Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಸ್ಥಾವರಕ್ಕೆ ಹೃದಯ ಜೋಡಿಸಿದ ಜಂಗಮ…

Saturday, 25.03.2017, 8:11 AM       No Comments

ಹಾಕಿರುವ ಅಂಗಿಗೆ ಇಸ್ತ್ರಿಯೇ ಇಲ್ಲದಿದ್ದರೆ, ಗುಂಡಿ ಕಳಚಿದ್ದರೆ, ಮೆಟ್ಟಿರುವ ಚಪ್ಪಲಿ ಸವೆದು ಸವೆದು ಅದರ ಭಾರ ಕಿತ್ತಿದ್ದರೆ, ಕಿಸೆಯಲ್ಲಿದ್ದ ಪೆನ್ನು ಕಾರಿ ಅಲ್ಲೆಲ್ಲಾ ಶಾಯಿ ಕಲೆ ಸೃಷ್ಟಿಯಾಗಿದ್ದರೆ, ಕ್ಷೌರ ಇಲ್ಲದೆ ಮುಖ ತುಂಬಾ ಗಡ್ಡ ತುಂಬಿದ್ದರೆ ಈ ಎಲ್ಲದರ ಒಳಗಡೆ ಇರುವ ಜೀವ, ಬುದ್ಧಿವಂತಿಕೆ, ವ್ಯಕ್ತಿತ್ವ ಬಹಳ ಬೇಗ ರಿಜೆಕ್ಟ್ ಆಗಿಬಿಡುವ ಕಾಲವಿದು. ಕೊರಳ ಬಂಗಾರ, ಕಿಸೆಯ ನೋಟು, ಹಾಕಿರುವ ಬಟ್ಟೆಯೇ ಮನುಷ್ಯನ ಮೌಲ್ಯ ಎಂದೇ ಪರಿಗಣಿಸುವ ವರ್ತಮಾನಕ್ಕೆ ಈ ವ್ಯಕ್ತಿ ಸುಲಭವಾಗಿ ನಿಲುಕದೇ ಹೋಗಬಹುದು. ಸುಲಭ ನೋಟಕ್ಕೆ ನೀರಸವಾಗಿಬಿಡಬಹುದಾದ, ಬಗೆದಷ್ಟೂ ಆಳಕ್ಕೆ ಹೋಗುವ, ಯಾವತ್ತೂ ಮುಗಿಯದೇ ಉಳಿಯುವ ಮಣಿಪಾಲದ ವಿಜಯನಾಥ ಶೆಣೈಯವರ ಬಗ್ಗೆ ನಾನು ಈ ವಾರ ಬರೆಯಲೇಬೇಕು. ಇದು ನನ್ನೊಳಗಡೆಯ ಹಸಿರಿನ ಒತ್ತಾಯ ಮತ್ತು ಒತ್ತಡ. ವಿಷಯಾಂತರಕ್ಕೆ ಕ್ಷಮೆ ಇರಲಿ.

ನಾನು ಮಣಿಪಾಲದಲ್ಲಿ ಇದ್ದಷ್ಟು ದಿನ ನೇರ-ಸರ್ತ ನಡೆಯುತ್ತಿದ್ದ ಮುರಾರಿ ಬಲ್ಲಾಳರು ಮತ್ತು ಸ್ವಲ್ಪ ಓರೆಯಾಗಿ ನಡೆಯುತ್ತಿದ್ದ ವಿಜಯನಾಥ ಶೆಣೈಯವರು ನನ್ನೊಳಗಡೆ ಪ್ರಶ್ನೆಯೇ ಆಗಿದ್ದರು. ಈ ಇಬ್ಬರೂ ಮಾತನಾಡುತಿದ್ದುದು ಬರೀ ಬಾಯಿಯಿಂದಲ್ಲ. ಅದು ಅಧ್ಯಾತ್ಮವೋ, ತರ್ಕವೋ ನನಗೆ ಎಟುಕುತ್ತಿರಲಿಲ್ಲ. ಉಡುಪಿಯ ರಥಬೀದಿಯ ಅಥವಾ ಎಂ.ಜಿ.ಎಂ. ಕಾಲೇಜಿನ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಮುರಾರಿಯವರಿಗೆ ಮುಂದಿನ ಸಾಲು. ಶೆಣೈಯವರದು ಹಿಂದಿನ ಸಾಲು. ಅಲ್ಲಿಗೆ ಆ ಸಭೆಗೆ ಪೂರ್ಣತೆ. ಅದು ತುಂಬಿಕೊಂಡಂತೆ. ಮುರಾರಿಯವರು ಸಂವಾದದಲ್ಲಿ ರ್ಚಚಿಸುತ್ತಿದ್ದರು. ಪ್ರಶ್ನೆಗಳನ್ನು ಕೇಳಿ ಅವರೇ ಉತ್ತರ ಕೊಡುತ್ತಿದ್ದರು. ಶೆಣೈಯವರು ಹಾಗಲ್ಲ. ಅವರದು ಸಂಜೆಯ ಮಾತು!

1990ರಲ್ಲಿ ವಿಜಯನಾಥ ಶೆಣೈಯವರು ಮಣಿಪಾಲದಲ್ಲಿ ‘ಹಸ್ತಶಿಲ್ಪ’ವನ್ನು ಕಟ್ಟಿ, ಕ್ಷಮಿಸಿ ಜೋಡಿಸಿ ಅದು ಲೋಕದ ಕಣ್ಣಿಗೆ ನಮ್ಮ ಮಲೆನಾಡನ್ನು ಬೆಳಗುವ ಹೊತ್ತಿಗೆ 1991ರಲ್ಲಿ ನಾನು ‘ತರಂಗ’ ಸೇರಿದ್ದೆ. 1993ರಲ್ಲಿ ಇರಬೇಕು; ದಸರಾಕ್ಕಾಗಿ ಮೈಸೂರಿನ ಒಡೆಯರನ್ನು ಸಂದರ್ಶಿಸಿ ಅಲ್ಲಿಂದ ಚಿತ್ರದುರ್ಗದ ಮಠಕ್ಕೆ ಹೋಗಿ ಅಲ್ಲಿಯ ನಾಡಹಬ್ಬದ ವೈಭವವನ್ನು ಸಂಗ್ರಹಿಸಿ ವಿಶೇಷ ಸಂಚಿಕೆ ತರುವ ಉದ್ದೇಶದಿಂದ ನಮ್ಮ ಪ್ರಯಾಣ ನಿಗದಿಯಾಗಿತ್ತು. ನನಗೂ ಸಂಪಾದಕರಾದ ಸಂತೋಷ ಕುಮಾರ ಗುಲ್ವಾಡಿಯವರಿಗೂ ಪ್ರಯಾಣದುದ್ದಕ್ಕೂ ಇದೇ ಯೋಚನೆ. ಶ್ರೀಕಂಠದತ್ತ ಒಡೆಯರಿಗೆ ಕೇಳಬೇಕಾದ ಪ್ರಶ್ನೆಗಳು, ಲೇಖನ-ನುಡಿಚಿತ್ರಕ್ಕೆ ಕೊಡಬೇಕಾದ ಶೀರ್ಷಿಕೆ ಹೀಗೆ ಮನಸ್ಸಿನೊಳಗಡೆಯೇ ಪಠ್ಯ ಸಿದ್ಧವಾಗುತ್ತಿತ್ತು. ಜತೆಗಿದ್ದ ವಿಜಯನಾಥ ಶೆಣೈಯವರ ಉದ್ದೇಶವೇ ಬೇರೆ.

ರಾತ್ರಿ ಹನ್ನೆರಡು ಗಂಟೆ ಇರಬಹುದು. ಮೈಸೂರಿನಲ್ಲಿ ಅದ್ಯಾವುದೋ ಒಂದು ಹಳೆಮನೆಯ ಅಟ್ಟ ಏರಿದ್ದೆವು. ಮಾಡಿನ ಮೇಲಿದ್ದ ಮರದ ಅಡ್ಡಕೆ ಇಳಿಬಿದ್ದ ಹಗ್ಗಕ್ಕೆ ಜೋತುಬಿದ್ದು ನೋಡಲು ನಾನು ಅಟ್ಟ ಏರಿದೆ. ಅನಂತರ ಶೆಣೈ ಏರಿದರು. ಗುಲ್ವಾಡಿ ಏರಲಾಗದೆ ಕೆಳಗಡೆಯೇ ಉಳಿದರು. ಮಾಲೀಕ ಮಹಾಶಯ, ಮರದ ಪೆಟ್ಟಿಗೆಯೊಳಗಡೆ ಇದ್ದ ಬಟ್ಟೆಯಲ್ಲಿ ಮುಚ್ಚಿಟ್ಟ, ಬೀಟೆಮರದ ಚೌಕಟ್ಟಿನಲ್ಲಿದ್ದ ಹಳೇ ಮೈಸೂರಿನ ಸಾಂಪ್ರದಾಯಿಕ ಚಿತ್ರವೊಂದನ್ನು ಹೊರತೆಗೆದ. ಅಬ್ಬಬ್ಬಾ ಅಂದ್ರೆ ಎರಡಡಿ ಉದ್ದ, ಒಂದಡಿ ಅಗಲದ ಚಿತ್ರ. ಮೊದಲೇ ಪತ್ರವ್ಯವಹಾರ ನಡೆದು ಅದರ ಬೆಲೆ ನಿಗದಿಯಾಗಿತ್ತು. ನನಗೆ ಆ ಮನೆ, ಆ ಮನೆಯ ಮಾಲೀಕ, ಆ ಅಟ್ಟ, ಜತೆಗೆ ಈ ವಿಜಯನಾಥ ಶೆಣೈ ಬೇರೆಬೇರೆಯಾಗಿ ಕಾಣಲೇ ಇಲ್ಲ.

ಈಗ ಶೆಣೈಯವರು ಚಿತ್ರದ ಮಾಲೀಕನಿಗೆ ಹಣ ಕೊಡಬೇಕು. ಅಂಗಿಯನ್ನು ಎಡದ ಕೈಯಲ್ಲಿ ಎತ್ತಿ ಪ್ಯಾಂಟಿನ ಕಿಸೆಗೆ ಶೆಣೈಯವರು ಕೈಹಾಕುತ್ತಿದ್ದಾರೆ. ನಾನು ಬೆಚ್ಚಿಬಿದ್ದೆ. ಜಗತ್ಪ್ರಸಿದ್ಧ ‘ಹಸ್ತಶಿಲ್ಪ’ವನ್ನು ನಿರ್ವಿುಸಿದ ಶೆಣೈಯವರು ಪ್ಯಾಂಟು ಜಾರದಂತೆ ಕಟ್ಟಿಕೊಂಡದ್ದು ಚರ್ಮದ ಬೆಲ್ಟ್ ಅನ್ನು ಅಲ್ಲ. ತೆಂಗಿನ ನಾರಿನ ಐವತ್ತು ಪೈಸೆಯ ಹುಡಿಹಗ್ಗವನ್ನು! ಒಟ್ಟಾರೆ ಅವರಿಗೆ ಪ್ಯಾಂಟು ಜಾರಬಾರದಷ್ಟೇ. ಚಿತ್ರದ ಲೆಕ್ಕ ಚುಕ್ತಾ ಆದಮೇಲೆ ಆವರೆಗೆ ಚಿತ್ರವನ್ನು ಇಟ್ಟುಕೊಂಡಿದ್ದ ಮರದ ಪೆಟ್ಟಿಗೆಯ ಮೇಲೆ ಶೆಣೈಯವರ ಕಣ್ಣುಬಿತ್ತು. ಅದು ಕುದುರಲಿಲ್ಲ. ನಾವು ಅಟ್ಟ ಇಳಿದುಬಂದೆವು. ತಡರಾತ್ರಿ 2 ಗಂಟೆಯವರೆಗೂ ಗೋವರ್ಧನ ಲಾಡ್ಜ್​ನ ರೂಂ. ನಂ. 201ರಲ್ಲಿ ಗುಲ್ವಾಡಿಯವರಿಗೆ ಶೆಣೈ ಮಾಮ ಖರೀದಿಸಿದ ಆ ಚಿತ್ರದ ಬಗ್ಗೆ ಏನೇನೋ ವಿವರಿಸುತ್ತಿದ್ದರು. ಆ ಚಿತ್ರದ ಗೆರೆಗಳೆಲ್ಲಾ ಬಂಗಾರದ ಲೇಪನವಂತೆ. ಮುಂಜಾನೆ ಮಂಜು ಬೀಳುವ ಹೊತ್ತಿಗೇ ಅದನ್ನು ಮನೆಯ ಅಂಗಳದಲ್ಲಿ ಕೂತು ಕಲಾವಿದ ಬಿಡಿಸುವುದಂತೆ… ನನಗೆ ಆ ಕಾಲಕ್ಕೆ ಅದೆಲ್ಲಾ ತಲೆಬುಡ ಅರ್ಥವಾಗುತ್ತಿರಲಿಲ್ಲ.

ಮೈಸೂರು ಬಿಟ್ಟು ನಾವು ಮುಂದೆ ಚಿತ್ರದುರ್ಗಕ್ಕೆ ಹೊರಟು ಹೊಸದುರ್ಗ ತಲುಪಿದೆವು. ನಿರ್ಜನ ದಾರಿ. ಸಂಜೆಯಾಗುತ್ತಿತ್ತು. ಶೆಣೈಯವರು ಇದ್ದಕ್ಕಿದ್ದಂತೆ ಗಾಡಿ ನಿಲ್ಲಿಸಿ ರಿವರ್ಸ್ ತೆಗೆಯಲು ಹೇಳಿದರು. ಅಲ್ಲೊಬ್ಬ ತಂಬೂರಿ ನುಡಿಸುವವರು ಹೆಗಲಿಗೆ ಸೋರೆಕಾಯಿಯ ತಂಬೂರಿ ಏರಿಸಿಕೊಂಡು ನಡೆಯುತ್ತಿದ್ದರು. ಅವರ ಪಾಲಿಗೆ ಆ ತಂಬೂರಿಯೇ ಜೀವನದಾರಿ. ಶೆಣೈಯವರು ಐನೂರು ರೂಪಾಯಿ ಕೊಟ್ಟು ಆ ತಂಬೂರಿಯನ್ನು ಖರೀದಿಸಿದರು. ನನಗೆ ಗೊತ್ತಿದ್ದಂತೆ ಆಗ ಶೆಣೈಯವರ ಕಿಸೆಯಲ್ಲಿದ್ದದ್ದು ಅದೇ ಕಡೆಯ ಐನೂರ ನೋಟು. ತಂಬೂರಿ ಕಾರಿನ ಡಿಕ್ಕಿಯಲ್ಲಿ ಜೋಪಾನವಾಗಿ ಕೂತಿತು.

ಮುಂದೆ ಕಾರು ಐನೂರು ಮೀಟರ್ ದಾಟಿರಲಿಲ್ಲ. ಶೆಣೈಯವರು ಹಿಂದಿನಂತೆ ಕಾರಿನ ಚಾಲಕನ ಹೆಗಲಿಗೆ ಬಡಿದು ಕಾರು ನಿಲ್ಲಿಸಲು ಸೂಚಿಸಿದರು. ನಾನು ಆಚೆಈಚೆ ನೋಡಿದೆ. ಯಾವ ಮನುಷ್ಯನೂ ಕಾಣಿಸಲಿಲ್ಲ. ಕತ್ತಲಾಗುತ್ತಿದೆ. ಶೆಣೈಯವರು ಇಳಿದು ರಸ್ತೆ ಬದಿಯ ಕಣಿ ದಾಟಿ ಒಂದು ದಿಡ್ಡನ್ನು ಏರಿದರು. ಅಲ್ಲಿದ್ದ ಜಾಲಿಯ ಮರದ ಮೇಲೆ ನಾಕಾರು ಗೀಜಗನ ಗೂಡುಗಳು ನೇತಾಡುತ್ತಿದ್ದವು. ಅದೆಲ್ಲಾ ಶೆಣೈಯವರಿಗೆ ಹೇಗೆ ಕಂಡಿತು. ನಾನೂ ನೆರವಾದೆ. ಒಂದು ಗೂಡು ಕಾರಿನ ಡಿಕ್ಕಿಯಲ್ಲಿ ತಂಬೂರಿಗೆ ಜತೆಯಾಯಿತು.

ಗಂಡು ಗೀಜಗವನ್ನು ಹೆಣ್ಣು ಹೇಗೆ ಮದುವೆಯಾಗುತ್ತೆ ಗೊತ್ತಾ? ಶೆಣೈ ಮಾಮ ನನ್ನ ಮುಖ ನೋಡಿದ್ರು. ಕತ್ತಲೆಯಲ್ಲೂ ನಾನು ಶೆಣೈಯವರ ಮುಖವನ್ನೇ ನೋಡುತ್ತಿದ್ದೆ. ಅವರ ಪ್ರತಿಮಾತು ಧ್ಯಾನದಿಂದ ಹುಟ್ಟುವಂತೆ. ಬಿಟ್ಟು ಬಿಟ್ಟು ಒಳಗಡೆಯಿಂದ ಬರುವ ಮಾತುಗಳವು. ಗೂಡು ಕಟ್ಟುವ ಹೆಣ್ಣು ಐದಾರು ಬಾರಿ ಬಂದು ಪರೀಕ್ಷಿಸುತ್ತದೆ. ಆ ಮನೆಯ ಉದ್ದ, ಅಗಲ ಆ ಹೆಣ್ಣಿಗೆ ಲೆಕ್ಕವೇ ಇಲ್ಲ. ಹೆಣ್ಣು ಗೂಡಿನ ಕೌಶಲ, ಕುಸುರಿ ಸೂಕ್ಷ್ಮಗಳನ್ನಷ್ಟೇ ನೋಡುತ್ತದೆ. ಬಾಗಿಲು ಕಿಂಡಿಗಳನ್ನು ಗಮನಿಸುತ್ತದೆ. ಗೂಡಿನೊಳಗೆ ಗಂಡು ತಂದಿಟ್ಟ ಮೃದು ಹಾಸಿಗೆಯನ್ನು ನೋಡುತ್ತದೆ. ಎಲ್ಲವೂ ಓಕೆ ಆದ ಮೇಲೆಯೇ ಅದು ಗಂಡಿಗೆ ‘ಗ್ರೀನ್ ಸಿಗ್ನಲ್’ ಕೊಡುತ್ತದೆ.

ಮುಂದಿನ ಕತೆ ಕೇಳಿ. ಮೊಟ್ಟೆ ಇಟ್ಟ ಹೆಣ್ಣು ಅದರ ಮೇಲೆ ಕಾವಿಗೆ ಕೂತಾಗ, ಗೂಡೊಳಗಡೆ ಮರಿ ಹುಟ್ಟುವಾಗ ಬೆಳಕು ಬೇಕಲ್ಲ? ಗಂಡು ಬಹಳ ಬುದ್ಧಿವಂತ. ಹೊರಗಡೆಯಿಂದ ಕೆಸರು ತಂದು ಗೂಡಿನ ಮೇಲ್ಭಾಗದಲ್ಲಿ ಅಂಟಿಸಿ, ಅದೇ ವೇಗದಲ್ಲಿ ಹೊರಗಡೆ ಹಾರಿ ಎಲ್ಲಿಂದಲೋ ಮಿಂಚುಹುಳುಗಳನ್ನು ತಂದು ಆ ಅಂಟಿಗೆ ಅಂಟಿಸುತ್ತದೆ. ಗೂಡೊಳಗಡೆ ನಿರಂತರ ಬೆಳಕು. ಎಂಥ ಸಾಂಗತ್ಯ, ಎಂಥ ಬೆಳಕು! ಶೆಣೈ ಮಾಮ ಮಡಿಲಲ್ಲಿ ಇರಿಸಿಕೊಂಡ ಗೀಜಗನ ಗೂಡನ್ನು ಹಾಗೆಯೇ ನನ್ನ ಕೈಗಿಟ್ಟು, ‘ಇಲ್ಲೇ ಬೆರಳಿಟ್ಟು ನೋಡಿ ಹಳೆಯ ಮಿಂಚುಹುಳದ ಪೊರೆ ಬೆರಳಿಗೆ ತಾಕುತ್ತದೆ ಅಲ್ಲವೆ?’ ಅಂದಾಗ, ಹಾಗೆಯೇ ಪರೀಕ್ಷಿಸಿ ದೃಢಪಡಿಸಿ ಬೆಚ್ಚಿಬಿದ್ದೆ. ವಿಜಯನಾಥ ಶೆಣೈಯವರು ಬರೀ ಮನುಷ್ಯ ಮನೆಗಳನ್ನು ಮಾತ್ರ ಅಧ್ಯಯನ ಮಾಡಲಿಲ್ಲ. ಜೀವಜಗತ್ತಿನ ಬಾಳಿನ ಬೆನ್ನಿಗೆ ಬಿದ್ದವರು. ಮನುಷ್ಯನ ಮನೆ ಮತ್ತು ಮನದ ಬಗೆಗಿನ ಅವರ ಬೆರಗು ಸದಾ ಅವರ ಕಣ್ಣಿನಲ್ಲಿ ಕಾಣಿಸುತ್ತಲೇ ಇತ್ತು. ಮಣಿಪಾಲದಲ್ಲಿ ಹೆರಿಟೇಜ್ ವಿಲೇಜ್ ಆದಮೇಲೆ ಅವರ ಕಣ್ಣಿನೊಳಗಡೆಯ ಜರೂರುಗಳು ಮುಗಿದಿರಲಿಲ್ಲ. ಇವೆಲ್ಲಾ ಅತ್ಯಲ್ಪ, ಇನ್ನೂ ಇದೆ ಎಂದೇ ತೋರುವ, ಮಾತಾಡುವ, ಯೋಚಿಸುವ ಆ ಮನೆ ಜಂಗಮನಿಗೆ ಭಾರತದಲ್ಲಿ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂಬುದೇ ನನ್ನ ನೋವು.

ನಮ್ಮ ಬದುಕಿನ ನಂತರ ಈ ಜಗತ್ತು ಮುಗಿದುಹೋಗುವುದಾದರೆ ನಾವೇನೂ ಮಾಡಬೇಕಾಗಿಲ್ಲ. ನಮ್ಮ ಪೀಳಿಗೆಯ ಜನರಿಗಾಗಿ ಅಷ್ಟೇ ನಾವು ಯೋಚಿಸುವುದಲ್ಲ. ಮುಂದಿನ ಎಲ್ಲಾ ತಲೆಮಾರುಗಳ ಬಗ್ಗೆ ನಾವು ಆಸ್ಥೆಯನ್ನು ವಹಿಸಿದರೆ ನಮ್ಮ ಬದುಕಿಗೊಂದು ಅರ್ಥಬರುತ್ತದೆ ಎಂದೇ ಶೆಣೈ ಮಾಮ ಮಣಿಪಾಲದಲ್ಲಿ ಹಸ್ತಶಿಲ್ಪ ಕಟ್ಟಿದರು. ಹೆರಿಟೇಜ್ ವಿಲೇಜ್ ನಿರ್ವಿುಸಿದರು. ಬರೀ ಮಲೆನಾಡು ಅಲ್ಲ, ಇಡೀ ಕರ್ನಾಟಕದ ಹತ್ತಾರು ಪ್ರಾಚೀನ ಮನೆಗಳು, ಮಠಗಳು, ಮಂದಿರಗಳು ಪುನರ್ನಿರ್ವಣಗೊಂಡವು.

ಎಲ್ಲೆಲ್ಲಿಂದಲೋ ತಂದ ಈ ಮನೆಗಳ ಕಂಬ, ಬಾಗಿಲು, ತೊಲೆ, ಕಿಟಕಿಗಳಿಗೆ ಅಂಟಿದ ಬೆವರನ್ನು ಗ್ರಹಿಸುವ ಸೂಕ್ಷ್ಮತೆಯಲ್ಲೇ ನಮ್ಮ ಬೇರುಗಳನ್ನು ಹುಡುಕುವ ತಜ್ಞತೆ ಶೆಣೈಯವರದು. ಬರೀ ಮನೆಗಳಲ್ಲ ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುವ, ಸಂಸ್ಕರಿಸುವ ನೃತ್ಯ, ಸಾಹಿತ್ಯ, ಸಂಗೀತ, ಅಧ್ಯಾತ್ಮ ಎಲ್ಲದರಲ್ಲೂ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top