Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಸುಸೂತ್ರ ಕಲಾಪಕ್ಕೆ ಕಸರತ್ತು

Monday, 17.07.2017, 3:03 AM       No Comments

ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಸಂಸತ್​ನ ಮುಂಗಾರು ಅಧಿವೇಶನದಲ್ಲಿ ಕಲಾಪ ಸುಗಮಗೊಳಿಸಲು ಕೇಂದ್ರ ಸರ್ಕಾರ ಕಸರತ್ತು ನಡೆಸಿದೆ. ಚೀನಾ-ಭಾರತ ಗಡಿ ವಿವಾದ ಸಹಿತ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸಂಸತ್​ನಲ್ಲಿ ಎನ್​ಡಿಎ ವಿರುದ್ಧ ಪ್ರತಿಭಟನೆ ನಡೆಸಲು ಪ್ರತಿಪಕ್ಷಗಳು ತಂತ್ರಗಾರಿಕೆ ರೂಪಿಸಿರುವ ಬೆನ್ನಲ್ಲೇ ಈ ವಿಚಾರಗಳನ್ನು ಸರ್ವಪಕ್ಷಗಳ ಸಭೆಯಲ್ಲಿ ರ್ಚಚಿಸುವ ಮೂಲಕ ಪ್ರತಿಪಕ್ಷಗಳ ತಂತ್ರಕ್ಕೆ ಕೇಂದ್ರ ಸರ್ಕಾರ ತುಸು ಹಿನ್ನಡೆ ಉಂಟು ಮಾಡಿದೆ.

ಗೋ ಮಾರಾಟ ನಿರ್ಬಂಧ ಬಳಿಕ ದೇಶದಲ್ಲಿ ಉಂಟಾಗುತ್ತಿರುವ ಹಲವು ಅಹಿತಕರ ಘಟನೆಗಳನ್ನು ಸಂಸತ್​ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧ ರಿಸಿತ್ತು. ಆದರೆ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿಯೇ ಈ ವಿಚಾರ ಪ್ರಸ್ತಾಪಿಸಿ, ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರಗಳೇ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಬಿಹಾರದ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದವರ ಮೇಲೆ ನಿರಂತರವಾಗಿ ಜಾರಿ ನಿರ್ದೇಶನಾಲಯ ಹಾಗೂ ಐಟಿ ದಾಳಿ ನಡೆಯುತ್ತಿರುವುದಕ್ಕೆ ಕಾಂಗ್ರೆಸ್ ರಾಜಕೀಯ ಬಣ್ಣ ನೀಡಿ ಸಂಸತ್​ನಲ್ಲಿ ಪ್ರತಿಭಟಿಸಲು ನಿರ್ಧರಿಸಿತ್ತು. ಆದರೆ ಭ್ರಷ್ಟರ ವಿರುದ್ಧ ಯಾವುದೇ ಕಾರಣಕ್ಕೂ ಸಹಿಷ್ಣುತೆ ತೋರುವುದಿಲ್ಲ ಎನ್ನುವ ಮೂಲಕ ಪ್ರಧಾನಿ ಕೇಂದ್ರ ಸರ್ಕಾರದ ನಿಲುವು ವ್ಯಕ್ತಪಡಿಸಿದ್ದಾರೆ.

ತರಾಟೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜು

ಮುಂಗಾರು ಅಧಿವೇಶನ ವೇಳೆ ಆಡಳಿತಾರೂಢ ಎನ್​ಡಿಎ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳು ಸಿದ್ಧಗೊಂಡಿವೆ. ದೇಶದಲ್ಲಿ ಹೆಚ್ಚುತ್ತಿರುವ ನಿಗೂಢ ಹತ್ಯೆಗಳು, ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಸಿಕ್ಕಿಂ ಗಡಿಯಲ್ಲಿ ಚೀನಾ ಜತೆಗಿನ ತಿಕ್ಕಾಟ, ಪಶ್ಚಿಮ ಬಂಗಾಳದ ಗೂರ್ಖಾ ಪ್ರತಿಭಟನೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಈ ನಡುವೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಭೆ ನಡೆಯಿತು. ಇದರಲ್ಲಿ ಜೆಡಿಯು ಹೊರತುಪಡಿಸಿ 17 ಪಕ್ಷಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಮಗೆ ಸಂಖ್ಯಾಬಲ ಕಡಿಮೆಯಿರಬಹುದು. ಆದರೆ, ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಹೋರಾಡಬೇಕು. ದೇಶವನ್ನು ಕೋಮುವಾದಿಗಳ ಕೈಗೆ ನೀಡಬಾರದು ಎಂದರು.

ಸರ್ವಪಕ್ಷ ಸಭೆಯಲ್ಲಿ ಮೋದಿ ಹೇಳಿದ್ದೇನು?

 •  ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ರಕ್ಷಿಸಬಾರದು. ಇದರಿಂದ ರಾಜಕೀಯ ನಾಯಕರ ಘನತೆಗೆ ಕುಂದು ಬರುತ್ತದೆ.
 •  ಕ್ವಿಟ್ ಇಂಡಿಯಾ ಚಳವಳಿಗೆ ಆಗಸ್ಟ್ 9ರಂದು 75 ವರ್ಷ ತುಂಬಲಿದ್ದು, ಈ ಕುರಿತ ಆಚರಣೆಯಲ್ಲಿ ಸರ್ವಪಕ್ಷಗಳು ಪಾಲ್ಗೊಳ್ಳಬೇಕು
 •  ಜಿಎಸ್​ಟಿ ಕಾಯ್ದೆ ಸಹಕಾರ ಒಕ್ಕೂಟ ವ್ಯವಸ್ಥೆಗೆ ಉತ್ತಮ ಉದಾಹರಣೆ
 •  ಬಜೆಟನ್ನು ಅವಧಿಗೆ ಮುನ್ನವೇ ಮಂಡಿಸಿದ್ದರಿಂದ ಮೂಲಸೌಕರ್ಯಗಳ ವಲಯದ ಶೇ.49 ರ ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ.

ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಿ

ಗೋ ರಕ್ಷಣೆ ಹೆಸರಿನಲ್ಲಿ ಕಾನೂನು ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ, ಅಂಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅದು ರಾಜಕೀಯ ಇಲ್ಲವೇ ಕೋಮು ಬಣ್ಣ ಪಡೆಯದಂತೆ ಎಚ್ಚರ ವಹಿಸು ವಂತೆ ಸೂಚಿಸಿದ್ದಾರೆ. ಹಿಂದುಗಳು ಗೋವನ್ನು ತಾಯಿಯಂತೆ ಪೂಜಿಸುತ್ತಾರೆ. ಈ ನಂಬಿಕೆ ಅವರಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂದರು. ಕೇಂದ್ರ ಸರ್ಕಾರದ ಗೋ ಹತ್ಯೆ ವಿರುದ್ಧದ ಅಭಿಯಾನದಿಂದ ಮುಸ್ಲಿಂ ಹಾಗೂ ದಲಿತರನ್ನು ಗುರಿಯಾಗಿಸಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದವು.

16 ಹೊಸ ವಿಧೇಯಕಗಳು

 • ಕೇಂದ್ರ ಸರ್ಕಾರ ಸಂಸತ್ ಅಧಿವೇಶನದಲ್ಲಿ 16 ಮಹತ್ವದ ವಿಧೇಯಕಗಳನ್ನು ಮಂಡಿಸಲು ನಿರ್ಧರಿಸಿದೆ. ಪ್ರಮುಖ ಮಸೂದೆಗಳು ಹೀಗಿವೆ…
 •  ಜಿಎಸ್​ಟಿಗೆ ಸಂಬಂಧಿಸಿದ ವಿಧೇಯಕ- ಜಮ್ಮು ಕಾಶ್ಮೀರದಲ್ಲಿ ಜಿಎಸ್​ಟಿ ಜಾರಿಗೆ ಸಂಬಂಧಿಸಿದಂತೆ ಎರಡು ವಿಧೇಯಕ.
 •  ಬ್ಯಾಂಕ್ ನಿಯಮ(ತಿದ್ದುಪಡಿ) ವಿಧೇಯಕ-ಭಾರತೀಯ ರಿಸರ್ವ್ ಬ್ಯಾಂಕಿಗೆ ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ವಿಲೇವಾರಿಗೆ ಆದೇಶಿಸುವ ಅಧಿಕಾರ ನೀಡುವ ವಿಧೇಯಕ.
 •  ರಾಷ್ಟ್ರೀಯ ತನಿಖಾ ಸಂಸ್ಥೆ(ತಿದ್ದುಪಡಿ) ವಿಧೇಯಕ-ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹೆಚ್ಚಿನ ಅಧಿಕಾರ. ಇದರ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧಿಕಾರಿಗಳ ನೇಮಕ.
 •  ನಾಗರಿಕ (ಸಂಘಟನೆ) ವಿಧೇಯಕ- ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬರುವವರಿಗೆ ಹಿಂದು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಇಸಾಯಿಗಳಿಗೆ ಭಾರತೀಯ ನಾಗರಿಕತೆ ನೀಡುವುದು.
 •  ಭ್ರಷ್ಟಾಚಾರ ನಿಗ್ರಹ(ತಿದ್ದುಪಡಿ) ವಿಧೇಯಕ- ಲಂಚ ಸ್ವೀಕರಿಸುವರ ಜತೆಗೆ, ಲಂಚ ನೀಡುವವರೂ ಅಪರಾಧಿಗಳೆಂದು ಘೋಷಿಸುವ ವಿಧೇಯಕ
 •  ವಿಷಲ್ ಬ್ಲೋವರ್ ಸಂರಕ್ಷಣೆ(ತಿದ್ದುಪಡಿ) ವಿಧೇಯಕ-ಭ್ರಷ್ಟರ ಕುರಿತು ಮಾಹಿತಿ ನೀಡುವರ ಹೆಸರು ಗೌಪ್ಯವಾಗಿಡಲು ಅವಕಾಶ ಕಲ್ಪಿಸುವ ವಿಧೇಯಕ. ಇದು ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಇದೆ.

Leave a Reply

Your email address will not be published. Required fields are marked *

Back To Top