Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಸ್ವದೇಶಿ ಸಾಹಸ

Saturday, 05.08.2017, 3:00 AM       No Comments

ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನದಂಥ ಕ್ಷೇತ್ರಗಳಲ್ಲಿ ಭಾರತ ಸಾಧಿಸಿರುವ ಪಾರಮ್ಯ ಗೊತ್ತಿರುವಂಥದ್ದೇ. ಅದರಲ್ಲೂ ವಿಶೇಷವಾಗಿ, ಮಂಗಳಯಾನ ಯೋಜನೆ, ಏಕಕಾಲಕ್ಕೆ ನೂರಾರು ಉಪಗ್ರಹಗಳ ಉಡಾವಣೆಯ ಮೂಲಕ ಭಾರತ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಇದೆ. ಈಗ ಪ್ರಾದೇಶಿಕ ವಲಯದಲ್ಲಿ ಇರುವಿಕೆಯ ಮಾಹಿತಿಯನ್ನು ಕರಾರುವಾಕ್ಕಾಗಿ ನೀಡುವಂತಹ ಜಿಪಿಎಸ್ ಒಂದನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಾಗೂ ವೈಜ್ಞಾನಿಕ ಮತ್ತು ರಾಷ್ಟ್ರೀಯ ಭೌತವಿಜ್ಞಾನ ಪ್ರಯೋಗಾಲಯ ಒಪ್ಪಂದ ಮಾಡಿಕೊಂಡಿವೆ. ಇದರಿಂದಾಗಿ ಅಮೆರಿಕದ ಮೂಲದ ಸಂಸ್ಥೆಯ ಮೇಲಿನ ಅವಲಂಬನೆಯಿಂದ ಭಾರತಕ್ಕೆ ಮುಕ್ತಿ ದೊರೆಯಲಿದೆ. ದೇಸಿ ತಂತ್ರಜ್ಞಾನದಲ್ಲಿ ರೂಪುಗೊಳ್ಳಲಿರುವ ಹಾಗೂ ಸಮಯ-ತರಂಗಾಂತರಗಳನ್ನು ನಿಖರವಾಗಿ ಪತ್ತೆಹಚ್ಚುವ ಈ ಜಿಪಿಎಸ್​ಗೆ ‘ನಾವಿಕ್‘ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್​ಸ್ಟಲೇಷನ್- ಘಚಡಐಇ) ಎಂದು ಹೆಸರಿಸಲಾಗಿದ್ದು, ಇದರ ನೆರವಿನೊಂದಿಗೆ ಉಪಗ್ರಹವು ಒದಗಿಸುವ ಜಿಪಿಎಸ್ ಕಾಲಮಾನವು ಭಾರತೀಯ ಕಾಲಮಾನ ಪದ್ಧತಿ ಅಥವಾ ಇಂಡಿಯನ್ ಸ್ಟಾ್ಯಂಡರ್ಡ್ ಟೈಮ್ೆ (ಐಎಸ್​ಟಿ) ನಿಖರವಾಗಿ ಹೊಂದಾಣಿಕೆ ಆಗಲಿದೆ. ದಿನವಹಿ ಸೇವೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಕಾಲಮಾನಕ್ಕೆ ಜಿಪಿಎಸ್ ಸಮಯ ಹೊಂದಾಣಿಕೆ ಅತ್ಯಗತ್ಯ. ಹಣಕಾಸು ವರ್ಗಾವಣೆ, ಷೇರು ನಿರ್ವಹಣೆ, ಡಿಜಿಟಲ್ ದಾಖಲಾತಿ, ಟೈಮ್ ಸ್ಟಾ್ಯಂಪಿಂಗ್, ಸೈಬರ್ ಕ್ರೖೆಂ ತಡೆಗಟ್ಟುವಿಕೆ ಮತ್ತು ರಾಷ್ಟ್ರೀಯ ಭದ್ರತೆಗೆ ಇದರಿಂದ ಅನುಕೂಲವಾಗಲಿದೆ ಎಂಬುದು ಗಮನಿಸಬೇಕಾದ ಸಂಗತಿ.

ಇದು ನಿಜಕ್ಕೂ ಮಹತ್ವದ ಬೆಳವಣಿಗೆಯೇ. ಆದರೆ ಇದು ಮಿಕ್ಕೆಲ್ಲ ಕ್ಷೇತ್ರಗಳಲ್ಲೂ ಅನುರಣಿಸುವಂತಾಗಬೇಕು. ಕಾರಣ, ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ಅನುಪಮ ಸಾಧನೆ ಮಾಡಿದ್ದರೂ, ಕಂಪ್ಯೂಟರ್ ಯಂತ್ರಾಂಶಗಳ ಅಭಿವೃದ್ಧಿ-ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿಲ್ಲ. ಆಧುನಿಕ ಯುದ್ಧವಿಮಾನ, ಜಲಾಂತರ್ಗಾಮಿಗಳು ಸೇರಿದಂತೆ ರಕ್ಷಣಾ ಸಾಮಗ್ರಿಗಳ ತಯಾರಿಕೆಗೂ ಈ ಮಾತು ಅನ್ವಯ. ಇಷ್ಟು ಮಾತ್ರಲ್ಲದೆ, ಹಲವು ಉತ್ಪನ್ನಗಳ ಅಗತ್ಯದ ಈಡೇರಿಕೆಗೆ ಭಾರತ ಆಮದನ್ನೇ ನೆಚ್ಚುವಂತಾಗಿದ್ದು, ವಿದೇಶಿ ವಿನಿಮಯದ ರೂಪದಲ್ಲಿ ದೇಶದ ಬೊಕ್ಕಸದ ಮೇಲೆ ಹೊರೆ ಹೆಚ್ಚುತ್ತಿದೆ. ‘ಕಚ್ಚಾವಸ್ತುಗಳನ್ನು ಅಲ್ಪಬೆಲೆಯಲ್ಲಿ ಭಾರತದಿಂದ ವಿದೇಶಗಳಿಗೆ ಕಳಿಸಿ, ಅದರಿಂದ ತಯಾರಾಗುವ ಸಿದ್ಧವಸ್ತುಗಳನ್ನು ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳುವ ಪರಿಪಾಠ ಮೂರ್ಖತನದ್ದು; ಇದರ ಬದಲು ದೇಶೀಯವಾಗೇ ತಯಾರಿಸುವುದರಲ್ಲಿ ವಿವೇಕವಿದೆ‘ ಎಂಬ ಅಭಿಪ್ರಾಯ ನಿನ್ನೆ-ಮೊನ್ನೆಯದಲ್ಲ.

ಪ್ರಸ್ತುತ ‘ನಾವಿಕ್‘ ಜಿಪಿಎಸ್ ಅಭಿವೃದ್ಧಿಯಲ್ಲಿ ತೋರಲಾಗಿರುವ ಬದ್ಧತೆಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು, ಮಿಕ್ಕ ಕ್ಷೇತ್ರಗಳಿಗೂ ಈ ಪರಿಪಾಠವನ್ನು ವಿಸ್ತರಿಸಿದಲ್ಲಿ ಹಾಗೂ ದೇಶೀಯವಾಗಿಯೇ ಇಂಥ ನೂರಾರು ಉತ್ಪನ್ನಗಳ ಅಭಿವೃದ್ಧಿ, ತಯಾರಿಕೆ ಕೈಗೂಡಿದಲ್ಲಿ ಈ ನೆಲದ ಲಕ್ಷಾಂತರ ನಿರುದ್ಯೋಗಿಗಳಿಗೆ ಜೀವನೋಪಾಯದ ಮಾರ್ಗವೊಂದು ದಕ್ಕುವುದರ ಜತೆಗೆ, ವಿದೇಶಿ ವಿನಿಮಯದ ಉಳಿತಾಯಕ್ಕೂ ಅನುವಾಗಲಿದೆ. ಆದ್ದರಿಂದ, ವಿಜ್ಞಾನ, ತಂತ್ರಜ್ಞಾನ, ಮೂಲಭೂತ ಸೌಕರ್ಯ ಅಭಿವೃದ್ಧಿ, ತಯಾರಿಕೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಸ್ವದೇಶಿಮಂತ್ರ ಜಪಿಸುವುದಕ್ಕೆ ಇದು ಸಕಾಲ ಎನ್ನಲಡ್ಡಿಯಿಲ್ಲ.

Leave a Reply

Your email address will not be published. Required fields are marked *

Back To Top