Friday, 17th August 2018  

Vijayavani

Breaking News

‘ಸೈಕಲ್’ ಮಕ್ಕಳ ನಾಟಕ ಪ್ರದರ್ಶನ 15ಕ್ಕೆ

Wednesday, 13.06.2018, 5:26 PM       No Comments

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಹವ್ಯಾಸಿ ರಂಗತಂಡಗಳ ಕಲಾವಿದರ ಒಕ್ಕೂಟದಿಂದ ಜೂನ್ 15ರ ಸಂಜೆ 6.45ಕ್ಕೆ ‘ಸೈಕಲ್’ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಕ್ಕಳ ರಂಗಭೂಮಿ ಪ್ರೋತ್ಸಾಹಿಸಲು ಆಯೋಜಿಸಿರುವ ಚಿಣ್ಣರ ಚಿಲುಮೆ ಕಾರ್ಯಕ್ರಮದಡಿ ಮಕ್ಕಳ ನಾಟಕ ರಚನೆಯಾಗಿದೆ. ಸರ್ಕಾರಿ ಶಾಲೆಗಳ 19 ಮಕ್ಕಳು ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೈಕಲ್ ನಾಟಕವು ಮಹಮ್ಮದ್ ಆಲಿ ಹೊಸೂರು ರಚನೆ, ಪ್ರವೀಣ್ ಎಸ್.ಹಾಲ್ಮೂತ್ತೂರು ನಿರ್ದೇಶನ, ಬೆಳಕು, ಉಮೇಶ್ ಆಚಾರ್ಯ ಸಂಗೀತ, ಎಸ್.ಸುಂದರೇಶ್ ರಂಗಸಜ್ಜಿಕೆ, ಚನ್ನೇಶ್ ಆಚಾರ್ಯ ನೃತ್ಯ, ದೇವರಾಜ್ ನಾಯ್ಕ ಸಹನಿರ್ದೇಶನ, ಎಚ್.ಎಂ.ಸುಜಾತಾ ವಸ್ತ್ರ ವಿನ್ಯಾಸ, ಡಾ. ಸಾಸ್ವೆಹಳ್ಳಿ ಸತೀಶ್ ಪ್ರಸಾದನ, ಶ್ರೀನಿವಾಸ್ ಭಟ್ ಯಕ್ಷನಡೆಯೊಂದಿಗೆ ಮೂಡಿಬರಲಿದೆ ಎಂದರು.

ಚಿಣ್ಣರ ಕಾರ್ಯಕ್ರಮದಡಿ ರಾಜ್ಯದಲ್ಲಿ 40 ಮಕ್ಕಳ ಹೊಸ ನಾಟಕಗಳನ್ನು ಯುವ ಬರಹಗಾರರಿಂದ ಬರೆಸಿ ಅಭಿನಯದ ಹೊಣೆ ರಂಗತಂಡಗಳಿಗೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಪ್ರದರ್ಶನ ಆಗುವ ಸೈಕಲ್ ನಾಟಕ ರಾಜ್ಯದ 10 ಸ್ಥಳಗಳಲ್ಲಿ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತಂಡ ನಾಟಕ ಪ್ರದರ್ಶಿಸಲಿದೆ ಎಂದು ಹೇಳಿದರು. ನಾಟಕ ನಿರ್ದೇಶಕ ಪ್ರವೀಣ್ ಎಸ್.ಹಾಲ್ಮುತ್ತೂರು, ಸುಂದರೇಶ್, ಪ್ರಭಾಕರ್, ಹಾಲಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ನಾಟಕದ ಎಳೆ:

ಅಲೆಮಾರಿ ಜೀವನ ನಡೆಸುವ ಹಾವಾಡಿಗ ಜನಾಂಗದ ಪುಟ್ಟ ಹುಡುಗ ಯಂಕ್ಟನ ಕನಸುಗಳ ಅನಾವರಣ ‘ಸೈಕಲ್’ ನಾಟಕ. ಯಂಕ್ಟನ ಸೈಕಲ್ ಕನಸು ಮತ್ತು ಅಧಿಕಾರಿಯಾಗಬೇಕೆಂಬ ಆಸೆ ನನಸಾಗಿಸಲು ಪಡುವ ಕಷ್ಟ, ಊರಿನ ಹಿರಿಯರು ಮತ್ತು ಕುಟುಂಬದ ಸಹಕಾರ, ಪ್ರಾಣಿ ಪಕ್ಷಿ ಮತ್ತು ಪರಿಸರದೊಂದಿಗೆ ಇರುವ ಸಂಬಂಧ, ಸಹಕಾರ ಮನೋಭಾವ, ಸಾಮಾಜಿಕ ಕಾಳಜಿ ಸಂಪೂರ್ಣವಾಗಿ ನಾಟಕದಲ್ಲಿದೆ. ಸೈಕಲ್ ಕನಸಿನಿಂದ ಆರಂಭವಾಗಿ ಶಾಲೆ ಕಟ್ಟಿಸುವುದರೊಂದಿಗೆ ನಾಟಕ ಮುಕ್ತಾಯ ಆಗುತ್ತದೆ.

Leave a Reply

Your email address will not be published. Required fields are marked *

Back To Top