Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಸ್ಮರಣಶಕ್ತಿ ಗೆದ್ದ ವೈದೃತಿ

Saturday, 08.07.2017, 3:00 AM       No Comments

| ಶಿವಾನಂದ ಹಿರೇಮಠ ಗದಗ

ಇವಳಿಗಿನ್ನೂ ನಾಲ್ಕು ವರ್ಷ ವಯಸ್ಸು. ಚೆಂದದ ಚೆಲುವು, ಚಿಟಪಟ ಮಾತು, ಚಾಲಾಕಿ ಬುದ್ಧಿ ಒಲಿದಿದೆ. ಇವಳ ಸ್ಮರಣಶಕ್ತಿಯನ್ನು ಕಂಡವರು ಒಂದು ಕ್ಷಣ ಬೆರಗಾಗುತ್ತಾರೆ. ಅಂದಹಾಗೆ ಈ ಪುಟಾಣಿ ಹೆಸರು ವೈದೃತಿ ಕೋರಿಶೆಟ್ಟರ.

ವೈದೃತಿ ಅಂದರೆ ‘ಜಗತ್ತನ್ನೇ ಗೆದ್ದವಳು’ ಎಂದರ್ಥ. ಕೇಳಿದ ಪ್ರಶ್ನೆಗೆ ಪಟಪಟನೆ ಉತ್ತರಿಸುವ ಇವಳು ಈಗ ಗದಗ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದಾಳೆ. ರಾಜಕೀಯ, ಅರ್ಥಶಾಸ್ತ್ರ, ಇತಿಹಾಸ, ಕನ್ನಡ ಸೇರಿ ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಷಯಕ್ಕೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸಲೀಸಾಗಿ ಉತ್ತರಿಸುತ್ತಾಳೆ.

ಕನ್ನಡದ ಮೊದಲ ಪತ್ರಿಕೆ, ವಿಆರ್​ಎಲ್ ಸಮೂಹ ಸಂಸ್ಥೆ ಅಧ್ಯಕ್ಷರು, ಸಚಿವ ಸಂಪುಟ ಸಚಿವರ ಹೆಸರು, ರಾಷ್ಟ್ರೀಯ ಪಕ್ಷಿ, ಪ್ರಾಣಿ, ಅಂತಾರಾಷ್ಟ್ರೀಯ ಕೋರ್ಟ್, ಕದಂಬರ, ರಾಷ್ಟ್ರಕೂಟ ಸೇರಿ ಇತರೆ ರಾಜ ಮನೆತನಗಳ ರಾಜಧಾನಿ, ನಿಂಬೆ ಹಣ್ಣಿನಲ್ಲಿರುವ ವಿಟಮಿನ್, ದೇಶದ ಅತಿದೊಡ್ಡ ಮಸೀದಿ, ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಜ್ಯ, ಕವಿಗಳ ಹೆಸರು… ಅಬ್ಬಬ್ಬಾ ಒಂದಾ ಎರಡಾ… ಇಂತಹ ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಈಕೆ ಗದಗ ಜಿಲ್ಲೆಯ ಸೆಲೆಬ್ರಿಟಿಯಾಗಿದ್ದಾಳೆ.

ಅರಳು ಹುರಿದಂತೆ ಮಾತನಾಡುವ ವೈದೃತಿ ಮೂಲತಃ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯವಳು. ವೈದೃತಿ ತಾಯಿ ಭಾರತಿ ನರಗುಂದದಲ್ಲಿ ಸರ್ಕಾರಿ ಇಲಾಖೆಯೊಂದರ ಉದ್ಯೋಗಿ, ತಂದೆ ನಾಗರಾಜ ನರಗುಂದದಲ್ಲಿ ಖಾಸಗಿ ವೃತ್ತಿಯಲ್ಲಿದ್ದಾರೆ. ಸದ್ಯ ಈ ಕುಟುಂಬ ನರಗುಂದದಲ್ಲಿ ನೆಲೆಸಿದೆ.

ಪ್ರತಿಭೆ ಅನಾವರಣಕ್ಕೆ ವೇದಿಕೆ

ವೈದೃತಿ ಒಂದೂವರೆ ವರ್ಷದವಳಿದ್ದಾಗ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಹೆಚ್ಚು ಪದಗಳನ್ನು ಹೇಳುತ್ತಿದ್ದಳಂತೆ. ಇವಳ ಜ್ಞಾಪಕ ಶಕ್ತಿ ಅರಿತ ಪಾಲಕರು ದಿನನಿತ್ಯ ಪ್ರಶ್ನೆಗಳನ್ನು ಮತ್ತು ಅವುಗಳಿಗೆ ಉತ್ತರಗಳನ್ನು ಕಂಠಪಾಠ ಮಾಡಿಸುತ್ತ ಬಂದಿದ್ದಾರೆ. ಒಂದೇ ಬಾರಿ ಹೇಳಿದರೆ ಸಾಕು ಅಚ್ಚು ಹೊಡೆದಂತೆ ನೆನಪಿನಲ್ಲಿಟ್ಟುಕೊಳ್ಳುವ ವೈದೃತಿ ಸ್ಥಳೀಯರ ಅಚ್ಚುಮೆಚ್ಚು. ಗದಗ ಜಿಲ್ಲೆಯ ಅನೇಕ ಕಾರ್ಯಕ್ರಮಗಳಲ್ಲಿ ಇವಳ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಸಂಘ-ಸಂಸ್ಥೆಗಳ, ಜಾತ್ರಾ ಮಹೋತ್ಸವ, ಶಾಲಾ ಕಾಲೇಜು ಕಾರ್ಯಕ್ರಮ ಸೇರಿ ಹಲವು ಕಾರ್ಯಕ್ರಮಗಳಲ್ಲಿ ವೈದೃತಿ ಪ್ರತಿಭೆಗೆ ವೇದಿಕೆ ನಿರ್ವಿುಸಿಕೊಡಲಾಗುತ್ತಿದ್ದು, ದಾನಿಗಳು ಪ್ರೋತ್ಸಾಹಧನ ನೀಡುತ್ತಿದ್ದಾರೆ. ವೇದಿಕೆ ಮೇಲೆ ಸಾವಿರಾರು ಜನರ ಎದುರು ಯಾವುದೇ ಆತಂಕವಿಲ್ಲದೆ ಮಾತನಾಡುವ ಆತ್ಮವಿಶ್ವಾಸ ಕೂಡ ಈ ಬಾಲಕಿಯಲ್ಲಿದೆ. ಪುಟ್ಟ ಬಾಲಕಿಯ ಪ್ರತಿಭೆಗೆ ಮೆಚ್ಚಿ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿವೆ.

ವೈದೃತಿ ಒಂದೂವರೆ ವರ್ಷದವಳಿದ್ದಾಗಲೇ ಅವಳ ಸ್ಮರಣಶಕ್ತಿ ಅರಿತೆವು. ಆಗಿನಿಂದಲೇ ತರಬೇತಿ ನೀಡಲಾಗುತ್ತಿದ್ದು, ಯುಪಿಎಸ್ಸಿ ಪರೀಕ್ಷೆ ತೇರ್ಗಡೆ ಹೊಂದುವ ರೀತಿಯಲ್ಲಿ ಅವಳನ್ನು ಸಿದ್ಧಗೊಳಿಸಬೇಕು ಎಂದು ನಿರ್ಧರಿಸಿದ್ದೇವೆ.

| ನಾಗರಾಜ ಕೋರಿಶೆಟ್ಟರ, ವೈದೃತಿ ತಂದೆ

ಸಾಧಕರಿಗೊಂದು ವೇದಿಕೆ

ನಿಮ್ಮನೆ, ನಿಮ್ಮೂರಲ್ಲೂ ಅಸಾಮಾನ್ಯ ಪ್ರತಿಭೆಗಳಿದ್ದರೆ ನಮಗೆ ಮಾಹಿತಿ ನೀಡಿ. ವಿಜಯವಾಣಿ ಪುಟಾಣಿ ಪುರವಣಿಯಲ್ಲಿ ಪ್ರಕಟಿಸುತ್ತೇವೆ. ನೆನಪಿರಲಿ ಪುಟಾಣಿ ವಯಸ್ಸು 12 ವರ್ಷ ಮೀರಿರಬಾರದು.

ಸಂಪಾದಕರು, ಭಲೇ ಪುಟಾಣಿ ವಿಭಾಗ ಪುಟಾಣಿ ಪುರವಣಿ, ವಿಜಯವಾಣಿ, ನಂ.24, ಸಾಯಿರಾಂ ಟವರ್ಸ್, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ಇ-ಮೇಲ್ ವಿಳಾಸ: [email protected]

 

Leave a Reply

Your email address will not be published. Required fields are marked *

Back To Top