Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಸ್ಥೂಲಕಾಯ ಸಮೃದ್ಧಿಯ ಚಿಹ್ನೆಯಲ್ಲ…

Saturday, 12.08.2017, 3:01 AM       No Comments

ನಾವು ಮಕ್ಕಳಾಗಿದ್ದಾಗ, ಶಾಲೆಯಲ್ಲಿ ಒಂದು ಮಗು ದಪ್ಪಗಿದ್ದರೆ ಎಲ್ಲರೂ ‘ಡುಮ್ಮ ಡುಮ್ಮ ಡುಮ್ಮಣ್ಣ’ ಎಂದು ರೇಗಿಸುತ್ತಿದ್ದರು. ಹುಡುಗಿಯಾಗಿದ್ದಾಗ ‘ಬಳುಕುವ ಬಳ್ಳಿಯಂತಿದ್ದೆ, ಈಗ ಮದುವೆ ಆದ ನಂತರ ಹೆರಿಗೆಯ ಹೊತ್ತಿಗೆ ದಪ್ಪಗಾದೆ’ ಎಂದು ಯುವತಿಯರು ಗೊಣಗುತ್ತಿದ್ದರು. ಹಿಂದೆ, ಗತ್ತಿನಿಂದ ಕೆಲಸದವರಿಂದ ಕೆಲಸ ತೆಗೆಸಿಕೊಂಡು ಕುಳಿತಲ್ಲೇ ದರ್ಬಾರು ಮಾಡುವವರು ಸ್ಥೂಲಕಾಯದವರಾಗುತ್ತಿದ್ದರು. ಆದ್ದರಿಂದ ಒಂದು ಕಾಲಕ್ಕೆ ಎರಡು ಹೊತ್ತಿನ ಹೊಟ್ಟೆಯ ಹಿಟ್ಟಿಗೆ ಪರದಾಡುತ್ತಿದ್ದ ನಮ್ಮ ದೇಶದಲ್ಲಿ ಯಾರಾದರೂ ದಪ್ಪಗಾದರೆ ಸ್ನೇಹಿತರು ‘ಏನಪ್ಪ, ಸಂಪಾದನೆ ಜೋರಾ? ಚೆನ್ನಾಗಿ ಹೊಟ್ಟೆ ಬೆಳೆದಿದೆ?’ ಎನ್ನುತ್ತಿದ್ದರು. ಸಮೃದ್ಧಿಯ ಸಂಕೇತ ಎಂದುಕೊಂಡಿದ್ದರು.

ಇತ್ತೀಚೆಗೆ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಶೇ. 30ರಷ್ಟು ಮಕ್ಕಳು ಸ್ಥೂಲಕಾಯದವರಾಗಿದ್ದುದು ಕಂಡು ನಾನು ದಂಗಾದೆ. ‘ಯಾಕೆ ನಿಮ್ಮ ಶಾಲೆ ಮಕ್ಕಳಿಗೆ ಆಹಾರ-ಆರೋಗ್ಯದ ಬಗ್ಗೆ ತಿಳಿಸುವುದಿಲ್ಲವೇ?’ ಎಂದು ಕೇಳಿದ್ದಕ್ಕೆ ಶಿಕ್ಷಕರು ‘ಎಲ್ಲ Elite Societyಯ ಮಕ್ಕಳು. ನಮ್ಮ ಮಾತು ಕೇಳುವುದಿಲ್ಲ. ಅದಕ್ಕೆ ನಿಮ್ಮಂಥವರಿಂದ ಉಪನ್ಯಾಸ ಮಾಡಿಸುತ್ತೇವೆ’ ಎಂದರು! ಇನ್ನು ಹುಡುಗಿಯರಂತೂ ಮದುವೆಗೆ ಮೊದಲೇ ‘ಡ್ರಮ್ ಆಗುತ್ತಿದ್ದಾರೆ.

ಸ್ಥೂಲಕಾಯ ಅಂದರೆ ಏನು? ಶರೀರದಲ್ಲಿ ಅಸಾಧಾರಣ ಮತ್ತು ವಿಪರೀತ ಕೊಬ್ಬಿನ ಶೇಖರಣೆಯಾಗಿ, ಆರೋಗ್ಯದಲ್ಲಿ ಏರುಪೇರು ಆಗುವುದಕ್ಕೆ ಸ್ಥೂಲಕಾಯ ಇಲ್ಲವೇ ಬೊಜ್ಜು ಎನ್ನುತ್ತೇವೆ. ಒಬ್ಬ ವ್ಯಕ್ತಿಯ ವಯಸ್ಸಿಗೆ, ಎತ್ತರಕ್ಕೆ ಅನುಗುಣವಾಗಿ ಮೈತೂಕವಿರಬೇಕು. ಇದಕ್ಕೆ”Body Mass Index’ (BMI) ಎನ್ನುತ್ತೇವೆ. ವ್ಯಕ್ತಿಯ ಕಿಲೋಗ್ರಾಂಗಳಲ್ಲಿರುವ ತೂಕವನ್ನು ಅವನ ಸೆಂಟಿಮೀಟರ್​ನ ಎತ್ತರದಿಂದ ಭಾಗಿಸಿದರೆ BMI ಬರುತ್ತದೆ.

ಸ್ಥೂಲಕಾಯಕ್ಕೆ ಕಾರಣಗಳೇನು? ನಾವು ಊಟದಲ್ಲಿ ಸೇವಿಸಿದ ಉಷ್ಣ ಪರಿಮಾಣ (Calories)  ನಾವು ಖರ್ಚುಮಾಡುವುದಕ್ಕಿಂತ ಹೆಚ್ಚಾದರೆ ಬೊಜ್ಜು ಉಂಟಾಗುತ್ತದೆ. ಜನಸಾಮಾನ್ಯರ ಮಾತಿನಲ್ಲಿ ಹೇಳಬೇಕೆಂದರೆ ಮಿತಿಮೀರಿ ತಿಂದು ಆಲಸಿಗಳಾಗಿ ತಿಂದದ್ದನ್ನು ಅರಗಿಸಿಕೊಂಡು ಅದನ್ನು ಕರಗಿಸಲು ದೇಹದಂಡಿಸದಿದ್ದರೆ ಸ್ಥೂಲಕಾಯ ಉಂಟಾಗುತ್ತದೆ. ಉದಾಹರಣೆಗೆ, ಹೆಚ್ಚು ಉಷ್ಣ ಪರಿಮಾಣ ಇರುವ ಜಿಡ್ಡಿನ ಪದಾರ್ಥ, ಸಿಹಿತಿಂಡಿ ಮಿತಿಮೀರಿ ತಿಂದು, ಮೈ ಬಗ್ಗಿಸಿ ಕೆಲಸ, ವ್ಯಾಯಾಮ ಮಾಡದೆ ಕುಳಿತಲ್ಲೇ ಕುಳಿತು ಜೀವನ ನಡೆಸಿದರೆ ದಪ್ಪಗಾಗುತ್ತೇವೆ. ಇಂದು ಹಲವರು 6-7 ಗಂಟೆ ಕಚೇರಿಯಲ್ಲಿ ಕುಳಿತಲ್ಲೇ ಕುಳಿತು ಕೆಲಸ ಮಾಡುತ್ತ ಮಧ್ಯೆ ಕುರುಕಲು ತಿಂಡಿ ತಿನ್ನುತ್ತ, ಕಾಫಿ-ಚಹಾ, ಮಿತಿಮೀರಿ ಸಕ್ಕರೆ ಇರುವ ವಿದೇಶಿ ಪಾನೀಯ ಕುಡಿದು ಕಾರಲ್ಲಿ ಮನೆಗೆ ಬಂದು ಸೋಫಾ ಮೇಲೆ ಸುಸ್ತು ಎಂದು ಮತ್ತೆ ಕುಳಿತು ಟಿವಿ ನೋಡುತ್ತ ಸಮಯ ಕಳೆಯುತ್ತಾರೆ! ಇನ್ನು ಮನೆಯಲ್ಲಿರುವ ಹೆಂಗಸರಿಗೆ ಇಂದು ರುಬ್ಬಬೇಕಿಲ್ಲ, ಬೀಸಬೇಕಿಲ್ಲ. ಕೆಲಸದವರಿಗೆ ಕೆಲಸ ಹೇಳಿ ತಾವು ಟಿವಿ ಮುಂದೆ ಸ್ಥಾಪನೆಯಾಗಿ ಕಳೆಯುತ್ತಿದ್ದಾರೆ. ಇನ್ನು ಮಕ್ಕಳು ಓದುವುದು ಬಿಟ್ಟರೆ ಟವಿಯಲ್ಲಿ ಕಾರ್ಟೂನ್ ನೋಡುವುದು ಇಲ್ಲವೇ ವಿಡಿಯೋ ಗೇಮ್ ಆಡುವುದು, ಇಲ್ಲದಿದ್ದರೆ ಮೊಬೈಲ್! ಜತೆಗೆ ನಾಲ್ಕು ಬಿಳಿಯ ವಿಷವೆಂದೇ ಪರಿಗಣಿಸಲ್ಪಟ್ಟಿರುವ ಮೈದಾ, ಸಕ್ಕರೆ, ಉಪು್ಪ ಮತ್ತು ಕೆಟ್ಟ ಜಿಡ್ಡಿನಿಂದ ಮಾಡಿದ ಜಂಕ್ ಫಾಸ್ಟ್​ಫುಡ್ ತಿಂದು ಸ್ಥೂಲಕಾಯರಾಗುತ್ತಿದ್ದಾರೆ! ಅಂದರೆ ಬೊಜ್ಜು ಆಧುನಿಕ ಜೀವನಶೈಲಿಯಿಂದ ಬಂದ ಒಂದು ಕಾಯಿಲೆ ಎನ್ನಬಹುದು.

ಬೊಜ್ಜಿನ ಇತಿಹಾಸ: ವೈದ್ಯರಿಗೆ” Hippocrates Oath’ ನೀಡಿದ ಜಗದ್ವಿಖ್ಯಾತ ವೈದ್ಯರಾದ ಹಿಪಿಕ್ರೆಟಿಸ್- ‘ಬೊಜ್ಜು ಕೇವಲ ಒಂದು ರೋಗವಲ್ಲ. ಅದು ಹಲವು ರೋಗಗಳ ತಾಣ’ ಎನ್ನುತ್ತಾರೆ. 21ನೇ ಶತಮಾನದ ವೈದ್ಯಕೀಯ ವಿದ್ಯಮಾನ ದೃಢೀಕರಿಸಿ ‘ಸ್ಥೂಲಕಾಯ ನಾಲ್ಕು ಮಾರಣಾಂತಿಕ ರೋಗಗಳ ತಾಯಿ’ ಎನ್ನುತ್ತಾರೆ. ಇದನ್ನೇ ಕ್ರಿ.ಪೂ. 6ನೇ ಶತಮಾನದಲ್ಲಿ ನಮ್ಮ ದೇಶದ ಪ್ರಖ್ಯಾತ ಶಸ್ತ್ರಚಿಕಿತ್ಸಾ ತಜ್ಞ ಸುಶ್ರುತ, ಬೊಜ್ಜಿಗೂ, ಮಧುಮೇಹ ಮತ್ತು ಹೃದಯಾಘಾತಕ್ಕೂ ನಂಟಿದೆ ಎಂದು ವಿಶ್ವಕ್ಕೆ ಪ್ರಪ್ರಥಮವಾಗಿ ತಿಳಿಸಿದ ಮಹಾನ್ ಪಂಡಿತ!

ಸುಶ್ರುತ ಹೇಳಿದ್ದು ಸತ್ಯವೆಂದು ಇಂದಿನ ಆಧುನಿಕ ವೈದ್ಯಕೀಯ ವಿಜ್ಞಾನ ಸಾಬೀತುಪಡಿಸಿದೆ. ಬೊಜ್ಜಿನಿಂದ ಬರುವ ನಾಲ್ಕು ಚಾಂಡಾಳ ಚೌಕಡಿಗಳೆಂದರೆ- ಮಧುಮೇಹ, ಅಧಿಕ ರಕ್ತದೊತ್ತಡ, ಅತಿಹೆಚ್ಚು ಜಿಡ್ಡು ಮತ್ತು ಹೃದಯಾಘಾತ. ಇಂದು ವಿಶ್ವದಲ್ಲಿ ಅತಿಹೆಚ್ಚು ಜನರ ಸಾವಿಗೆ ಕಾರಣ ಈ ನಾಲ್ಕು ರೋಗಗಳು. ಇದಲ್ಲದೆ ಬೊಜ್ಜು ಇದ್ದವರಿಗೆ ಮೂಳೆಯ ಸಾಂದ್ರತೆ ಕಡಿಮೆ ಆಗಿ ಕೀಲು ಸವೆದು ನಡೆಯಲು ಕಷ್ಟವಾಗಬಹುದು. ಗರ್ಭಕೋಶ, ಸ್ತನ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್ ಬರಬಹುದು. ರಕ್ತದೊತ್ತಡ ವಿಪರೀತ ಹೆಚ್ಚಾದಾಗ ಮಿದುಳಿನಲ್ಲಿ ರಕ್ತಸ್ರಾವವಾಗಿ ಪಾರ್ಶ್ವವಾಯು ಉಂಟಾಗಬಹುದು. ಮಿತಿಮೀರಿ ಬೊಜ್ಜು ಇದ್ದವರಿಗೆ ಮಲಗಿದಾಗ ಉಸಿರು ತೆಗೆದುಕೊಳ್ಳಲು ಆಗದೆ ಉಸಿರು ನಿಲ್ಲಬಹುದು. ಮಾನಸಿಕ ಒತ್ತಡ, ದುಗುಡ ಹೆಚ್ಚಾಗಿ ಮಾನಸಿಕ ಕಾಯಿಲೆಗಳಿಗೆ ತುತ್ತಾಗಬಹುದು. ಬಾಯಿ ರುಚಿಗೆ ಸಿಕ್ಕಸಿಕ್ಕಲ್ಲಿ ಸಿಕ್ಕಾಪಟ್ಟೆ ತಿನ್ನುವವರಿಗೆ ಸರ್ವಜ್ಞ ಹೇಳುತ್ತಾನೆ-

ನಾಲಿಗೆ ಕಟ್ಟಿದವನು ಕಾಲನಿಗೆ ದೂರಿಹನು

ನಾಲಿಗೆ ರುಚಿ ಮೇಲಾಡುತಿರುವವನು

ಕಾಲನಿಗೆ ಹತ್ತಿರವು ಸರ್ವಜ್ಞ.

ಇಂದಿನ ಆಧುನಿಕ ವಿಜ್ಞಾನದಲ್ಲಿ “Hip waist ratio’ ಪರೀಕ್ಷೆ ಮಾಡುತ್ತೇವೆ. ಅಂದರೆ ಹೊಟ್ಟೆ ದಪ್ಪಗಿರುವವರನ್ನು ಕಂಡುಹಿಡಿಯುವ ವಿಧಾನ. ಇದು ಗಂಡಸರಲ್ಲಿ 0.9 ಮತ್ತು ಮಹಿಳೆಯರಲ್ಲಿ 0.8 ಇದ್ದರೆ ಇವರು Metabolic Syndrome ನಿಂದ ಬರುವ ಹಲವು ಕಾಯಿಲೆಗಳಿಂದ ಅಕಾಲಿಕವಾಗಿ ಅಸುನೀಗುತ್ತಾರೆ ಎಂದು ತಿಳಿದುಬಂದಿದೆ. ‘ಕಾಯಕವೇ ಕೈಲಾಸ’ ಎಂಬುದನ್ನರಿತು ಶ್ರಮಜೀವಿಗಳಾದರೆ ಒಳ್ಳೆಯದು. ಕಾಯಕ ಮಾಡದೇ ಆಲಸಿಗಳಾಗಿ ಐಷಾರಾಮಿಗಳಾದರೆ ಬೇಗ ಕೈಲಾಸವಾಸಿಗಳಾಗುತ್ತೇವೆ!

ಬಾಹ್ಯದಲ್ಲಿ ನೋಡಲು ವ್ಯಕ್ತಿಯು ದಪ್ಪಗೆ ದಷ್ಟಪುಷ್ಟವಾಗಿ ಕಂಡರೂ ಶರೀರದ ಒಳಗೆ ನಡೆಯುವ ವ್ಯವಸ್ಥಿತ ಕ್ರಿಯೆಗಳಲ್ಲಿ ಏರುಪೇರಾಗಿ ಅವ್ಯವಸ್ಥೆಯ ತಾಣವಾಗಿ ರಕ್ತದಲ್ಲಿರುವ ಸಕ್ಕರೆಯ ಅಂಶ, ಜಿಡ್ಡು, ಉಪು್ಪ ಹೆಚ್ಚಿ ಸಮತೋಲನ ಕೆಡುವುದಕ್ಕೆ Metabolic Syndrome ಅನ್ನುತ್ತೇವೆ. 1970ರಿಂದೀಚೆಗೆ ಇದು ವಿಶ್ವವ್ಯಾಪಿಯಾಗಿ ಜನರ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದರಿತ ವಿಶ್ವ ಆರೋಗ್ಯ ಸಂಸ್ಥೆ ಈ ನಿಟ್ಟಿನಲ್ಲಿ ಜಾಗೃತಗೊಳ್ಳಲು ಜನರಿಗೆ ಕರೆಕೊಟ್ಟಿದೆ.

ಅವೊಗ್ಯಾಡ್ರೊ ಮತ್ತು ಕ್ರಿಪಾಲ್ಡಿ ಎನ್ನುವ ಇಬ್ಬರು ಸಂಶೋಧಕರು 6 ಜನ ದಪ್ಪಗಿದ್ದವರಲ್ಲಿ ಪರೀಕ್ಷೆ ನಡೆಸಿ ಅವರಲ್ಲಿಯ ಮಧುಮೇಹ, ಅತಿಹೆಚ್ಚು ಜಿಡ್ಡು, ರಕ್ತದೊತ್ತಡ ಕಡಿಮೆಮಾಡಲು ನಿಯತ ವ್ಯಾಯಾಮ, ಕಡಿಮೆ ಕ್ಯಾಲರಿ ಇರುವ ಸಾತ್ವಿಕ ಆಹಾರದಿಂದ ತೂಕ ನಿಯಂತ್ರಿಸುವುದರ ಜತೆಗೆ ಅವರ ಆರೋಗ್ಯ ಉತ್ತಮವಾಗುವುದನ್ನು ಜಗತ್ತಿಗೆ ತೋರಿಸಿದರು. ಇದನ್ನೇ ಸರ್ವಜ್ಞ ಹೀಗೆಂದಿದ್ದಾನೆ-

ಒಮ್ಮೆ ಉಂಡವ ಯೋಗಿ, ಇಮ್ಮೆ ಉಂಡವ ಭೋಗಿ

ಮುಮ್ಮೆ ಉಂಡವ ಭವರೋಗಿ, ನಾಲ್ಮೆ ಉಂಡವನ

ಸುಮ್ಮನೆ ಹೊತ್ತುಕೊಂಡು ಹೋಗಿ ಸರ್ವಜ್ಞ

ಪಾಶ್ಚಾತ್ಯರ ಅಂಧಾನುಕರಣೆ ಮಾಡಿ ಸಹಸ್ರಾರು ಜನ ಮತ್ತು ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಕೆಟ್ಟ ಜೀವನಶೈಲಿ ತಮ್ಮದಾಗಿಸಿಕೊಂಡು ತಂದೆ-ತಾಯಿಗಳೇ ಅವರ ಶವಸಂಸ್ಕಾರ ಮಾಡುವ ದುಸ್ಥಿತಿ ತಂದುಕೊಳ್ಳುತ್ತಿದ್ದಾರೆ. ಸಿಕ್ಕಸಿಕ್ಕ ಕ್ರಿಮಿಕೀಟಗಳನ್ನು ತಿನ್ನುವವರು ಎಂದು ಕುಖ್ಯಾತಿ ಪಡೆದ ಚೀನಿಯರು 2005ರಲ್ಲಿ “The China Study’ ಎಂದು ಜಗತ್ತಿನ ಗಮನ ಸೆಳೆದ ಪುಸ್ತಕದಲ್ಲಿ ಕೊಲಿನ್ ಕ್ಯಾಂಬೆಲ್ ಎನ್ನುವವರು ಚೀನಾ ಮತ್ತು ಆಕ್ಸ್​ಫರ್ಡ್ ಸಮೀಕ್ಷೆಯನ್ನು 65 ಪ್ರದೇಶದ 6500 ಜನರ ಜೀವನಶೈಲಿ ಮತ್ತು ಅವರ ಆಹಾರ ಪದ್ಧತಿಯನ್ನು ಕೂಲಂಕಷವಾಗಿ ಪರೀಕ್ಷಿಸಿ ಅಂತಿಮವಾಗಿ ಜಗತ್ತಿನ ಕಣ್ಣುತೆರೆಯುವ ತೀರ್ಪಕೊಟ್ಟರು. ಅದರ ಪ್ರಕಾರ ಯಾರು ಹೊಟ್ಟು ಸಮೇತ ಕಾಳನ್ನು ಸೇವಿಸುತ್ತಾರೋ, ಸಸ್ಯಾಹಾರಿಗಳಾಗುತ್ತಾರೋ, ಪ್ರಾಣಿಜನ್ಯ ಪ್ರೋಟೀನಿಗಾಗಿ ಮೊಟ್ಟೆ ಮಟನ್ ತಿನ್ನುವುದನ್ನು ಕಡಿಮೆ ಮಾಡುತ್ತಾರೋ ಅಂಥವರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳುಂಟಾಗುವುದು ಕಡಿಮೆ. ಇತ್ತೀಚೆಗೆ ಸಿರಿಧಾನ್ಯದ ಮಹತ್ವವನ್ನು ಮತ್ತೆ ತಿಳಿಸುವ ಚಿಕ್ಕ ಪ್ರಯತ್ನ ನಮ್ಮ ದೇಶದಲ್ಲೂ ನಡೆಯುತ್ತಿದೆ. ಕನಕದಾಸರ ‘ರಾಮಧಾನ್ಯ ಚರಿತೆ’ಯಲ್ಲಿ ರಾಗಿಯ ಕತೆ ಉಲ್ಲೇಖಿಸಲ್ಪಟ್ಟಿದೆ. ಶ್ರೀರಾಮಚಂದ್ರ ಅಯೋಧ್ಯೆಗೆ ಮರಳಿದಾಗ ಎಲ್ಲರಿಗೂ ಮೃಷ್ಟಾನ್ನ ಭೋಜನ ಬಡಿಸಿದರಂತೆ. ಮಲ್ಲಿಗೆಯಂತೆ ಬೆಳ್ಳಗೆ ಘಮಘಮಿಸುವಂತೆ ಅರಳಿದ ಬಿಸಿ ಅನ್ನ, ತುಪ್ಪ ತಿನ್ನುವಾಗ ಎಲ್ಲರೂ ಅಕ್ಕಿಯನ್ನು ಹೊಗಳಿದರಂತೆ. ಅವರ ಮಾತು ಕೇಳಿದ ಅಕ್ಕಿ ಹಿರಿಹಿರಿ ಹಿಗ್ಗಿ ಜಂಭದಿಂದ ರಾಗಿಯನ್ನು ಮೂದಲಿಸಿತಂತೆ. ಆಗ ರಾಗಿ ‘ನಾನು ಜನಸಾಮಾನ್ಯರ ಧಾನ್ಯ. ಎಲ್ಲರಿಗೂ ನಾನೇ ಹಿತಕಾರಿ’ ಎಂದು ಬೀಗಿತಂತೆ. ಅಕ್ಕಿ-ರಾಗಿಯ ಜಗಳ ರಾಮನ ಆಸ್ಥಾನದವರೆಗೂ ತಲುಪಿತಂತೆ. ಮುಖ್ಯ ಕೆಲಸದಲ್ಲಿ ತಲ್ಲೀನನಾಗಿದ್ದ ರಾಮ, ಕೆಲಸಕ್ಕೆ ಬಾಧೆ ಮಾಡಿದ ಎರಡನ್ನೂ ಕಾರಾಗೃಹಕ್ಕೆ ಕಳಿಸಿದನಂತೆ. ಹಲವು ತಿಂಗಳ ನಂತರ ನೋಡಿದಾಗ ಅಕ್ಕಿಗೆ ಮುಗ್ಗಲುವಾಸನೆ ಬಂದಿತ್ತಂತೆ. ರಾಗಿ ಮಾತ್ರ ಇದ್ದಂತೇ ಇತ್ತಂತೆ. ಇದರಿಂದ ಪ್ರಸನ್ನನಾದ ರಾಘವ ತನ್ನ ಹೆಸರನ್ನು ಅದಕ್ಕೆ ಕೊಟ್ಟನಂತೆ. ಅದು ಮುಂದೆ ‘ರಾಮಧಾನ್ಯ’ ಎಂದು ಕರೆಯಲ್ಪಟ್ಟಿತಂತೆ. ಇದು ಕಟ್ಟುಕತೆ ಎನ್ನಿಸಿದರೂ ಇದರ ತಾತ್ಪರ್ಯವನ್ನರಿತಂತೆ ಸರ್ವಜ್ಞ ಅಕ್ಕಿ ಮತ್ತು ರಾಗಿಯ ಬಗ್ಗೆ ಹೀಗೆ ಹೇಳುತ್ತಾನೆ- ‘ಅಕ್ಕಿಯನು ಉಂಬುವನು ಹಕ್ಕಿಯಂತಾಗುವನು,

ಸಿಕ್ಕು ರೋಗದಲ್ಲಿ ರೊಕ್ಕವ ವೈದ್ಯರಿಗೆ ನೆರೆ ಇಕ್ಕುತಿರುವನು ಸರ್ವಜ್ಞ’ ಮತ್ತು ‘ರಾಗಿಯನು ಉಂಬುವನು ನಿರೋಗಿ ಎಂದೆನಿಸುವನು, ರಾಗಿ ಭೋಗಿಗಳಿಗಲ್ಲ, ಬಡವರಿಗಾಗಿ ರಾಗಿ ಬೆಳೆದಿಹುದು ಸರ್ವಜ್ಞ’. ಇಂದು ಸಿರಿಧಾನ್ಯಗಳು ಬಡವ ರಿಗಲ್ಲ, ಆರೋಗ್ಯ ಸಿರಿ ಪಡೆಯಲು ಎಂದು ತಿಳಿದುಬಂದಿದೆ. ಸಂಸ್ಕೃತ ಸುಭಾಷಿತ ಹೇಳಿದಂತೆ ಆರೋಗ್ಯ ಸಂಪತ್ತು ಸಂಪಾದಿಸಲು- ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನ ಸಂಪದಃ | ಶತ್ರು ಬುದ್ಧಿ ವಿನಾಶಾಯ, ದೀಪಜ್ಯೋತಿ ನಮೋಸ್ತುತೆ || ಎಂದು ನಮ್ಮ ಜನರಲ್ಲಿ ಜ್ಞಾನದ ಜ್ಯೋತಿ ಬೆಳಗಿ ವಿಜ್ಞಾನದ ಬೆಳಕು ಪಸರಿಸಿ ತತ್ತ್ವಜ್ಞಾನದಿಂದ ಸುಜ್ಞಾನಿಗಳಾಗಿ ಸಮಾಜಮುಖಿ ಸುಖಕರ ಜೀವನ ನಡೆಸಲಿ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top