Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಸ್ವಾಗತಾರ್ಹ ನಡೆ

Thursday, 04.01.2018, 3:03 AM       No Comments

ರ್ನಾಟಕ ಮತ್ತು ಗೋವಾ ನಡುವೆ ಮಹದಾಯಿ ನೀರು ಹಂಚಿಕೆ ವಿವಾದ ಬಹುಕಾಲದಿಂದ ಇತ್ಯರ್ಥವಾಗದೇ ಉಳಿದಿದೆ. ಅದು ಬೂದಿ ಮುಚ್ಚಿದ ಕೆಂಡದಂತೆ ಆಗೀಗ ನಿಗಿನಿಗಿಸುತ್ತ ತನ್ನ ಇರುವಿಕೆಯನ್ನು ತೋರುತ್ತಿರುತ್ತದೆ. ಇಂತಹ ಸನ್ನಿವೇಶದಲ್ಲಿ, ವಿವಾದ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ನೀಡಿದ ಹೇಳಿಕೆ ಆಶಾಭಾವನೆ ಮೂಡಿಸಿದೆ. ‘ಮಹದಾಯಿ ನದಿ ಗೋವಾದಲ್ಲಷ್ಟೇ ಅಲ್ಲ ಕರ್ನಾಟಕದಲ್ಲೂ ಹರಿಯುತ್ತಿದೆ. ಹೀಗಾಗಿ ಎರಡೂ ರಾಜ್ಯಗಳ ನಡುವೆ ನೀರು ಹಂಚಿಕೆಯಾಗಿಯೇ ತೀರುತ್ತದೆ. ಯಾರಿಗೆ ಕಾಯ್ದೆ ತಿಳಿದಿದೆಯೋ ಅವರಿಗೆ ಈ ವಿಷಯ ನಿಶ್ಚಯವಾಗಿ ಅರ್ಥವಾಗುತ್ತದೆ. ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂದೇ ನ್ಯಾಯಾಧಿಕರಣವೂ ತೀರ್ಪು ನೀಡಲಿದೆ’ ಎಂಬ ಹೇಳಿಕೆಯನ್ನು ಪರಿಕ್ಕರ್ ಬುಧವಾರ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ವಿವಾದದ ಕಾವು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಕೆಲವು ದಿನಗಳ ಹಿಂದೆ ಮಹದಾಯಿ ವಿಚಾರ ಇತ್ಯರ್ಥವಾಗಿಯೇ ಬಿಡುತ್ತದೆ; ರಾಜ್ಯ ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿ ಜತೆ ಸೇರಿ ವಿವಾದಕ್ಕೊಂದು ಪರಿಹಾರ ಘೋಷಿಸಿಯೇ ಬಿಡುತ್ತಾರೆ ಎಂಬ ವಾತಾವರಣ ನಿರ್ವಣವಾಗಿತ್ತು. ಆದರೆ, ಆ ಭರವಸೆ ಈಡೇರದಿದ್ದಾಗ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದ್ದಲ್ಲದೆ, ಕೆಲವು ರೈತ ಸಂಘಟನೆಗಳು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೂ ಆಗಿತ್ತು. ಈ ನಡುವೆ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಬರೆದ ಪತ್ರ ರಾಜಕೀಯ ವಾಕ್ಸಮರಕ್ಕೆ ಇನ್ನಷ್ಟು ಬಿರುಸು ನೀಡಿತ್ತು. ಆದರೆ, ಪರಿಕ್ಕರ್ ಅವರ ಬುಧವಾರದ ಹೇಳಿಕೆಯಲ್ಲಿ ಯಡಿಯೂರಪ್ಪನವಗೆ ಬರೆದ ಪತ್ರದ ಬಗ್ಗೆಯೂ ಉಲ್ಲೇಖಿಸುವ ಮೂಲಕ ಮಹದಾಯಿ ವಿವಾದದ ಬಗ್ಗೆ ಸಮಯೋಚಿತ ಮತ್ತು ಸಮತೋಲನದ ನಿಲುವನ್ನು ವ್ಯಕ್ತಪಡಿಸಿದ್ದಾರೆ ಎನ್ನಬಹುದು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹದಾಯಿ ವಿವಾದಕ್ಕೆ ಪರಿಹಾರ ಒದಗಿಸುವ ಪ್ರಸ್ತಾವನೆಯಿಂದಾಗಿ ರಾಜ್ಯ ಬಿಜೆಪಿಗೆ ಕೊಂಚ ಹಿನ್ನಡೆಯಾದಂತೆ ಕಂಡುಬಂದಿತ್ತು. ಈಗ ಪರಿಕ್ಕರ್ ನೀಡಿರುವ ಹೇಳಿಕೆಯು ಆ ಹಿನ್ನಡೆ ಅಥವಾ ಪಕ್ಷದ ವರ್ಚಸ್ಸಿಗಾಗಿರುವ ಹಾನಿಯನ್ನು ಕಡಿಮೆಗೊಳಿಸುವ ಪ್ರಯತ್ನದಂತೆ ಕಾಣುವ ಅವಕಾಶವೂ ಈ ಸಂದರ್ಭದಲ್ಲಿ ಇದೆ. ಆದರೆ, ಇಲ್ಲಿ ರಾಜಕೀಯ ಲಾಭದ ಲೆಕ್ಕಾಚಾರಗಳ ಕಡೆಗೆ ಗಮನಹರಿಸುವುದಕ್ಕಿಂತಲೂ ವಿವಾದ ಬಗೆಹರಿಯುವುದು ಅತಿಮುಖ್ಯ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳುಹಿಸಿದ ಪತ್ರವೂ ಸಿಕ್ಕಿದೆ ಎಂಬ ಪರಿಕ್ಕರ್ ಹೇಳಿಕೆ ಗಮನಿಸಿದರೆ, ನ್ಯಾಯಾಧಿಕರಣವೂ ನೀರು ಹಂಚಿಕೊಳ್ಳಬೇಕೆಂಬ ತೀರ್ಪು ನೀಡಲಿದೆ. ಹೀಗಾಗಿ, ಮಾತುಕತೆಗೂ ಸಿದ್ಧ ಎಂಬ ಸಂದೇಶ ರವಾನಿಸಿದಂತೆ ಭಾಸವಾಗುತ್ತಿದೆ. ಹಳೆಯ ವಿವಾದ ಬಗೆ ಹರಿಸುವುದಕ್ಕೆ ಈಗ ಕಾಲ ಒದಗಿಬಂದಂತಿದೆ. ಪರಿಕ್ಕರ್ ಹೇಳಿಕೆಯನ್ನೇ ಇದಕ್ಕೆ ಬುನಾದಿಯನ್ನಾಗಿಸಿಕೊಂಡು ಪಕ್ಷ ರಾಜಕೀಯ ಬಿಟ್ಟು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರೆ ಪಕ್ಷಗಳ ನಾಯಕರು ಒಟ್ಟಾಗಿ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಿದರೆ ವಿವಾದ ಇತ್ಯರ್ಥಗೊಳಿಸುವುದು ಸುಲಭ ಸಾಧ್ಯ. ಚುನಾವಣೆ ಸಮೀಪದಲ್ಲಿದೆ ಎಂದು ಲಾಭ ನಷ್ಟದ ಲೆಕ್ಕಾಚಾರ ಹಾಕಿದರೆ ಸರಿಯಾದ ಫಲಿತಾಂಶ ಸಿಗಲಾರದು. ರಾಜ್ಯದ ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಜನನಾಯಕರು ಮುಂದುವರಿಯಲೆಂಬುದು ಆಶಯ.

 

Leave a Reply

Your email address will not be published. Required fields are marked *

Back To Top