Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಹಸಿರುವಾದಿಯ ಅಸಹನೆ ಹಾಗೂ ಗೀತಾಕುಮಾರಿಯ ಉತ್ತರ!

Saturday, 08.04.2017, 5:00 AM       No Comments

ಉನ್ನತ ಪದವಿ ಗಳಿಸಿ ಪ್ರತಿಷ್ಠಿತ ನೌಕರಿಗೆ ಸೇರಿದ್ದರೂ ಅರ್ಧತಿಂಗಳಿಗೂ ಸಾಲದಷ್ಟು ಸಂಬಳ ಪಡೆಯುತ್ತಿರುವವರು ಒಂದೆಡೆಯಾದರೆ, ಸೀಮಿತ ವಿದ್ಯೆಯಿದ್ದೂ ಗಳಿಕೆಯ ವಿಷಯದಲ್ಲಿ ಇಂಥ ವಿದ್ಯಾವಂತರಿಗಿಂತ ಸ್ಥಿತಿವಂತರಾಗಿರುವವರು ಮತ್ತೊಂದೆಡೆ; ಈ ವೈರುಧ್ಯಕ್ಕೆ ಕಾರಣವೇನು? ಪದವಿ ಪ್ರಮಾಣಪತ್ರವನ್ನು ಅಂಗೈಗೆ ತುರುಕುವುದಷ್ಟೇ ವ್ಯವಸ್ಥೆಯ ಉದ್ದಿಶ್ಯವೇ?

‘ಈಗ ನನ್ನ ಮೊಬೈಲ್​ನಲ್ಲಿ ಇರುವುದು ಬರೀ ದಾಯಾದಿ, ಬಂಧುಗಳ ನಂಬರ್​ಗಳಲ್ಲ. ಬದಲಾಗಿ ಅಡಕೆ ತೆಗೆಯುವ ದಾಮು, ಬೋರ್ಡೆ ಸ್ಪ್ರೇ ಮಾಡುವ ರಾಂಪ, ಅಡಕೆ ಸುಲಿಯುವ ಚನಿಯ, ಕಳೆ ಕಟಾವುಮಾಡುವ ರವೀಂದ್ರ, ತೆಂಗು ಕೀಳುವ ವಿಠಲ, ಕೂಲಿ ಕೆಲಸದ ಶೀನ, ಲೋಡು ಗೊಬ್ಬರ ತರುವ ಅಬ್ಬಾಸ್, ಗಾರೆ ಕೆಲಸದ ಮೇಸ್ತ್ರಿ ಶ್ರೀಧರ, ತೋಟಕ್ಕೆ ಮಣ್ಣುಹಾಕುವ ಕುಶಾಲಪ್ಪ, ಮೆಣಸು ಕೊಯ್ಯುವ ಸೋಂಪ….’- ಹೀಗೆ ಪಟ್ಟಿ ಬಿಚ್ಚಿದವರು ಯುವ ರೈತಗೆಳೆಯ ದಿಡುಪೆ ಸೋಮಶೇಖರ್. ತುಂಬಾ ತಮಾಷೆಯ ಮನುಷ್ಯ. ‘ಹಾರ್ಟ್ ಕೆಟ್ಟರೆ ಸರ್ಜರಿಗೆ ಬೇಕಾದ ಡಾಕ್ಟರ್ ಸಿಗುತ್ತಾರೆ. ಮನೆ ಕಟ್ಟಬೇಕಾ? ಒಂದು ಕ್ಷಣಕ್ಕೆ ಹತ್ತು ಇಂಜಿನಿಯರ್ ಸಿಗುತ್ತಾರೆ. ವಕೀಲರು, ಮೇಷ್ಟ್ರುಗಳು, ಕ್ಲರ್ಕಗಳು ಯಾರು ಬೇಕು ಹೇಳಿ. ಒಂದು ಜಾಹೀರಾತಿಗೆ ನೂರು ಮಂದಿ ಕ್ಯೂ ನಿಲ್ಲುವ ಕಾಲವಿದು. ಆದರೆ ನನ್ನ ಹಳ್ಳಿಯಲ್ಲಿ ಕೃಷಿಗೆ ಬೇಕಾದ ಒಬ್ಬ ಅಡಕೆ ತೆಗೆಯುವವ, ಬೋರ್ಡೆ ಬಿಡುವವ, ಮರದ ಕೆಲಸದವ, ಗಾರೆ ಕೆಲಸದವ, ತೆಂಗು ಕೀಳುವವ, ಅಡಕೆ ಸುಲಿಯುವವ ಸಿಗಬೇಕಾದರೆ ಪುಣ್ಯ ಮಾಡಿರಬೇಕು!’.

ಕಾಯುವ ತಾಳ್ಮೆ ಬೇಕು: ಜಗಲಿಯಲ್ಲಿ ಕೂತ ಸೋಮಶೇಖರ್ ಮಾತು ಮುಗಿಸಿರಲಿಲ್ಲ. ಅವರ ಸೆಲ್​ಗೆ ಒಂದು ಕಾಲ್ ಬಂತು. ಅದು ತೆಂಗು ಕೀಳುವ ವಿಠಲರದ್ದು. ಅವರು ಮುಂದಿನ ತಿಂಗಳು 2ನೇ ತಾರೀಖಿಗೆ ಬರುತ್ತಾರಂತೆ. ಸೋಮಶೇಖರ್ ನಿಟ್ಟುಸಿರುಬಿಟ್ಟರು. ಅವರನ್ನು ಬುಕ್ ಮಾಡಿ ಈಗಾಗಲೇ ತಿಂಗಳಾಗಿತ್ತು. ವಿಠಲಣ್ಣ ಅಷ್ಟೊಂದು ಬಿಜಿ. ಪ್ರಾಮಾಣಿಕ ಕೂಲಿಕಾರ. ಮುಂದಿನ ಇಡೀ ತಿಂಗಳು ಕಾಯುವ ತಾಳ್ಮೆ ಬೇಕು. ಹೇಳಿದ ದಿನ ಮಾತ್ರ ಬಂದೇ ಬರುತ್ತಾರೆ!

ವಿಠಲಣ್ಣ ದಿನಕ್ಕೆ 60ರಿಂದ 80 ಮರವೇರುತ್ತಾರೆ. ಮರವೊಂದಕ್ಕೆ ನಲ್ವತ್ತು ರೂಪಾಯಿ. ಪೇಟೆಯಾದರೆ 60. ಮಹಾನಗರದವರಾದರೆ ಇನ್ನೂ ಹೆಚ್ಚು, ಎಪ್ಪತೆôದು. ಲೆಕ್ಕ ಹಾಕಿ. ದಿನವೊಂದಕ್ಕೆ ಅವರ ಆದಾಯ ಮೂರರಿಂದ ನಾಲ್ಕು ಸಾವಿರ. ವರ್ಷದ ಇನ್ನೂರು ದಿನ ಅವರು ತೆಂಗಿನಮರ ಹತ್ತಿಯೇ ಹತ್ತುತ್ತಾರೆ. ವಾರ್ಷಿಕ ಆದಾಯ ಆರರಿಂದ ಏಳು ಲಕ್ಷ! ಈ ಸತ್ಯ ಮಾತ್ರ ಯಾರಿಗೂ ಗೊತ್ತಿಲ್ಲ. ಪ್ರಥಮ ಪದವಿಯಲ್ಲಿ ಓದುತ್ತಿರುವ ಅವರ ಮಗಳಿಗೆ ಸರ್ಕಾರಿ ಕಾಲೇಜಿನಲ್ಲಿ ಫೀಸು ಇಲ್ಲ. ಕಾರಣ ಕುಸುಮಾವತಿಯ ತಂದೆ ವಿಠಲರ ವಾರ್ಷಿಕ ಆದಾಯ ಬರೀ ಹನ್ನೊಂದು ಸಾವಿರ ಮಾತ್ರ! ಸರ್ಕಾರಿ ದಾಖಲೆಯಲ್ಲಿ.

ಎರಡೂವರೆ ಸಾವಿರ ದಿನಗೂಲಿ: ಕೊಪ್ಪ-ಶೃಂಗೇರಿಯ ಕಡೆ ಅಡಕೆಮರ ಹತ್ತಿ ಬೋರ್ಡೆ ಬಿಡುವವರ ದಿನಗೂಲಿ ಎರಡೂವರೆ ಸಾವಿರ ದಾಟುತ್ತದೆ ಎನ್ನುತ್ತಾರೆ ಮಲ್ನಾಡಿನ ರಾಮಚಂದ್ರ ಕಾರಂತರು. ಜತೆಗೆ ಒಬ್ಬನಲ್ಲ ಇಬ್ಬರು ಬರುತ್ತಾರೆ. ಇನ್ನೂರು ಲೀಟರ್​ನ ಒಂದು ಬ್ಯಾರಲ್ ಸ್ಪ್ರೇ ಮಾಡಲು ಎಂಟು ನೂರು ರೂಪಾಯಿ. ಇಬ್ಬರು ಸೇರಿ ದಿನಕ್ಕೆ ಆರೇಳು ಡ್ರಮ್ ಖಾಲಿಮಾಡುತ್ತಾರೆ. ಸ್ಪ್ರೇ ಭಾಗದ ತೂತು-ಕಣ್ಣು ಅವರೇ ತರುವುದು. ಆಯ್ಕೆ ಮಾಡಿ ದೊಡ್ಡ ಕಣ್ಣೇ ತರುತ್ತಾರೆ. ಬ್ಯಾರಲ್ ಮದ್ದು ಬೇಗ ಬೇಗ ಖಾಲಿಯಾಗುತ್ತದೆ. ಖಾಲಿಯಾದಷ್ಟೂ ಆದಾಯ ಹೆಚ್ಚು.

ಮಲೆನಾಡಿನಲ್ಲಿ ಅಡಕೆ ತೆಗೆಯುವ ಗೊನೆಗೌಡರದ್ದು ಬೇರೆಯೇ ಕತೆ. ಅವರಿಗೆ ಗೊನೆಲೆಕ್ಕ. ಅವರ ಆದಾಯವೂ ಕನಿಷ್ಠ ಎರಡರಿಂದ ಮೂರು ಸಾವಿರ. ಅಡಕೆ ಸುಲಿಯುವವರದ್ದೂ ಇದೇ ಕತೆ. ಕೆ.ಜಿ.ಗೆ ಹತ್ತರಿಂದ ಹದಿಮೂರು. ನೂರು ಕೆ.ಜಿ. ಸುಲಿದರೆ ಸಾವಿರದ ಮುನ್ನೂರು. ಸಾವಣೆಯ ಮೇಸ್ತ್ರಿಗೆ ದಿನಕ್ಕೆ ಮಿನಿಮಂ ಎಂಟುನೂರು. ಗುತ್ತಿಗೆ ಪಡೆದರೆ ಅವನ ಆದಾಯವೂ ಎರಡರಿಂದ ಮೇಲೆಯೇ. ಮರದ ಕೆಲಸದವರದ್ದು ಇದೇ ರೇಟು. ಯಾವುದೂ ಗೊತ್ತಿಲ್ಲದಿದ್ದರೆ ಬರೀ ಕೂಲಿಕೆಲಸ ಸಾಕು. ಅಂಥವರಿಗೂ ಈಗ ಇನ್ನೂರರಿಂದ ಆರುನೂರು ಗ್ಯಾರಂಟಿ.

ಅಗತ್ಯ ಈಡೇರಿಸಿದರೂ ಕೆಲಸಕ್ಕೆ ಬರುವುದಿಲ್ಲ: ‘ಇರಲಿ, ಇವರಿಗೆಲ್ಲಾ ಇಷ್ಟೂ ಕೊಡುವ. ಆದರೆ ಇವರ್ಯಾರು ಹೇಳಿದ ದಿನ ಬರುತ್ತಾರೆಯೇ? ನಿಷ್ಠೆ, ನಿಯತ್ತಿನಿಂದ ದುಡಿಯುತ್ತಾರೆಯೇ? ಸಮಯಪ್ರಜ್ಞೆ ಇದೆಯೇ? ವೇತನಕ್ಕೆ ಸರಿಯಾದ ಪ್ರತಿಫಲ ಇದೆಯೇ? ಅನುಭವ-ಪರಿಣತಿಯ ಕೆಲಸವೇ?’- ಹೀಗೆ ಹತ್ತಾರು ಪ್ರಶ್ನೆಗಳನ್ನು ಮುಂದಿಟ್ಟ ನನ್ನ ಸಮಾಜವಾದಿ ನಿಲುವಿಗೆ ತಾತ್ತಿ್ವಕವಾಗಿ ಅಡ್ಡವಾದವರು ಯುವಕೃಷಿಕ ಹರೀಶ್ ರೈ. ಯಾರಿಗೆ ಬಡತನ? ದುಡಿಯುವವರಿಗಲ್ಲ, ದುಡಿಸುವವರಿಗೆ? ದಿನಕ್ಕೆ ಸಾವಿರ, ತಿಂಗಳಲ್ಲಿ ಇಪ್ಪತೆôದೇ ದಿನ ದುಡಿಯಲಿ, ತಿಂಗಳ ಆದಾಯ ಇಪ್ಪತೆôದು ಸಾವಿರ. ಇವರ್ಯಾರೂ ಮನೆಯಿಂದ ಬುತ್ತಿ ತರುವುದಿಲ್ಲ. ಇಸ್ತ್ರಿ ಹಾಕಿ ಹೊರಡಬೇಕಿಲ್ಲ. ಅರ್ಧಗಂಟೆ ಲೇಟಾದರೂ ಕೇಳುವಂತಿಲ್ಲ. ಮನೆಯ ಯಾವುದೇ ವಸ್ತುಗಳಿಗೆ ಡ್ಯಾಮೇಜ್ ಆದರೆ ಪ್ರಶ್ನಿಸುವಂತಿಲ್ಲ. ಕೇಳಿದಂತೆಲ್ಲಾ ಹೆಚ್ಚುವರಿ ಸಾಲ ಕೊಡಬೇಕು. ಕೊಟ್ಟ ಸಾಲವನ್ನು ತಿರುಗಿ ಕೇಳುವಂತಿಲ್ಲ. ಕೇಳಿದರೆ, ಪ್ರಶ್ನಿಸಿದರೆ, ದುಡಿಯುವಾಗ ಅವರೊಟ್ಟಿಗೇ ನಿಂತರೆ ಮುಗಿದೇಹೋಯಿತು. ಮರುದಿನ ಕೆಲಸಕ್ಕೇ ಜನರಿಲ್ಲ. ನಿಮಗೆ ಬೇರೆ ಆದಾಯವಿದೆ. ಅದಕ್ಕೇ ನಿಮಗೆ ಕೃಷಿ ಸುಖ, ನಮಗೆ ಕಷ್ಟ. ಇದರ ಬಗ್ಗೆಯೂ ಸ್ವಲ್ಪ ಬರೆಯಿರಿ. ಹರೀಶ್​ರದ್ದು ಪ್ರಶ್ನೆಗಳ ಮೇಲೆ ಪ್ರಶ್ನೆ.

ಆ ಕ್ಷಣಕ್ಕೆ ನನಗೆ ನನ್ನ ಕಾಲೇಜು ನೆನಪಾಯಿತು. ಸರ್ಕಾರಿ ಕಾಲೇಜುಗಳಲ್ಲಿ ಸುಮಾರು ಹದಿನಾಲ್ಕು ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿದ್ದಾರೆ. ಅವರ ವೇತನ ಹನ್ನೊಂದು ಸಾವಿರ! ಅದಕ್ಕಾಗಿ ಅವರು ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಫಿಲ್., ಪಿಎಚ್.ಡಿ. ಎಲ್ಲಾ ಮಾಡಿದ್ದಾರೆ. ಕಠಿಣ ಓದಿನಿಂದ ನೆಟ್-ಸ್ಲೆಟ್ ಪಾಸು ಮಾಡಿಕೊಂಡಿದ್ದಾರೆ. ಸ್ಥಳೀಯವಾಗಿ ಇಪ್ಪತ್ತು ಮೂವತ್ತು ಮೈಲು ದೂರದಿಂದ ಬಸ್ಸುಗಳಿಗೆ ಕಾಸುಕೊಟ್ಟು ಬರುತ್ತಾರೆ. ದೂರದವರು ಸ್ಥಳೀಯವಾಗಿ ರೂಮ್ ಮಾಡಿ ನಿಂತಿದ್ದಾರೆ. ಹೆಚ್ಚಿನವರದು ಮೊದಲ ಪಾಠ-ಅನುಭವ. ಕ್ಲಾಸಿಗೆ ಹೋಗುವಾಗ ತಯಾರಿಬೇಕು. ಈ ಚಕ್ರವ್ಯೂಹದಿಂದ ಹೊರಗಡೆ ಬರಬೇಕಾದರೆ ಪಾಠಕ್ಕಾಗಿ ಓದಬೇಕು. ರಾತ್ರಿಯೂ ಕೂತು ತಯಾರಿ ಮಾಡಬೇಕು. ಇವರಿಗೆ ಸಿಗುವ ಹನ್ನೊಂದು ಸಾವಿರವನ್ನು ಮೂವತ್ತು ದಿನಗಳಿಗೆ ವಿಂಗಡಿಸಿ ನೋಡಿ. ಕನಿಷ್ಠ ಕೂಲಿಕಾರರಿಗಿಂತಲೂ ಕಡೆ. ಸಿಗುವ ವೇತನವಾದರೂ ನಿಯತವಾಗಿ ಸಿಗುವುದಿಲ್ಲ. ಬೇಕಾಬಿಟ್ಟಿ. ತರಗತಿಗೆ ಹೋಗುವಾಗ ಇಸ್ತ್ರಿಹಾಕಿದ ಬಟ್ಟೆ ಬೇಕು. ಮುಖಕ್ಕೆ ಪೌಡರ್ ಬೇಕು. ಇನ್ನೂ ಏನೇನೋ…

ಸತ್ಯಸಂದೇಶ ನೀಡಲಾಗದ ಅಸಹಾಯಕತೆ: ಮೊನ್ನೆ, ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆ ಬರೆದು ಪದವಿ ಮುಗಿಸಿ ಹೊರಗಡೆ ಹೋಗುವ ಒಂದಿಷ್ಟು ವಿದ್ಯಾರ್ಥಿಗಳು ‘ಮುಂದೇನು ಮಾಡಬೇಕು ಸರ್’ ಅಂದ್ರು. ಪ್ರತಿವರ್ಷ ಇಂಥ ಪ್ರಶ್ನೆಗಳು ಇದ್ದೇ ಇವೆ. ನಾನು ದೊಡ್ಡ ಪ್ರಾಜ್ಞನಂತೆ ಅವರಿಗಾಗಿ ಸಂದೇಶ ಕೊಡಬೇಕು. ತಲೆ ಅಲ್ಲಾಡಿಸಿ ಹೋಗುವ ಆ ಮಕ್ಕಳು, ಎಲ್ಲಿ, ಹೇಗೆ ನಾಪತ್ತೆಯಾಗುತ್ತಾರೋ ಮತ್ತೆ ಸಿಗುವುದೇ ಇಲ್ಲ. ಈ ಬಾರಿ ನನ್ನೆದುರು ನಿಂತ ಮಕ್ಕಳಿಗೆ ನಾನು ನಿತ್ಯದ ಸಂದೇಶ ಕೊಡಲೇ ಇಲ್ಲ. ಸೋಮಶೇಖರ್, ಹರೀಶ್ ರೈ ಹೇಳಿದ, ಕೇಳಿದ ಪ್ರಶ್ನೆಗಳು ನನ್ನೊಳಗಡೆ ಹೊಸ ಅನುಭವ ಕೊಟ್ಟಿದ್ದವು. ‘ನಿಮಗೆ ಅಡಕೆ ಕೀಳಲು, ಸುಲಿಯಲು, ತೆಂಗು ತೆಗೆಯಲು, ಗಾರೆಕೆಲಸ ಮಾಡಲು, ಆಸಕ್ತಿ ಇದೆಯಾ’ ಎಂದು ಕೇಳಿದೆ. ನನ್ನೆದುರು ನಿಂತ ಗೀತಾಕುಮಾರಿ ಅಂಗೈ ನೋಡಿ ನಕ್ಕಳು. ಏನಮ್ಮಾ ಎಂದು ಕೇಳಿದೆ. ‘ಸರ್, ನಾವು ರಜೆಯಲ್ಲಿ ಅದೇ ಮಾಡುವುದು. ದಿನಕ್ಕೆ ಎಪ್ಪತ್ತು ಕೆ.ಜಿ. ಸುಲಿಯುತ್ತೇನೆ. ನನ್ನ ಕಾಲೇಜು ಖರ್ಚು ಎಲ್ಲಾ ನಾನೇ ಸಂಪಾದಿಸುವುದು. ಈ ಬಾರಿ ಅಮ್ಮನಿಗೆ ಹತ್ತು ಸಾವಿರ ಕೊಟ್ಟಿದ್ದೇನೆ’ ಎಂದಳು. ‘ನಿನಗೇಕೆ ಈ ಪದವಿ? ಡಿಗ್ರಿ ಬೇಕಿತ್ತಾ?’- ಕೇಳಬಾರದ ಪ್ರಶ್ನೆ ಕೇಳಿದೆ. ಅದಕ್ಕೆ ಅವಳು, ‘ಸರ್, ಪದವಿ ಬೇರೆ,

ಅನುಭವ ಬೇರೆ. ನಾನು ಇವೆರಡಕ್ಕೂ ಯಾವತ್ತೂ ಗಂಟುಹಾಕುವುದೇ ಇಲ್ಲ. ನಾನು ಮುಂದೆ ಓದುವುದಿಲ್ಲ ಸರ್; ನಾನು ಇದೇ ಕಾಲೇಜಿನಲ್ಲಿ ಎಂ.ಕಾಂ. ಮಾಡಿದ್ರೆ ಮುಂದೆ ನನಗೆ ಅಡಕೆ ಸುಲಿಯುವುದು ಕಷ್ಟವಾಗಬಹುದು!’ ಎಂದಳು. ಬರೀ ಗೀತಾ ಒಬ್ಬಳಲ್ಲ. ಗಾರೆ ಕೆಲಸಕ್ಕೆ ಹೋಗುವ, ಕಲ್ಲು ಎತ್ತುವ, ಸೆಂಟ್ರಿಂಗ್ ಕೆಲಸಕ್ಕೆ ಹೋಗುವ, ಅಡಕೆ ಸುಲಿಯುವ ಹತ್ತಾರು ಮಕ್ಕಳು ನಮ್ಮಲ್ಲಿದ್ದಾರೆ.

ನಾನು ಮುಂದೆ ದುಡಿದು ಬದುಕಬಲ್ಲೆ ಎಂಬ ಮನಸ್ಥಿತಿ ಧೈರ್ಯ ತುಂಬುತ್ತದೆ. ಉಳಿದವರೆಲ್ಲ ಪದವಿಪತ್ರಗಳನ್ನು ಹಿಡಿದು ಮಹಾನಗರದ ಕಡೆಗೆ ಹೊರಟ ಬಸ್ಸು ಹತ್ತುತ್ತಾರೆ. ಎಲ್ಲಿಗೆ, ಎತ್ತ ಯಾವ ಗುರಿಯೂ ಇರುವುದಿಲ್ಲ. ನಮ್ಮ ಮಕ್ಕಳ ಪಠ್ಯದೊಳಗಡೆಯೇ ಹರೀಶ್ ಕೇಳಿದ ಪ್ರಶ್ನೆಗಳು, ಗೀತಾಕುಮಾರಿಯ ಉತ್ತರಗಳು ಇದ್ದುಬಿಟ್ಟರೆ ಗ್ರಾಮದ ಮನಸ್ಸುಗಳು ದೃಢವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

 

Leave a Reply

Your email address will not be published. Required fields are marked *

Back To Top