Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಸೋತೆ ಎಂದುಕೊಂಡವರು ಇವನನ್ನು ಕಣ್ಬಿಟ್ಟು ನೋಡಿ!

Wednesday, 20.09.2017, 3:00 AM       No Comments

ಜೀವನದಲ್ಲಿ ನಗುವ ಎಲ್ಲ ಅವಕಾಶಗಳನ್ನೂ ಆ ವಿಧಿ ಕಿತ್ತುಕೊಂಡರೂ ‘ಹೃದಯದಿಂದ ನಗುತ್ತೇನೆ, ಈ ಜಗತ್ತನ್ನೂ ನಗಿಸುತ್ತೇನೆ’ ಎಂದು ಸವಾಲ್ ಹಾಕಿಕೊಂಡನಲ್ಲ ಈ ಹುಡುಗ, ಅಬ್ಬ ಇಡೀ ದೇಶ, ಅಷ್ಟೇ ಏಕೆ ಇತರೆ ಹಲವು ರಾಷ್ಟ್ರಗಳು ಸಹ ಈತನನ್ನು ಹೆಮ್ಮೆಯಿಂದ, ಪ್ರೇರಣೆಯಿಂದ ನೋಡುತ್ತಿವೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ-‘ನೀನು ಪ್ರೇರಣೆಯ ಖನಿಯಪ್ಪ, ನಿನ್ನ ಒಳಗೆ ಬೆಳಕಿದೆ, ಸಿಡಿಲಿದೆ. ಅದು ಸಮಾಜದ ಅಂಧಕಾರವನ್ನು ಕಿತ್ತೊಗೆಯುತ್ತದೆ’ ಎಂದಾಗ ಈತನ ಹೆತ್ತವರಿಗೆ ಮೊದಲ ಬಾರಿ ಗೆಲುವಿನ ಖುಷಿ ಸಿಕ್ಕ ಅಮೃತ ಘಳಿಗೆ. ನಂಬ್ತಿರೋ, ಹೌಹಾರ್ತೀರೋ ಗೊತ್ತಿಲ್ಲ, ದೇಹದಲ್ಲಿ 50ಕ್ಕೂ ಹೆಚ್ಚು ಫ್ಯಾಕ್ಚರ್, ನಡೆದಾಡಲು ಇರಲಿ ಕಿಂಚಿತ್ತೂ ಅಲುಗಾಡಿಸಲು ಆಗದಂಥ ದೇಹ, ಆರು ವರ್ಷ ಹೊರಗಿನ ಜಗತ್ತನ್ನೇ ಕಾಣದೆ ಒಂದೇ ಹಾಸಿಗೆಯಲ್ಲಿ ದಿನ ಕಳೆದ ಈತ ಈಗ ಖ್ಯಾತ ಗಾಯಕ, ಮೋಟಿವೆಷನಲ್ ಸ್ಪೀಕರ್, ಲೇಖಕ, ಖಿನ್ನತೆ ಕಳೆಯುವ ಜಾದುಗಾರ… ಎಲ್ಲವೂ ಆಗಿದ್ದಾನೆ. ವ್ಹೀಲ್​ಚೇರ್​ನ ಸಾಂಗತ್ಯ ದೌರ್ಬಲ್ಯ ಎಂದೆನಿಸತೊಡಗಿದಾಗ ‘ವ್ಹೀಲ್​ಚೇರ್ ವಾರಿಯರ್’ ಆಗಿದ್ದಲ್ಲದೆ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡರೂ ನಗುವನ್ನು ಆತ್ಮೀಯ ಸ್ನೇಹಿತನಾಗಿಸಿಕೊಂಡು ಬದುಕನ್ನು ಸುಂದರ, ಸಾರ್ಥಕವಾಗಿಸಿದ್ದಾನಲ್ಲ ಅದಕ್ಕೆ ಸಾವಿರ ಸಲಾಂ ಸಲ್ಲಿಸಿದರೂ ಕಡಿಮೆಯೇ!

ಸಾಯಿ ಕೌಸ್ತುಭ್ ದಾಸ್​ಗುಪ್ತಾ. ವಯಸ್ಸು ಈಗಷ್ಟೇ 26. ಊರು ಪಶ್ಚಿಮ ಬಂಗಾಳದ ಸಿಲಿಗುಡಿ. ಮೂರೂವರೆ ತಿಂಗಳ ಮಗು ಸಾಯಿ ತಾಯಿ ಮಡಿಲಲ್ಲಿ ಮಮತೆಯ ಸವಿ ಉಣ್ಣುತ್ತಿತ್ತು. ಅದೊಮ್ಮೆ ತನ್ನ ಮಡಿಲಿಂದ ಎತ್ತಿ ಅಜ್ಜಿಯ ತೊಡೆ ಮೇಲೆ ಮೃದುವಾಗಿ ಮಲಗಿಸಲು ಹೋದಾಗ ಮಗು ಜೋರಾಗಿ ಅಳತೊಡಗಿತು. ವೈದ್ಯರ ಹತ್ತಿರ ಹೋದಾಗ ಭುಜದ ಮೂಳೆ ಮುರಿದಿದೆ ಎಂದು, ಚಿಕಿತ್ಸೆ ಮಾಡಿದರು. ಆದರೆ, ಈ ಕಾಯಿಲೆ ಮತ್ತೆ ಮತ್ತೆ ಕಾಣಿಸಿಕೊಳ್ಳತೊಡಗಿತು. ಮಗುವಿಗೆ ಒಂದು ವರ್ಷ ತುಂಬುವಷ್ಟರಲ್ಲೇ ಮೂರು ಫ್ಯಾಕ್ಚರ್! ಅಪ್ಪ-ಅಮ್ಮನಂತೂ ಏನು ಆಗುತ್ತಿದೆ ಎಂಬುದೇ ಗೊತ್ತಾಗದೆ ಚಿಂತಿತರಾದರು. ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಕತ್ತಗೆ ಕರೆದುಕೊಂಡು ಬಂದಾಗ ಗೊತ್ತಾಗಿದ್ದು ಅದು, ಸಾಮಾನ್ಯ ಭಾಷೆಯಲ್ಲಿ Brittle bone disease ಎಂದು ಕರೆಯಲ್ಪಡುವOsteogenesis Imperfecta ಕಾಯಿಲೆ ಎಂಬುದು. ತುಂಬ ವಿರಳವಾಗಿರುವ ಈ ಕಾಯಿಲೆ ಸರಾಸರಿ 20 ಸಾವಿರ ಜನರ ಪೈಕಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗೆ Collagen(ಕಾಲಜನ್) ಪ್ರೋಟಿನಿನ ಕೊರತೆಯೇ ಕಾರಣ ಎನ್ನುತ್ತಾರೆ ವೈದ್ಯರು.

ಕೌಸ್ತುಭ್ ಮೂಳೆಗಳು ಅತೀ ದುರ್ಬಲವಾಗಿದ್ದು, ಅವು ಯಾವಾಗ ಬೇಕಾದರೂ ಮುರಿಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದಾಗ ತಂದೆ-ತಾಯಿಗೆ ದಿಕ್ಕೇ ತೋಚದಂತಾಯಿತು. ಆದರೆ, ಅವರು ಆ ಕ್ಷಣದಲ್ಲಿ ಕೈಗೊಂಡ ನಿರ್ಧಾರ ಸಕಾರಾತ್ಮಕವಾಗಿತ್ತಲ್ಲದೆ ಎಲ್ಲ ಪಾಲಕರಿಗೂ ಸ್ಪೂರ್ತಿ ನೀಡುವಂಥದ್ದು. ‘ದೇವರು ನಮಗೆ ವಿಶೇಷ ಕೊಡುಗೆ ನೀಡಿದ್ದಾನೆ. ಈ ಮಗುವನ್ನು ಜತನದಿಂದಲೇ ಸಂಭಾಳಿಸೋಣ. ಮುಂದೆ, ಇವನನ್ನು ವಿಶೇಷ ವ್ಯಕ್ತಿಯಾಗಿಸೋಣ‘ ಎಂದು ಸಂಕಲ್ಪಿಸಿದರು.

ನಾಲ್ಕೈದು ವರ್ಷದವನಾಗಿದ್ದಾಗಲೇ ಸಾಯಿ ಟಿ.ವಿ. ನೋಡಿಕೊಂಡು ತುಂಬ ಚೆನ್ನಾಗಿ ಡ್ಯಾನ್ಸ್ ಮಾಡೋದನ್ನು ರೂಢಿಸಿಕೊಂಡ. ‘ನನ್ನನ್ನು ಡ್ಯಾನ್ಸ್ ಕ್ಲಾಸಿಗೆ ಕಳುಹಿಸಿ’ ಎಂದು ಹಠ ಹಿಡಿದ. ಈತನ ಶಾರೀರಿಕ ಪರಿಸ್ಥಿತಿಯ ಅರಿವಿದ್ದರೂ ಡ್ಯಾನ್ಸ್ ಮಾಡುವಾಗ ಸಾಯಿ ಅನುಭವಿಸುತ್ತಿದ್ದ ಸಂತೋಷ ಕಂಡು ಪಾಲಕರು ಡ್ಯಾನ್ಸ್ ತರಗತಿಗೇನೋ ಸೇರಿಸಿದರು. ಆದರೆ, ನೃತ್ಯ ಮಾಡುವಾಗಲೇ ಹಲವು ಬಾರಿ ಮೂಳೆ ಮುರಿದು ಫ್ಯಾಕ್ಚರ್ ಆಯಿತು. ವೈದ್ಯರು-ಡ್ಯಾನ್ಸ್ ಇವನಿಗಾಗಿ ಇಲ್ಲ, ಬೇರೆ ಏನಾದರೂ ಆಸಕ್ತಿಯನ್ನು ಆತನಲ್ಲಿ ಮೂಡಿಸಿ ಎಂದಾಗ ಈ ಮಾತು ಆರು ವರ್ಷದ ಬಾಲಕನ ಮೇಲೆ ಗಾಢ ಪ್ರಭಾವ ಬೀರಿತು. ಆಗಲೇ ಕೌಸ್ತುಭ್ ತಾನು ಇತರರಿಗಿಂತ ಭಿನ್ನ, ತನಗೆ ಏನೋ ಸಮಸ್ಯೆ ಇದೆ, ಅದು ಏನೆಂಬುದನ್ನು ಗೊತ್ತು ಮಾಡಿಕೊಳ್ಳಬೇಕು ಎಂದು ಚಡಪಡಿಸತೊಡಗಿದ. ತಾಯಿ ಶೀಲಾ ದಾಸ್​ಗುಪ್ತಾ ಒಳ್ಳೆ ಹಾಡುಗಾರ್ತಿ. ತಾಯಿ ಹಾಡುವಾಗ ಸಾಯಿ ಕೂಡ ದನಿಗೂಡಿಸುತ್ತಿದ್ದ. ದನಿ ಇಂಪಾಗಿತ್ತು. ‘ಮಗು, ನೀನು ಸ್ವರಗಳನ್ನು ತುಂಬ ಬೇಗ ಗುರುತಿಸುತ್ತಿ. ಕಂಠವೂ ಚೆನ್ನಾಗಿದೆ. ಸಂಗೀತದತ್ತ ಹೆಚ್ಚಿನ ಆಸಕ್ತಿ ವಹಿಸಬಹುದಲ್ಲವೇ?‘ ಎಂದು ಅಮ್ಮ ಹೇಳಿದಾಗ ಈತನ ಬಾಳಲ್ಲಿ ಹೊಸ ಬೆಳಗೊಂದು ಪ್ರವೇಶಿಸಿತು. ತಾಯಿಯಿಂದಲೇ ಸಂಗೀತ ಕಲಿಯತೊಡಗಿ, ಹಾಡಲು ಆರಂಭಿಸಿದ. ಉತ್ತಮ ಹಾಡುಗಾರಿಕೆಗೆ ತನ್ನ ಎಂಟನೇ ವಯಸ್ಸಲ್ಲೇ ಪಶ್ಚಿಮ ಬಂಗಾಳದ ಪ್ರತಿಷ್ಠಿತ ದಿಶಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ. ಹನ್ನೆರಡು ವರ್ಷ ತುಂಬುವಷ್ಟರಲ್ಲೇ ಉಸ್ತಾದ್ ರಶೀದ್ ಖಾನ್, ಅನುರಾಧಾ ಪೋಡ್ವಾಲ್, ಅನುಪ್ ಜಲೋಟಾರಂಥ ಖ್ಯಾತನಾಮ ಸಂಗೀತಗಾರರ ಸಮ್ಮುಖದಲ್ಲಿ ಹಾಡಿದ. ಅವರೆಲ್ಲ ಕೌಸ್ತುಭ್ ಬೆನ್ನುತಟ್ಟಿ ‘ತುಂಬಾ ಚೆನ್ನಾಗಿ ಹಾಡುತ್ತಿ, ನಿನಗೆ ಒಳ್ಳೆ ಭವಿಷ್ಯವಿದೆ’ ಎಂದು ಹುರಿದುಂಬಿಸಿದರು. ಹೀಗಾಗಿ, ಸಂಗೀತದಲ್ಲೇ ಬದುಕು ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಶಾಸ್ತ್ರೀಯ ಸಂಗೀತದ ಕಲಿಕೆಗೆ ಒತ್ತು ನೀಡಿದ.

ಆದರೆ, ಆ ವಿಧಿ ಅದೆಷ್ಟು ಕ್ರೂರಿ ಎಂದರೆ ಈತನ ಸಣ್ಣಖುಷಿಯನ್ನೂ ಅದಕ್ಕೆ ನೋಡಲಾಗಲಿಲ್ಲ. ಅದೊಂದು ದಿನ, ಬಾತರೂಂನಲ್ಲಿ ಕುಸಿದು ಬಿದ್ದಾಗ ಎರಡೂ ಕಾಲಿನ ಮೂಳೆಗಳು ಮುರಿದ ಪರಿಣಾಮ ಫ್ಯಾಕ್ಚರ್! ಈ ವೇಳೆ ವೈದ್ಯರ ಚಿಕಿತ್ಸೆಯಲ್ಲೂ ಎಡವಟ್ಟಾಗಿತ್ತು. ಪ್ಲಾಸ್ಟರ್ ತೆಗೆದಾಗ ಸಾಯಿಗೆ ನಡೆದಾಡಲೂ ಆಗದಂಥ ಪರಿಸ್ಥಿತಿ. ಗಾಲಿಕುರ್ಚಿಯನ್ನು ಅವಲಂಬಿಸಬೇಕಾಯಿತು, ಮನೆಯೇ ಪ್ರಪಂಚವಾಯಿತು. ಇಂಥ ಕಾಯಿಲೆಗಳಿಗೆ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದಾಗ ಪಶ್ಚಿಮ ಬಂಗಾಳದಲ್ಲಿನ ಸ್ವಂತ ಮನೆ ಮಾರಿ, ತಂದೆ ಕೌಶಿಕ, ತಾಯಿ ಶೀಲಾ ಉದ್ಯೋಗವನ್ನೂ ತ್ಯಜಿಸಿ ಸಾಯಿ, ಆತನ ತಮ್ಮ ಕುಶಲ್​ನೊಂದಿಗೆ ಪುಟ್ಟಪರ್ತಿಗೆ ಬಂದು ನೆಲೆಸಿದರು. ಇವರ ನಿರ್ಧಾರವನ್ನು ಸಂಬಂಧಿಕರು ವಿರೋಧಿಸಿದ್ದಲ್ಲದೆ ಕೌಸ್ತುಭ್​ನನ್ನು ಮೊನಚು ಮಾತುಗಳಿಂದ ತಿವಿದರು. ಆದರೂ, ಈ ಕುಟುಂಬ ಸ್ಥೈರ್ಯ, ನಂಬಿಕೆ ಕಳೆದುಕೊಳ್ಳಲಿಲ್ಲ. ರಾಜ್ಯವನ್ನೇ ಬದಲಿಸಿ ಆಂಧ್ರಕ್ಕೆ ಬಂದು ನೆಲೆಸಿದ್ದರಿಂದ ಸಂಸ್ಕೃತಿ, ಆಹಾರ ಪದ್ಧತಿ ಎಲ್ಲವೂ ಬದಲಾಯಿತು. ಆಗ ಕೌಸ್ತುಭ್ ನಂಬಿದ್ದು ಸತ್ಯ ಸಾಯಿಬಾಬಾರನ್ನು. ಸಾಯಿ ಭಕ್ತಿ ಡಿವಿಡಿ ಹೊರತಂದದ್ದಲ್ಲದೆ 150ಕ್ಕೂ ಹೆಚ್ಚು ಹಾಡುಗಳನ್ನು ತಾನೇ ಕಂಪೋಸ್ ಮಾಡಿದ. ಕ್ರಮೇಣ ಈತನ ಹಾಡಿನ ಇಂಪು ಎಲ್ಲೆಡೆ ಪಸರಿಸತೊಡಗಿತು.

ಹೀಗೆ ಬದುಕು ಮತ್ತೆ ಸುಗಮವಾಗತೊಡಗಿದಾಗಲೇ 2009ರಲ್ಲಿ ಮತ್ತೊಂದು ಆಘಾತ. ಕೌಸ್ತುಭ್ ದೇಹದ ಕೀಲುಗಳು ಚಲನೆ ಕಳೆದುಕೊಂಡು ಇಡೀ ದೇಹ ಸ್ತಬ್ಧವಾಯಿತು. ಮನೆಯ ಒಂದು ಕೋಣೆಯ ಹಾಸಿಗೆಯೇ ಬದುಕಾಯಿತು. ಈ ಬಾರಿ ಮಾತ್ರ ಈತನ ದುಃಖದ ಕಟ್ಟೆ ಒಡೆದಿತ್ತು. ಇನ್ನು, ತನ್ನ ಜೀವನ ಹೀಗೇ ಕಳೆದುಹೋಗುತ್ತದೆ ಎಂದುಕೊಂಡು ಭಾವಿಸಿ ಹೃದಯದ ಎಲ್ಲ ಸಂಕಟಗಳ ಬಾಗಿಲು ತೆರೆದು ಗಳಗಳನೇ ಅತ್ತುಬಿಟ್ಟ ಸಾಯಿ! ಚಂದ್ರ, ಸೂರ್ಯ, ಸಂಜೆ, ಬೆಳದಿಂಗಳು ಇದ್ಯಾವುದನ್ನೂ ವರ್ಷಗಟ್ಟಲೇ ನೋಡಲೇ ಇಲ್ಲ. ಆಗಲೂ, ಮನೆಯವರು, ಧೈರ್ಯ ಕಳೆದುಕೊಳ್ಳಬೇಡಪ್ಪ ಎಂದೇ ಹೇಳಿದರು. ಬರೋಬ್ಬರಿ ಆರು ವರ್ಷ ಹೀಗೇ ಸಾಗಿದಾಗ ತನ್ನ ಅಂತರಾತ್ಮ ಏನೋ ಹೇಳುತ್ತಿದೆ ಎಂದು ಕಿವಿಗೊಟ್ಟ ಸಾಯಿಗೆ. ‘ಬದುಕು ಇರುವುದು ಶೋಕಿಸಲು ಅಲ್ಲ, ಸಂಭ್ರಮಿಸಲು’ ಎಂಬ ಸಕಾರಾತ್ಮಕ ಚಿಂತನೆ ಮಿಂಚಿನಂತೆ ಹೊಳೆಯಿತು. ತನಗೆ ಬೇಕಾದ ವ್ಹೀಲ್​ಚೇರ್​ನ ವಿನ್ಯಾಸವನ್ನೇ ತಾನೇ ರೂಪಿಸಿ, ಬೆಂಗಳೂರಿನಿಂದ ತರಿಸಿಕೊಂಡ. ಗೆಳೆಯನ ಸಲಹೆಯಂತೆ ಮನೆಯಲ್ಲೇ ಕುಳಿತು ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಕಲಿತದ್ದೂ ಆಯಿತು. ಎರಡೇ ಬೆರಳು ಕಾರ್ಯನಿರ್ವಹಿಸುತ್ತಿದ್ದರೂ ಅದರ ಬಲದಿಂದಲೇ ಇಂದು ಪ್ರತಿಷ್ಠಿತ ಕಂಪನಿಯೊಂದಕ್ಕೆ ಗ್ರಾಫಿಕ್ ಡಿಸೈನರ್ ಆಗಿದ್ದಾನೆ.

ತನ್ನದೇ ವಯಸ್ಸಿನ ಯುವಕರು ಎಲ್ಲವೂ ಇದ್ದು ನಗು ಮರೆತಿದ್ದು, ವಿಷಾದ, ನೈರಾಶ್ಯದಲ್ಲಿ ಬದುಕುತ್ತಿರುವುದನ್ನು ಕಂಡು, ಹಲವರ ಸಮಸ್ಯೆಗಳನ್ನು, ನೋವುಗಳನ್ನು ನೀಗಿಸತೊಡಗಿದ. ತನ್ನ ಜೀವನಸಂಘರ್ಷಕ್ಕೆ ಅಕ್ಷರರೂಪ ಕೊಟ್ಟು 2015ರಲ್ಲಿ ‘ಮೈ ಲೈಫ್ ಮೈ ಲವ್ ಮೈ ಡಿಯರ್ ಸ್ವಾಮಿ’ ಎಂಬ ಪ್ರೇರಣಾದಾಯಿ ಪುಸ್ತಕ ಹೊರತಂದಿದ್ದು, ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಈ ಪುಸ್ತಕದ ಪ್ರತಿಯನ್ನು ಪ್ರಧಾನಿ ಮೋದಿಗೂ ಕಳುಹಿಸಿದ್ದು, ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, 2016ರ ವ್ಹೀಲ್​ಚೇರ್ ವಂಡರ್​ಲಿಸ್ಟ್​ನಲ್ಲಿ ಮೊದಲ ಸ್ಥಾನ ಗಳಿಸಿ ವ್ಹೀಲ್​ಚೇರ್ ವಾರಿಯರ್ ಎನಿಸಿಕೊಂಡಿರುವ ಸಾಯಿ ಈಗ ಮೋಟಿವೇಶನಲ್ ಸ್ಪೀಕರ್ ಆಗಿ ದೇಶ-ವಿದೇಶಗಳಲ್ಲಿ ಪ್ರೇರಣೆಯ ಬೆಳಕು ಚೆಲ್ಲುತ್ತಿದ್ದಾನೆ. ನ್ಯೂಜೆರ್ಸಿ, ನ್ಯೂಯಾರ್ಕ್, ಮೆಲ್ಬೋರ್ನ್, ಮಲೇಷ್ಯಾ, ಥೈಲ್ಯಾಂಡ್, ಸಿಂಗಾಪುರ, ಇಂಡೋನೇಷ್ಯಾ ಸೇರಿದಂತೆ ಹಲವೆಡೆ ಸಾವಿರಾರು ಜನರೆದುರು ಜೀವನದ ಅರ್ಥ ಬಿಚ್ಚಿಡುತ್ತಿರುವ ಸಾಯಿ ಕೌಸ್ತುಭ್([email protected])‘ಜೀವನದಲ್ಲಿ ಯಾರೂ, ಏನೂ ಇಲ್ಲದಿದ್ದಾಗಲೂ ನಗುವನ್ನು ಗೆಳೆಯನಾಗಿ ಸ್ವೀಕರಿಸಿ. ಜೀವನವನ್ನು ಸಂಭ್ರಮಿಸಿ. ಹೃದಯದಿಂದ ನಗಲು ಕಲಿಯಿರಿ. ಅನೇಕ ನ್ಯೂನತೆಗಳನ್ನು ಹೊಂದಿರುವ ನಾನೇ ಇಷ್ಟೆಲ್ಲ ಮಾಡಬೇಕಾದರೆ ಕೈ-ಕಾಲು ಎಲ್ಲ ಸರಿಯಾಗಿರುವ ಜನರು ಎಷ್ಟೆಲ್ಲ ಸಾಧನೆ ಮಾಡಬಹುದಲ್ಲವೇ? ಎಲ್ಲ ಸರಿಯಾಗಿ ಇದ್ದವರು ಒತ್ತಡ, ಖಿನ್ನತೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲೆಡೆ ನಗು ಆವರಿಸುವಂತೆ ಮಾಡುವುದೇ ನನ್ನ ಮಿಷನ್’ ಎನ್ನುತ್ತ ಜೀವನದ ಹೊಸ ಅರ್ಥವನ್ನು, ಬೆಳಕನ್ನು ತೆರೆದಿಡುತ್ತಿದ್ದಾನೆ. ಇದೇ ನವೆಂಬರ್ 11 ಹಾಗೂ 12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಇನ್​ಕ್ಲೂಸಿವ್ ಸಮ್ಮಿಟ್​ಗೆ ವಿಶೇಷ ವಕ್ತಾರನಾಗಿ ಆಗಮಿಸಲಿರುವ ಸಾಯಿ, ಸ್ಪೂರ್ತಿಯ ಮಿಂಚನ್ನು ಹಂಚಲಿದ್ದಾನೆ.

ಕೃಷ್ಣನ ಆರಾಧನೆಯ ಹಾಡುಗಳನ್ನು ತುಂಬಾ ಮಧುರವಾಗಿ ಹಾಡುವ ಇವರು ಆ ಬಾಲಕೃಷ್ಣನಂತೆ ಮುಗ್ಧನೂ, ತುಂಟನೂ ಆಗಿ ನಲಿವು ಹಂಚುತ್ತಿದ್ದಾನೆ. ಇಂಥ ಬಾಳು ನೊಂದ ಅದೆಷ್ಟೋ ಮನಗಳಿಗೆ ಮತ್ತೆ ಎದ್ದು ನಿಲ್ಲುವ ಛಲ ತುಂಬಲಿ. ಸೋತವರು ಮತ್ತೆ ಎದ್ದುನಿಂತು ಮುಂದೆಸಾಗಲಿ ಎಂಬುದೇ ಆಶಯ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

 

Leave a Reply

Your email address will not be published. Required fields are marked *

Back To Top