Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಸೆಂಚುರಿ ತಪ್ಪಿದರೂ ಬಿಜೆಪಿ ವಿಕ್ಟರಿ

Tuesday, 19.12.2017, 3:01 AM       No Comments

ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪ್ರಭಾವ, ದಲಿತ ನಾಯಕ ಜಿಗ್ನೇಶ್ ಮೇವಾನಿ, ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಸವಾಲು, ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿ ಜಾರಿ ಅಡ್ಡ ಪರಿಣಾಮ, ಸಣ್ಣ ಪ್ರಮಾಣದ ಆಡಳಿತ ವಿರೋಧಿ ಅಲೆ ಹೊರತಾಗಿಯೂ ಗುಜರಾತ್ ಆಡಳಿತ ಚುಕ್ಕಾಣಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸತತ ಆರನೇ ಬಾರಿಗೆ ಗದ್ದುಗೆಯೇರಿರುವ ಬಿಜೆಪಿಯ ಗೆಲುವಿನ ಅಂತರ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದೆರಡು ದಶಕಗಳಲ್ಲಿ ಗುಜರಾತ್​ನಲ್ಲಿ ಬಿಜೆಪಿ 100ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿರುವುದು ಇದೇ ಮೊದಲು. ರಾಹುಲ್ ಗಾಂಧಿ ತುರುಸಿನ ಪ್ರಚಾರ, ಹಾರ್ದಿಕ್ ಪಟೇಲ್ ಬೆಂಬಲ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್​ಗೆ ನೆರವಾಯಿತು.

 ಆರಂಭದಲ್ಲಿ ಮುಗ್ಗರಿಸಿದ್ದ ಬಿಜೆಪಿ

ಸೋಮವಾರ ಬೆಳಗ್ಗೆ ಮತಗಳ ಎಣಿಕೆ ಆರಂಭವಾದಾಗ ಬಿಜೆಪಿ 70 ಸ್ಥಾನಗಳಲ್ಲಿ, ಕಾಂಗ್ರೆಸ್ 90 ಸ್ಥಾನಗಳಲ್ಲಿ ಮುನ್ನಡೆ ಕಂಡಿತ್ತು. ಇದು ರಾಜಕೀಯ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿತ್ತು. ಇದೇ ವೇಳೆ ಷೇರುಮಾರುಕಟ್ಟೆಯಲ್ಲೂ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು. ನಂತರ ಚೇತರಿಸಿಕೊಂಡು, 99 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಕಾಂಗ್ರೆಸ್ 80 ಹಾಗೂ ಇತರರು 3 ಸ್ಥಾನಗಳಲ್ಲಿ ಗೆಲವು ದಾಖಲಿಸಿದರು.

ಹೋರಾಟಗಾರರಿಗೆ ಗೆಲುವು

ಮೀಸಲಾತಿ ಮತ್ತು ದಲಿತ ದೌರ್ಜನ್ಯದ ವಿಷಯವಾಗಿ ಸರ್ಕಾರದ ವಿರುದ್ಧ ತಿರುಗಿಬಿದ್ದು, ಭಾರಿ ಜನಾಂದೋಲನ ಸೃಷ್ಟಿಸಿದ್ದ ಪಟೇಲ್ ಸಮುದಾಯದ ಹಾರ್ದಿಕ್ ಪಟೇಲ್ ಆಪ್ತ ಲಲಿತ್ ವಸೋಯಾ, ದಲಿತ ನಾಯಕ ಜಿಗ್ನೇಶ್ ಮೇವಾನಿ ಮತ್ತು ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಬೆಂಬಲದೊಂದಿಗೆ ಜಯ ದಾಖಲಿಸಿದರು. ಅಲ್ಪೇಶ್ ಠಾಕೂರ್ ರಾಧಾನಪುರ ಕ್ಷೇತ್ರದಲ್ಲಿ 14,857 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ದಲಿತ ನಾಯಕ ಜಿಗ್ನೇಶ್ ಮೇವಾನಿ ವಡಗಾಂ ಕ್ಷೇತ್ರದಿಂದ 19,696 ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಧರೋಜಿ ವಿಧಾನಸಭಾ ಕ್ಷೇತ್ರದಿಂದ ಹಾರ್ದಿಕ್​ರ ಆಪ್ತ ಲಲಿತ್ ವಸೋಯಾ ಕಾಂಗ್ರೆಸ್​ನಿಂದ ಸ್ಪರ್ಧಿಸಿ 25,085 ಮತಗಳ ಅಂತರದಿಂದ ಗೆದ್ದಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಟೀಕಾಸ್ತ್ರ

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ಬಿಜೆಪಿ ಸರಳ ಬಹುಮತ ಗಳಿಸುತ್ತಿದ್ದಂತೆ ಪಕ್ಷದ ಮುಖಂಡರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಆರಂಭಿಕ ಇನ್ನಿಂಗ್ಸ್​ನಲ್ಲೇ ರಾಹುಲ್ ಶೂನ್ಯ ಸಾಧನೆ ಮಾಡಿದ್ದಾರೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಲೇವಡಿ ಮಾಡಿದ್ದಾರೆ. ನಾನು ಈಗಲೇ ಏನೂ ಹೇಳುವುದಿಲ್ಲ. ಅವರು ಈಗಿನ್ನೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಆದರೂ ಆ ಪಕ್ಷ ಸೋಲನುಭವಿಸಬೇಕಾಗಿ ಬಂದಿತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘ಜೋ ಜೀತಾ ವಹಿ ಸಿಕಂದರ್’ ಎಂದು ಚುಟುಕಾಗಿ ರಾಹುಲ್ ಕಾಲೆಳೆದಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೆಲುವಿನ ಶ್ರೇಯ ಪಕ್ಷದ ಕಾರ್ಯಕರ್ತರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿವರೆಗೆ ಎಲ್ಲರಿಗೂ ಸಲ್ಲುತ್ತದೆ. ಅನುಷ್ಠಾನಗೊಳಿಸಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಕಾರ್ಯಗತಗೊಳಿಸುತ್ತಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಗುರುತಿಸಿ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.

ಉತ್ತಮ ಆಡಳಿತಕ್ಕೆ ಸಿಕ್ಕ ಜಯ

ಗುಜರಾತ್​ನಲ್ಲಿ ಸತತ 6ನೇ ಬಾರಿ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ಸಿಕ್ಕಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತಮ ಆಡಳಿತಕ್ಕೆ ಸಿಕ್ಕ ಜಯ ಇದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಉಭಯ ರಾಜ್ಯಗಳಲ್ಲೂ ಬಿಜೆಪಿ ಗೆಲುವಿಗೆ ಕಠಿಣ ಪರಿಶ್ರಮದೊಂದಿಗೆ ಕೆಲಸ ಮಾಡಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ನನ್ನ ಅಭಿನಂದನೆಗಳು ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ. ಬಿಜೆಪಿಯಲ್ಲಿ ನಂಬಿಕೆ ಇರಿಸಿದ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನತೆಗೆ ತಲೆಬಾಗಿ ವಂದಿಸುತ್ತೇನೆ. ಉಭಯ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸುವುದಾಗಿ ಭರವಸೆ ನೀಡುತ್ತೇನೆ. ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ಭಾರಿ ಬೆಂಬಲ ದೊರೆತಿದ್ದು, ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಪ್ರೋತ್ಸಾಹ ಇದಾಗಿದೆ ಎಂದು ಪಕ್ಷದ ಸಂಸದೀಯ ಸಭೆಯಲ್ಲಿ ತಿಳಿಸಿದ್ದಾರೆ.

ಏರುಗತಿಯಲ್ಲಿ ಕೈ

2002ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್​ನ ಶೇಕಡವಾರು ಮತಗಳಿಕೆ ಮತ್ತು ಸ್ಥಾನ ಗಳಿಕೆ ಸ್ಥಿರವಾಗಿ ಏರಿಕೆಯಾಗುತ್ತಿದೆ. 2002ರಲ್ಲಿ ಶೇ.39.3 ಮತಗಳೊಂದಿಗೆ 51 ಸ್ಥಾನ ಗಳಿಸಿತ್ತು. 2007ರಲ್ಲಿ ಮತಗಳಿಕೆ ಶೇ.38ಕ್ಕೆ ಕುಸಿದರೂ, 59 ಸ್ಥಾನ ಗಳಿಸಿತ್ತು. 2012ರ ವೇಳೆಗೆ ಶೇಕಡವಾರು ಮತ ಗಳಿಕೆ ಶೇ.38.93ಕ್ಕೆ ಹೆಚ್ಚಳವಾಗಿ 61 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಅದು ತನ್ನ ಶೇಕಡ ವಾರು ಮತಗಳಿಕೆಯನ್ನು ಶೇ.41.5ಕ್ಕೆ ಹೆಚ್ಚಿಸಿಕೊಂಡು, 77 ಸ್ಥಾನ ಗಳಿಸಿದೆ.

ಶ್ರೀಮಂತನ ವಿರುದ್ಧ ವಿಜಯ ರೂಪಾಣಿ

ರಾಜ್​ಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದ ಅತಿಶ್ರೀಮಂತ ಅಭ್ಯರ್ಥಿ ಇಂದ್ರಾನಿಲ್ ರಾಜ್​ಗುರು ವಿರುದ್ಧ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಕಾಯ್ದುಕೊಂಡರು. 2012ರ ಚುನಾವಣೆಯಲ್ಲಿ ಈಗ ಕರ್ನಾಟಕದ ರಾಜ್ಯಪಾಲರಾಗಿರುವ ವಿ.ಆರ್. ವಾಲಾ ಈ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. ಆರಂಭದಲ್ಲಿ 30 ಸಾವಿರ ಮತಗಳಿಂದ ಹಿನ್ನಡೆ ಅನುಭವಿಸಿದ್ದ ರೂಪಾಣಿ, ಬಳಿಕ ಉತ್ತಮ ಮುನ್ನಡೆ ಗಳಿಸಿದರು. ಅವರು 1,31,586 ಮತಗಳನ್ನು ಪಡೆದುಕೊಂಡರೆ, ಇಂದ್ರಾನಿಲ್ 77,831 ಮತ ಗಳಿಸಿದರು.

ಮುಖ್ಯಮಂತ್ರಿ ಸ್ಥಾನ ಯಾರಿಗೆ?

ಗುಜರಾತ್ ನೂತನ ಸಿಎಂ ಯಾರಾಗಬಹುದು ಎಂಬ ಚರ್ಚೆ ಈಗ ಆರಂಭವಾಗಿದೆ. ಹಾಲಿ ಸಿಎಂ ವಿಜಯ್ ರೂಪಾಣಿ ಹೆಸರು ಮುಂಚೂಣಿಯಲ್ಲಿದೆ. ನಿತಿನ್ ಪಟೇಲ್ ಮತ್ತು ಪುರುಷೋತ್ತಮ ರೂಪಾಣಿ ಅವರಿಂದ ಭಾರಿ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಪಟೇಲ ಸಮಾಜದ ಮನವೊಲಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಜೋಡಿ ನಿರ್ಧರಿಸಿದಲ್ಲಿ, ಸಿಎಂ ಆಗುವ ಅದೃಷ್ಟ ನಿತಿನ್ ಪಟೇಲ್​ಗೆ ಒಲಿಯುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಅರುಣ್ ಜೇಟ್ಲಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ ಸಿಎಂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ವೀಕ್ಷಕರಾಗಿ ನೇಮಕಗೊಂಡಿದ್ದಾರೆ.

ಅಣಬೆ ಕೇಕ್ ಕತ್ತರಿಸಿ ಸಂಭ್ರಮ

ಗುಜರಾತ್ ಮತ್ತು ಹಿಮಾಚಲಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಚಿತವಾಗು ತ್ತಿದ್ದಂತೆ ಪಕ್ಷದ ಕಾರ್ಯಕರ್ತರು ನವದೆಹಲಿಯಲ್ಲಿ ಅಣಬೆ ಕೇಕ್ ಕತ್ತರಿಸಿ, ಸವಿದು ಸಂಭ್ರಮಿಸಿದರು. ವಿದೇಶಿ ಅಣಬೆ ತಿಂದು ಪ್ರಧಾನಿ ಮೋದಿ ಕಪ್ಪಗಿದ್ದವರು ಬೆಳ್ಳಗಾಗಿದ್ದಾರೆ ಎಂಬ ಅಲ್ಪೇಶ್ ಠಾಕೂರ್ ಆರೋಪಕ್ಕೆ ಸೆಡ್ಡು ಹೊಡೆಯಲು ದೆಹಲಿ ಬಿಜೆಪಿ ಕಾರ್ಯಕರ್ತರು ಅಣಬೆ ಕೇಕ್ ಕತ್ತರಿಸಿ, ಸವಿದರು. ಕೇಕ್ ಬೆಲೆ ಸುಮಾರು 4 ಲಕ್ಷ ರೂ. ಎನ್ನಲಾಗಿದೆ.

ಷೇರುಪೇಟೆಯಲ್ಲಿ ಭಾರಿ ಸಂಚಲನ

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಗುಜರಾತ್​ನ ಆರಂಭಿಕ ಎಣಿಕೆಯಲ್ಲಿ ಬಿಜೆಪಿ ಹಿನ್ನಡೆಗೆ ಒಳಗಾಗಿದೆ ಎಂಬುದು ತಿಳಿದಾಗ ಸೆನ್ಸೆಕ್ಸ್ 867.34 ಅಂಕಗಳ ಕುಸಿತ ಕಂಡಿತ್ತು. ಆದರೆ, ಬಿಜೆಪಿ ಚೇತರಿಸಿಕೊಳ್ಳುತ್ತಿರುವಂತೆ ಸೆನ್ಸೆಕ್ಸ್​ನಲ್ಲೂ ಚೇತರಿಕೆ ಕಂಡು ಬಂತು. ದಿನದ ಕೊನೆಯಲ್ಲಿ ಸೆನ್ಸೆಕ್ಸ್ ವಹಿವಾಟು 138.71 ಅಂಕಗಳ ಏರಿಕೆಯೊಂದಿಗೆ 33,601.68 ಅಂಕಕ್ಕೆ ಕೊನೆಗೊಂಡಿತು. ನಿಫ್ಟಿ ಕೂಡ 55.50 ಅಂಕಗಳ ಏರಿಕೆಯೊಂದಿಗೆ 10,388.75 ಅಂಕಗಳಲ್ಲಿ ವಹಿವಾಟು ಮುಗಿಸಿತು.

ಭೂಪೇಂದ್ರ ಯಾದವ್ ಚಮತ್ಕಾರ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಜೋಡಿ ತಂತ್ರಗಾರಿಕೆ ಕೆಲಸ ಮಾಡಿದೆ. ಈ ಗೆಲುವಿನ ಹಿಂದೆ ಅಮಿತ್ ಷಾ ಆಪ್ತ ಹಾಗೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಶ್ರಮವೂ ಅಡಗಿದೆ. ಭೂಪೇಂದ್ರ ಯಾದವ್ ವಾರ್​ರೂಂನಲ್ಲಿ ಕುಳಿತು, ಮೋದಿ-ಷಾ ಜೋಡಿಯ ತಂತ್ರಗಾರಿಕೆಯನ್ನು ಕಾರ್ಯಗತ ಗೊಳಿಸುವುದರಲ್ಲಿ ನಿಪುಣರು. ರಾಜಸ್ಥಾನದ ಅಜ್ಮೇರ್ ಮೂಲದ ಭೂಪೇಂದ್ರ 2012ರಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಚಾತುರ್ಯ ಹೊಂದಿರುವ ಇವರು ವೃತ್ತಿಯಿಂದ ವಕೀಲರಾಗಿದ್ದು, ಸುಪ್ರೀಂಕೋರ್ಟ್​ನ ವಕೀಲರಾಗಿಯೂ ಕೆಲಸ ಮಾಡಿದ್ದಾರೆ.

ನೋಟಾಕ್ಕೆ ಐದು ಲಕ್ಷ ಮತ!

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಪಕ್ಷೇತರರು ಮತ್ತು ನೋಟಾ (ಯಾವುದೇ ಅಭ್ಯರ್ಥಿಗೆ ಮತ ಇಲ್ಲ) ಪ್ರಮುಖ ಪಾತ್ರವಹಿಸಿರುವುದು ಕಂಡುಬಂದಿದೆ. ಗುಜರಾತ್​ನಲ್ಲಿ ಪಕ್ಷೇತರರಿಗೆ 9,88,415 ಮತಗಳು (ಶೇ.4.1) ಸಿಕ್ಕಿವೆ. 5,15,708 ಮತಗಳು (ಶೇ.1.8) ನೋಟಾಗೆ ಚಲಾವಣೆಯಾಗಿದೆ. ಇದು ಬಿಎಸ್ಪಿ ಮತ್ತು ಎನ್​ಸಿಪಿಗೆ ಚಲಾವಣೆಯಾಗಿರುವ ಮತಗಳಿಗಿಂತ ಹೆಚ್ಚಾಗಿದೆ. ಒಂದು ವೇಳೆ ಪಕ್ಷೇತರರು ಮತ್ತು ನೋಟಾಗೆ ಚಲಾವಣೆಯಾಗಿರುವ ಮತಗಳು ಕಾಂಗ್ರೆಸ್ ಪಾಲಾಗಿದ್ದರೆ ಚುನಾವಣೆ ಫಲಿತಾಂಶವೇ ಬುಡಮೇಲಾಗುತ್ತಿತ್ತು. ಹಿಮಾಚಲ ಪ್ರದೇಶದಲ್ಲಿ ಶೇ.0.9 ಮತಗಳು ನೋಟಾಗೆ ಚಲಾವಣೆಯಾಗಿದ್ದರೆ, ಶೇ.6.7 ಮತಗಳು ಪಕ್ಷೇತರ ಅಭ್ಯರ್ಥಿಗಳಿಗೆ ಸಿಕ್ಕಿದೆ.

ಮೋದಿ ನೆಲದಲ್ಲಿ ಆಪ್​ಗೆ ಮುಖಭಂಗ

ಆಮ್ ಆದ್ಮಿ ಪಕ್ಷ ಮೊದಲ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. 30 ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿದ್ದ ಎಎಪಿಗೆ ತೀವ್ರ ಮುಖಭಂಗವಾಗಿದೆ. ಛೋಟಾ ಉದೇಪುರ್​ನಲ್ಲಿ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರ್ಜುನ್​ಭಾಯ್ ವರ್ಸಿಂಗ್​ಭಾಯ್ ರಾತ್ವ 4,500 ಮತಗಳನ್ನು ಗಳಿಸಿದ್ದರು. ಎಎಪಿ ಅಭ್ಯರ್ಥಿಯೊಬ್ಬ ಗಳಿಸಿದ ಅತಿ ಹೆಚ್ಚು ಮತ ಇದಾಗಿದೆ. ಕೆಲ ಅಭ್ಯರ್ಥಿಗಳು ಖಾತೆ ತೆರೆಯುವುದಕ್ಕೂ ವಿಫಲವಾದರೆ ಕೆಲವರ ಮತಗಳು ಎರಡಂಕಿಗೆ ಸೀಮಿತವಾಗಿದ್ದವು.

ಗೌರವಯುತ ಹೋರಾಟ

ಜನಾದೇಶಕ್ಕೆ ತಲೆಬಾಗುತ್ತೇವೆ. ಆಕ್ರೋಶದ ವಿರುದ್ಧ ಗೌರವಯುತ ಹೋರಾಟ ಸಂಘಟಿಸಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ತಮ್ಮ ಬಗ್ಗೆ ಪ್ರೀತ್ಯಾದರ ತೋರಿದ ಉಭಯ ರಾಜ್ಯಗಳ ಜನತೆಗೂ ಅವರು ಕೃತಜ್ಞತೆ ಅರ್ಪಿಸಿದ್ದಾರೆ. ಸಭ್ಯತೆ ಮತ್ತು ದಿಟ್ಟತನದ ಹೋರಾಟದ ಕಾಂಗ್ರೆಸ್​ನ ಬಹುದೊಡ್ಡ ಶಕ್ತಿ ಎಂಬುದನ್ನು ಸಾಬೀತುಪಡಿಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಸಿಹಿ ಹಂಚಿ ಸಂಭ್ರಮ

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆದ್ದ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ಮುಸ್ಲಿಂ ಮಹಿಳೆಯರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ರಾಷ್ಟ್ರಗೀತೆ ಹಾಡಿ ಏಕತೆ ಸಂದೇಶ ಸಾರಿದರು. ಬಿಜೆಪಿ ಗೆಲ್ಲಬೇಕೆಂದು ದೇವರಲ್ಲಿ ಬೇಡಿಕೊಂಡಿದ್ದೆವು. ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತಾಗಿದೆ ಎಂದರು.

ನಿಕಟ ಪೈಪೋಟಿ ಇರಲಿಲ್ಲ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿಕಟ ಪೈಪೋಟಿ ಇರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸ್ಪಷ್ಟಪಡಿಸಿದ್ದಾರೆ. ವಂಶಾಡಳಿತದ ವಿರುದ್ಧ ಹಾಗೂ ಸಾಧನೆ, ಅಭಿವೃದ್ಧಿ ಬಲದ ಮೇಲೆ ಬಿಜೆಪಿ ಗೆಲವು ಸಾಧಿಸಿದೆ ಎಂದರು. ಎದುರಾಳಿ ಪಕ್ಷಗಳ ವಿರುದ್ಧ ಶೇ.8 ಗೆಲುವಿನ ಅಂತರ ಇರುವಾಗ, ಅದನ್ನು ನಿಕಟ ಪೈಪೋಟಿ ಎಂದು ಕರೆಯಲು ಹೇಗೆ ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಜನಕಲ್ಯಾಣ ಯೋಜನೆಗಳು ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿದ್ದಾಗಿ ತಿಳಿಸಿದರು. ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಸೂಚಿಯು ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವಂಶಾವಳಿ ಆಡಳಿತ, ಜಾತಿ ಆಧಾರಿತ ಹಾಗೂ ಓಲೈಕೆ ರಾಜಕೀಯದ ವಿರುದ್ಧ ಗೆದ್ದಿತು ಎಂದರು. ಉಭಯ ರಾಜ್ಯಗಳಲ್ಲಿ ಪಕ್ಷಕ್ಕೆ ಬಹುಮತ ದಕ್ಕಿದ್ದಕ್ಕಾಗಿ ಆಯಾ ರಾಜ್ಯದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಅಭಿನಂದಿಸಿದರು.

 

ಬಿಜೆಪಿ ಹಣ ಮತ್ತು ಶಕ್ತಿಯಿಂದ ಗೆದ್ದಿದೆ. ಅಹಮದಾಬಾದ್ ಮತ್ತು ರಾಜ್​ಕೋಟ್​ನ ಕೆಲ ಕ್ಷೇತ್ರಗಳಲ್ಲಿ ಟ್ಯಾಂಪರಿಂಗ್ ಆಗಿದೆ. ಈ ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಅಂತರ 500-1,000 ಮತಗಳಷ್ಟಿದೆ. ಜನರಿಗೆ ಯಾವುದೇ ರೀತಿಯ ಅನುಮಾನ ಬರಬಾರದೆಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಕೆಲ ಅಭ್ಯರ್ಥಿಗಳು 500 ಮತಗಳಿಂದ ಗೆದ್ದಿದ್ದರೂ ಮರುಎಣಿಕೆ ಮಾಡಿದಾಗ ಅದೇ ಅಭ್ಯರ್ಥಿ 6,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದರು. ಇದರಿಂದ ಇವಿಎಂ ಮಷಿನ್​ನಲ್ಲಿ ಸಮಸ್ಯೆಯಿರುವುದು ಸಾಬೀತಾಗುತ್ತದೆ.

| ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯದ ಹೋರಾಟಗಾರ

 

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿಗೆ ಶುಭ ಹಾರೈಸುತ್ತೇನೆ. ಆದರೆ ಇದು ತಾತ್ಕಾಲಿಕವಾದುದು, ಬಿಜೆಪಿಗೆ ಮರ್ಯಾದೆ ಉಳಿಸುವ ಗೆಲುವು ಅಷ್ಟೆ. ನೈತಿಕವಾಗಿ ಇದು ಬಿಜೆಪಿಯ ಸೋಲು. ಗುಜರಾತ್​ನ ಮತದಾರರು ದೌರ್ಜನ್ಯ, ಆತಂಕ ಮತ್ತು ಅನ್ಯಾಯದ ವಿರುದ್ಧ ಮತ ಹಾಕಿದ್ದಾರೆ. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಲೆಕ್ಕಾಚಾರಗಳು ಹೇಗೆ ಬುಡಮೇಲಾಗಲಿವೆ ಎಂಬುದಕ್ಕೆ ಇದು ಸೂಚನೆ.

| ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

 

ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ಜಯ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ನೀತಿಗಳಿಗೆ ಸಂದ ಯಶಸ್ಸು. ಸಂವಿಧಾನ ಬಾಹಿರ ಭಾಷೆ ಬಳಕೆ ಮಾಡುವವರಿಗೆ ಇದು ಪಾಠವಾಗಲಿದೆ. ಮೋದಿ ನಾಯಕತ್ವದ ಬಗ್ಗೆ ಪ್ರಶ್ನಿಸುತ್ತಿರುವವರು ಈಗ ಅವರನ್ನು ಒಪ್ಪಿಕೊಳ್ಳಲೇಬೇಕು.

| ಯೋಗಿ ಆದಿತ್ಯನಾಥ, ಉತ್ತರಪ್ರದೇಶ ಮುಖ್ಯಮಂತ್ರಿ

 

ಗುಜರಾತ್ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಾಲಿಗೆ ದೊಡ್ಡ ಆಘಾತವೇನು ಅಲ್ಲ. ಇತ್ತ ಬಿಜೆಪಿ ಪಾಲಿಗೆ ಅವರು ಇಚ್ಛಿಸಿದಂತ ಜಯಭೇರಿಯೂ ಅಲ್ಲ. ಇದರಿಂದ ಕಲಿಯಬೇಕಾದ್ದೇನು ಎಂಬುದು ನಮ್ಮ ಜ್ಞಾನಕ್ಕೆ ಬಿಟ್ಟಿದ್ದು.

| ಉಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ

 

 

Leave a Reply

Your email address will not be published. Required fields are marked *

Back To Top