Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಸ್ಪೂರ್ತಿಯ ಸೆಲೆಯಾದ ದೇಶಪ್ರೇಮಿಗಳು

Thursday, 03.08.2017, 3:05 AM       No Comments

ಇತ್ತ ಖುದಿರಾಮನಿಂದ ಬೇರ್ಪಟ್ಟ ಪ್ರಫುಲ್ಲ ಇನ್ನೊಂದು ದಾರಿ ಹಿಡಿದ. ಅವನೂ ಓಡಿದ.. ಓಡಿದ.. ಓಡಿದ. ರೈಲು ಹಳಿಗಳ ಮೇಲೆ, ಕೆಲವೊಮ್ಮೆ ಕಾಡುದಾರಿಯಲ್ಲಿ, ಕೆಲವೊಮ್ಮೆ ಹಳ್ಳಿಗಳ ರಸ್ತೆಗಳಲ್ಲಿ ಒಂದೇ ಉಸಿರಿನಲ್ಲಿ ಓಡುತ್ತಿದ್ದ. ಹೀಗೆ 32 ಮೈಲಿ ಓಡಿ ಸಮಷ್ಟಿಪುರ ಎಂಬ ಊರು ತಲಪಿದ. ಅಲ್ಲಿಂದ ಹೌರಾ ನಿಲ್ದಾಣಕ್ಕೆ ಹೋಗಬೇಕು. ಆದರೆ ಕಿಸೆಯೋ? ಬರಿದೋ ಬರಿದು! ಭಯಂಕರ ಹಸಿವು ಬೇರೆ. ಸುತ್ತ ಎಲ್ಲಿ ನೋಡಿದರೂ ಪೊಲೀಸರೇ ಪೊಲೀಸರು!

ಬೇರೆ ದಾರಿಕಾಣದೆ ಅಲ್ಲಿಂದ ಜಾರಿಕೊಂಡ ಪ್ರಫುಲ್ಲ ಸನಿಹದ ರೈಲ್ವೆ ಕ್ವಾರ್ಟರ್ಸ್​ನ ಬೀದಿಯಲ್ಲಿ ನಿತ್ರಾಣಾವಸ್ಥೆಯಲ್ಲಿ ಹೆಜ್ಜೆ ಹಾಕಲಾರಂಭಿಸಿದ. ಅಲ್ಲೊಬ್ಬ ಬಂಗಾಳಿ ರೈಲ್ವೆ ನೌಕರ ಇವನನ್ನು ಕಂಡು ಕ್ರಾಂತಿಕಾರಿಯೇನೋ ಎಂದು ಅನುಮಾನಿಸಿ ಅದೇಕೋ ಕನಿಕರಗೊಂಡು ಮನೆಗೆ ಕರೆದೊಯ್ದು ತಿಂಡಿ-ತೀರ್ಥ, ಬಟ್ಟೆ-ಬರೆ ನೀಡಿ ಮೊಕಾಮೆಘಾಟ್ ಎಂಬ ಸ್ಥಳಕ್ಕೆ ಇಂಟರ್​ಕ್ಲಾಸ್ ಟಿಕೆಟ್ ತೆಗೆದುಕೊಟ್ಟು ರೈಲು ಹಿಡಿಯಲು ಹೇಳಿದ. ಖರ್ಚಿಗೆ ಸ್ವಲ್ಪ ಹಣವನ್ನೂ ಕೊಟ್ಟ.

ಅವನು ಹತ್ತಿ ಕುಳಿತ ರೈಲುಡಬ್ಬಿಗೆ ಇನ್ನೊಬ್ಬಾತ ಹತ್ತಿಕೊಂಡ. ಅದೇ ಪ್ರಫುಲ್ಲನನ್ನು ಚಿಂತೆಗೀಡು ಮಾಡಿದ ಸಂಗತಿ. ಏಕೆಂದರೆ ಆತ ಒಬ್ಬ ಪೊಲೀಸ್ ಸಬ್​ಇನ್ಸ್​ಪೆಕ್ಟರ್. ಅವನಿಗೂ ಮುಝುಪ್ಪರಪುರ ಬಾಂಬ್ ಪ್ರಕರಣದ ಹಂತಕರನ್ನು ಹಿಡಿಯಲು ಸೂಚನೆ ಇತ್ತು.

ಜಾಣಮಾತಿನ, ಹದ್ದಿನ ದೃಷ್ಟಿಯ ಸಬ್​ಇನ್ಸ್​ಪೆಕ್ಟರ್​ಗೆ ಮೊದಲ ನೋಟದಲ್ಲೇ ಪ್ರಫುಲ್ಲನ ಬಗ್ಗೆ ಬಲವಾದ ಅನುಮಾನ ಹುಟ್ಟಿಕೊಂಡಿತು. ಕಣ್ಣೋಟದಲ್ಲೇ ಅವನನ್ನು ಅಳೆದು ಮಾತಿಗೆಳೆದು ಪ್ರಫುಲ್ಲನ ಉತ್ತರಗಳಿಂದ ಅವನೇ ಹಂತಕ ಎಂದು ಖಚಿತಪಡಿಸಿಕೊಂಡ. ಆ ಸಬ್​ಇನ್ಸ್​ಪೆಕ್ಟರ್ ಹೆಸರು ನಂದಲಾಲ್.

ಧನ್ಯ! ಧನ್ಯ! ವೀರಪ್ರಫುಲ್ಲ: ರೈಲು ಸಮುರಾಯ್ಘಾಟ್ ನಿಲ್ದಾಣ ತಲುಪಿದಾಗ ಆಮರ್್​ಸ್ಟ್ರಾಂಗ್ ಎಂಬ ಪೊಲೀಸ್ ಕಮಿಷನರ್​ಗೆ ನಂದಲಾಲ್ ತಂತಿಸಂದೇಶ ಕಳಿಸಿ ಪ್ರಫುಲ್ಲನ ಬಂಧನದ ವಾರಂಟ್ ಸಿದ್ಧಗೊಳಿಸಿದ. ರೈಲು ಮೊಕಾಮೆಘಾ ನಿಲ್ದಾಣ ತಲುಪುವ ವೇಳೆಗೆ ಅರೆಸ್ಟ್ ವಾರಂಟ್ ನಂದಲಾಲನ ಕೈಸೇರಿತ್ತು.

ನಂದಲಾಲನ ಕೈಯಲ್ಲಿರುವುದು ತನ್ನ ಅರೆಸ್ಟ್ ವಾರಂಟ್ ಎಂಬುದನ್ನು ಖಚಿತಪಡಿಸಿಕೊಂಡ ಪ್ರಫುಲ್ಲ, ಕ್ಷಣಾರ್ಧದಲ್ಲಿ ಎದ್ದು ರೈಲುಡಬ್ಬಿಯಿಂದ ಹೊರಕ್ಕೆ ನೆಗೆದು ಪ್ಲಾಟ್​ಫಾರಂ ಮೇಲೆ ಓಡಲೆತ್ನಿಸಿದ. ಅಷ್ಟರಲ್ಲಿ ಅವನನ್ನು ಮುತ್ತಿದ ಪೊಲೀಸರು ಭದ್ರವಾಗಿ ಹಿಡಿದುಕೊಂಡು ನಿಂತರು. ಇದ್ದಕ್ಕಿದ್ದಂತೆ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಝಾಡಿಸಿ ಒದ್ದು ಅವರಿಂದ ಬಿಡಿಸಿಕೊಂಡು ಪ್ಲಾಟ್​ಫಾರಂ ಮೇಲೆ ಓಡಲಾರಂಭಿಸಿದ. ಪೊಲೀಸರು ಬಿಟ್ಟಾರೆಯೇ? ಅಟ್ಟಿಸಿಕೊಂಡು ಓಡಿದರು. ಅವನು ಕಳ್ಳನಿರಬೇಕೆಂದು ಜನರೂ, ರೈಲ್ವೆ ಕೂಲಿಗಳೂ ಇನ್ನೊಂದು ಕಡೆಯಿಂದ ಅವನ ಹಿಂದೆ ಬಿದ್ದರು. ಅಷ್ಟೆ. ಸರಕ್ಕನೆ ನಿಂತು ಕಿಸೆಯಿಂದ ರಿವಾಲ್ವಾರ್ ಹೊರತೆಗೆದು, ಅಟ್ಟಿಸಿಕೊಂಡು ಬಂದವರನ್ನುದ್ದೇಶಿಸಿ ‘ಹುಷಾರ್! ಯಾರಾದರೂ ಮುಂದೆಬಂದರೆ ಗುಂಡುಹಾರಿಸಿ ಸುಟ್ಟುಹಾಕುತ್ತೇನೆ’ ಎಂದು ಕೂಗಿದ ಪ್ರಫುಲ್ಲ. ಆದರೆ ಅವನ ನಿರ್ಧಾರ ಬೇರೆಯೇ ಇತ್ತು. ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವುದಕ್ಕಿಂತಲೂ ದೇಶಕಾರ್ಯದಲ್ಲಿ ಪ್ರಾಣಾರ್ಪಣೆ ಮಾಡುವುದೇ ಒಳಿತೆಂಬ ನಿರ್ಧಾರಕ್ಕೆ ಬಂದಿದ್ದ.

ಪೊಲೀಸರು ಮುಂದೆ ಮುಂದೆ ಬರಲಾರಂಭಿಸಿದರು. ಅವರ ಕಡೆಗೆ ತೋರಿಸುತ್ತಿದ್ದ ರಿವಾಲ್ವರನ್ನು ತಿರುಗಿಸಿ ತನ್ನೆಡೆಗೆ ಇಟ್ಟುಕೊಂಡು ಟ್ರಿಗರ್ ಒತ್ತಿಯೇಬಿಟ್ಟ! ಗುಂಡು ಹಾರಿಯೇ ಹಾರಿತು. ಹೃದಯವನ್ನು ಭೇದಿಸಿಕೊಂಡು ಬೆನ್ನಿನಿಂದ ಹೊರಕ್ಕೆ ಹೋಯಿತು. ಅವನು ಮಾತೃಭೂಮಿಗೆ ವಂದನೆ ಸಲ್ಲಿಸಿದ ‘ವಂದೇಮಾತರಂ!’. ಖಚಿತವಾಗಿ ಸಾಯಬಯಸಿದ್ದರಿಂದ ತನ್ನ ಗಲ್ಲದ ಬಳಿ ರಿವಾಲ್ವರ್ ಇಟ್ಟು ಇನ್ನೊಮ್ಮೆ ಟ್ರಿಗರ್ ಒತ್ತಿದ. ಕುತ್ತಿಗೆಯಲ್ಲಿ ಗುಂಡುಹೊಕ್ಕಿತು. ಮತ್ತೊಮ್ಮೆ ಅಂತಿಮ ವಂದನೆ ಹೊರಹೊಮ್ಮಿತು ‘ವಂದೇಮಾತರಂ’. ಕೆಳಕ್ಕೆ ಕುಸಿದ ಪ್ರಫುಲ್ಲ ಮರಣ ಸಂಕಟವನ್ನುಭವಿಸುತ್ತ ವಿಲವಿಲ ಒದ್ದಾಡುತ್ತ ಅಲ್ಲಿಯೇ ಕೊನೆಯುಸಿರೆಳೆದ. ಪೊಲೀಸರ ಆಶಯ ನೆರವೇರಲಿಲ್ಲ. ನಂದಲಾಲನಿಗೆ ಉಳಿದಿದ್ದ ಕೆಲಸ ವೀರಹುತಾತ್ಮನ ಕಳೇಬರವನ್ನು ಮುಝುಪ್ಪರಪುರಕ್ಕೆ ಸಾಗಿಸುವುದು.

ಬಾಂಬ್ ತಯಾರಿ ಬಗ್ಗೆ ಹೇಳಬೇಕಿದೆ!: ಇಷ್ಟೆಲ್ಲ ನಡೆಯುವ ವೇಳೆಗೆ ಅತ್ತ ಮುಝುಫ್ಪರಪುರದ ಪೊಲೀಸ್ ಠಾಣೆಯಲ್ಲಿ ನಿರಂತರ ಲಾಠಿಪೆಟ್ಟು ನೀಡುತ್ತ ತಲೆಗೂದಲು ಎಳೆದು ಹಿಂಸಿಸುತ್ತ ಖುದಿರಾಮನ ವಿಚಾರಣೆ ನಡೆದಿತ್ತು. ಆತನ ನಾಯಕ ಯಾರು ಎಂಬುದನ್ನು ಅವನ ಬಾಯಿಂದ ಹೊರಡಿಸುವ ಗುರಿ ಪೊಲೀಸರದು. ಆದರೆ ಪ್ರತಿಜ್ಞಾಬದ್ಧನಾಗಿದ್ದ ಖುದಿರಾಮನ ಮುಂದೆ ಅವರ ಆಟ ನಡೆಯಲಿಲ್ಲ.

ಅಷ್ಟರಲ್ಲಿ ಇವನ ಬಾಯಿ ಬಿಡಿಸಲು ಇನ್ನೊಂದು ಕುತಂತ್ರ ಮಾಡಿದ್ದರು ಪೊಲೀಸರು. ಅದು ಹಂತಕರನ್ನು ಐಡೆಂಟಿಫೈ ಮಾಡುವ ಪೊಲೀಸರ ರೀತಿ. ಪ್ರಫುಲ್ಲನ ಶವದ ಮುಂಡದಿಂದ ರುಂಡವನ್ನು ಬೇರ್ಪಡಿಸಿ ಸ್ಪಿರಿಟ್ ತುಂಬಿದ ಬಕೆಟ್​ನಲ್ಲಿ ಇಟ್ಟಿದ್ದರು. ಅದನ್ನು ಖುದಿರಾಮನ ಮುಂದೆ ತಂದು ತಲೆಗೂದಲು ಹಿಡಿದು ರುಂಡವನ್ನು ಹೊರಗೆತ್ತಿ ಅವನ ಕಣ್ಣ ಮುಂದೆ ಆಡಿಸುತ್ತಾ, ‘ನೋಡು ನಿನ್ನ ಜೊತೆಗಾರನ ಗತಿ… ಈಗಲಾದರೂ ಹೇಳು ಯಾರು ನಿನ್ನ ನಾಯಕ?’. ಚಿತ್ರಹಿಂಸೆಯಿಂದ ಅರೆಜೀವವಾಗಿದ್ದ ಖುದಿರಾಮನಿಗೆ ತನ್ನ ಕ್ರಾಂತಿಸಂಗಾತಿ ಪ್ರಫುಲ್ಲನ ಕಡಿದತಲೆ ಕಂಡು ತಲೆಸುತ್ತು ಬಂತಾದರೂ ಅವನಿಂದ ಯಾವುದೇ ಮಾಹಿತಿ ಪೊಲೀಸರಿಗೆ ದೊರೆಯಲಿಲ್ಲ.

ಅವನನ್ನು ಗುರುತಿಸುವ ಸಲುವಾಗಿ, ಅದೇ ತಲೆಯನ್ನು ಪ್ರಫುಲ್ಲನ ತಾಯಿಗೆ ತೋರಿಸಲು ಕೊಂಡೊಯ್ದದ್ದು ನಮ್ಮವರೇ ಆದ ಬ್ರಿಟಿಷ್ ಸರ್ಕಾರದ ಕರುಣಾಮಯಿ ಪೊಲೀಸರು! ಆ ಮುದಿತಾಯಿ ಕಣ್ಣೀರು ಸುರಿಸುತ್ತ ‘ನನ್ನ ಮಗನ ಕಡಿದ ತಲೆಯನ್ನು ನೋಡಿ ಅವನು ನನ್ನ ಮಗನೇ ಎಂದು ಗುರುತಿಸಬೇಕೆನಪ್ಪಾ… ಇಂಥ ದುಃಸ್ಥಿತಿ ಯಾವ ತಾಯಿಗೂ ಬರದಿರಲಿ…. ನಾನು ನೋಡಲಾರೆ…. ತೆಗೆದುಕೊಂಡು ಹೋಗಿ’ ಎಂದು ಹೃದಯವಿದ್ರಾವಕವಾಗಿ ಅತ್ತಳಂತೆ.

ಆಲಿಪುರ ಬಾಂಬ್ ಮೊಕದ್ದಮೆ ಶುರುವಾದ 6 ದಿನಗಳ ನಂತರ 1908ರ ಮೇ 21ರಂದು ಶುರುವಾಯಿತು ಮುಝುಫ್ಪರ್​ಪುರ್ ಬಾಂಬ್ ಪ್ರಕರಣದ ಮೊಕದ್ದಮೆ. ಖುದಿರಾಮನ ವಕೀಲರು ಅವನನ್ನು ಮರಣದಂಡನೆಯಿಂದ ಪಾರುಮಾಡಬೇಕೆಂದು ತಿಪ್ಪರಲಾಗ ಹೊಡೆದರೂ ದೀರ್ಘಮೌನ ವಹಿಸಿದ್ದ ಖುದಿರಾಮ ಕೋರ್ಟಿನಲ್ಲಿ ಧೀರನಂತೆ ತಾನೇ ಆ ಕೃತ್ಯ ಮಾಡಿರುವುದಾಗಿ ಹೆಮ್ಮೆಯಿಂದ ಒಪ್ಪಿಕೊಂಡ. ಸಾಯುವವರೆಗೆ ಗಲ್ಲುಗಂಬಕ್ಕೆ ತೂಗುಹಾಕಬೇಕೆಂದು ನ್ಯಾಯಾಧೀಶ ಕಾರ್ನ್​ಡಫ್ ತೀರ್ಪಿತ್ತ. ಅದಕ್ಕೂ ಮೊದಲು ‘ನೀನು ಇನ್ನೇನಾದರೂ ಹೇಳಬೇಕಾಗಿದಿಯೇ?’ ಎಂದಾತ ಕೇಳಿದಾಗ ಖುದಿರಾಮನ ಉತ್ತರ ಹೀಗಿತ್ತು- ‘ಹೌದು ಹೇಳಬೇಕಾಗಿದೆ. ಬಾಂಬ್​ಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಕೋರ್ಟ್ ಹೇಳಿಕೆ ಮೂಲಕ ಭಾರತದ ಯುವಜನಾಂಗಕ್ಕೆ ತಿಳಿಸಬೇಕಾಗಿದೆ’. ಇದನ್ನು ಕೇಳಿ ತತ್ತರಿಸುವ ಸರದಿ ನ್ಯಾಯಾಧೀಶನದಾಗಿತ್ತು.

ನೀವೇ ತಡ ಜೈಲರ್​ಬಾಬು: 1908ರ ಆಗಸ್ಟ್ 11. ಅಂದೇ ಅವನ ಗಲ್ಲಿನ ಮುಹೂರ್ತ. ಮುಝುಫ್ಪರಪುರ್ ಜೈಲಿನ ಒಂದು ಮೂಲೆಯಲ್ಲಿ ಖುದಿರಾಮನಿಗಾಗಿ ಗಲ್ಲುಗಂಬ ಸಿದ್ಧವಾಗಿತ್ತು. ಅಂದು ಬ್ರಾಹ್ಮೀ ಮುಹೂರ್ತದಲ್ಲಿಯೇ ಎದ್ದು ಸ್ನಾನಮಾಡಿದ ಖುದಿರಾಮ, ಭಗವದ್ಗೀತೆ ಹಿಡಿದು ಪದ್ಮಾಸನದಲ್ಲಿ ಕುಳಿತು ಕೆಲವು ಶ್ಲೋಕಗಳನ್ನು ಹೇಳಿಕೊಂಡ. ನಂತರ ಮುಂದಿನ ಕ್ಷಣಗಳಿಗಾಗಿ ತಯಾರಾಗಿ ಕಾಯುತ್ತ ಕುಳಿತ. ಜೈಲರ್ ಬಂದು, ‘ಖುದಿರಾಮ್ ಸಮಯವಾಯಿತು. ಸಿದ್ಧನಾಗು’ ಎಂದ. ‘ನಾನು ಸಿದ್ಧನಾಗಿ ಬಹಳ ಸಮಯವಾಯಿತು ಜೈಲರ್​ಬಾಬು. ನೀವೇ ತಡ’ ಎಂದು ಚಟಾಕಿ ಹಾರಿಸಿದ ಖುದಿರಾಮ. ಖುದಿರಾಮನ ಹಳೆಯ ಬಟ್ಟೆಗಳ ಬದಲಿಗೆ ಗಲ್ಲಿಗೆ ಹೋಗುವ ಮುನ್ನ ಹಾಕಿಕೊಳ್ಳಬೇಕಾದ ಹೊಸಬಟ್ಟೆಗಳನ್ನು ಜೈಲರ್ ನೀಡಿದ. ಖುದಿರಾಮ ನಸುನಕ್ಕ.

‘ಏಕೆ ನಗುತ್ತಿದ್ದೀಯೇ?’ ಜೈಲರ್ ಪ್ರಶ್ನೆ. ‘ಇದನ್ನೇ ಪುನರ್ಜನ್ಮ ಎನ್ನುತ್ತದೆ ನಮ್ಮ ಭಗವದ್ಗೀತೆ. ಹೇಗೆ ಮನುಷ್ಯನು ಹಳೆಯ ಬಟ್ಟೆಗಳನ್ನು ಬಿಸುಟು ಹೊಸಬಟ್ಟೆಗಳನ್ನು ಧರಿಸುತ್ತಾನೆಯೋ ಹಾಗೆಯೇ ಜೀರ್ಣಗೊಂಡ ಶರೀರಗಳನ್ನು ತ್ಯಜಿಸಿ ಹೊಸ ಶರೀರಗಳನ್ನು ಧರಿಸುವುದೇ ಪುನರ್ಜನ್ಮ ಎನ್ನುತ್ತದೆ ಅದರ ಒಂದು ಶ್ಲೋಕ. ಈಗ ನಾನು ಮರುಹುಟ್ಟನ್ನು ಪಡೆಯಲು ಹೊರಟಿದ್ದೇನೆ ಎಂಬುದರ ಪ್ರತೀಕವೇ ನೀವು ಕೊಟ್ಟಿರುವ ಹೊಸಬಟ್ಟೆಗಳು!’. ಸಾವಿನ ದವಡೆಯಲ್ಲಿದ್ದಾಗಲೂ ಎಂಥ ಮಾತು! ಯೋಗಿಯೊಬ್ಬ ಮಾತ್ರ ಹೀಗೆ ಇರಬಲ್ಲ, ಹೇಳಬಲ್ಲ.

ಖುದಿರಾಮನ ಅಂತಿಮ ಪಯಣ ಶುರುವಾಯಿತು. ಕೈಯಲ್ಲಿ ಭಗವದ್ಗೀತೆಯ ಪ್ರತಿಯನ್ನು ಹಿಡಿದು ಜೈಲು ಸಿಬ್ಬಂದಿಯ ನಡುವೆ ನಡೆದ ಅವನು ಬಂದುಮುಟ್ಟಿದ್ದು ವಧಾಪೀಠದ ಬಳಿಗೆ. ಮೆಟ್ಟಿಲು ಹತ್ತಿ ನೇಣುಕುಣಿಕೆಯ ಕೆಳಗೆ ನಿಂತ. ಜೈಲಿನ ಗಡಿಯಾರ 6 ಗಂಟೆ ಬಾರಿಸಿತು.

ಇದ್ದಕ್ಕಿದ್ದಂತೆ ಖುದಿರಾಮನ ಕಂಠದಿಂದ ಗಟ್ಟಿದನಿಯಲ್ಲಿ ಹೊರಹೊಮ್ಮಿತು ಘೊಷ- ‘ವಂದೇಮಾತರಂ!’. ಅದು ಜೈಲಿನ ಗೋಡೆಗಳಿಗೆ ಅಪ್ಪಳಿಸಿ ಅನುರಣನಗೊಂಡಿತು. ಅದೇನಾಶ್ಚರ್ಯ! ಅದೇ ವೇಳೆಗೆ ಸಾವಿರಾರು ಕಂಠಗಳಿಂದ ‘ವಂದೇಮಾತರಂ, ವಂದೇಮಾತರಂ’ ಎಂಬ ಮಾತೃವಂದನೆಯ ಸಾಮೂಹಿಕ ಉದ್ಘೋಷ!. ಅದು ಹೊಮ್ಮಿದ್ದು ಜೈಲುಗೋಡೆಯ ಹೊರಗೆ ನೆರೆದಿದ್ದ ಅಪಾರ ಜನಸ್ತೋಮದಿಂದ. ಇಡೀ ವಾತಾವರಣದಲ್ಲಿ ವಂದೇಮಾತರಂ ತುಂಬಿಕೊಂಡಿತು.

ಅದನ್ನು ಕೇಳಿ ಪರಮಾನಂದದಿಂದ ಭಗವದ್ಗೀತೆಯನ್ನು ಕಣ್ಣಿಗೊತ್ತಿಕೊಂಡು, ‘ನಿಮ್ಮ ಕೆಲಸ ಮುಂದುವರಿಸಿ ಜೈಲರ್​ಬಾಬು’ ಅಂದ ಖುದಿರಾಮ್

ವಾಸಾಂಸಿ ಜೀರ್ಣಾನಿ: ಜೈಲು ಸಿಬ್ಬಂದಿ ಅವನ ಕೈಕಾಲು ಕಟ್ಟಿ ತಲೆಗೆ ಕಪ್ಪುಮುಸುಕು ಹಾಕಿ ಕುತ್ತಿಗೆಯ ಸುತ್ತ ನೇಣುಕುಣಿಕೆ ಬಿಗಿದರು. ಕಾಲ ಕೆಳಗಿನ ಹಲಗೆಯನ್ನು ಸರಿಸಿದರು. ನೇಣುಹಗ್ಗಕ್ಕೆ ತೂಗಾಡಲಾರಂಭಿಸಿತು ಅಮರ ಹುತಾತ್ಮ ಖುದಿರಾಮ್ ಬೋಸನ ಶರೀರ. ‘ವಾಸಾಂಸಿ ಜೀರ್ಣಾನಿ ಯಥಾ ವಿಹಾಯ| ನವಾನಿ ಗೃಹ್ಣಾತಿ ನರೋಪರಾಣಿ…’ ಎಂಬ ಗೀತಾಶ್ಲೋಕದಂತೆ ಹೊಸ ಶರೀರವನ್ನು ಹುಡುಕಿ ಹೊರಟಿತ್ತು. ಅತ್ತ ಲೋಕಮಾನ್ಯ ತಿಲಕರು ‘ಕೇಸರಿ’ ಪತ್ರಿಕೆಯಲ್ಲಿ ಈ ಕುರಿತು ಬರೆದ ಲೇಖನಗಳಿಗಾಗಿ ಮಂಡಾಲೆ ಜೈಲಿನಲ್ಲಿ 6 ವರ್ಷ ಶಿಕ್ಷೆ ಅನುಭವಿಸುವಂತಾಯಿತು. ಈ ಘಟನೆಯ ಪ್ರತಿಧ್ವನಿ ಲಂಡನ್ನಿನಲ್ಲೂ ಕೇಳಿಬಂತು. ಅಲ್ಲಿ ಸಾವರ್ಕರ್ ಶಿಷ್ಯರು ಇನ್ನೂ ಬಾಂಬ್ ತಯಾರಿಕೆಯ ಪ್ರಯೋಗದಲ್ಲಿದ್ದಾಗಲೇ ಈ ಪ್ರಕರಣ ನಡೆದದ್ದು ಕೇಳಿ ಸಾವರ್ಕರ್ ಹಷೋದ್ಗಾರ ಮಾಡಿದರು- ‘ಖುದಿರಾಮ್ ನೀನು ಧನ್ಯ, ಧನ್ಯ! ನಿನ್ನ ವಂಶ ಪಾವನವಾಯಿತು. ನಿನ್ನ ಈ ಬಾಂಬ್ ಸ್ಪೋಟದಿಂದ ಹಿಂದುಸ್ತಾನದ ಬಗ್ಗಿ ಬೇಡುವ ಹಳೆಯ ರಾಜನೀತಿ ಧೂಳೀಪಟವಾಗಿದೆ. ಸಶಸ್ತ್ರ ಕ್ರಾಂತಿಯ ಹೊಸ ರಕ್ತರಂಜಿತ ಯುಗದ ಉದಯವಾಗಿದೆ’. ಗದರ್ ಪಾರ್ಟಿಯ ಹಿರಿಯ ನಾಯಕ ಲಾಲಾ ಹರ್​ದಯಾಳ್ ಭಾವಗರ್ಭಿತರಾಗಿ ಕಣ್ಣೀರು ಸುರಿಸುತ್ತಾ, ‘ಅಭಿನಂದನೆಗಳು ಖುದಿರಾಮ್ ಬೋಸ್! ನಿನ್ನ ಈ ಧೀರಕೃತ್ಯದಿಂದ ನಮ್ಮೆಲ್ಲರ ಮರ್ಯಾದೆಯನ್ನು ಸಾವಿರ ಪಟ್ಟು ಹೆಚ್ಚಿಸಿದ್ದೀಯಾ’ ಎಂದರು.

1908 ಆಗಸ್ಟ್ 11ರಂದು ಸಂಜೆಯ ವಿಶೇಷ ಸಂಚಿಕೆ ಹೊರಡಿಸಿದ ‘ಅಮೃತ ಬಝಾರ್ ಪತ್ರಿಕಾ’ ಹೀಗೊಂದು ಸುದ್ದಿಯನ್ನು ವರದಿಮಾಡಿತು- ‘ಇಂದು ಬೆಳಗ್ಗೆ ಖುದಿರಾಮ್ ಬೋಸರನ್ನು ನೇಣುಗಂಬಕ್ಕೆ ಏರಿಸಲಾಯಿತು. ಅವನು ದೃಢಹೆಜ್ಜೆ ಇರಿಸುತ್ತ ನಡೆದುಹೋಗಿ ನೇಣುಕುಣಿಕೆಯನ್ನು ಕೈಯಾರ ಕುತ್ತಿಗೆಗೆ ಧರಿಸಿಕೊಂಡ. ಅವನ ಮುಖವನ್ನು ಮುಚ್ಚಲು ಕಪ್ಪುಟೋಪಿ ಹಾಕಿದಾಗಲೂ ಮುಗುಳುನಗುತ್ತಲೇ ಇದ್ದ. ಅವನ ಪಾರ್ಥಿವ ದೇಹದೊಂದಿಗೆ ನೂರಾರು ಜನ ಗಂಡಕಿ ನದಿ ತಟದಲ್ಲಿನ ಸ್ಮಶಾನಘಟ್ಟದ ಕಡೆಗೆ ಹೆಜ್ಜೆಹಾಕಿದರು. ಹಾದಿಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತ ಜನಸಮೂಹ ಬಿಕ್ಕಿಬಿಕ್ಕಿ ಅಳುತ್ತಿತ್ತು. ಖುದಿರಾಮನ ವಕೀಲ ಕಾಳಿದಾಸ ಮುಖರ್ಜಿ ಅವನ ಪಾರ್ಥಿವ ಶರೀರಕ್ಕೆ ಅಗ್ನಿಸಂಸ್ಕಾರ ಮಾಡಿದರು’.

(ಲೇಖಕರು ಹಿರಿಯ ಪತ್ರಕರ್ತರು)

(ಈ ಕುರಿತ ವಿವರಗಳಿಗೆ ಇದೇ ಅಂಕಣಕಾರರ ಕಾದಂಬರಿ ‘ರುಧಿರಾಭಿಷೇಕ’ ಓದಿರಿ. ಪ್ರತಿಗಳಿಗೆ: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು-560019, ಮೊಬೈಲ್: 09448284603)

Leave a Reply

Your email address will not be published. Required fields are marked *

Back To Top