Saturday, 24th March 2018  

Vijayavani

Breaking News

ಸೂಪರ್​ಜೈಂಟ್ ಪ್ಲೇಆಫ್ ಆಸೆಗೆ ಡೆಲ್ಲಿ ಡೆವಿಲ್!

Saturday, 13.05.2017, 3:01 AM       No Comments

ದೆಹಲಿ: ಪ್ಲೇಆಫ್ ಕನಸು ಕಮರಿದರೂ ತವರು ಪ್ರೇಕ್ಷಕರ ಎದುರು ಸಂಘಟಿತ ನಿರ್ವಹಣೆ ತೋರಲು ಯಶಸ್ವಿಯಾದ ಡೆಲ್ಲಿ ಡೇರ್​ಡೆವಿಲ್ಸ್ ತಂಡ ಐಪಿಎಲ್-10ರ ತನ್ನ 13ನೇ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್​ಜೈಂಟ್ ತಂಡವನ್ನು 7ರನ್​ಗಳಿಂದ ಮಣಿಸಿತು. ಇದರಿಂದ ಒಂದು ಪಂದ್ಯ ಬಾಕಿ ಇರುವಾಗಲೇ ಪ್ಲೇಆಫ್ ಹಂತಕ್ಕೇರುವ ಕನಸಿನಲ್ಲಿದ್ದ ಪುಣೆ ತಂಡಕ್ಕೆ ಡೆಲ್ಲಿ ತಂಡ ಆಘಾತ ನೀಡಿದರೆ, ಸ್ಟೀವನ್ ಸ್ಮಿತ್ ಪಡೆ ನಾಲ್ಕರಘಟ್ಟದ ಪ್ರವೇಶಕ್ಕಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ‘ನಾಕೌಟ್’ ಮುಖಾಮುಖಿ ಆಡಲಿದೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 8 ವಿಕೆಟ್​ಗೆ 168 ರನ್ ಪೇರಿಸಿದರೆ, ಪ್ರತಿಯಾಗಿ ಪುಣೆ ತಂಡ ರೈಸಿಂಗ್ ಪುಣೆ ಸೂಪರ್​ಜೈಂಟ್ ತಂಡ ಮನೋಜ್ ತಿವಾರಿ (60 ರನ್, 45 ಎಸೆತ, 5 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 7 ವಿಕೆಟ್​ಗೆ 161 ರನ್ ಗಳಿಸಲಷ್ಟೆ ಶಕ್ತವಾಯಿತು.

ಪುಣೆಗೆ ಡೆಲ್ಲಿ ಬೌಲರ್​ಗಳು ಕಡಿವಾಣ: ಡೆಲ್ಲಿ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪುಣೆ ತಂಡ ಮೊದಲ ಎಸೆತದಲ್ಲೇ ಶಾಕ್ ಅನುಭವಿಸಿತು. ಅನುಭವಿ ಬ್ಯಾಟ್ಸ್​ಮನ್ ಅಜಿಂಕ್ಯ ರಹಾನೆ ಎದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಬಳಿಕ ನಾಯಕ ಸ್ಟೀವನ್ ಸ್ಮಿತ್ (38 ರನ್, 32 ಎಸೆತ, 4 ಬೌಂಡರಿ, 1 ಸಿಕ್ಸರ್) ರನ್​ವೇಗಕ್ಕೆ ಚಾಲನೆ ನೀಡಿದರೂ ರಾಹುಲ್ ತ್ರಿಪಾಠಿ (7) ಹೆಚ್ಚು ಹೊತ್ತು ನಿಲ್ಲಲಿಲ್ಲ. 36ರನ್​ಗಳಿಗೆ ಆರಂಭಿಕರನ್ನು ಕಳೆದುಕೊಂಡ ಪುಣೆ ಸಂಕಷ್ಟದ ಸುಳಿಗೆ ಸಿಲುಕಿತು. ಬಳಿಕ ಕೂಡಿಕೊಂಡ ಸ್ಮಿತ್ ಹಾಗೂ ಮನೋಜ್ ತಿವಾರಿ ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ಪುಣೆ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದರು. 3ನೇ ವಿಕೆಟ್​ಗೆ 38ರನ್ ಕಲೆಹಾಕಿದ್ದ ವೇಳೆ ಸ್ಮಿತ್​ರನ್ನು ನದೀಮ್ ಎಲ್​ಬಿ ಬಲೆಗೆ ಬೀಳಿಸಿದರು.

ಸ್ಮಿತ್ ನಿರ್ಗಮನದ ಬಳಿಕ ಜತೆಯಾದ ಬೆನ್ ಸ್ಟೋಕ್ಸ್ (33 ರನ್, 25 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಮನೋಜ್ ತಿವಾರಿ ಬಿರುಸಿನ ಬ್ಯಾಟಿಂಗ್​ನೊಂದಿಗೆ ವಿಕೆಟ್ ಕಾಯ್ದುಕೊಳ್ಳಲು ಯತ್ನಿಸಿದರು. ಮೊಹಮದ್ ಶಮಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಸ್ಟೋಕ್ಸ್ ಬೌಂಡರಿ ಲೈನ್​ನಲ್ಲಿದ್ದ ಆಂಡರ್​ಸನ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಬಳಿಕ ಬಂದ ಧೋನಿ (5) ಹಾಗೂ ಕ್ರಿಶ್ಚಿಯನ್ (3) ನಿರಾಸೆ ಅನುಭವಿಸಿದರು.

ಡೆಲ್ಲಿಗೆ ಆರಂಭಿಕ ಆಘಾತ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಡೆಲ್ಲಿ ತಂಡ ಆರಂಭದಲ್ಲೇ ಶಾಕ್ ಎದುರಿಸಿತು. ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಇಲ್ಲದ ರನ್ ಕದಿಯಲು ಹೋದಾಗ ಸ್ಯಾಮ್ಸನ್ ರನೌಟ್ ಬಲೆಗೆ ಬಿದ್ದರು. ಬಳಿಕ ಬಂದ ಕಳೆದ ಪಂದ್ಯ ಹೀರೋ ಶ್ರೇಯಸ್ ಅಯ್ಯರ್ (3) ಉನಾದ್ಕತ್ ಎಸೆತದಲ್ಲಿ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಕ್ಯಾಚ್​ನೊಂದಿಗೆ ಧೋನಿ ಐಪಿಎಲ್​ನಲ್ಲಿ 100ನೇ ಬಲಿ ಪಡೆದರು.

ಡೆಲ್ಲಿ ತಂಡ ಆರಂಭಿಕ ವೈಫಲ್ಯದಿಂದ ತತ್ತರಿಸಿದ್ದ ವೇಳೆ ಕರುಣ್ ನಾಯರ್​ಗೆ ಜತೆಯಾದ ಸ್ಥಳೀಯ ಸ್ಟಾರ್ ಆಟಗಾರ ರಿಷಭ್ ಪಂತ್ (36 ರನ್, 22 ಎಸೆತ, 4 ಬೌಂಡರಿ, 2 ಸಿಕ್ಸರ್) ಕೆಲಕಾಲ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಆರಂಭಿಕ ಆಘಾತ ಲೆಕ್ಕಿಸದೆ ನಿರರ್ಗಳವಾಗಿ ಬ್ಯಾಟ್ ಬೀಸಿದ ಈ ಜೋಡಿ ಎದುರಿಸಿದ ಕೇವಲ 40 ಎಸೆತಗಳಲ್ಲಿ 74ರನ್ ಕಲೆಹಾಕುವ ಮೂಲಕ ಚೇತರಿಕೆ ನೀಡಿತು. ಜಂಪಾ ಎಸೆತದಲ್ಲಿ ತಾಳ್ಮೆ ಕಳೆದುಕೊಂಡ ರಿಷಭ್ ಬೌಂಡರಿ ಲೈನ್​ನಲ್ಲಿದ್ದ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಮರ್ಲಾನ್ ಸ್ಯಾಮ್ಯುಯೆಲ್ಸ್ (27) ಕೂಡ ಅಬ್ಬರದ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು.

ಡೆಲ್ಲಿಗೆ ಕೈಕೊಟ್ಟ ಮಧ್ಯಮ ಕ್ರಮಾಂಕ: ಸ್ಯಾಮ್ಯುಯೆಲ್ಸ್ ನಿರ್ಗಮನದ ಬಳಿಕ ಡೆಲ್ಲಿ ತಂಡದ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ಕಂಡಿತು. ಕೋರಿ ಆಂಡರ್​ಸನ್ (3) ಹಾಗೂ ಪ್ಯಾಟ್ ಕಮ್ಮಿನ್ಸ್ (11) ಬಂದಷ್ಟೇ ವೇಗವಾಗಿ ವಾಪಸಾದರು. -ಏಜೆನ್ಸೀಸ್

 ಕುತೂಹಲ ಮೂಡಿಸಿದ ಕೊನೇ ಓವರ್

ಪುಣೆ ಜಯ ಸಾಧಿಸಲು ಕೊನೇ ಓವರ್​ನಲ್ಲಿ 25ರನ್​ಬೇಕಿದ್ದವು. ಈ ವೇಳೆ ಮನೋಜ್ ತಿವಾರಿ ಏಕಾಂಗಿ ಹೋರಾಟದ ಮೂಲಕ ಗಮನಸೆಳೆದರು. ಪ್ಯಾಟ್ ಕಮಿನ್ಸ್ ಎಸೆದ ಓವರ್​ನ ಆರಂಭಿಕ ಎರಡೂ ಎಸೆತಗಳನ್ನು ಸಿಕ್ಸರ್​ಗೆ ಅಟ್ಟಿದ ತಿವಾರಿ ಡೆಲ್ಲಿಗೆ ಆತಂಕ ನೀಡಿದರು. 3ನೇ ಎಸೆತ ವೈಡ್ ಬಾಲ್ ಆದ್ದರಿಂದ ಪುಣೆ ಪಾಳಯದಲ್ಲಿ ಸಂಭ್ರಮ ಹೆಚ್ಚಿತು. ಬಳಿಕ ಸತತ 2 ಎಸೆತಗಳಲ್ಲಿ ಕಡಿವಾಣ ಹಾಕಿದ ಕಮಿನ್ಸ್, ಲೆಗ್​ಬೈಸ್ ಮೂಲಕ ಬೌಂಡರಿ ಬಿಟ್ಟುಕೊಟ್ಟರು. ಕೊನೇ ಎಸೆತದಲ್ಲಿ 8ರನ್ ಬೇಕಿದ್ದಾಗ ತಿವಾರಿ ಬೌಲ್ಡ್ ಆದರು.

Leave a Reply

Your email address will not be published. Required fields are marked *

Back To Top