Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಹಾಸ್ಯ ಸಾಹಿತ್ಯಕ್ಕೆ ಓದುಗರೇ ವಿಮರ್ಶಕರು…

Thursday, 29.06.2017, 3:00 AM       No Comments

ಯಾವುದೇ ಭಾಷೆಯ ಸಾಹಿತ್ಯಪ್ರಕಾರವೊಂದು ಪುಷ್ಟಿಗೊಂಡು ಬೆಳೆದು ಬರಬೇಕಾದರೆ ಆ ಪ್ರಕಾರವನ್ನು ಆದರಿಸಿ ಆಸ್ವಾದಿಸುವ ಓದುಗವರ್ಗದ ಒತ್ತಾಸೆ ಒಂದು ಕಾರಣವಾದರೆ, ಆ ಪ್ರಕಾರದ ಕೃತಿಗಳನ್ನು ವಿಮರ್ಶೆಯ ಮಾನದಂಡಗಳಿಂದ ವಿಶ್ಲೇಷಿಸಿ ಮೌಲ್ಯಮಾಪನ ಮಾಡಿ, ದೋಷಗಳನ್ನೂ ಗುಣಗಳನ್ನೂ ಎತ್ತಿ ತೋರಿಸುತ್ತ ಮಾರ್ಗದರ್ಶನ ಮಾಡಬಲ್ಲ ವಿಮರ್ಶಕರು ಇನ್ನೊಂದು ಕಾರಣವಾಗಿರುತ್ತಾರೆ. ಈ ಬಗೆಯ ವಿಶ್ಲೇಷಣೆ ಆಯಾ ಪ್ರಕಾರದ ಕೃತಿಗಳ ರಚನೆಕಾರರಾದ ಕವಿಗಳಿಗೆ, ಕತೆಗಾರ ರಿಗೆ ಅಥವಾ ಇನ್ಯಾವುದೇ ಪ್ರಕಾರದ ಬರಹಗಾರರಿಗೆ ನೈತಿಕ ಧೈರ್ಯವನ್ನು ತುಂಬುತ್ತ, ತಮ್ಮ ಬರವಣಿಗೆಯನ್ನು ಇನ್ನೂ ಉತ್ತಮಗೊಳಿಸಿಕೊಳ್ಳುವ ಬಗೆ ಹೇಗೆ ಎಂಬ ಚಿಂತನೆಗೆ ಸದಾ ಅವರನ್ನು ಪ್ರೇರೇಪಿಸುತ್ತಿರುತ್ತದೆ. ಒಟ್ಟು ಸಾಹಿತ್ಯದ ಸಮಗ್ರವಾದ ಬೆಳ ವಣಿಗೆಯಲ್ಲಿ ವಿಮರ್ಶಕರು ಈ ಕಾರಣದಿಂದಾಗಿಯೇ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಹಿತ್ಯ ಚರಿತ್ರೆಯಲ್ಲಿ ವಿಮರ್ಶೆಗೂ ಪ್ರಮುಖ ಸ್ಥಾನ ಸಲ್ಲುವುದು ಇದೇ ಕಾರಣಕ್ಕೆ.

ಆದರೆ, ಕನ್ನಡದ ಹಾಸ್ಯ ಸಾಹಿತ್ಯಕ್ಕೆ ಈ ‘ಭಾಗ್ಯ’ವೇ ದೊರಕಿಲ್ಲ. ನವೋದಯ ಕಾಲದ ಪ್ರಸಿದ್ಧ ಹಿರಿಯ ಸಾಹಿತಿಗಳನೇಕರು ತಮ್ಮ ತಮ್ಮ ಸ್ವಂತಕ್ಷೇತ್ರದ ಬರವಣಿಗೆಯ ಜತೆಗೆ ಲಲಿತ ಪ್ರಬಂಧಗಳನ್ನೋ ಹರಟೆಗಳನ್ನೋ ಬರೆಯುತ್ತಿದ್ದರು. ಉದಾಹರಣೆಗೆ, ಕುವೆಂಪು ಅವರ ಕಾದಂಬರಿಗಳ ಚರ್ಚೆ ನಡೆದಷ್ಟೇ ವಿಸõತವಾಗಿ ಅವರ ಲಘು ಲಲಿತಪ್ರಬಂಧಗಳು, ಹಾಸ್ಯಬರಹಗಳು (ಅಜ್ಜಯ್ಯನ ಅಭ್ಯಂಜನ… ಇತ್ಯಾದಿ) ರ್ಚಚಿಸಲ್ಪಡುತ್ತಿದ್ದವು. ಬೇಂದ್ರೆಯವರ ಹರಟೆಗಳು ಓದುಗರಿಗೆ ಪರಿಚಿತವಾಗಿದ್ದವು. ಬೇರೆ ಪ್ರಕಾರಗಳಿಗೆ ಮನಸ್ಸು ಮಾಡದ ಹಿರಿಯ ಸಾಹಿತಿಗಳನೇಕರು ಪ್ರಸಿದ್ಧರಾಗಿದ್ದು ತಮ್ಮ ಹಾಸ್ಯ ಸಾಹಿತ್ಯ ಪ್ರಕಾರದ ಕೃಷಿಯಿಂದಲೇ. ಕೈಲಾಸಂ, ದಾಶರಥಿ ದೀಕ್ಷಿತ್, ನಾಡಿಗೇರ ಕೃಷ್ಣರಾಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾ. ಶಿವರಾಂ, ನಾ. ಕಸ್ತೂರಿ, ಬೀಚಿ, ಕೇಫ, ಅ.ರಾ.ಸೇ., ಅ.ರಾ. ಮಿತ್ರ, ಟಿ. ಸುನಂದಮ್ಮ… ಹೀಗೆ ನಗೆಸಾಹಿತ್ಯದ ದಂಡೊಂದು (ಸಮಯಾನುಕ್ರಮವಾಗಿ ಹೊಂದಿಸಿಲ್ಲ) ನಿರ್ವಣಗೊಂಡಿದ್ದು ಅಂದಿನ ಪ್ರಮುಖ ಹಾಸ್ಯಪತ್ರಿಕೆಯಾಗಿದ್ದ ‘ಕೊರವಂಜಿ’ಯಲ್ಲಿ ಇವರೆಲ್ಲ ನಿಯತವಾಗಿ ಬರೆಯುತ್ತಿದ್ದರು. ‘ಕೊರವಂಜಿ’ ಬರುವ ದಿನದಂದು ಅದನ್ನು ಓದಲು ಮನೆಮಂದಿಯೊಳಗೆ ಸ್ಪರ್ಧೆ ಏರ್ಪಡುತ್ತಿದ್ದುದನ್ನು ನೆನಪಿಸಿಕೊಳ್ಳುವವರಿದ್ದಾರೆ (ಅವರೆಲ್ಲ ಈಗ ಎಪ್ಪತ್ತು ದಾಟಿದವರು). ಕನ್ನಡಿಗರಿಗೆ ಗಹಗಹಿಸಿ ನಗಲು ಕಲಿಸಿದ ಅನೇಕ ಹಾಸ್ಯಕೃತಿಗಳು ಈ ಹಾಸ್ಯಸೂರಿಗಳಿಂದ ರಚಿತವಾದವು. ಜನಮನ್ನಣೆ ಗಳಿಸಿದ ಈ ಕೃತಿಗಳು ವಿದ್ವಾಂಸರಿಂದಲೂ ವಿಮರ್ಶಕರಿಂದಲೂ ಮುಕ್ತ ಪ್ರಶಂಸೆಗೊಳಪಟ್ಟು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಿಸಲ್ಪಟ್ಟಿದ್ದು ಇತಿಹಾಸ. ಹಾಸ್ಯ ಸಾಹಿತ್ಯಕ್ಕೆ ಆ ಮಟ್ಟಿಗೆ ಅದು ಉತ್ಕರ್ಷದ ಕಾಲ.

ನಂತರದ ಕಾಲಘಟ್ಟದಲ್ಲಿ (70ರ ದಶಕ?) ನವೋದಯ, ಪ್ರಗತಿಶೀಲ ಸಂಪ್ರದಾಯಗಳನ್ನು ಮೆಟ್ಟಿನಿಂತು ‘ನವ್ಯ’ ಪಂಥ ವಿಜೃಂಭಿಸುವ ಕಾಲಕ್ಕೆ ವಿನೋದ ಸಾಹಿತ್ಯವನ್ನು ವ್ಯವಸ್ಥಿತವಾಗಿ ಅಲಕ್ಷಿಸಿ ಮೂಲೆಗಟ್ಟಿದರೆಂದೇ ಹೇಳಬಹುದು. ಹಾಸ್ಯವೆಂದರೆ ಮುಖ ಸಿಂಡರಿಸುವ ಬುದ್ಧಿವಂತರು ಹುಟ್ಟಿಕೊಂಡ ಕಾಲ ಇದು. ವಿಮರ್ಶೆಯ ಪರಿಧಿಯೊಳಗೆ ಪ್ರವೇಶಿಸುವ ಅವಕಾಶವೇ ಹಾಸ್ಯಕೃತಿಗಳಿಗೆ ಪ್ರಾಪ್ತವಾಗಲಿಲ್ಲ. ಪೂರ್ಣಚಂದ್ರ ತೇಜಸ್ವಿ, ಚಂಪಾರಂಥ ಬೆರಳೆಣಿಕೆಯ ಮಂದಿ ನವ್ಯದಲ್ಲಿದ್ದೂ ಹಾಸ್ಯ ಬರೆಯಬಲ್ಲ ಕೆಲವೇ ಲೇಖಕರಾಗಿ ಗುರುತಿಸಲ್ಪಡುತ್ತಿದ್ದರು.

ತೀವ್ರವಾದ ಚುಚ್ಚುವಿಕೆಯಿಂದ ಕೂಡಿದ, ಭರ್ತ್ಸನೆ, ನಿಂದನೆ, ಕುಚೋದ್ಯಗಳನ್ನೇ ಬಂಡವಾಳವಾಗಿಸಿಕೊಂಡ ‘ವಿಡಂಬನೆ’ಯೊಂದೇ ಹಾಸ್ಯ ಪ್ರಕಾರದಲ್ಲಿ ಅಸ್ತಿತ್ವ ಪಡೆದುಕೊಂಡ ಅಸ್ತ್ರವಾಯಿತೇ ವಿನಾ, ಸ್ವಸ್ಥ ಮನಸ್ಥಿತಿಯಿಂದ ತಂಗಾಳಿಯಲ್ಲಿ ಬೆಳದಿಂಗಳಲ್ಲಿ ವಿಹಾರ ಮಾಡಿಸಬಲ್ಲ (‘ವಾಕ್’ ಕರೆದುಕೊಂಡು ಹೋಗಬಲ್ಲ) ಸಾಹಿತ್ಯದ ಇತರ ಪ್ರಕಾರಗಳನ್ನು ಓದಿ ಅರಗಿಸಿಕೊಂಡವರ ಲಘುಧಾಟಿಯ ಲಲಿತ ಪ್ರಬಂಧಗಳು ವಿಮರ್ಶಕರ ಪಟ್ಟಯಿಂದ ಕಾಣೆಯಾಗತೊಡಗಿದವು.

ತೀವ್ರ ಸ್ವಮರುಕ, ಹತಾಶೆ, ರೋಷ, ರೊಚ್ಚುಗಳಿದ್ದರೆ ಮಾತ್ರ ಸಮಕಾಲೀನ ಸಂವೇದನೆಗಳುಳ್ಳ ಬರಹಗಳೆಂದು ಬಿಂಬಿಸುವ ಬೌದ್ಧಿಕ ಕಸರತ್ತುಗಳು ನಡೆಯುತ್ತಿದ್ದ ಈ ಕಾಲಘಟ್ಟದಲ್ಲಿ ಹಾಸ್ಯ ಸಾಹಿತ್ಯವನ್ನು ಬಿಡದೇ ಪುರಸ್ಕರಿಸಿದ್ದು ಪತ್ರಿಕೆಗಳು ಮತ್ತು ಓದುಗರು. ಕನ್ನಡದ ಪ್ರತಿ ಪತ್ರಿಕೆಯೂ ತನ್ನ ವಾರದ ಪುರವಣಿ, ವಾರ್ಷಿಕ ವಿಶೇಷ ಸಂಚಿಕೆಗಳಲ್ಲಿ ಆಹ್ವಾನಿತ ನಗೆಬರಹಗಳನ್ನು ಪ್ರಕಟಿಸುತ್ತಲೇ ಬಂದವು. ಕನ್ನಡದ ಪ್ರತಿಷ್ಠಿತ ಪತ್ರಿಕೆಗಳು ದೊಡ್ಡ ಮೊತ್ತದ ಬಹುಮಾನಗಳನ್ನಿತ್ತು ಲಲಿತ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸತೊಡಗಿದವು. ಹೊಸ ತಲೆಮಾರೊಂದು ಹಾಸ್ಯವನ್ನೇ ನೆಚ್ಚಿಕೊಂಡು ಬರೆಯತೊಡಗಿತು. ಎಂ.ಎಸ್. ನರಸಿಂಹ ಮೂರ್ತಿ, ಎಂ.ಪಿ. ಮನೋಹರ ಚಂದ್ರನ್, ಬಾಗೂರು ಚಂದ್ರು, ಆನಂದ, ಭುವನೇಶ್ವರಿ ಹೆಗಡೆ, ಸೂರಿ ಹಾರ್ದಳ್ಳಿ… ಹೀಗೆ ಹಲವು ಹೆಸರುಗಳು ಹಾಸ್ಯಸಾಹಿತ್ಯ ನಿರ್ವಣದಲ್ಲಿ ತೊಡಗಿಕೊಂಡವು. ಇವರು ಬರೆದದ್ದೆಲ್ಲ ಶ್ರೇಷ್ಠ ಹಾಸ್ಯ ಬರಹಗಳೆಂದೇನೂ ಹೇಳಲಾಗದು (ಉಳಿದ ಪ್ರಕಾರಗಳಲ್ಲಿ ಇರುವಂತೆಯೇ). ಇಲ್ಲಿಯೂ ಜೊಳ್ಳು, ಕಾಳು ಇದ್ದವು, ಇರುತ್ತವೆ. ಆದರೆ ಈ ಬೆಳೆಯನ್ನು ವಿಮರ್ಶೆಗೊಳಪಡಿಸಿ ‘ಇದು ಹೀಗೆ, ಇದು ಹೀಗಲ್ಲ’ ಎಂಬ ಚರ್ಚೆಯೇ ಕನ್ನಡದಲ್ಲಿ ನಡೆಯಲಿಲ್ಲ. ದುಂಡಿರಾಜರಂಥ ಹನಿಗವಿಗಳು ಹಾಸ್ಯ ಚುಟುಕುಗಳನ್ನು ರಚಿಸುತ್ತಲೇಹೋದರು, ಪತ್ರಿಕೆಗಳು ಪ್ರಕಟಿಸುತ್ತಲೇಹೋದವು.

ಈ ನಡುವೆ, ಕಳೆದ ಒಂದೂವರೆ ದಶಕದ ಹಿಂದೆ ಹಾಸ್ಯವು ‘ಓದುವ’ ಕಣ್ಗಳನ್ನು ದಾಟಿ, ಕೇಳುವ ಕಿವಿಗಳಿಗೆ ವರ್ಗಾಯಸಲ್ಪಟ್ಟು ‘ಶ್ರಾವ್ಯ-ದೃಶ್ಯ’ ಮಾಧ್ಯಮಗಳಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿತು. ‘ಅಪರಂಜಿ ಹಾಸ್ಯೋತ್ಸವ’ ಇದಕ್ಕೆ ನಾಂದಿಹಾಡಿತು. ಪ್ರತಿವರ್ಷ ಡಿಸೆಂಬರ್ 25ರಂದು ಹಿರಿಯ ಹಾಸ್ಯಸಾಹಿತಿ ಅ.ರಾ. ಮಿತ್ರರ ಉಸ್ತುವಾರಿಯಲ್ಲಿ, ಆಗಿಹೋದ ಹಾಸ್ಯಸಾಹಿತಿಯೋರ್ವರ ನೆನಪಿನಲ್ಲಿ ಬೆಂಗಳೂರಿನಲ್ಲಿ ಹಾಸ್ಯೋತ್ಸವ ಆಯೋಜನೆ ಆಗತೊಡಗಿತು. ಅಣಕವಾಡುಗಳು, ನಗೆನಾಟಕಗಳು, ನಗೆಮಾತುಗಳು… ವಿವಿಧ ಪ್ರಕಾರದ ಹಾಸ್ಯದ ಈ ಉಚಿತ ರಸದೌತಣಕ್ಕೆ ಜನ ಮುಗಿಬಿದ್ದು ಬಂದು ಆಸ್ವಾದಿಸತೊಡಗಿದರು. ಕ್ರಮೇಣ ಈ ಹಾಸ್ಯೋತ್ಸವಗಳು ಬೆಂಗಳೂರು ನಗರದಿಂದ ಕರ್ನಾಟಕದ ಮೂಲೆಮೂಲೆಗಳಿಗೂ ವ್ಯಾಪಿಸತೊಡಗಿದವು. ಟ.ವಿ. ಚಾನಲ್ಲುಗಳು ಈ ನಗೆಹಬ್ಬಗಳನ್ನು ಪ್ರಸಾರ ಮಾಡತೊಡಗಿ, ಹಾಸ್ಯಲೇಖಕರಿಗಿಂತ ಹಾಸ್ಯಕಲಾವಿದರು ಹೆಚ್ಚು ಜನಪ್ರಿಯರಾದರು. ಮೂರು ಗಂಟೆಗಳ ಕಾಲ ಜನ ಬಿದ್ದುಬಿದ್ದು ನಕ್ಕು ಎದ್ದು ಬರತೊಡಗಿದರು. ಈ ಇನ್​ಸ್ಟಂಟ್ ಜೋಕುಗಳು ಪ್ರಸಿದ್ಧಿಗೆ ಬಂದು ಒಂದಷ್ಟು ವರ್ಷ ಉತ್ಕರ್ಷದ ಸ್ಥಿತಿ ಕಂಡವು. ಕೆಲವೇ ಕೆಲವು ಹಾಸ್ಯಲೇಖಕರು, ಹಾಸ್ಯಲೇಖನಗಳನ್ನೂ ಬರೆಯುತ್ತ ಹಾಸ್ಯಭಾಷಣಗಳನ್ನೂ ಮಾಡುತ್ತ ಇಲ್ಲಿಯೂ ಅಲ್ಲಿಯೂ ಸಲ್ಲುತ್ತ ಬಂದರು.

ಈ ನಗೆ ಕಲಾವಿದರು ಜನರನ್ನು ನಗಿಸುವಲ್ಲಿ ನಿಸ್ಸೀಮರು. ಕಲಾತ್ಮಕವಾಗಿ ನಗೆಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿ ನಗೆಬಾಂಬುಗಳನ್ನು ಸಿಡಿಸುತ್ತಾರೆ. ಆದರೆ ಇವರು ತಮ್ಮ ನಗೆಸರಣಿಗೆ ಆಯ್ದುಕೊಳ್ಳುವ ಮೂಲಪ್ರಸಂಗಗಳು, ಮೇಲೆ ಪ್ರಸ್ತಾಪಿಸಿರುವ ಬೀಚಿ, ನಾಡಿಗೇರ, ಕಸ್ತೂರಿಯವರಂಥ ಹಾಸ್ಯಸಾಹಿತಿಗಳ ಬರವಣಿಗೆಯನ್ನೇ. ಈ ಮೂಲಕವಾದರೂ ಹಾಸ್ಯದಿಗ್ಗಜಗಳ ನಗೆಧಾರೆಗಳು ಪ್ರೇಕ್ಷಕರಿಗೆ ಲಭ್ಯವಾಗತೊಡಗಿ ನಗುವಿನ ಮಹತ್ವ ಹೆಚ್ಚತೊಡಗಿದೆ. ನಗುವಿಗೀಗ ಔಷಧೀಯ ಹಾಗೂ ವಾಣಿಜ್ಯ ಸ್ಥಾನ ಪ್ರಾಪ್ತವಾಗತೊಡಗಿದೆ. ಆದರೆ ಈ ಪ್ರಕಾರದ ‘ಆಡುನಗು’ವಿಗೆ ಪುನರಾವರ್ತನೆಯ ಸ್ಥಾಗಿತ್ಯ ಅನಿವಾರ್ಯ. ನಗೆ ಕಲಾವಿದರದು ಬೇರೆಯವರ ಕೃತಿಗಳಿಂದ ಆರಿಸಿ ತಂದ ನಗೆಪ್ರಸಂಗಗಳಾದ್ದರಿಂದ, ಹೊಸದು ಹುಟ್ಟುವುದು ಅಸಾಧ್ಯ. ‘ಕೇಳಿದ್ದೇ ಕೇಳುವುದು’ ಎಂಬ ದೋಷಾರೋಪಣೆಗಳು ‘ನಗೆಹಬ್ಬ’ಗಳಿಗೆ ಅಂಟಿಕೊಂಡವು. ನಗೆಹಬ್ಬಗಳಿಗೆ ದಶಕಗಳ ಹಿಂದೆ ಇದ್ದ ಉತ್ಕರ್ಷದ ಬೇಡಿಕೆ ಇಂದಿಲ್ಲ. ಈ ದೃಷ್ಟಿಯಿಂದ ಇಂದು ಕನ್ನಡ ಹಾಸ್ಯಸಾಹಿತ್ಯ ಪುನಃ ಕವಲುದಾರಿಯಲ್ಲಿ ನಿಂತಿರುವುದಂತೂ ಹೌದು. ‘ನೋಡುಗ’ರನ್ನು ಓದುಗರನ್ನಾಗಿಸಿ ಉಳಿಸಿಕೊಳ್ಳುವುದು ಇಂದಿನ ಹಾಸ್ಯಲೇಖಕರ ಮುಂದಿರುವ ಸವಾಲು. ಹಾಸ್ಯಸಾಹಿತಿ ತನ್ನ ಓದುಗರ ಎದುರುಬಂದು ನಿಲ್ಲುವಂತಾದರೆ ಈ ಎಲ್ಲ ದುಗುಡಗಳಿಗೂ ಅವರೇ ಉತ್ತರ ನೀಡಬಲ್ಲರು. ಸಮಾಧಾನ, ಸಾಂತ್ವನ, ಉತ್ತೇಜನಗಳನ್ನು ಮೊಗೆಮೊಗೆದು ನೀಡಬಲ್ಲರು ಎಂಬನುಭವ ಕಳೆದ ಕೆಲ ದಿನಗಳ ಹಿಂದೆ ನನಗೆ ನಿಚ್ಚಳವಾಗಿ ಅರಿವಾಯಿತು. ಮೂರು ದಶಕಗಳಿಂದ ಹಾಸ್ಯಲೇಖನಗಳನ್ನೇ ಬರೆದುಕೊಂಡು, ಭಾಷಣಗಳಲ್ಲಿಯೂ ಹಾಸ್ಯವನ್ನೇ ಬಳಸಿಕೊಂಡು ಜನರ ಜತೆ ಸಂವಹಿಸುತ್ತ ಬಂದ ನನಗೆ ಮಂಗಳೂರಿನ ಕೆಲವು ಸಾಹಿತ್ಯಾಸಕ್ತ ಯುವಕ-ಯುವತಿಯರು ‘ನಿಮ್ಮ ನಿವೃತ್ತಿಯ ಸಮಯಕ್ಕೆ ನಿಮ್ಮ ಓದುಗರ ಸಮ್ಮುಖದಲ್ಲಿ ನಿಮಗೊಂದು ಸಾರ್ವಜನಿಕ ಅಭಿನಂದನಾ ಸಮಾರಂಭ ಏರ್ಪಡಿಸಿ, ಅಭಿನಂದನ ಗ್ರಂಥ ಸಮರ್ಪಣೆ ಮಾಡುತ್ತೇವೆ. ಬೇಡ ಎನ್ನುವಂತಿಲ್ಲ’ ಎಂದು ತಾಕೀತು ಮಾಡಿದರು. ಒಲ್ಲನೆನ್ನಲು ಬಿಡಲೇ ಇಲ್ಲ.

110 ಜನ ವಿದ್ವಾಂಸರು, ವಿಮರ್ಶಕರು, ಓದುಗರು, ಸಾಹಿತಿಗಳು, ಸಹೋದ್ಯೋಗಿಗಳು, ತವರಿನವರು, ಮನೆಯವರು, ಬಂಧುಗಳು, ಸ್ನೇಹಿತರು… ಎಲ್ಲರಿಂದ ಲೇಖನಗಳನ್ನು ಬರೆಸಿ ಸಂಗ್ರಹಿಸಿ ಸುಂದರವಾದ ಅಭಿನಂದನ ಗ್ರಂಥ ‘ಬನಸಿರಿ’ಯನ್ನು ಸಿದ್ಧಪಡಿಸಿ ನನ್ನೂರ ಕಾಡಿನ ನಡುವೆ ನನ್ನದೊಂದು ಉದ್ಭವಚಿತ್ರವಿಟ್ಟು ಸುಂದರ ಮುಖಪುಟ ವಿನ್ಯಾಸಗೊಳಿಸಿದರು. ಮೂವತ್ತೆರಡು ವರ್ಷ ನನ್ನನ್ನು ಪೊರೆದ ಮಂಗಳೂರಿನ ಕೆಂಪುಕೋಟೆ ವಿಶ್ವವಿದ್ಯಾಲಯ ಕಾಲೇಜಿನಿಂದ ನಾನು ನಿರ್ಗಮಿಸುತ್ತಿರುವ ಚಿತ್ರವನ್ನು ಹಿಂಬದಿಯ ಪುಟದಲ್ಲಿಟ್ಟರು. ಇಡೀ ನನ್ನ ಜೀವನಚಕ್ರವನ್ನೇ ಸಂಕೇತಿಸುವಂತೆ ವಿನ್ಯಾಸಗೊಂಡ ಈ ಅಭಿನಂದನ ಗ್ರಂಥವನ್ನು ನನ್ನ ಜಿಲ್ಲೆಯ ‘ಕನ್ನಡ ಭುನೇಶ್ವರಿ’ ಎಂದೇ ಪ್ರಸಿದ್ಧಳಾದ ಭುವನಗಿರಿಯ ಭುವನೇಶ್ವರಿ ದೇವಿಯ ವಿಗ್ರಹದ ಜತೆ ಪಲ್ಲಕ್ಕಿಯಲ್ಲಿಟ್ಟು ವೇದಿಕೆಗೆ ಹೊತ್ತುತಂದರು, ನನ್ನ ವಿದ್ಯಾರ್ಥಿಗಳು. ಇದನ್ನು ಊಹಿಸದಿದ್ದ ನನ್ನ ಕಣ್ಣುಗಳು ತೇವಗೊಂಡವು. ಇಡೀ ಕಿಕ್ಕಿರಿದ ಸಭಾಂಗಣ ಎದ್ದುನಿಂತು ಗೌರವ ಗ್ರಂಥಕ್ಕೆ ಗೌರವ ಸಲ್ಲಿಸಿತು. ಒಬ್ಬ ಲೇಖಕಿಗೆ ಇದಕ್ಕಿಂತ ದೊಡ್ಡ ಗೌರವ ಸಲ್ಲಿಸುವುದು ಸಾಧ್ಯವೇ?

ಮಂಗಳೂರಿನ ಲಯನ್ಸ್ ಸೇವಾಮಂದಿರದಲ್ಲಿ ಕಾರ್ಯಕ್ರಮ ನಿಗದಿತ ಅವಧಿಗೆ ಮೊದಲೇ ಪ್ರಾರಂಭವಾಗಿತ್ತು. ರಾಜಕಾರಣಿಗಳು, ಅಧಿಕಾರಿಗಳು, ಮುಖಂಡರು ಯಾರೂ ಇಲ್ಲದ ಸಾದಾ ಸಾಹಿತಿಗಳ ಸಂಗಮ ವೇದಿಕೆಯ ಮೇಲೆ. ಹೆಣ್ಣು-ಗಂಡು ಭೇದವಿಲ್ಲದೆ ಹಾಲ್​ನ ಕುರ್ಚಿಗಳನ್ನು ತುಂಬಿ ಕುಳಿತವರೆಲ್ಲ ನನ್ನ ಓದುಗರು. ಎರಡು-ಮೂರು ದಶಕಗಳಿಂದ ನನ್ನ ಭಾಷಣ ಏರ್ಪಡಿಸಿ ಕೇಳಿದ ಕೇಳುಗರು. ಕೂರಲು ಕುರ್ಚಿ ಸಿಗದೇ ಶಿಸ್ತಿನಿಂದ ಹಿಂದೆ ನಿಂತವರೆಲ್ಲ ನನ್ನ ವಿದ್ಯಾರ್ಥಿಗಳು. ಸನ್ಮಾನಪತ್ರ, ಶಾಲು, ಹಾರಗಳು ನನ್ನನ್ನು ವಿಚಲಿತಳನ್ನಾಗಿಸಲಿಲ್ಲ. ಕೊನೆಯ ಕ್ಷಣದವರೆಗೂ ಎದ್ದುಹೋಗದೆ ಅಭಿನಂದನೆಯ ನುಡಿಗಳನ್ನಾಲಿಸಿ ವೇದಿಕೆಗೆ ಬಂದು ಅಲಂಗಿಸಿ, ಕೈಮುಗಿದು, ಪ್ರೀತಿ ವ್ಯಕ್ತಪಡಿಸಿ… ಅಷ್ಟು ಸಂಖ್ಯೆಯಲ್ಲಿ ನನ್ನ ಓದುಗರು ಎದುರಾಗಿ ಪ್ರೀತಿಯ ಮಳೆ ಸುರಿಸಿದ್ದು ನನ್ನನ್ನು ವಿಚಲಿತಳನ್ನಾಗಿಸಿತು.

‘ಈ ಸನ್ಮಾನ, ಈ ಅಭಿನಂದನೆ ಸಲ್ಲುವುದು ನನಗಲ್ಲ; ಕನ್ನಡ ಹಾಸ್ಯಸಾಹಿತ್ಯಕ್ಕೆ ಸಂದ ಗೌರವ ಇದು’ ಎಂದಷ್ಟೆ ಹೇಳಲು ಸಾಧ್ಯವಾಯ್ತು. ವಿಮರ್ಶಕರು ಹಾಸ್ಯಸಾಹಿತ್ಯವನ್ನು ಲಘುವಾಗಿ ಪರಿಗಣಿಸಿ ಗಂಭೀರವಾಗಿ ಉಪೇಕ್ಷಿಸಿದ್ದಾರೆ. ಆದರೆ ಸಹೃದಯಿ ಓದುಗರು ನನ್ನ ಹಾಸ್ಯಸಾಹಿತ್ಯವನ್ನು ಓದಿ ತಿದ್ದಿತೀಡಿದ್ದಾರೆ. ಮಾರ್ಗದರ್ಶನ ಮಾಡಿದ್ದಾರೆ. ಭಾಷಣಗಳನ್ನೂ ಆಕಾಶವಾಣಿಯ ಕಾರ್ಯಕ್ರಮಗಳನ್ನೂ ಕೇಳಿ ಅಭಿಪ್ರಾಯ ವ್ಯಕ್ತಪಡಿಸಿ ಫೋನಿನಲ್ಲಿ ತಿಳಿಹೇಳಿದವರಿದ್ದಾರೆ. ಇವರಲ್ಲವೆ ನನ್ನ ವಿಮರ್ಶಕರು? ಆದ್ದರಿಂದ ‘ಹಾಸ್ಯಸಾಹಿತ್ಯಕ್ಕೆ ಓದುಗರೇ ವಿರ್ವಕರು’ ಎಂದು ಹೇಳಿ ಕೈಮುಗಿದು ಕುಳಿತುಬಿಟ್ಟೆ. ದಶಕಗಳಿಂದ ಹೆಪ್ಪುಗಟ್ಟಿ ಕೂತ ನೋವೊಂದು ಕರಗಿ ಹರಿದ ಅನುಭವವಾಗಿ ಹಗುರಾದೆ. ಓದುಗರಿಗಲ್ಲದೆ ಇನ್ಯಾರ ಅಭಿಮಾನಮಾರುತಕೆ ನತಮಸ್ತಕಳಾಗುತ್ತಾ ಬಾಗಲಿ ನಾನು?

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

 

Leave a Reply

Your email address will not be published. Required fields are marked *

Back To Top