Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಸೋಮಾರಿತನವೂ ಅಪಾಯಕಾರಿಯೇ…!

Saturday, 18.11.2017, 3:02 AM       No Comments

| ಶಾಂತಾ ನಾಗರಾಜ್, ಆಪ್ತ ಸಲಹಾಗಾರ್ತಿ

ನಾನೊಬ್ಬ ಆಪ್ತಸಮಾಲೋಚಕಳು. ಬೆಂಗಳೂರಿನ ಆಪ್ತ ಸಲಹಾ ಕೇಂದ್ರದಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ನಿಮ್ಮ ಕಾಲಂ ನನಗೆ ಎಷ್ಟೋ ಬಾರಿ ದಾರಿದೀಪವಾಗಿದೆ. ಈಗ ನಮ್ಮ ಸೆಂಟರಿಗೆ ಬರುವ ಮಹಿಳೆಯೊಬ್ಬಳ ಸಮಸ್ಯೆ ನಮ್ಮ ಇಡೀ ಕೇಂದ್ರಕ್ಕೇ ಸಮಸ್ಯೆಯಾಗಿದೆ. ಆಕೆ 34 ವರ್ಷದ ಮಹಿಳೆ. ಸಣ್ಣವಯಸ್ಸಿನಲ್ಲೇ ಮದುವೆಯಾಗಿ 4ವರ್ಷದ ಮಗಳಿದ್ದಾಳೆ. ಅವಳು ಹೇಳುವುದೇನೆಂದರೆ…‘ನನಗೆ ಬುದ್ಧಿಬರುವ ಮುನ್ನವೇ ತಂದೆತಾಯಿ ಮದುವೆ ಮಾಡಿದರು. ಗಂಡನ ಜತೆ ಹೊಂದಾಣಿಕೆಯೇ ಇಲ್ಲ. ಹೆಚ್ಚಿನ ವಿದ್ಯೆಯೂ ಇಲ್ಲ ಮತ್ತು ತೌರಿನವರು ಬಡವರಾದ ಕಾರಣ ಗಂಡನಜತೆಗೆ ಇರಬೇಕಾಗಿದೆ. ನನ್ನ ನೆಮ್ಮದಿ ಹಾಳಾಗಿದೆ’ ಎನ್ನುತ್ತಾಳೆ. ಅವಳು ತನ್ನ ವಯಸ್ಸಿಗೆ ಮೀರಿದ ಎತ್ತರ ಮತ್ತು ಗಾತ್ರವಿದ್ದಾಳೆ. ಆದರೂ ನೋಡಿದ ಕೂಡಲೇ ಮತ್ತೊಮ್ಮೆ ತಿರುಗಿನೋಡುವಷ್ಟು ‘ಸುಂದರಿ’. ಅವಳ ಗಂಡ ಇಬ್ಬರೂ ಸಣ್ಣ ಆಗೋಣ ಎಂದು ನಮ್ಮ ಸೆಂಟರ್ ಹತ್ತಿರವಿರುವ ಯೋಗಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಕರೆದುಕೊಂಡು ಬರುತ್ತಾನೆ. ಗಂಡಸರಿಗೆ ಮೊದಲಮಹಡಿಯಲ್ಲೂ, ಹೆಂಗಸರಿಗೆ ಕೆಳಗಿನ ಹಜಾರದಲ್ಲೂ ಯೋಗ ಹೇಳಿಕೊಡುತ್ತಾರಂತೆ. ಗಂಡ ಮಹಡಿಗೆ ಹೋದ ತಕ್ಷಣ ಈ ಮಹಾತಾಯಿ ನಮ್ಮ ಸೆಂಟರ್​ನಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಸುಮಾರು ಆರುತಿಂಗಳಿನಿಂದ ಹೀಗೆ ಬರುತ್ತಿದ್ದಾಳೆ. ನಮ್ಮ ಸೆಂಟರ್​ನಲ್ಲಿರುವ ಎಲ್ಲ ಆಪ್ತ ಸಲಹಾಗಾರರೂ ಇವಳ ಕಥೆ ಕೇಳಿದ್ದಾಯಿತು. ಹಲವು ಸಲಹೆಗಳನ್ನು ನೀಡಿದ್ದಾಯಿತು. ಇವಳು ಯಾವೊಂದನ್ನು ಪರಿಪಾಲಿಸುವುದಿಲ್ಲ. ಪ್ರತಿಯೊಬ್ಬರ ಮುಂದು ಹೇಳಿದ್ದನ್ನೇ ಹೇಳುವ ಚಟ. ‘ಮನೋವೈದ್ಯರನ್ನು ಭೇಟಿಮಾಡು’ ಎಂದರೆ ಅದನ್ನು ಮಾಡುವುದಿಲ್ಲ. ‘ನಿನ್ನ ಗಂಡನನ್ನು ಕರೆದುಕೊಂಡು ಬಾ’ ಎಂದರೆ ಏನೇನೋ ಸಬೂಬು ಹೇಳುತ್ತಾಳೆ. ಈ ಕೇಸನ್ನು ಹೇಗೆ ನಿಭಾಯಿಸುವುದು ಮೇಡಂ?

| ಹೆಸರು, ಊರು ಬೇಡ

ಒಮ್ಮೊಮ್ಮೆ ಹೀಗಾಗುತ್ತದೆ. ನಾನು ಹದಿನೈದು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತ ಇಂಥ ಜಿಗುಟು ಜನರ ಹತ್ತಿರ ಸಿಕ್ಕಿಕೊಂಡು ನರಳಿದ್ದೇನೆ. ಏನೋ ಸಣ್ಣ ಸಮಾಜಸೇವೆ ಮಾಡೋಣ ಎಂದು ಹೊರಟು ನಾವೇ ಸಮಸ್ಯೆಯ ಸುಳಿಗೆ ಸಿಕ್ಕಿಕೊಳ್ಳುವ ಪಡಿಪಾಟಿಲು ನಿಜಕ್ಕೂ ಭಯಂಕರವೇ. ಆಕೆ, ಯೋಗ ಎನ್ನುವ ಕತ್ತಿಯಿಂದ ತಪ್ಪಿಸಿಕೊಳ್ಳಲು ನಿಮ್ಮ ಸೆಂಟರ್​ನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾಳೆ. ನೀವು ಈ ಕೆಳಕಂಡ ಯಾವುದಾದರೂ ಟೆಕ್ನಿಕ್ ಬಳಸಿ ಅವಳಿಗೆ ಫ್ಯಾಮಿಲಿ ಕೌನ್ಸಿಲಿಂಗ್ ಮಾಡಲು ಸಾಧ್ಯವೇ ಪ್ರಯತ್ನಿಸಿ.

# ನಿಮ್ಮಲ್ಲಿ ಯಾರಾದರೂ ಒಬ್ಬರು ಮುತುವರ್ಜಿವಹಿಸಿ, ನಿಮ್ಮ ಕೇಂದ್ರದ ಯೋಗಕೇಂದ್ರಕ್ಕೆ ಹೋಗಿ ಅವಳ ಗಂಡನಿಗೆ ‘ಈಕೆ ಯೋಗಾಭ್ಯಾಸ ಮಾಡುವ ಸಮಯದಲ್ಲಿ ನಮ್ಮ ಕೇಂದ್ರಕ್ಕೆ ಬರುತ್ತಾಳೆ’ ಎನ್ನುವ ಸತ್ಯ ತಿಳಿಯುವಂತೆ ಮಾಡುವುದು.

# ಆಕೆಯ ಮನೆಯ ಲ್ಯಾಂಡ್ ಫೋನ್ ನಂಬರ್ ಪಡೆದು ನಿಮ್ಮಲ್ಲಿಯ ಪುರುಷ ಸಲಹೆಗಾರರು ಆಕೆಯ ಗಂಡನ ಜತೆಯಲ್ಲಿ ಆಕೆಯ ಸಮಸ್ಯೆಯ ಬಗ್ಗೆ ಮಾತನಾಡುವುದು ಮತ್ತು ಇಬ್ಬರನ್ನೂ ನಿಮ್ಮ ಕೇಂದ್ರಕ್ಕೆ ಬರುವಂತೆ ಮಾಡಿ ಜತೆಯಲ್ಲಿ ಕೂಡಿಸಿಕೊಂಡು ಕೌನ್ಸಿಲಿಂಗ್ ಮಾಡುವುದು.

# ನಾವು ಆರುತಿಂಗಳಾದ ಮೇಲೆ ಒಬ್ಬರಿಗೆ ಹೀಗೆ ಕೌನ್ಸಿಲಿಂಗ್ ಮಾಡಲು ಸಾಧ್ಯವಿಲ್ಲ. ನಿಮಗೆ ಕೌನ್ಸಿಲಿಂಗ್ ಬೇಕೇ ಆದರೆ ಒಂದು ಸಿಟ್ಟಿಂಗ್ ಗೆ ಸಾವಿರರೂಪಾಯಿ ಕೊಡಿ. ಅಥವಾ ನಿಮ್ಮ ಗಂಡನನ್ನು ಕರೆತನ್ನಿ ಎನ್ನುವ ಕರಾರನ್ನು ಕಡ್ಡಾಯವಾಗಿ ಹಾಕುವುದು.

# ಇವು ಯಾವುವೂ ಪರಿಣಾಮ ಬೀರದಿದ್ದಲ್ಲಿ ನಿಮ್ಮ ಕೇಂದ್ರದ ಎಲ್ಲಾ ಕೌನ್ಸಿಲರ್​ಗಳು ಆಕೆ ಬಂದಾಗ ನಮಗೀಗ ಸಮಯವಿಲ್ಲ ಬೇರೆ ಕೌನ್ಸಿಲರ್​ಗಳು (ಆಪ್ತಸಲಹೆ ಕೇಳಲು ಬರುವವರನ್ನು ರೋಗಿಗಳು ಎನ್ನುವುದಿಲ್ಲ, ಅವರು ಕ್ಲೈಂಟ್​ಗಳು ಅಥವಾ ಕೌನ್ಸಿಲಿಗಳು) ಇದ್ದಾರೆ ಎಂದು ಹೇಳಿ ಆಕೆಯೊಂದಿಗೆ ಮಾತನಾಡಲು ನಿರಾಕರಿಸುವುದು.

ನಾಲ್ಕನೆಯದು ಸ್ವಲ್ಪ ಕ್ರೌರ್ಯವೆನಿಸಬಹುದು. ಆದರೆ ಆಕೆ ಯೋಗಮಾಡದ ಸೋಮಾರಿತನಕ್ಕೆ ನಿಮ್ಮನ್ನು ನಿಮ್ಮ ಕೇಂದ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ. ಅದನ್ನು ಅವಳಿಗೆ ಮನಗಾಣುವಂತೆ ಮಾಡಲು ಇದು ಅಗತ್ಯವಷ್ಟೇ. ಆಕೆಗೆ ನಿಜವಾಗಿ ಬೇಕಾಗಿರುವದು ಫ್ಯಾಮಿಲಿ ಕೌನ್ಸಿಲಿಂಗ್, ಈಕೆಯ ನಿಜವಾದ ಸಮಸ್ಯೆ ಅರ್ಥವಾಗಬೇಕಾದರೆ ಅವಳ ಗಂಡನನ್ನು ಮಾತಾಡಿಸುವುದು ತುಂಬಾ ಅಗತ್ಯವಿದೆ.

ಸೂಚನೆ

ಶಾಂತಾನಾಗರಾಜ್ ಅವರನ್ನು ಭೇಟಿಮಾಡಲು ಬಯಸುವವರು ಪ್ರತಿ ಸೋಮವಾರ ಈ ಕೆಳಕಂಡ ವಿಳಾಸದಲ್ಲಿ ಸಂರ್ಪಸಬಹುದು.

ಪ್ರಸನ್ನ ಆಪ್ತಸಲಹಾ ಕೇಂದ್ರ ಅರುಣಚೇತನ ಕ್ಲುನಿ ಕಾನ್ವೆಂಟ್ ಎದುರು. ಎಂ.ಇ.ಎಸ್ ಕಾಲೇಜ್ ಹಿಂಭಾಗ. 11ನೇ ಮುಖ್ಯರಸ್ತೆ. 15ನೇ ಕ್ರಾಸ್ ಮಲ್ಲೇಶ್ವರಂ, ಬೆಂಗಳೂರು 560003

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top