Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಸ್ಥಳೀಯ ಹಿತಾಸಕ್ತಿ ರಕ್ಷಿಸಿ

Thursday, 11.01.2018, 3:02 AM       No Comments

ದೇಶದ ಆರ್ಥಿಕತೆಗೆ ಚೇತರಿಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೆಲ ವಲಯಗಳಲ್ಲಿ ವಿದೇಶಿ ನೇರ ಬಂಡವಾಳ (ಎಫ್​ಡಿಐ)ಕ್ಕೆ ಅವಕಾಶವೀಯುವ ತೀರ್ಮಾನ ಕೈಗೊಂಡಿದೆ. ಸಿಂಗಲ್ ಬ್ರ್ಯಾಂಡ್ ರಿಟೇಲ್ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಶೇ.100 (ಆಟೋಮ್ಯಾಟಿಕ್ ಮಾರ್ಗ) ಹಾಗೂ ಏರ್ ಇಂಡಿಯಾದಲ್ಲಿ ಶೇ.49 ಎಫ್​ಡಿಐಗೆ ಅನುಮತಿ ಇದರಲ್ಲಿ ಪ್ರಮುಖವಾದುದು. ಒಂದು ಕಾಲದಲ್ಲಿ ರಿಟೇಲ್ ರಂಗದಲ್ಲಿ ವಿದೇಶಿ ನೇರ ಬಂಡವಾಳವನ್ನು ವಿರೋಧಿಸಿದ್ದ ಬಿಜೆಪಿ, ಇದೀಗ ತಾನೇ ಆಡಳಿತ ನಡೆಸುವಾಗ ಇದಕ್ಕೆ ಅವಕಾಶ ನೀಡಿರುವ ಕ್ರಮ ಸ್ವಲ್ಪ ವಿರೋಧಾಭಾಸ ಎನಿಸಬಹುದಾದರೂ, ಆರ್ಥಿಕತೆಗೆ ಟಾನಿಕ್ ನೀಡಲು ಇದು ಅನಿವಾರ್ಯ ಎಂಬ ನಿಲುವಿಗೆ ಅದು ಬಂದಿರುವಂತಿದೆ. ಆದರೆ ಈ ಭರದಲ್ಲಿ ಸ್ಥಳೀಯ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮವಾಗದಂತೆ ಕಣ್ಗಾವಲು ಇಡುವ ವಿವೇಕವನ್ನೂ ಸರ್ಕಾರ ಪ್ರದರ್ಶಿಸಬೇಕಿದೆ. ಈ ನಿರ್ಧಾರದಿಂದ ಇನ್ನುಮುಂದೆ ಶೇ.49ರವರೆಗಿನ ಎಫ್​ಡಿಐಗೆ ಸರ್ಕಾರದ ಅನುಮತಿ ಪಡೆಯಬೇಕೆಂಬ ನಿಯಮ ರದ್ದಾಗಿ, ವಿದೇಶಿ ಕಂಪನಿಗಳು ಸರ್ಕಾರದ ಅನುಮತಿಯಿಲ್ಲದೆ ಪೂರ್ಣ ಪ್ರಮಾಣದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ. ಈ ನಿರ್ಣಯದಿಂದ ಭಾರತದ ಮಾರುಕಟ್ಟೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿದೆ; ಸ್ಪರ್ಧೆಯೂ ಹೆಚ್ಚುತ್ತದೆ ಎಂಬುದು ಈ ನೀತಿಯನ್ನು ಬೆಂಬಲಿಸುವವರ ವಾದ. ಆದರೆ, ಬಹುರಾಷ್ಟ್ರೀಯ ಕಂಪನಿಗಳ ಪೈಪೋಟಿ ಎದುರಿಸಲಾಗದೆ ಸ್ಥಳೀಯ ವ್ಯಾಪಾರಿಗಳು ನೆಲಕಚ್ಚಬೇಕಾಗುತ್ತದೆ ಎಂಬ ಪ್ರತಿವಾದವನ್ನು ಕೆಲವರು ಮುಂದಿಡುತ್ತಾರೆ. ಒಂದು ಮಳಿಗೆಯಲ್ಲಿ ಒಂದು ಬ್ರ್ಯಾಂಡ್ ವಸ್ತುಗಳನ್ನು ಮಾತ್ರ ಮಾರಬಹುದು, ಬಹುವಸ್ತುಗಳನ್ನು ಮಾರುವಂತಿಲ್ಲ ಎಂಬುದು ಈ ನೀತಿಯ ಒಂದು ಮುಖ್ಯ ಅಂಶವಾದ್ದರಿಂದ, ಸ್ಥಳೀಯರ ಮೇಲೆ ಅಂಥ ಭಾರಿ ದುಷ್ಪರಿಣಾಮ ಆಗಲಿಕ್ಕಿಲ್ಲ ಎಂಬ ವಾದವೂ ಇದೆ. ಇದೇನೇ ಇದ್ದರೂ, ಸರ್ಕಾರ, ಸ್ಥಳೀಯ ವ್ಯಾಪಾರಿಗಳಿಗೆ ತೊಂದರೆಯಾಗದ ಹಾಗೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಇದು ಲಕ್ಷಾಂತರ ಉದ್ಯೋಗಗಳ ಪ್ರಶ್ನೆ. ಮೊದಲೇ ಉದ್ಯೋಗಸೃಷ್ಟಿ ಅಗತ್ಯ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬ ಪರಿಸ್ಥಿತಿ ದೇಶದಲ್ಲಿದೆ. ಹೀಗಿರುವಾಗ ಸರ್ಕಾರದ ನೀತಿಗಳಿಂದ ಇರುವ ಉದ್ಯೋಗಗಳ ಮೇಲೂ ವ್ಯತಿರಿಕ್ತ ಪರಿಣಾಮ ಆಗುವಂತಾಗಬಾರದು.

ಇನ್ನು, ಏರ್ ಇಂಡಿಯಾ ಕುರಿತು ಹೇಳುವುದಾದರೆ, ಈ ಸರ್ಕಾರಿ ಸ್ವಾಮ್ಯದ ಸಂಸ್ಥೆ ಭಾರಿ ನಷ್ಟದಲ್ಲಿದೆ. ಸುಮಾರು 40 ಸಾವಿರ ಕೋಟಿ ರೂ. ಸಾಲದಲ್ಲಿರುವ ಈ ಸಂಸ್ಥೆ, ಸರ್ಕಾರ ನೆರವಿನ ಹಸ್ತ ಚಾಚಿದರೂ ಸುಧಾರಿಸಿಕೊಳ್ಳದ ಹಂತವನ್ನು ತಲುಪಿದೆ. ಹೀಗಾಗಿ, ಏರ್ ಇಂಡಿಯಾದಲ್ಲಿ ವಿದೇಶಿ ಬಂಡವಾಳ ಅನಿವಾರ್ಯ ಎಂಬ ನಿರ್ಣಯಕ್ಕೆ ಸರ್ಕಾರ ಬಂದಿದೆ. ಆದ್ದರಿಂದ, ಇಲ್ಲಿ ಶೇ.49 ಎಫ್​ಡಿಐಗೆ ಅವಕಾಶ ನೀಡಿದೆ. ಈ ಸಂಸ್ಥೆಯ ಖಾಸಗೀಕರಣದತ್ತ ಸರ್ಕಾರ ಒಲವು ಹೊಂದಿದೆ ಎಂಬ ಮಾತುಗಳೂ ಇವೆ. ಅಧಿಕ ಮುಖಬೆಲೆ ನೋಟುುಗಳ ನಿಷೇಧ, ಜಿಎಸ್​ಟಿ ಜಾರಿ ಮುಂತಾದ ಕ್ರಮಗಳಿಂದ ದೇಶದ ಆರ್ಥಿಕತೆ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುತ್ತಿಲ್ಲ ಎಂಬ ಗ್ರಹಿಕೆಗಳ ಹಿನ್ನೆಲೆಯಲ್ಲಿ ಏನಾದರೊಂದು ಮಾಡುವ ಒತ್ತಡಕ್ಕೆ ಸರ್ಕಾರ ಸಿಲುಕಿತ್ತು. ಆದರೆ ಈ ಕ್ರಮಗಳು ದೇಶದ ಒಟ್ಟಾರೆ ಹಿತಾಸಕ್ತಿಗೆ ಪೂರಕವಾಗಿರುವಂತೆ ನಿಗಾವಹಿಸುವ ಹೊಣೆಯೂ ಸರ್ಕಾರದ ಮೇಲಿದೆ. ಮೋದಿ ಸರ್ಕಾರ ಈ ನಂಬಿಕೆಯನ್ನು ಉಳಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಜನರದು.

Leave a Reply

Your email address will not be published. Required fields are marked *

Back To Top