇಲೆ, ಜತೀನ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದೆ ಹಿನ್ನೆಲೆಯಲ್ಲಿ ನಿಂತು ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ. ಅವನ ಆಲೋಚನೆಗಳು ಬೃಹತ್ತಾದವು. ಸ್ಥಳೀಯವಾಗಿ ಆತಂಕವನ್ನುಂಟುಮಾಡುವ ಕೆಲಸಗಳ ಚಾಲನೆ ಮಾಡುತ್ತಿದ್ದರೂ ಅವನ ಮುಖ್ಯ ದೃಷ್ಟಿ ವಿದೇಶಗಳಿಂದ ಶಸ್ತ್ರ ಹಾಗೂ ಧನ ಸಹಾಯ ಪಡೆದು ಬ್ರಿಟಿಷರ ವಿರುದ್ಧ ಯುದ್ಧ ಸಾರುವುದಾಗಿತ್ತು. ಅಂತೆಯೇ ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರನ್ನು ಸಂಪರ್ಕದಲ್ಲಿರಿಸಿಕೊಂಡು, 1857ರ ತೆರದಲ್ಲಿ, ಸೈನಿಕರು ಬಂಡಾಯವೇಳುವಂತೆ ಮಾಡುವುದು. ಅದಕ್ಕಾಗಿ ಜತೀನ್ ತನ್ನ ಆಪ್ತ ಶಿಷ್ಯ ನರೇಂದ್ರನಾಥ ಭಟ್ಟಾಚಾರ್ಯ (ಮುಂದೆ ಎಂ.ಎನ್. ರಾಯ್ ಎಂಬ ಹೆಸರಿನಲ್ಲಿ ಕೊಮಿನ್​ಟರ್ನ್​ನ ಮುಖ್ಯ ನೇತಾರನಾದವನು)ನನ್ನು ಜೊತೆ ಮಾಡಿಕೊಂಡು ಕಲ್ಕತ್ತಾದ ಫೋರ್ಟ್ ವಿಲಿಯಂನಲ್ಲಿ ನೆಲೆಸಿದ್ದ 10ನೇ ಜಾಟ್ ರೆಜಿಮೆಂಟ್​ನ ಸೈನಿಕರನ್ನು ಸಂರ್ಪಸಿದ್ದ. ಅವರು ತನ್ನ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮನ ಒಲಿಸಿದ್ದ. ಅಂತೆಯೇ ಅವನ ಸಂಪರ್ಕ ಇನ್ನೂ ಕೆಲವು ಸೈನಿಕ ಪಾಳೆಯಗಳಿಗೆ ಪಸರಿಸಿತ್ತು. ಹೌರಾ ಗ್ಯಾಂಗ್ ಕೇಸ್ ಎಂದು ಕರೆಯಲಾದ, ಸೈನಿಕರನ್ನು ಆಂಗ್ಲರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದ ಸಂಬಂಧವಾಗಿ ಸರ್ಕಾರ 46 ಜನ ಕ್ರಾಂತಿಕಾರಿಗಳನ್ನು ಬಂಧಿಸಿತು. ಅವರಲ್ಲಿ ಜತೀನ್, ನರೇಂದ್ರನಾಥ ಭಟ್ಟಾಚಾರ್ಯರದು ಪ್ರಮುಖ ಸ್ಥಾನ. ಜತೀನ್ ಮುಖರ್ಜಿಯ ಮೇಲೆ ಸರ್ಕಾರ ಹೊರೆಸಿದ್ದ ಆರೋಪ ಬ್ರಿಟನ್ ಚಕ್ರವರ್ತಿಯ ವಿರುದ್ಧ ಯುದ್ಧ ನಡೆಸಲು ಪಿತೂರಿ ಮತ್ತು ಭಾರತೀಯ ಸೈನಿಕರ ರಾಜನಿಷ್ಠೆಯನ್ನು ಮುರಿಯಲು ಯತ್ನಿಸಿದ್ದ ಎಂಬುದಾಗಿತ್ತು. ಈ ಘಟನೆಯನ್ನು ಕುರಿತು ಅಂದಿನ ವೈಸರಾಯ್ ಆಗಿದ್ದ ಲಾರ್ಡ್ ಮಿಂಟೊ … ‘ಇಲ್ಲಿಯವರೆಗೆ ಇಂಡಿಯಾಕ್ಕೆ ಪರಿಚಯವಿಲ್ಲದಿದ್ದ ಒಂದು ಹೊಸ ಹುರುಪು ಈಗ ಅಸ್ತಿತ್ವಕ್ಕೆ ಬಂದಿದೆ… ಅರಾಜಕತೆ ಹಾಗೂ ಕಾನೂನನ್ನು ವಿರೋಧಿ ಸುವ ಈ ಹುಮ್ಮಸ್ಸು ಬ್ರಿಟಿಷ್ ಆಡಳಿತವನ್ನು ಬುಡಮೇಲು ಮಾಡುವ ಯತ್ನದಲ್ಲಿದೆ’ ಎಂದು ತನ್ನ ಆತಂಕವನ್ನು 1910ರ ಜನವರಿ 25ರ ಹೇಳಿಕೆಯಲ್ಲಿ ತೋಡಿಕೊಂಡ.

ಷಂಸುಲ್ ಆಲಂನ ಹತ್ಯೆಯ ಸಂಬಂಧ ಬಂಧಿಸಿ ಅನಂತರ ಪುರಾವೆ ಸಾಲದೆ ಬಿಡುಗಡೆಯಾದ ಜತೀನನನ್ನು ಮತ್ತೆ ಹೌರಾ ಗ್ಯಾಂಗ್ ಕೇಸ್​ನಲ್ಲಿ ಕೂಡಲೇ ಬಂಧಿಸಿದ್ದರು. ನಲವತ್ತೇಳು ಕ್ರಾಂತಿಕಾರಿಗಳನ್ನು ಈ ಸಂಬಂಧ ಹಿಡಿದು ಹೌರಾ ಜೈಲಿನಲ್ಲಿರಿಸಿ ಮೊಕದ್ದಮೆ ಹೂಡಿದರು. ಆಗಷ್ಟೇ ವೈಸ್​ರಾಯ್ ಆಗಿ ನೇಮಕಗೊಂಡಿದ್ದ ಲಾರ್ಡ್ ಹಾರ್ಡಿಂಜ್ ಇಂಗ್ಲೆಂಡಿನಲ್ಲಿದ್ದ ಇಂಡಿಯಾ ವ್ಯವಹಾರಗಳ ಗೃಹ ಕಾರ್ಯದರ್ಶಿ ಆರ್ಲ್ ಕ್ರೂವಿಗೆ ಬರೆದ ಪತ್ರದಲ್ಲಿ ಈ ಕೇಸ್ ಕುರಿತು ಹೀಗೆ ಉಲ್ಲೇಖ ಮಾಡಿದ್ದ: ‘….ಹೌರಾ ಗ್ಯಾಂಗ್ ಕೇಸ್ ಸಂಬಂಧಿಸಿದಂತೆ ವಿಶಾಲವಾಗಿ ಬಲೆ ಬೀಸಿ 47 ಜನರನ್ನು ಬಂಧಿಸಿದ್ದರೂ ಅವರಲ್ಲಿ ಒಬ್ಬನೇ ಒಬ್ಬನು ನಿಜವಾದ ಪಾತಕಿ ಎಂದು ನನ್ನ ನಂಬಿಕೆ. ಈ 47 ಮಂದಿ ದಾರಿ ತಪ್ಪಿದ ಯುವಕರ ಮೇಲೆ ಮೊಕದ್ದಮೆ ಹೂಡುವುದರ ಬದಲು ಈ ಒಬ್ಬ ಪಾತಕಿಯ ಮೇಲೆ ಕೇಂದ್ರೀಕೃತ ಗಮನವಿರಿಸಿ ಪ್ರಯತ್ನಿಸಿದ್ದಾಗಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು ಎಂಬುದು ನನ್ನ ಅಭಿಪ್ರಾಯ’. ಈ ಒಬ್ಬ ‘ಪಾತಕಿ’ ಜತೀನನೇ ಎಂಬುದು ಅಂದಿನ ರಾಜಕಾರಣಾಸಕ್ತಿ ಇದ್ದ ಎಲ್ಲರಿಗೂ ಚೆನ್ನಾಗಿ ತಿಳಿದಿದ್ದ ಸಂಗತಿಯೇ. 1911ರ ಮೇ 28ರಂದು ಹೌರಾ ಗ್ಯಾಂಗ್ ಬಗ್ಗೆ ಗೃಹ ಕಾರ್ಯದರ್ಶಿಗೆ ಸಲ್ಲಿಸಿದ ವರದಿ ಅದರ ಪ್ರಾಮುಖ್ಯತೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿತ್ತು; ‘10ನೇ ಜಾಟ್ ರೆಜಿಮೆಂಟ್ ಪ್ರಕರಣ ಹೌರಾ ಗ್ಯಾಂಗ್ ಕೇಸ್​ನ ಒಂದು ಅವಿಭಾಜ್ಯ ಭಾಗ. ಅದರ ವೈಫಲ್ಯದ ಅನಂತರ ಆ ನಿಟ್ಟಿನಲ್ಲಿ ಇನ್ನಷ್ಟು ಮುಂದುವರಿಯುವುದು ವ್ಯರ್ಥವೆಂದು ಬೆಂಗಾಲ್ ಸರ್ಕಾರಕ್ಕೆ ಅರಿವುಂಟಾಯಿತು… ನನ್ನ ದೃಷ್ಟಿಯಲ್ಲಿ ಪಶ್ಚಿಮ ಮತ್ತು ಪೂರ್ವ ಬಂಗಾಳಗಳಲ್ಲಿನ ಈಗಿನ ಸ್ಥಿತಿಗತಿಗಳು ಅತ್ಯಂತ ಹದಗೆಟ್ಟಿವೆ. ಈ ಎರಡು ಪ್ರಾಂತ್ಯಗಳಲ್ಲಿ ಸರ್ಕಾರವೆಂಬುದೇ ಇಲ್ಲ….’. ವೈಸ್​ರಾಯ್ನ ಈ ಹೇಳಿಕೆ ಬಹಳ ಮಹತ್ತ್ವಪೂರ್ಣದ್ದಾಗಿದ್ದು ಕ್ರಾಂತಿಕಾರಿಗಳ ಚಟುವಟಿಕೆಗಳು ಹಾಗೂ ಸರ್ಕಾರದ ನಿರ್ವೀರ್ಯ ಸ್ಥಿತಿಯ ಬಗ್ಗೆ ಬೆಳಕು ಬೀರುವಂತಹುದಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಇದ್ದ ಪ್ರಬಲ ಶಕ್ತಿ ಜತೀನ್ ಮುಖರ್ಜಿಯದು ಎಂಬುದು ಕೂಡ ಸ್ವಯಂವೇದ್ಯ.

ಜಾಣ ಕ್ರಾಂತಿ ಸಂಘಟಕ: ಜತೀನ್ ಮತ್ತು ಗೆಳೆಯರು ನಡೆಸಿದ ಸೈನಿಕರನ್ನು ದಂಗೆ ಎಬ್ಬಿಸುವ ಪ್ರಯತ್ನಕ್ಕೆ ಪೂರ್ಣವಿರಾಮ ಬಿತ್ತು. ಆದರೆ ಅದರ ಸ್ಥಾನದಲ್ಲಿ ಮತ್ತೊಂದು ಕಾರ್ಯಕ್ರಮ ಹಮ್ಮಿಕೊಳ್ಳುವ ಅನಿವಾರ್ಯತೆ ಜತೀನನ ಮುಂದಿತ್ತು. ಅದಕ್ಕೂ ಮಿಗಿಲಾಗಿ ಆ ವೇಳೆಗೆ ವಿಭಿನ್ನ ಕ್ರಾಂತಿ ಕೇಂದ್ರಗಳು ಮುಚ್ಚಿ ಹೋಗಿದ್ದವು. ಕೆಲವು ನಿಷ್ಕಿ›ಯವಾಗಿದ್ದವು. ಆಲಿಪುರ ಬಂಧನಗಳ ಅನಂತರ ಸಹಜವಾಗಿ ಜತೀನನ ಹೆಗಲೇರಿದ್ದ ನಾಯಕತ್ವದ ಕೆಲಸವನ್ನು ನಿರ್ವಹಿಸಬೇಕಿತ್ತು. ಅವನು ಬಿಡುಗಡೆಯಾಗಿ ಹೊರಬಂದ ಕೂಡಲೇ ಆ ಕಾರ್ಯ ಕಾದಿತ್ತು. ಹೌರಾ ಕೇಸ್ ಪ್ರಕರಣಕ್ಕೆ ಮೊದಲೇ ಅವನು ಕ್ರಾಂತಿ ಕೇಂದ್ರಗಳನ್ನು ಬುದ್ಧಿಪೂರ್ವಕವಾಗಿ ವಿಕೇಂದ್ರೀಕರಿಸಿದ್ದ. ಅವನ ಈ ಸಂಘಟನಾ ಜಾಣ್ಮೆಯ ಕಾರಣ ಹೌರಾ ಗ್ಯಾಂಗ್ ಕೇಸ್​ನಲ್ಲಿ ಸರ್ಕಾರ ಯಶಸ್ವಿಯಾಗಿ ಮೊಕದ್ದಮೆ ನಡೆಸಲಾಗದೆ ಹೋಯಿತು. ಈ ಕುರಿತು ಜೆ.ಸಿ. ನಿಕ್ಸನ್ ಎಂಬುವನು ಸಿದ್ಧಪಡಿಸಿದ ವರದಿಯಲ್ಲಿ ಹೀಗೆ ಟಿಪ್ಪಣಿ ಮಾಡಲಾಗಿದೆ-‘ಈ ಕ್ರಾಂತಿಕಾರಿ ಗುಂಪುಗಳನ್ನು ಕುರಿತು ಬೇರೆ ಬೇರೆ ಹೆಸರುಗಳನ್ನು ಹಾಗೂ ಬೇರೆ ಬೇರೆ ವಿಶಿಷ್ಟ ರೂಪರೇಷೆಗಳನ್ನು ನೀಡಲಾಗಿದ್ದರೂ ಇದರ ಕಿರಿಯ ಸದಸ್ಯರಲ್ಲಿ ಅಂಥ ವ್ಯತ್ಯಾಸಗಳು ಕಂಡುಬಂದಿದ್ದರೂ ಹಿರಿತಲೆಗಳು ಪರಸ್ಪರ ಸಂಪರ್ಕದಲ್ಲಿದ್ದರು. ಈ ಗುಂಪುಗಳವರು ಸರ್ವತಂತ್ರ ಸ್ವತಂತ್ರವಾಗಿ ಅರಾಜಕ ಪಾತಕಗಳ ಚಟುವಟಿಕೆಗಳಲ್ಲಿ ತೊಡಗಿಕೊಂಡಂತೆ ಕಂಡುಬಂದರೂ ಅವುಗಳ ಬೇರುಗಳು ಹಾಗೂ ಕ್ರಾಂತಿಕಾರಿ ಗುರಿಗಳು ಒಂದಕ್ಕೊಂದು ಪರಸ್ಪರ ಹೆಣೆದುಕೊಂಡಿದ್ದವು’.

ಜತೀನನ ಈ ಸಂಘಟನಾ ನಿರ್ವಹಣಾ ತಂತ್ರದ ಕಾರಣ ಗೊಂದಲದಲ್ಲಿ ಸಿಲುಕಿಕೊಂಡ ಸರ್ಕಾರ ಹೌರಾ ಗ್ಯಾಂಗ್ ಕೇಸಿನಲ್ಲಿ ಮಣ್ಣು ಮುಕ್ಕಿ ಆರೋಪಿಗಳನ್ನು ಮನೆಗಳಿಗೆ ಕಳಿಸಬೇಕಾಗಿ ಬಂತು. ಸ್ವತಃ ಜತೀನನೇ ಈ ಘಟನೆಗಳ ಹಿಂದಿನ ಶಕ್ತಿಕೇಂದ್ರ ಎಂಬುದನ್ನು ಅರಿತಿದ್ದರೂ ಅವನನ್ನು ಕಾನೂನಿನ ಇಕ್ಕಳದಲ್ಲಿ ಸಿಕ್ಕಿಹಾಕಿಸುವುದರಲ್ಲಿ ವಿಫಲವಾದ ಸರ್ಕಾರ ಅವನನ್ನು ಮತ್ತು ಅವನ ಬಲಗೈ ಬಂಟ ನರೇಂದ್ರನಾಥ ಭಟ್ಟಾಚಾರ್ಯನನ್ನು ಇತರರೊಂದಿಗೆ ಅನಿವಾರ್ಯವಾಗಿ ಬಿಡುಗಡೆ ಮಾಡಬೇಕಾಗಿ ಬಂತು.

1911ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡು ಹೊರಬಂದ ಜತೀನನ ಬೆನ್ನ ಹಿಂದೆ ಗೂಢಚಾರರ ದೊಡ್ಡ ತಂಡವೇ ಬಿದ್ದಿತ್ತು. ಜೈಲಿಗೆ ಹೋಗಿ ಬಂದ ಕಾರಣ ಅವನ ಕೆಲಸವೂ ಹೋಗಿತ್ತು. ಆದ್ದರಿಂದ ಸ್ವಲ್ಪ ಕಾಲ ಕ್ರಾಂತಿಕಾರಿ ಸಂಸ್ಥೆ ಹಾಗೂ ಕುಟುಂಬಗಳ ಸಲುವಾಗಿ ಹಣ ಸಂಪಾದನೆ ಅನಿವಾರ್ಯವಾಯಿತು. ಅದಕ್ಕಾಗಿ ಕಟ್ಟಡ, ಸೇತುವೆಗಳ ನಿರ್ವಣದ ಸರ್ಕಾರಿ ಗುತ್ತಿಗೆಗಳನ್ನು ಹಿಡಿದು ಆ ಕೆಲಸಗಳಲ್ಲಿ ಉತ್ತಮ ಹೆಸರುಗಳಿಸಿದ. ಹಣವನ್ನೂ ಗಳಿಸಿದ. ಜೆಸ್ಸೂರ್-ಜೆನೈದಾಹ್ ರೈಲು ಹಳಿ ನಿರ್ವಣದ ಕೆಲಸವನ್ನು ಮಾಡಿ ಮುಗಿಸಿ ರೈಲು ಅಧಿಕಾರಿಗಳ ಮೆಚ್ಚುಗೆ ಗಳಿಸಿದ.

ಜರ್ಮನ್ ರಾಯಭಾರಿಯೊಂದಿಗೆ ಸಂಪರ್ಕ: ಈ ಕೆಲಸದಲ್ಲಿ ಅವನು ಪ್ರೀತಿಯಿಂದ ಸಾಕಿದ್ದ ಸುಂದರಿ ಎಂಬ ಹೆಸರಿನ ಕುದುರೆ ಅವನಿಗೆ ಬಹಳ ಸಹಾಯಕವಾಗಿತ್ತು. ಈ ಸುಂದರಿಯ ಬೆನ್ನ ಮೇಲೆ ಕುಳಿತೋ ಅಥವಾ ಸೈಕಲ್ ತುಳಿಯುತ್ತಲೋ ಸಂಚರಿಸುತ್ತಾ ಕ್ರಾಂತಿ ಕೇಂದ್ರಗಳ ಪುನರ್ಸಂಘಟನಾ ಕಾರ್ಯ ದಲ್ಲಿಯೂ ನಿಮಗ್ನನಾದ. ಅವನು ಕಂಟ್ರಾಕ್ಟರ್ ಎಂದೇ ಪ್ರಸಿದ್ಧನಾದ ಕಾರಣ ಅವನ ಗುಪ್ತ ಕ್ರಾಂತಿಕಾರಿಗಳ ಸಂಘಟನೆಯ ಕೆಲಸ ನಿರ್ವಿಘ್ನವಾಗಿ ಸಾಗಿತ್ತು.

ಆಗ ಹೆಂಡತಿ ಮಕ್ಕಳೊಂದಿಗೆ ಜೀವಿಸುತ್ತಿದ್ದ ಜತೀನ್ ಅವರನ್ನು ತೀರ್ಥಯಾತ್ರೆಗೆಂದು ಕರೆದುಕೊಂಡು ಹೋಗಿ ಹರಿದ್ವಾರದಲ್ಲಿ ತನ್ನ ದೀಕ್ಷಾಗುರು ಭೋಲಾನಂದ ಗಿರಿ ಸ್ವಾಮಿಗಳನ್ನು ಹಾಗೂ ಅನುಶೀಲನ ಸಮಿತಿಯ ಆರಂಭದ ದಿನಗಳ ಸಂಘಟಕ ಜತೀಂದ್ರನಾಥ ಬ್ಯಾನರ್ಜಿ (ಆಗ ಸಂನ್ಯಾಸ ಸ್ವೀಕರಿಸಿ ನಿರಾಲಂಬಸ್ವಾಮಿ ಎಂಬ ಹೆಸರಿನಲ್ಲಿ ಪರಿವ್ರಾಜಕ ಜೀವನವನ್ನು ನಡೆಸುತ್ತಾ ಮಥುರಾವನ್ನು ಕೇಂದ್ರ ಮಾಡಿಕೊಂಡಿದ್ದರು)ಯನ್ನು ಸಂರ್ಪಸಿ ತನ್ನ ಮುಂದಿನ ಹೆಜ್ಜೆಯನ್ನು ಕುರಿತು ಸಮಾಲೋಚಿಸಿದ. ನಿರಾಲಂಬಸ್ವಾಮಿ ಆ ಮೊದಲು ತಾನು ಸ್ಥಾಪಿಸಿದ್ದ ಪಂಜಾಬ್ ಮತ್ತು ಉತ್ತರ ಪ್ರದೇಶಗಳ ಕ್ರಾಂತಿ ಕೇಂದ್ರಗಳ ಪರಿಚಯ ಹಾಗೂ ಸಂಪರ್ಕ ಕೊಂಡಿಗಳ ವಿವರಗಳನ್ನು ನೀಡಿದರು. ರಾಸ್​ಬಿಹಾರಿ ಬೋಸರ ಮುಖಾಮುಖಿ ಮಾಡಿಸಿದರು.

ಜತೀನ್ ತೀರ್ಥಯಾತ್ರೆ ಮುಗಿಸಿ ಹಿಂದಿರುಗಿದ ಅನಂತರ ಮತ್ತೆ ಕ್ರಾಂತಿಕಾರಿಗಳ ಸಂಘಟನೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ತೀವ್ರ ಸಕ್ರಿಯನಾದ. ಅವನಿಗೆ ರಾಮಕೃಷ್ಣ ಮಠದ ಸಂಪರ್ಕವಿದ್ದ ಕಾರಣ ಸಮಾಜ, ದೀನ ದಲಿತರು ಹಾಗೂ ನೊಂದವರ ಸೇವೆ ಅವನ ಜೀವನದ ಒಂದು ಅವಿಭಾಜ್ಯ ಅಂಗವಾಗಿತ್ತು. 1913ರಲ್ಲಿ ದಾಮೋದರ ನದಿಯಲ್ಲಿ ಭೀಕರ ಪ್ರವಾಹ ಬಂದಾಗ ತನ್ನ ಸಂಗಾತಿಗಳನ್ನು ಜೊತೆ ಮಾಡಿಕೊಂಡು ಪ್ರವಾಹ ಪೀಡಿತರಿಗೆ ನಾನಾ ವಿಧದ ಸೇವೆ ಮಾಡಿದ. ಅದೇ ವೇಳೆ ತನ್ನ ಕ್ರಾಂತಿಕಾರಿ ಸಂಗಾತಿಗಳನ್ನೆಲ್ಲ ದಾಮೋದರ ನದಿ ಪ್ರವಾಹ ಪರಿಹಾರ ಶಿಬಿರಕ್ಕೆ ಕರೆಸಿಕೊಂಡು ಸೇವೆ ಜೊತೆಗೆ ಬಿಡುವಿನ ಸಮಯದಲ್ಲಿ ಕ್ರಾಂತಿ ತರಬೇತಿಯನ್ನು ನೀಡುತ್ತಾ ಮುಂದಿನ ಕಾರ್ಯಾಚರಣೆಗಳಿಗೆ ಅವರನ್ನು ಸಿದ್ಧಗೊಳಿಸಿದ.

ಒಂದು ಕಡೆ ಸಂಘಟನೆಯನ್ನು ಬಲಗೊಳಿಸುತ್ತಿದ್ದಂತೆ ಇನ್ನೊಂದು ಕಡೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಏರ್ಪಡಿಸಿಕೊಂಡು ಅಲ್ಲಿಂದ ಶಸ್ತ್ರಾಸ್ತ್ರಗಳನ್ನು ರಹಸ್ಯವಾಗಿ ತರಿಸಿಕೊಳ್ಳಲು ಯತ್ನಿಸಿದ. ಜರ್ಮನಿಯ ರಾಜಕುಮಾರನನ್ನು ಭೇಟಿ ಮಾಡಿ ಮಾತುಕತೆ ನಡೆಸಿ ತಮ್ಮ ಕೆಲಸಕ್ಕೆ ಸಹಾಯ ಮಾಡುವಂತೆ ವಿನಂತಿಸಿದ. ಕಲ್ಕತ್ತಾದಲ್ಲಿ ಜರ್ಮನ್ ರಾಯಭಾರಿ ಕಚೇರಿಯಲ್ಲಿ ರಾಯಭಾರಿಯನ್ನು ಭೇಟಿ ಮಾಡಿ ಅಲ್ಲಿಂದ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವ ಒಪ್ಪಂದ ಮಾಡಿಕೊಂಡ. ಈ ರೀತಿಯ ವ್ಯವಹಾರಗಳ ನಿರ್ವಹಣೆಗಾಗಿ ಹ್ಯಾರಿ ಅಂಡ್ ಕಂಪನಿ ಎಂಬ ಆಮದು -ರಫ್ತಿನ ಸಂಸ್ಥೆ ಆರಂಭಿಸಿದ.

ಹಣ ಸಂಗ್ರಹಕ್ಕಾಗಿ ನರೇಂದ್ರನಾಥ ಭಟ್ಟಾಚಾರ್ಯನ ನೇತೃತ್ವದಲ್ಲಿ ಬರ್ಡ್ ಅಂಡ್ ಕಂಪನಿಯ ಮೇಲೆ ದರೋಡೆ ನಡೆಯಿತು. ಅದೇ ವೇಳೆ ಜತೀನ್ ಹಾಗೂ ಸಂಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಸುರೇಶ್ ಮುಖರ್ಜಿ ಮತ್ತು ಹಲಧರ್ ಎಂಬಿಬ್ಬರು ಪೊಲೀಸ್ ಅಧಿಕಾರಿಗಳು ಕ್ರಾಂತಿಕಾರಿಗಳ ಗುಂಡಿಗೆ ಆಹುತಿಯಾದರು.

ಜತೀನ್ ಹೆಂಡತಿ ಮಕ್ಕಳಿಂದ ದೂರವಿದ್ದುಕೊಂಡು ಅಹರ್ನಿಶಿ ಕ್ರಾಂತಿ ಸಂಘಟನೆ ಮಾಡುತ್ತಾ ಮುಂದಿನ ರೋಮಾಂಚಕಾರಿ ದಿನಗಳಿಗೆ ನಾಂದಿ ಹಾಡಿದ.

(ಈ ಕುರಿತು ಹೆಚ್ಚಿನ ವಿವರಗಳಿಗೆ ಇದೇ ಅಂಕಣಕಾರರ ‘ರುಧಿರಾಭಿಷೇಕ’ ಕಾದಂಬರಿ ಓದಿರಿ. ಪ್ರತಿಗಳಿಗಾಗಿ: ರಾಷ್ಟ್ರೋತ್ಥಾನ ಸಾಹಿತ್ಯ,

ಬೆಂಗಳೂರು-560 019, ಮೊಬೈಲ್: 09448284603) (ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top