Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಸ್ವಾಗತಾರ್ಹ ಉಪಕ್ರಮ

Wednesday, 10.05.2017, 3:00 AM       No Comments

‘ನಾವು ಕೆಲಸ ಕೊಡಲು ಸಿದ್ಧ. ಆದರೆ ಆ ಕೆಲಸಕ್ಕೆ ತಕ್ಕ ಕೌಶಲ ಹೊಂದಿರುವವರು ಸಿಗುವುದು ದುರ್ಲಭ’- ಇದು ವಿವಿಧ ವಲಯಗಳ ಉದ್ಯಮಿಗಳಿಂದ ಹೊಮ್ಮುವ ಸಾಮಾನ್ಯ ಅಭಿಪ್ರಾಯ. ಕೆಲಮಟ್ಟಿಗೆ ಇದು ನಿಜವೂ ಹೌದು. ಶಾಲಾ ಪಠ್ಯಗಳಲ್ಲಿ ಕೇವಲ ಅಂಕಗಳಿಕೆಗೆ ಒತ್ತುಕೊಟ್ಟು ಜೀವನ ಶಿಕ್ಷಣ ಹಾಗೂ ಕೌಶಲ ನಿರ್ವಣವನ್ನು ಕಡೆಗಣಿಸಿದರೆ ಆಗುವುದು ಹೀಗೆಯೇ. ಈ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಸರ್ಕಾರಗಳು ಆಗೀಗ ಯೋಜನೆಗಳನ್ನು ಪ್ರಕಟಿಸುವುದು ಶುಭಸೂಚನೆಯಾದರೂ, ಭಾರತದ ಉದ್ಯೋಗಪಡೆಯ ಗಾತ್ರಕ್ಕೆ ಹೋಲಿಸಿದರೆ ಸಾಗಬೇಕಾದ ದಾರಿ ಬಹು ದೂರವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ರೂಪಿಸಿರುವ ಯೋಜನೆಯೊಂದು ಗಮನ ಸೆಳೆಯುವಂತಿದೆ. ಸರ್ಕಾರವೇ ಕೌಶಲ ತರಬೇತಿ ನೀಡುವ ಈ ಯೋಜನೆ, ಮೇ 15ರಂದು ಚಾಲನೆ ಪಡೆಯಲಿದೆ. www.kaushalykar.com ಎಂಬ ವೆಬ್ ಪೋರ್ಟಲನ್ನು ಇದಕ್ಕಾಗಿಯೇ ವಿನ್ಯಾಸಗೊಳಿಸಿದ್ದು, ಆಸಕ್ತರು ಮೇ 15ರಿಂದ 23ರ ಅವಧಿಯಲ್ಲಿ ಇಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನಂತರದಲ್ಲಿ ಆಯಾ ಇಲಾಖೆಗಳೇ ಅರ್ಜಿದಾರರನ್ನು ಸಂರ್ಪಸಿ ಅಗತ್ಯ ಕೌಶಲ ತರಬೇತಿಗೆ ವ್ಯವಸ್ಥೆ ಮಾಡುತ್ತವೆ. ತರಬೇತಿ ನಂತರ ಉದ್ಯೋಗ ಮೇಳ ಆಯೋಜನೆ, ಸ್ವಉದ್ಯೋಗ ಮಾಡುವವರಿಗೆ, ವಿದೇಶಕ್ಕೆ ತೆರಳುವವರಿಗೆ ಆರ್ಥಿಕ ನೆರವು ಮುಂತಾದ ಅಂಶಗಳೂ ಈ ಯೋಜನೆಯಲ್ಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನ ಬಜೆಟ್ ಮಂಡಿಸುವಾಗ, ರಾಜ್ಯದ 5 ಲಕ್ಷ ಯುವಜನರಿಗೆ ಕೌಶಲ ತರಬೇತಿ ನೀಡುವ ಪ್ರಸ್ತಾಪವನ್ನು ಮಾಡಿದ್ದರು. ಅದರಂಗವಾಗಿ ಈ ಯೋಜನೆ ರೂಪುಗೊಂಡಿದೆ. ರಾಜ್ಯದಲ್ಲಿ ಪ್ರತಿವರ್ಷ 6.85 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, 3.69 ಲಕ್ಷ ಪಿಯು ಹಾಗೂ 3.66 ಲಕ್ಷ ಮಂದಿ ಪದವಿ ಪಡೆಯುತ್ತಾರೆಂಬುದನ್ನು ಗಮನಿಸಿದರೆ, ಉದ್ಯೋಗ ಮಾರುಕಟ್ಟೆಯ ಮಹತ್ವ ಅರ್ಥವಾಗುತ್ತದೆ. ಸರ್ಕಾರದ ಈ ಯೋಜನೆ ಸೂಕ್ತ ರೀತಿಯಲ್ಲಿ ಜಾರಿಗೆ ಬಂದಲ್ಲಿ ಒಂದಷ್ಟು ಪರಿಣಾಮಗಳನ್ನು ನಿರೀಕ್ಷಿಸಬಹುದು.

2022ರೊಳಗೆ ದೇಶದ 40 ಕೋಟಿ ಜನರಿಗೆ ವಿವಿಧ ರೀತಿಯ ಕೌಶಲ ತರಬೇತಿ ನೀಡುವ ಉದ್ದೇಶದಿಂದ 2015ರ ಜುಲೈ 15ರಂದು ಕೇಂದ್ರ ಸರ್ಕಾರದ ವತಿಯಿಂದ ‘ಕೌಶಲ ಭಾರತ’ ಎಂಬ ಯೋಜನೆ ಜಾರಿಯಾಗಿದೆ. ಇದರ ಮೂಲಕ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ನೀತಿ, ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಮತ್ತು ಕೌಶಲ ಸಾಲ ಯೋಜನೆ ಮುಂತಾದವುಗಳನ್ನು ಆರಂಭಿಸಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜಗತ್ತಿನಾದ್ಯಂತ ಶಿಕ್ಷಣಕ್ಕೆ ಮಹತ್ವ ನೀಡುವ ಪ್ರವೃತ್ತಿ ಹೆಚ್ಚಿರುವುದರಿಂದ ಪದವೀಧರರ ದಂಡೇ ತಯಾರಾಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಉದ್ಯೋಗಸೃಷ್ಟಿ ಸಾಧ್ಯವಾಗುತ್ತಿಲ್ಲ ಎಂಬುದು ಸರ್ಕಾರಗಳಿಗೆ ಸವಾಲಿನ ಸಂಗತಿಯೇ ಆಗಿದೆ. ಅದೂ ಅಲ್ಲದೆ ಸರ್ಕಾರಿ ಉದ್ಯೋಗ ಅವಕಾಶವೂ ಕಡಿಮೆ. ಆಯಾ ಕೆಲಸಕ್ಕೆ ತಕ್ಕ ಕೌಶಲವನ್ನಾದರೂ ಹೊಂದಿದ್ದರೆ ಖಾಸಗಿ ರಂಗದಲ್ಲಿ ಉದ್ಯೋಗಬೇಟೆ ನಡೆಸಬಹುದು. ಸರ್ಕಾರಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರುವುದು ಸ್ವಾಗತಾರ್ಹ.

Leave a Reply

Your email address will not be published. Required fields are marked *

Back To Top