Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಹೃದಯದ ಪಲ್ಲಕ್ಕಿಯಲ್ಲಿ ಹೊರಡಲಿ ಬೆಳಕಿನ ಮೆರವಣಿಗೆ

Wednesday, 18.10.2017, 3:02 AM       No Comments

| ರವೀಂದ್ರ ಎಸ್​. ದೇಶಮುಖ್​​

ಖರೀದಿಯ ಭರಾಟೆ, ಮನೆ ಶೃಂಗರಿಸುವ ಧಾವಂತ, ಹೊಸ ಬಟ್ಟೆಯ ಸಂಭ್ರಮ, ಸಂಬಂಧಿಗಳನ್ನು ಕಾಣುವ ತವಕ, ಬಗೆ-ಬಗೆ ಖಾದ್ಯಗಳ ಔತಣ, ಹಳೆಯ ಕಹಿ ನೆನಪುಗಳಿಗೆಲ್ಲ ಅಲ್ವಿದಾ ಹೇಳಿ ಜೀವನವನ್ನು ಜಶ್ನ್ ಹಾಗೆ ಆಚರಿಸುವ ಸಂಕಲ್ಪ, ಯಾವುದೋ ಕೆಟ್ಟ ಗಳಿಗೆಯಲ್ಲಿ ಹಳಿತಪ್ಪಿದ ಸಂಬಂಧಗಳೆಲ್ಲ ಮನಸ್ಸಿನ ಕಹಿ ಮರೆತು ಮತ್ತೆ ಭಾವತಂತು ಮೀಟುವ ಕ್ಷಣ, ನಮ್ಮ ಬದುಕಿನಲ್ಲೂ ಕತ್ತಲೆ ಕಳೆದು ಸಂತೋಷವೆಂಬ ಬೆಳಕು ಫಕ್ಕನೆ ಹರಡಿಕೊಳ್ಳುತ್ತದೆ ಎಂಬ ಆಶಾವಾದ, ಹಬ್ಬ ಬಂತು ಹಳೇ ಹಳಹಳಿಕೆ ಈಗ ಯಾಕೆ ಎಂದು ಮುನ್ನಡೆಯುವ ಗಟ್ಟಿತನ…

ಅಬ್ಬಾ… ದೀಪಾವಳಿ ಇಂತಹ ಅದೆಷ್ಟೋ ಭಾವಕೌತುಕಗಳಿಗೆ, ಭಾವಸಂಭ್ರಮಗಳಿಗೆ ಸಾಕ್ಷಿಯಾಗುತ್ತಲ್ಲ… ಈ ಸಿರಿಜಾತ್ರೆಗೆ ಕಣ್ರಿ ಹಬ್ಬಗಳ ಶಕ್ತಿ, ನಮ್ಮ ಸಂಸ್ಕೃತಿಯ ಶಕ್ತಿ ಎಂದು ಕರೆಯುವುದು. ನಿಜಕ್ಕೂ ಹಬ್ಬಗಳನ್ನೆಲ್ಲ ಸೃಷ್ಟಿಸಿದ ಆ ಭಗವಂತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಹಬ್ಬಗಳು ಬರೀ ಆಚರಣೆಯ ದ್ಯೋತಕವಲ್ಲ, ಒಂದೆರಡು ದಿನಗಳ ಸಾಂಕೇತಿಕ ಸಂಭ್ರಮವೂ ಅಲ್ಲ… ಹಾಗಾದರೆ ಹಬ್ಬ ಎಂದರೆ ಏನು? ಜೀವನಪ್ರೀತಿಯನ್ನು ಉಕ್ಕಿಸುವ, ಅಂತಃಕರಣದ ಕಲ್ಮಶವನ್ನೆಲ್ಲ ತೊಳೆದು ಪ್ರಫುಲ್ಲವಾಗುವ, ಮನಸ್ಸಿನ ಹೊರೆಯನ್ನು ಇಳಿಸಿ ಆಹ್ಲಾದ ತರುವ, ವ್ಯಷ್ಟಿ-ಸಮಷ್ಟಿಯ ಹಿತ ಬಯಸುವ… ಭಾವನೆಗಳ ದೊಡ್ಡ ಜಾತ್ರೆ. ಅದರಲ್ಲೂ, ಎಲ್ಲ ಹಬ್ಬಗಳ ತೂಕ ಒಂದಾದರೆ ದೀಪಾವಳಿಯದ್ದೇ ಮತ್ತೊಂದು ತೂಕ. ಸಂಬಂಧಗಳು ಕಮರ್ಷಿಯಲ್ ಆಗುತ್ತಿರುವ, ಮಾನವೀಯತೆ ತಲೆ ತಗ್ಗಿಸುತ್ತಿರುವ, ಸ್ವಾರ್ಥವೇ ವಿಜೃಂಭಿಸುತ್ತಿರುವ, ಕೊರಗುತ್ತ ಕೊರಗುತ್ತ ಜೀವನವನ್ನು ಬರಡು ಮಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಬರೀ ಬೆಳಕಲ್ಲ, ಇದನ್ನೆಲ್ಲ ತೊಡೆದುಹಾಕುವ ಪ್ರಖರ ಪ್ರಕಾಶವೇ ಬೇಕಾಗಿದೆ ಎನ್ನಿ. ಕೆಟ್ಟದನ್ನು ಸೋಲಿಸಿ ಸಾತ್ವಿಕತೆಗೆ ಗೆಲುವು ಒದಗಿದ, ದುಷ್ಟಶಕ್ತಿಗಳು ನಾಶವಾಗಿ ನೈತಿಕ ಶಕ್ತಿಗಳಿಗೆ ವಿಜಯ ಒದಗಿದ ಸಂದರ್ಭಗಳನ್ನೇ ನಾವು ಹಬ್ಬವಾಗಿ, ಉತ್ಸವವಾಗಿ ಆಚರಿಸುತ್ತೇವೆ. ಹಾಗಾಗಿ, ಈ ಸಂದರ್ಭಗಳು ಪರಿವರ್ತನೆಯೆಡೆಗಿನ ಪಯಣಕ್ಕೆ ನಾಂದಿಯಾಗಬೇಕು. ಅದೆಷ್ಟೋ ಬಗೆಯ ಕತ್ತಲೆಗಳು ಕೇಕೆ ಹಾಕುತ್ತ ಕುಣಿಯುತ್ತಿರುವಾಗ ಹೃದಯದ ಅಂಗಳದಲ್ಲಿ ಸಣ್ಣ ಹಣತೆ ಬೆಳಗಿದರೂ ಸಾಕು ಮುಂದಿನ ದಾರಿ ಗೋಚರಿಸುತ್ತದೆ, ಜೀವನಪಯಣ ಸುಗಮವೆನಿಸುತ್ತದೆ.

ಬನ್ನಿ, ಪ್ರೀತ್ಸೋದನ್ನು ಕಲಿಯೋಣ: ದ್ವೇಷ, ಅಸೂಯೆಯ ವ್ಯಕ್ತಿ, ಸಮಾಜ ಎಂದೂ ಉತ್ಕರ್ಷದತ್ತ ಸಾಗೋದಿಲ್ಲ. ಜೀವನ ತಲ್ಲಣ-ತಾಪತ್ರಯಗಳಿಂದಲೇ ಕೂಡಿದೆ ಎಂದು ಪದೇಪದೇ ಅನಿಸುತ್ತಿದೆ ಎಂದರೆ ನಾವು ಜೀವನವನ್ನು ಇನ್ನೂ ಪ್ರೀತಿಸಲು ಆರಂಭಿಸಿಲ್ಲ ಎಂದೇ ಅರ್ಥ. ಬದುಕನ್ನು ಪ್ರೀತಿಸುತ್ತ, ಸಂತೃಪ್ತಿಯಲ್ಲಿ ಜೀವನದ ಜಟಕಾ ಬಂಡಿಯನ್ನು ಸಾಗಿಸಿದರೆ ನಮ್ಮ ಆಯುಷ್ಯದ ಪ್ರತೀ ದಿನವೂ ದೀಪಾವಳಿಯೇ! ಒಳಗಿನ ಬೆಳಕು ಯಾವ ಬಿರುಗಾಳಿಗೂ ಆರುವಂಥದ್ದಲ್ಲ. ಆದರೆ, ವಿದ್ಯುತ್ ದೀಪಗಳಿಂದ ಹೊರಗಿನ ಜಗತ್ತನ್ನು ಎಷ್ಟು ಝುಗಮಗಗೊಳಿಸಿದರೇನು ಬಂತು, ಆಂತರ್ಯದಲ್ಲೇ ದಟ್ಟ ಕತ್ತಲೆ ಕಾಲುಚಾಚಿಕೊಂಡು ಕುಳಿತಿರುವಾಗ. ನಾವು ಜೀವನವನ್ನು ಪ್ರೀತಿಸದೆ ಆ ವಿಧಿ ನಮ್ಮ ಮೇಲೆ ಪ್ರೀತಿ ಸುರಿಸಲು ಹೇಗೆ ಸಾಧ್ಯ?

ಜೀವನದ ಸಣ್ಣ ಸಣ್ಣ ಸಂಗತಿಗಳನ್ನು ಅನುಭವಿಸಲು, ಆಹ್ಲಾದಿಸಲು ಶುರು ಮಾಡಿದಾಗಲೇ ಬದುಕಿನ ಅಚ್ಚರಿಯ ಮುಖಗಳು ನಮ್ಮದೆರು ಅನಾವರಣಗೊಳ್ಳೋದು. ಅಲ್ವಾ? ಯಶಸ್ಸಿನ ತುತ್ತತುದಿಯಲ್ಲಿ ನಿಂತವರಲ್ಲಿ ಬಹುತೇಕರು ಶೂನ್ಯದಿಂದ ಪ್ರಯಾಣ ಆರಂಭಿಸಿದವರೇ! ಅಷ್ಟೇ ಅಲ್ಲ, ಯಾವುದೇ ಭೌತಿಕ ಸೌಕರ್ಯಗಳು ಇಲ್ಲದಿರುವವರು, ಕೈ-ಕಾಲು, ಕಣ್ಣು ಇಲ್ಲದವರು, ವಿವಿಧ ಅಂಗನ್ಯೂನತೆಯಿಂದ ಬಳಲುತ್ತಿರುವವರು ಅದ್ಭುತ ಎನ್ನುವಂಥ ಸಾಧನೆ ಮಾಡಿರುವಾಗ ಎಲ್ಲವೂ ಇದ್ದು ಮನಸ್ಸನ್ನು ವಿಷಾದದ ಗೂಡಾಗಿಸಿಕೊಂಡವರು ಒಮ್ಮೆ ಜೀವನವನ್ನು ಹೊಸದೃಷ್ಟಿಯಿಂದ ನೋಡಬೇಕಲ್ಲವೇ? ಹಳೆಯ ವೈಫಲ್ಯ, ಕಹಿಗಳನ್ನು ಮರೆತು ಮುಂದೆ ಸಾಗಿದಾಗಲೇ ಹೊಸ ಹೊಳಹುಗಳು, ಜೀವನದ ಸೊಗಡಗಳು ನಮ್ಮನ್ನು ಬರಮಾಡಿಕೊಳ್ಳಲು ಸಾಧ್ಯ.

ಡೇಲ್ ಕಾರ್ನೆಗಿ ತನ್ನ ಪ್ರಸಿದ್ಧ ಕೃತಿ ‘ಹೌ ಟು ಸ್ಟಾಪ್ ವರಿಂಗ್ ಆಂಡ್ ಸ್ಟಾರ್ಟ್ ಲಿವಿಂಗ್’ನಲ್ಲಿ ಮನುಷ್ಯ ಚಿಂತೆ ಮಾಡುವುದನ್ನು ಬಿಟ್ಟು, ಜೀವನ ನಡೆಸಲು, ಅನುಭವಿಸಲು ಕಲಿತಾಗ ಚಿಂತೆಗಳಿಂದ ಮುಕ್ತಿ ಹೊಂದುತ್ತಾನೆ ಎನ್ನುತ್ತಾನೆ. ನಿಜ, ಡೇಲ್ ಮಾತಿನಲ್ಲೇ ಹೇಳುವುದಾದರೆ-ಪರಿಸ್ಥಿತಿಯನ್ನು, ಸನ್ನಿವೇಶಗಳನ್ನು ಸೂಕ್ತವಾಗಿ ಅವಲೋಕಿಸುವುದು ಮತ್ತು ವಿಶ್ಲೇಷಿಸುವುದರಿಂದ ಸಮಸ್ಯೆಯನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಶಕ್ಯವಾಗುತ್ತದೆ. ಮುಂದಿನ ನಡೆ ತುಂಬ ಮುಖ್ಯವಾದದ್ದು. ಸಕಾರಾತ್ಮಕ ಮನೋಭಾವವನ್ನು ಸೃಜಿಸಿಕೊಳ್ಳುವುದು. ಬಹುತೇಕರ ಪಾಲಿಗೆ ಇದು ತುಂಬ ಟಫ್ ಟಾಸ್ಕ್. ಏಕೆಂದರೆ, ಎಲ್ಲದರಲ್ಲೂ ಕೊರತೆ, ನಕಾರಾತ್ಮಕ ಅಂಶಗಳನ್ನು ಕಾಣುವ ಜನರು ಯಾವುದರಲ್ಲೂ ಸಂತೋಷ ಅನುಭವಿಸುವುದಿಲ್ಲ. ಇದಕ್ಕಾಗಿ, ದೃಷ್ಟಿಕೋನವನ್ನೇ ಬದಲಿಸಿ ನಮಗೆ ಒದಗುವ ಸಂದರ್ಭ, ಅವಕಾಶಗಳನ್ನೆಲ್ಲ ಸಕಾರಾತ್ಮಕವಾಗಿ ತೆಗೆದುಕೊಂಡರೆ ಕಷ್ಟದಲ್ಲೂ ಭರವಸೆಯ ಬೆಳಕೊಂದು ಕಾಣಿಸಿಕೊಳ್ಳುತ್ತದೆ. ಖಿನ್ನತೆ ಜಾಗತಿಕ ಪಿಡುಗಾಗಿ ಪರಿಣಮಿಸುತ್ತಿದೆ ಎಂದು ಡೇಲ್ ಆಗಲೇ ಎಚ್ಚರಿಸಿದ್ದ. ಜೀವನಪ್ರೀತಿ ಮತ್ತು ಉತ್ಸಾಹವೇ ಖಿನ್ನತೆಗೆ ಪರಿಹಾರ ಎಂದು ಮತ್ತೆ ಮತ್ತೆ ಸಾಬೀತಾಗಿದೆ.

ಸಂಬಂಜ ಅನ್ನಾದು ದೊಡ್ದು ಕನಾ…: ಒಂದಿಷ್ಟೇ ಸಂಬಂಧಗಳನ್ನು ಸ್ಥಾಪಿಸಿ ಕೊಂಡರೂ ಪರವಾಗಿಲ್ಲ. ಅದನ್ನು ಹೃದಯಪೂರ್ಣವಾಗಿ ನಿಭಾಯಿಸಬೇಕು. ತುಂಬ ಜನರು ಉತ್ತಮವಾದುದರ ಹುಡುಕಾಟದಲ್ಲಿ ಉತ್ಕ ೃ್ಟವಾದದನ್ನು ಕಳೆದು

ಕೊಂಡು ಬಿಡುತ್ತಾರೆ. ಅಷ್ಟಕ್ಕೂ, ಸಂಬಂಧಗಳನ್ನು-ಬಾಂಧವ್ಯಗಳನ್ನು ಬುದ್ಧಿಯಿಂದಲ್ಲ ಹೃದಯದಿಂದ ಬೆಸೆಯಬೇಕು. ಸಂಬಂಧ ಮತ್ತು ಸಂವೇದನೆಗಳಿಗೆ ಅದ್ಭುತವಾದ ಶಕ್ತಿ ಇದೆ. ಆದರೆ, ಆಧುನೀಕರಣದ ನಶೆಯಲ್ಲಿ ಸಂಬಂಧಗಳು ಕೃತಕಗೊಳ್ಳುತ್ತ, ಅಹಂ ಮೆರೆದಾಡುತ್ತ ನಿಜವಾದ ಸಂತೋಷ ಮರೆಯಾಗುತ್ತಿದೆ.

ಇತ್ತೀಚೆಗೆ ಎಲ್ಲೋ ಓದಿದ ಕಥೆ.

ವೃದ್ಧೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಳು. ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಕೈಯಿಂದಾದ ಪ್ರಯತ್ನ ಮಾಡಿ ಕೊನೆಗೆ ಕೈಚೆಲ್ಲಿ ‘ಈಗ ಯಾವುದೇ ಚಿಕಿತ್ಸೆ ನೀಡಿದರೂ ಅವರು ಸ್ಪಂದಿಸೋದಿಲ್ಲ. ಅವರ ಜೀವನದ ಕೆಲವೇ ದಿನಗಳು ಉಳಿದಿವೆ. ಮನೆಗೆ ಕರೆದುಕೊಂಡು ಹೋಗಿ‘ ಎಂದರು. ಮಗ-ಸೊಸೆ ಆ ವೃದ್ಧೆಯನ್ನು ನೋಡಿಕೊಳ್ಳಲು ನರ್ಸ್​ನ್ನು ನೇಮಿಸಿ ಆಫೀಸಿನ ಜಂಜಾಟದಲ್ಲಿ ಮುಳುಗಿದರು. ಹಾಸ್ಟೇಲ್​ನಲ್ಲಿದ್ದ ಪುಟ್ಟ ಮೊಮ್ಮಗ ರಜೆಗೆಂದು ಮನೆಗೆ ಬಂದವನೇ ಅಜ್ಜಿ ಬಳಿ ಹೋಗಿ ಅವಳ ತಲೆ ಮೇಲೆ ಕೈಯಾಡಿಸಿ ‘ನಿಂಗೆ ಏನೂ ಆಗಿಲ್ಲ ಅಜ್ಜಿ, ಬೇಗ ಹುಷಾರಾಗ್ತಿ‘ ಎಂದು ತನ್ನ ಬಾಲಭಾಷೆಯಲ್ಲೇ ನುಡಿದ. ನಗುವನ್ನೇ ಮರೆತಿದ್ದ ಆ ಅಜ್ಜಿಯ ಮೊಗದಲ್ಲಿ ಅಂದು ನಗು ಅರಳಿತು-ಇನ್ನೂ ಬದುಕಬೇಕು ಎಂಬ ಆಶಾವಾದವೂ ಚಿಗುರೊಡೆಯಿತು. ಸ್ವಲ್ಪ ಹೊತ್ತಲ್ಲೇ ಮತ್ತೆ ಅಜ್ಜಿ ಕೋಣೆಗೆ ಬಂದ ಮಗು ‘ನೀನು ತುಂಬ ಚೆನ್ನಾಗಿ ಅಡುಗೆ ಮಾಡ್ತಿಯಂತೆ, ನನಗಾಗಿ ಅಡುಗೆ ಮಾಡಿ ತುತ್ತು ತಿನಿಸೋದಿಲ್ವೆ?‘ ಎಂದು ಕೇಳಿತು. ಇದನ್ನು ನೋಡಿ ಗದರಿದ ನರ್ಸ್ ‘ಅವರಿಗೆ ಹುಷಾರಿಲ್ಲ ಅಂತ ಗೊತ್ತಿಲ್ವ ನಿನಗೆ, ಆಚೆ ಹೋಗು. ತೊಂದರೆ ಕೊಡಬೇಡ‘ ಎಂದಳು. ಮಗುವನ್ನು ಗದರಿಸಬೇಡ ಎಂದು ಕಣ್ಸನ್ನೆಯಲ್ಲೇ ನರ್ಸ್​ಗೆ ಸೂಚಿಸಿದಳು ಅಜ್ಜಿ. ಮರುದಿನ ಒಂದಿಷ್ಟು ಚೈತನ್ಯ ಬಂತು. ನರ್ಸ್ ನೆರವಿನಿಂದ ಸ್ನಾನ ಮಾಡಿದ ಆಕೆ ‘ನನ್ನನ್ನು ಅಡುಗೆಮನೆಗೆ ಕರೆದು ಕೊಂಡು ಹೋಗು‘ ಎಂದಳು. ಅಡುಗೆಕೆಲಸದಲ್ಲೂ ನರ್ಸ್​ನಿಂದಲೇ ಸಣ್ಣಪುಟ್ಟ ಸಹಾಯ ಪಡೆದು ಊಟ ತಯಾರಿಸಿಯೇ ಬಿಟ್ಟಳು ಅಜ್ಜಿ. ಮೊಮ್ಮಗನನ್ನು ನೆಲದ ಮೇಲೆ ಕೂರಿಸಿ, ಕೈತುತ್ತು ತಿನಿಸಿದಳು. ಅಷ್ಟರಲ್ಲೇ, ಆ ವೃದ್ಧೆಯ ಕಣ್ಣಂಚು ಒದ್ದೆಯಾದವು. ‘ಯಾಕೇ ಅಳ್ತಾ ಇದ್ದಿ’ ಎಂದು ಮಗು ಕೇಳಿದಾಗ ‘ಏನಿಲ್ಲ, ನಿನ್ನ ಅಪ್ಪನಿಗೂ ಹೀಗೆ ಕೈತುತ್ತು ಹಾಕಿದ್ದೆ. ಆಗೆಲ್ಲ ಖುಷಿಪಡ್ತಿದ್ದ. ಈಗ ಆತ ಬರೀ ದುಡ್ಡಲ್ಲೇ ಖುಷಿ ಪಡ್ತಾನೆ ಕಣಪ್ಪ, ಹುಷಾರಿಲ್ಲದ ಅಮ್ಮನನ್ನು ಮಾತನಾಡಿಸಲೂ ಆತನಿಗೆ ಪುರುಸೋತ್ತಿಲ್ಲ ನೋಡು’ ಅಂದಾಗ ಥಟ್ಟನೇ ಅಜ್ಜಿ ಕೈ ಹಿಡಿದುಕೊಂಡ ಮಗು ‘ನಾನು ಹಾಸ್ಟೇಲ್​ಗೆ ಹೋಗೋಲ್ಲ. ಇಲ್ಲೇ ಇದ್ದು ಚೆನ್ನಾಗಿ ಓದ್ತೇನೆ. ನಿನಗೆ ಔಷಧ ಕೊಟ್ಟು ಕಾಯಿಲೆ ವಾಸಿ ಮಾಡ್ತೇನೆ’ ಎಂದಿತು. ಈ ಪ್ರೀತಿಯ ಮಾತಿಗೆ, ಆಪ್ತತೆಯ ಸ್ಪರ್ಶಕ್ಕೆ ಅಜ್ಜಿ ಮತ್ತೆ ಗೆಲುವಾದಳು!! ಇದು ಒಂದು ಮನೆಯ ಕಥೆಯೇನಲ್ಲ, ಕಹಾನಿ ಘರ್ ಘರ್ ಕೀ ಎನ್ನಬಹುದೇನೋ. ಪ್ರೀತಿ ಮತ್ತು ಸಂಬಂಧಗಳಿಗೆ ಇರುವ ಶಕ್ತಿಯೇ ಅಸೀಮ ಮತ್ತು ಅದಮ್ಯವಾದದ್ದು. ಆಸರೆ, ಸಾಂತ್ವನದ ಒಂದು ಮಾತು, ಏನೇ ಆಗಲಿ ಕಷ್ಟವನ್ನು ಮೀರಿ ಬೆಳೆಯೋಣ ಎಂಬ ಭಾವ, ನಮ್ಮವರು ಎಂಬ ಕಳಕಳಿ, ಸಮಷ್ಟಿಯನ್ನು ಸಂವೇದನೆಯಿಂದ ಕಾಣುವ ದೃಷ್ಟಿಕೋನ… ಇದೆಲ್ಲವೂ ಅಸಾಧಾರಣ ಪರಿವರ್ತನೆಗೆ ನಾಂದಿ ಹಾಡಬಲ್ಲವು. ಕೊರಗುವುದನ್ನು ಬಿಟ್ಟು, ಬಾಳುವುದನ್ನು ಕಲಿತು, ಇತರರಿಗೂ ಖುಷಿ ಹಂಚುತ್ತ ಸಾಗುವುದೇ ನಿಜವಾದ ದೀಪಾವಳಿ. ಈ ಬಾರಿಯ ಹಬ್ಬಕ್ಕೆ ಇಂಥ ಬೆಳಕು ನಮ್ಮ-ನಿಮ್ಮದಾಗಲಿ.

ಯಾರೋ, ಕೇಳಿದರಂತೆ ಜೀವನಕ್ಕೇನು ಅರ್ಥವಿದೆ ಅಂತ. ಅದಕ್ಕೆ ಚಿಂತಕ ನೀಡಿದ ಚೆಂದದ ಉತ್ತರ- ಅರ್ಥ ನೀಡಲೆಂದೇ ಆ ಜೀವನವನ್ನು ನಮಗೆ ಭಗವಂತ ನೀಡಿದ್ದಾನೆ. ಹಾಗಾಗಿ, ಜೀವನಕ್ಕೆ ಅರ್ಥ, ಬಣ್ಣ, ಬೆಳಕು ತುಂಬೋಣ. ಏನಂತೀರಿ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top