Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ಸ್ವಸಾಮರ್ಥ್ಯವನ್ನು ಪುಷ್ಟೀಕರಿಸುವ ಕೆಲಸ ಮಾಡಬೇಕು

Thursday, 21.12.2017, 3:00 AM       1 Comment

 | ಅನಿತಾ ನರೇಶ್​ ಮಂಚಿ

ಈಗಿನ ಆಟಗಳಾಗಲಿ, ಹೊಸ ತಂತ್ರಜ್ಞಾನಗಳಾಗಲಿ ನಮಗೆ ಸೋಲುವುದನ್ನು ಕಲಿಸುವುದಿಲ್ಲ. ಸೋಲನ್ನು ಸ್ವೀಕರಿಸುವುದನ್ನು ಕಲಿಸುವುದಿಲ್ಲ. ಮೊದಲೆಲ್ಲ ಆಡುತ್ತಿದ್ದ ಆಟಗಳಲ್ಲಿ ಗೆಲುವು ಮುಖ್ಯ ಆಗ್ತಾ ಇರಲಿಲ್ಲ. ಬರೀ ಆಟ ಮುಖ್ಯ ಆಗ್ತಾ ಇತ್ತು. ಹೊತ್ತು ಹೋಗಲೋ, ಮನರಂಜನೆಗೋ ಆಡುತ್ತಿದ್ದೆವು. ಈಗ ಹಾಗಲ್ಲ; ಲೆಕ್ಕಾಚಾರ ಮೊದಲು, ಆಟದ ಮುಖ್ಯಗುರಿ ನಂತರ.

ಗೆಳತಿಯರು ಸೇರಿದೆವೆಂದರೆ ಅದೊಂದು ಬೇರೆಯದ್ದೇ ಲೋಕ. ಮಾತುಗಳಲ್ಲಿ ಮುಳುಗಿದರೆ ಇಹಪರ ಎರಡೂ ಮರೆವಿನಾಳದಲ್ಲೇ. ನಮ್ಮ ಮನೆ, ಮಕ್ಕಳು, ಉದ್ಯೋಗ, ಊರ ಜಾತ್ರೆ, ಸಂಬಂಧಗಳ ನೋವು-ನಲಿವು ಎಲ್ಲವೂ ಮಾತಿನ ಮೂಲಕ ಒಳ-ಹೊರಗೆ ಚಲಿಸುತ್ತಿತ್ತು.

‘‘ಇಡೀ ದಿನ ವಿಡಿಯೋ ಗೇಮ್ ಆಡೋದು. ಅದಿಲ್ವಾ ಕಾರ್ಟೂನ್ ನೋಡೋದು, ಇಷ್ಟು ಬಿಟ್ರೆ ಬೇರೆ ಕೆಲಸ ಬೇಕಲ್ಲ ಮಗನಿಗೆ, ಮೊನ್ನೆ ತಾನೆ ಹಾಲಿನವನಿಗೆ ಚಿಲ್ಲರೆ ಕೊಡೋದಿತ್ತು. ಪಕ್ಕದಲ್ಲೇ ಮಗ ಇದ್ದ. ಲೆಕ್ಕ ಕಲಿಸಿದಂತಾಯ್ತು ಅಂತ ಹದಿಮೂರರಿಂದ ನಾಲ್ಕು ಹೋದ್ರೆ ಎಷ್ಟಾಗುತ್ತೆ ಅಂತ ಕೇಳಿದೆ. ‘ಅಯ್ಯೋ ಅಲ್ಲಿ ಕ್ಯಾಲ್​ಕ್ಯುಲೇಟರ್ ಇದೆ ನೋಡು; ಕೊಡಿಲ್ಲಿ, ನಿಂಗೆ ಗೊತ್ತಾಗ್ಲಿಲ್ಲ ಅಂದ್ರೆ ಮಾಡ್ಕೊಡ್ತೀನಿ’ ಅಂತಾನೆ ನನ್ನ ಆರು ವರ್ಷದ ಕುಲೋದ್ಧಾರಕ’ ಎಂದು ಮೂತಿ ಊದಿಸಿಕೊಂಡಳು ಒಬ್ಬಳು.

‘‘ಅಲ್ಲಾ ಕಣೆ, ಅದಾದ್ರು ಸಣ್ಣದು ಅಂತ ಸುಮ್ಮನಾಗಬೋದು. ನನ್ನ ಕತೆ ಕೇಳು. ಮೊನ್ನೆ ಮಾರ್ಕೆಟ್ಟಿಗೆ ಹೋಗಿದ್ದೆ. ತರಕಾರಿ, ಹಣ್ಣು-ಹಂಪಲು ಎಲ್ಲ ಕೊಂಡ ಮೇಲೆ ಹಣ ಕೊಡಲೆಂದು ವ್ಯಾನಿಟಿಬ್ಯಾಗ್ ತೆರೆದು ನೋಡ್ತೀನಿ ಪರ್ಸ್ ಕಾಣಲಿಲ್ಲ. ಥಟ್ಟನೆ ನೆನಪಾಯ್ತು, ಅದನ್ನು ಮನೆಯ ಮೇಜಲ್ಲಿ ಬಿಟ್ಟು ಬಂದಿರುವುದು. ಜತೆಗೆ ಮೊಬೈಲ್ ಕೂಡ ಮನೆಯಲ್ಲೇ ಉಳಿದಿತ್ತು. ನನ್ನ ಕಷ್ಟ ತಿಳಿದ ಅಂಗಡಿಯವನು ‘ಮನೆಗೆ ಫೋನ್ ಮಾಡ್ತೀರಾ ಮೇಡಂ’ ಅಂತ ಅವನ ಕೈಯಲ್ಲಿದ್ದ ಮೊಬೈಲನ್ನು ಚಾಚಿದ. ತೆಗೆದುಕೊಂಡೆ. ಒಂದು ಕ್ಷಣ ಕಕ್ಕಾಬಿಕ್ಕಿ. ಏನನ್ನು ಹುಡುಕೋದಲ್ಲಿ. ನನ್ನ ಮೊಬೈಲಿನಲ್ಲಿ ಮೇಲಿನಿಂದ ಕೆಳಗಿನವರೆಗೆ ಎಲ್ಲರ ಫೋಟೋ ಸಮೇತ ಹೆಸರುಗಳು ಕಾಣಿಸಿಕೊಳ್ಳುತ್ತಿದ್ದವಲ್ಲ. ಹಾಗಾಗಿ ಯಾವ ನಂಬರನ್ನೂ ನೆನಪಿಟ್ಟುಕೊಳ್ಳುವ ಅಗತ್ಯವೇ ಇರಲಿಲ್ಲ ನೋಡು. ಈಗಿಲ್ಲಿ ಕಾಡೊಳಗೆ ಕಣ್ಣುಕಟ್ಟಿ ಬಿಟ್ಟಂತೆ. ಮನೆಯವರದ್ದು ಹೋಗಲಿ, ನನ್ನ ನಂಬರ್ ಕೂಡ ನೆನಪಿಗೆ ಬರಲಿಲ್ಲ. ಮೊದಲೆಲ್ಲ ನನ್ನನ್ನು ಮನೆಯ ಟೆಲಿಫೋನ್ ಡೈರೆಕ್ಟರಿ ಅಂತ ಕರೀತಾ ಇದ್ರು. ಯಾವ ನೆಂಟರ ಹೆಸರೇ ಹೇಳಲಿ, ನಾಲಿಗೆ ತುದಿಯಲ್ಲೇ ಅವರ ನಂಬರಿತ್ತು. ಒಂದೊಂದೇ ನಂಬರನ್ನು ತಿರುಗಿಸುವಾಗಲು ಮಿದುಳು ಅದನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಿತ್ತೇನೋ… ಅಂತಹ ನಾನೀಗ ಮಂತ್ರ ನೆನಪಿಗೆ ಬಾರದ ಕರ್ಣನಂತೆ ಮಾರ್ಕೆಟ್ಟೆಂಬ ಯುದ್ಧರಂಗದಲ್ಲಿ ಎಲ್ಲರೆದುರು ನಗೆಪಾಟಲಿಗೆ ಈಡಾಗಿ ನಿಂತಿದ್ದೆ. ಪುಣ್ಯಕ್ಕೆ ಅಂಗಡಿಯವನಿಗೆ ನನ್ನ ಪರಿಚಯ ಇದ್ದ ಕಾರಣ ‘ನಾಳೆ ಕೊಡಿ ಮೇಡಂ, ಪರವಾಗಿಲ್ಲ..’ ಎಂದು ಇನ್ನಷ್ಟು ಅವಮಾನವಾಗುವುದನ್ನು ತಡೆದ. ಯೋಚಿಸಿದರೆ ಈಗಲೂ ನಾಚಿಕೆಯಾಗುತ್ತದೆ’ ಎನ್ನುವುದು ಇನ್ನೊಬ್ಬಳ ಅಳಲು.

‘ಇದಕ್ಕಿಂತಲೂ ಕೆಟ್ಟದೊಂದಿದೆ’- ಅಲ್ಲಿಯವರೆಗೆ ಮೌನವಾಗಿ ಕುಳಿತಿದ್ದವಳೊಬ್ಬಳು ಬಾಯಿ ತೆರೆದಳು. ‘‘ನಮ್ಮ ಪಕ್ಕದ ಮನೆಯವರ ಮಗು. ಇನ್ನೂ ಐದನೇ ಕ್ಲಾಸ್. ಅದೇನೋ ಕಂಪ್ಯೂಟರ್ ಗೇಮ್ ಅಂತೆ, ಅದನ್ನು ಆಡುತ್ತಿದ್ದಳು. ಒಟ್ಟು ಮೂರು ಸಲ ನಿಮಗೆ ಆಡುವ ಅವಕಾಶ ಇರುತ್ತದೆ. ಅದನ್ನು ಕಳೆದುಕೊಂಡರೆ ಆ ಗೇಮ್ ಸೋತಂತೆ. ಮತ್ತೆ ಹೊಸದಾಗಿ ಶುರುಮಾಡುವಂತಹ ಆಟವದು. ಏನು ಮಾಡಿದ್ರೂ ಆಕೆ ಅದರಲ್ಲಿ ಕೊನೆ ತಲುಪುವಲ್ಲಿ ವಿಫಲಳಾಗಿ ಸೋಲುತ್ತಿದ್ದಳು. ಅದೇ ಅವಳ ಅಣ್ಣ ಅನಾಯಾಸವಾಗಿ ಅದನ್ನು ಆಡಿ ಮುಗಿಸಿ ಗೆಲುವಿನ ನಗೆ ಬೀರುತ್ತಿದ್ದ. ಮನೆಯವರು ಇದನ್ನು ತಮಾಷೆ ಮಾಡಿದ್ದರು. ಸ್ವಲ್ಪ ಹೊತ್ತಲ್ಲಿ ಹುಡುಗಿ ಅಡುಗೆ ರೂಮಿಗೆ ಹೋಗಿ ಚೂರಿ ತೆಗೆದುಕೊಂಡು ರೂಮಿನ ಬಾಗಿಲು ಹಾಕಿ ಕೈ ಕತ್ತರಿಸಲು ಪ್ರಯತ್ನಿಸಿದ್ದಳು. ಕೂಡಲೇ ತಿಳಿದ ಕಾರಣ ಹೆಚ್ಚೇನು ಅಪಾಯವಾಗದೇ ಹುಡುಗಿ ಪಾರಾದಳು’.

‘‘ನಮ್ಮಲ್ಲೂ ಹೀಗೆ ಆಗ್ತಾ ಇತ್ತು. ಮದುವೆಯಾದ ಹೊಸದರಿಂದಲೂ ರಾತ್ರಿ ಊಟ ಬೇಗ ಮುಗಿಸಿ ಒಂದಾಟ ಕೇರಂ ಆಡೋದು ನಮ್ಮ ಅಭ್ಯಾಸ. ಯಾರು ಗೆದ್ದರು ಯಾರು ಸೋತರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಕ್ಕಳಾದ ಮೇಲೆ ಅವರಿಗೂ ಕೇರಂ ಆಟದ ಹುಚ್ಚು ಹತ್ತಿತು. ನಮ್ಮ ಜತೆ ಎಳೆ ಕೈಗಳು ಸೇರಿಕೊಂಡವು. ಮಗಳು ಅಪ್ಪನ ಪಾರ್ಟಿ ಸೇರಿದರೆ ಮಗ ನನ್ನ ಪಾರ್ಟಿ. ಇದು ಅತ್ತಿತ್ತ ಆಗುವುದೂ ಇತ್ತು. ಸ್ವಲ್ಪ ದಿನ ಚೆನ್ನಾಗಿತ್ತು. ಗೆದ್ದವರು ಸೋತವರನ್ನು ಚುಡಾಯಿಸುವುದು, ಸೋತವರು ನಾಳೆ ನೋಡು ನನ್ನಾಟ ಎಂದು ಮರು ಉತ್ತರ ಕೊಡುವುದು ಎಲ್ಲವೂ ಆಟದ ಸ್ಪೂರ್ತಿಯಲ್ಲೇ ಸಾಗುತ್ತಿತ್ತು. ಆದರೆ ಮಕ್ಕಳು ಬೆಳೆದು ದೊಡ್ದವರಾದಾಗ ಆಟದ ಸೋಲನ್ನು ಅದು ಹೇಗೆ ಅವಮಾನ ಅಂತ ತಪ್ಪು ತಿಳಿದುಕೊಂಡರೋ..! ಯಾರು ಸೋತರೂ ಮುಖ ಮುದುರಿಸಿ ಕೋಣೆಯೊಳಗೆ ಮುಸುಕು ಹೊದ್ದು ಮಲಗುವ ಪರಿಪಾಠ ಮೊದಲಿಟ್ಟಿತು. ಇದನ್ನು ತಡೆಯಲು ಮಕ್ಕಳಿಬ್ಬರನ್ನೂ ಒಂದೇ ಪಾರ್ಟಿ ಮಾಡಿ ನಾವಿಬ್ಬರು ಅವರೆದುರು ಬೇಕಂತಲೇ ಸೋತು ಅವರ ಮುಖದಲ್ಲಿ ನಗು ಕಾಣುತ್ತಿದ್ದೆವು. ಆದರೆ ಇದು ಅತಿರೇಕಕ್ಕೆ ಹೋದಾಗ ಎಚ್ಚೆತ್ತುಕೊಳ್ಳಲೇಬೇಕಾಯಿತು. ಮನರಂಜನೆಯ ಆಟದಲ್ಲೇ ಗೆಲುವಿಗಾಗಿ ಹೀಗೆ ಹಂಬಲಿಸುವವರು ಇನ್ನು ಜೀವನದ ಸೋಲನ್ನು ತಾಳಿಕೊಳ್ಳಬಲ್ಲರೇ.. ತಿಳಿಹೇಳುವುದು ಅಗತ್ಯವಾಯಿತು. ಕಲಿಯುವುದರಲ್ಲಿ ಸ್ವಲ್ಪ ಹಿಂದಿದ್ದ ಮಗ ಡಿಗ್ರಿ ಮುಗಿಸಲಾಗದೆ ಕೊನೆಗೆ ಸ್ವಂತ ಉದ್ಯೋಗ ಮಾಡುವಾಗ ನಾವು ಸಹಕಾರ ಕೊಟ್ಟೆವು. ಈಗ ಅವನ ಉದ್ಯಮದ ಏರುಪೇರನ್ನು ಅವನೇ ತಾಳಿಕೊಳ್ಳುತ್ತಾನೆ. ಇದೊಂದು ಬದುಕಿನ ಗೆಲುವು ಅಂತಲೇ ಅಂದುಕೊಂಡಿದ್ದೇನೆ..’- ಹೇಳುವಾಗ ಅವಳ ಮೊಗದಲ್ಲಿ ಸಂತೃಪ್ತಿಯಿತ್ತು.ಮಾತು ಈಗ ಆಟಗಳ ಕಡೆಗೆ ತಿರುಗಿತ್ತು. ಈಗಿನ ಆಟಗಳಾಗಲಿ, ಹೊಸ ತಂತ್ರಜ್ಞಾನಗಳಾಗಲಿ ನಮಗೆ ಸೋಲುವುದನ್ನು ಕಲಿಸುವುದಿಲ್ಲ. ಸೋಲನ್ನು ಸ್ವೀಕರಿಸುವುದನ್ನು ಕಲಿಸುವುದಿಲ್ಲ. ಮೊದಲು ನಾವು ಆಡುತ್ತಿದ್ದ ಆಟಗಳಲ್ಲಿ ಗೆಲುವು ಮುಖ್ಯ ಆಗ್ತಾ ಇರಲಿಲ್ಲ. ಬರೀ ಆಟ ಮುಖ್ಯ ಆಗ್ತಾ ಇತ್ತು. ಹೊತ್ತು ಹೋಗಲೋ, ಮನರಂಜನೆಗೋ ಆಡುತ್ತಿದ್ದೆವು. ಈಗ ಹಾಗಲ್ಲ; ಲೆಕ್ಕಾಚಾರ ಮೊದಲು, ಆಟದ ಮುಖ್ಯ ಗುರಿ ನಂತರ.

ಮನಸ್ಸು ಯೋಚಿಸುತ್ತಿದ್ದಂತೆ ಗೆಳತಿಯೊಬ್ಬಳು ಸ್ವರ ಎತ್ತಿದಳು- ‘‘ನಮ್ಮ ಆಟಗಳು ಎಷ್ಟು ಸರಳವಿತ್ತು. ಒಂದಿಷ್ಟು ಕಲ್ಲು ಹೆಕ್ಕಿತಂದು ಆಡುತ್ತಿದ್ದ ಕಲ್ಲಾಟ, ಹೆಂಚಿನ ಚೂರುಗಳನ್ನು ಜೋಡಿಸಿ ಆಡುತ್ತಿದ್ದ ಲಗೋರಿ, ಎರಡು ಕೋಲಿನ ತುಂಡು ಹಿಡಿದು ಚಿಮ್ಮುತ್ತಿದ್ದ ಚಿನ್ನಿದಾಂಡು, ಮುರಿದ ಸ್ಲೇಟಿನ ತುಣುಕು ಹಿಡಿದು ಆಡುವ ಚಿಲ್ಕಿ, ಕುಂಟಾಬಿಲ್ಲೆ, ಟೊಪ್ಪಿಯಾಟ, ಕಳ್ಳ-ಪೊಲೀಸ್, ಹಾವು-ಏಣಿ, ಕವಡೆ ಆಟ, ಕಡ್ಡಿಯಾಟ, ಎಲ್ಲವೂ ಮನರಂಜನೆಯ ಜತೆಗೆ ಜೀವನಪ್ರೀತಿಯನ್ನು, ಪಾಠ ಮಾಡದೆಯೇ ಬದುಕಿನ ಸರಳ ನೀತಿಯನ್ನು ಕಲಿಸಿಕೊಡುತ್ತಿದ್ದವು. ನಾವಾಡುತ್ತಿದ್ದ ಆಟಗಳು ನಮಗೆ ಪಾಠದಲ್ಲೂ ಸಹಕಾರಿಯಾಗುತ್ತಿದ್ದವು. ನಾನು ಗಣಿತದಲ್ಲಿ ಎಷ್ಟು ಹಿಂದೆ ಇದ್ದೆ ಎಂದರೆ ಎರಡಕ್ಕೆ ಎರಡು ಸೇರಿಸಿದರೆ ಎಷ್ಟು ಎಂದು ಹೇಳಲು ಕೈ ಬೆರಳುಗಳ ಸಹಾಯ ಬೇಕಿತ್ತು. ಇದಕ್ಕಾಗಿ ಶಾಲೆಯಲ್ಲಿ ತಿಂದ ಪೆಟ್ಟುಗಳ ಲೆಕ್ಕ ಇಟ್ಟಿದ್ದರೆ, ಯಾವ ಜೈಲಿನ ಕೈದಿಯ ಶಿಕ್ಷೆಗಿಂತಲೂ ಕಡಿಮೆ ಇರುತ್ತಿರಲಿಲ್ಲ ಅದು. ಆದರೆ ಕವಡೆ ಆಟ ಆಡಲಿಕ್ಕೆ ಶುರುಮಾಡಿದಾಗ ನಮ್ಮ ಗುಂಪು ಎಲ್ಲರ ಲೆಕ್ಕವನ್ನು ಗುರುತಿಟ್ಟುಕೊಳ್ಳಲು ನನಗೆ ಹೇಳಿತ್ತು. ಒಂದಿಷ್ಟೂ ಅಂಜಿಕೆಯಿಲ್ಲದೆ ಪಟಪಟನೆ ಕೂಡಿಸಲು ಶುರು ಮಾಡಿದ್ದೆ. ಇದು ಶಾಲೆಯಲ್ಲೂ ಲೆಕ್ಕದ ಪ್ರಶ್ನೆಗಳಿಗೆ ಬೆಚ್ಚಿಬೀಳುವ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸ ತಂದುಕೊಟ್ಟಿತ್ತು. ನಾವು ಆಡುತ್ತಿದ್ದ ಹಾವು-ಏಣಿ ಆಟ ಹಾಗೆ ಇತ್ತಲ್ಲ, ಎಷ್ಟು ಸಲ 98ರ ಹತ್ತಿರ ಬಂದು ನಿಂದು 2 ಬೀಳಲಿ ಎಂದು ಪ್ರಾರ್ಥನೆ ಮಾಡಿದ್ದಿತ್ತು…. ಆದ್ರೆ 1 ಬಿದ್ದು ಮತ್ತೆ ಕೆಳಗಿಳಿಯುತ್ತಿದ್ದೆವು. ಆದರೆ ಅದನ್ನು ಸೋಲು ಎಂದುಕೊಳ್ಳುತ್ತಿರಲಿಲ್ಲ. ಮತ್ತೆ ಮೇಲಕ್ಕೇರುವ ಹುಮ್ಮಸ್ಸು ಆಟವನ್ನು ಕಳೆಗಟ್ಟಿಸುತ್ತಿತ್ತು. ಯಾವಾಗ ನಾವು ಸೋತೆವು ಎಂದುಕೊಳ್ಳುತ್ತೇವೋ ಅದು ನಮ್ಮ ಸೋಲು.. ನಿಮಗೊಂದು ಕತೆ ನೆನಪಿರಬಹುದು. ಇಬ್ಬರು ಯುವಸಂನ್ಯಾಸಿಗಳು ಗದ್ದೆಹುಣಿಯಲ್ಲಿ ನಡೆಯುತ್ತ ಹೋಗುತ್ತಿದ್ದರಂತೆ. ತುಂಬಾ ಜಾರುವ ಹಾದಿಯದು. ಒಬ್ಬ ಆಯತಪ್ಪಿ ಜಾರಿದ. ಗದ್ದೆಯೊಳಗೆ ಕಾಲು ಸಿಲುಕಿ ಕಾಲೆಲ್ಲ ಕೆಸರಾಯಿತು. ಮತ್ತೆ ಮೇಲೇರಿ ನಡೆದ. ಸ್ವಲ್ಪ ಹೊತ್ತಿನಲ್ಲಿ ಇನ್ನೊಬ್ಬ ಜಾರಿದ. ಅವನ ಕಾಲುಗಳಿಗೂ ಕೆಸರು ಮೆತ್ತಿಕೊಂಡಿತು. ಆತ ಮೇಲೇರದೆ ಗದ್ದೆಯೊಳಗಿನ ಕೆಸರಲ್ಲೇ ಕಾಲು ಊರಿ ನಡೆದು ಆಚೆ ಬದಿ ತಲುಪಿದ. ಗುರು ಅವರಿಗೆದುರಾದ. ಇಬ್ಬರ ಕಾಲುಗಳಲ್ಲಿಯೂ ಕೆಸರು ಮೆತ್ತಿದೆ. ಹೇಗೂ ಇಬ್ಬರಿಗೂ ಬೈಗಳು ನಿಶ್ಚಿತವೆಂದು ಗದ್ದೆಯೊಳಗೆ ಇಳಿದು ಬಂದಿದ್ದವನು ನಿಶ್ಚಿಂತೆಯಾಗಿ ನಿಂತಿದ್ದ. ಗುರು ಮೇಲೇರಿ ನಡೆಯುತ್ತ ಬಂದವನ ಕಾಲಿಗೆ ನೀರು ಕೊಟ್ಟು ತೊಳೆಯಲು ಸಹಕರಿಸಿದ. ಇನ್ನೊಬ್ಬನಿಗೆ ಬೈದ. ಪೆಚ್ಚುಮುಖ ಹಾಕಿ ನಿಂತಿದ್ದವನಿಗೆ ಹೇಳಿದ- ‘ನೋಡು ನೀನು ಕೆಳಗೆ ಬೀಳುವುದು ನಿನ್ನ ಸೋಲಲ್ಲ; ಅದರಿಂದ ಎದ್ದುಬರುವ ಪ್ರಯತ್ನ ಮಾಡದಿರುವುದು ನಿನ್ನ ಸೋಲು’….’.

‘ಹೌದು ಇದರಿಂದ ನಾವು ಪಾಠ ಕಲಿಯಬೇಕು. ತಂತ್ರಜ್ಞಾನದ

ಕೆಸರಿನಲ್ಲಿ ಮುಳುಗಿ ಅಲ್ಲಿಂದ ಏಳುವ ಪ್ರಯತ್ನ ಮಾಡುವ ಬದಲು ಅದಕ್ಕೆ ಶರಣಾಗಿರುವ ನಾವು ಆ ಬಗ್ಗೆ ಎಚ್ಚರದ ಜತೆಗೆ ಸ್ವಸಾಮರ್ಥ್ಯವನ್ನು ಪುಷ್ಟೀಕರಿಸುವ ಕೆಲಸ ಮಾಡಬೇಕು.. ಅದರ ಮೊದಲ ಪಾಠವಾಗಿ ಇಂದೇ ಕೆಲವಾದರೂ ನಂಬರುಗಳನ್ನು ನೆನಪಿಟ್ಟುಕೊಳ್ಳುವ ಪ್ರಯತ್ನ ನನ್ನದು’ ಎಂದಳು ಗೆಳತಿ. ‘ಊಟಕ್ಕೆ ಬರೋದಿಲ್ವಾ.. ಎಲೆ ಹಾಕಿದೆ’ ಎಂದು

ಮನೆಯವರು ಕರೆದಾಗಲೇ ಎದ್ದ ನಮ್ಮೊಳಗೊಂದು ಸಣ್ಣದಾದರೂ ನಿಚ್ಚಳಅರಿವಿನ ಬೆಳಕಕಿಡಿ ಮೂಡಿದ್ದಂತೂ ಸತ್ಯ.

(ಲೇಖಕರು ಸಾಹಿತಿ)

One thought on “ಸ್ವಸಾಮರ್ಥ್ಯವನ್ನು ಪುಷ್ಟೀಕರಿಸುವ ಕೆಲಸ ಮಾಡಬೇಕು

  1. Dear Anita,

    Nice article, this article made me to recall my child hood days and the games we played in our childhood.

    Now i am trying to teach my kids about the games we played in our child hood days.

    Thanka and regards.

Leave a Reply

Your email address will not be published. Required fields are marked *

Back To Top