Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಸುರಂಗಸಾಧಕರ ಮಗನಿಗೆ ಅಡ್ಡಬೋರಿನ ಗುಂಗು

Monday, 16.10.2017, 3:03 AM       No Comments

ಸುರಂಗ ಅಂದ ಕೂಡಲೇ ಕೇರಳದ ಉತ್ತರ ತುದಿಯಲ್ಲಿರುವ ಕಾಸರಗೋಡು ನೆನಪಾದರೆ ಅಚ್ಚರಿ ಇಲ್ಲ. ಅಷ್ಟಿವೆ ಅಲ್ಲಿ ಸುರಂಗಗಳು. ದಕ್ಷಿಣ ಕನ್ನಡದಲ್ಲೂ ಕೆಲವೆಡೆ ಸುರಂಗಗಳಿವೆ. ಅವುಗಳಿಂದ ಪ್ರೇರಿತರಾಗಿ ಶಿವಮೊಗ್ಗ ಸಾಗರದ ತಾಳಗುಪ್ಪದ ಬಂಜಗಾರಿನಲ್ಲಿ ಸುರಂಗ ಕೊರೆದವರಿದ್ದಾರೆ. ಈಗ ಅವರಿಗೆ ಅಡ್ಡ ಬೋರು ಹಾಕಿಸಬೇಕು ಎಂಬ ಇರಾದೆ ಹೆಚ್ಚಾಗಿದೆ. ಈ ಕಂತಿನಲ್ಲಿ ಆ ಕಥಾನಕ.

| ಶ್ರೀ ಪಡ್ರೆ

ಶಿವಮೊಗ್ಗ ಜಿಲ್ಲೆಯ ಸಾಗರದಿಂದ ತಾಳಗುಪ್ಪ ಬಹಳ ದೂರವೇನಲ್ಲ. ತಾಳಗುಪ್ಪದ ಬಳಿಯೇ ಇದೆ ಬಂಜಗಾರು. ಈ ಕೃಷಿಕುಟುಂಬದ ಜಮೀನಿನಲ್ಲಿ ಬಹುಶಃ ತಾಲೂಕಿನ ಬೇರೆಲ್ಲೂ ಇಲ್ಲದ ವಿಶೇಷ ಇದೆ.

ಏನು ಗೊತ್ತಾ? ಸುರಂಗ!

ಸುರಂಗ ಎಂದರೆ ನೀರಿಗಾಗಿ ತೋಡುವ ಗುಹೆ. ದೇಶದಲ್ಲೇ ಕಾಸರಗೋಡು ಜಿಲ್ಲೆ ಸುರಂಗಗಳಿಗೆ ಹೆಸರುವಾಸಿ. ಸರಿಯಾಗಿ ಲೆಕ್ಕ ಹಾಕಿದರೆ ಇಲ್ಲಿ ಸುರಂಗಸಂಖ್ಯೆ 10,000 ತಲಪಿದರೂ ಅಚ್ಚರಿಯಿಲ್ಲ! ಮತ್ತೆ ತಾಳಗುಪ್ಪಕ್ಕೇ ಹೋಗೋಣ.

ಬಂಜಗಾರಿನ ಸುರಂಗ ನಿಮ್ಮನ್ನು ಒಳಬಿಡುವಷ್ಟು ಬಾಯಿ ತೆರೆದು ನಿಂತಿಲ್ಲ. ಎದುರಲ್ಲೇ ಕುಸಿದಿದೆ. ‘ಅಂಥಾ ಉದ್ದ ಏನಿಲ್ಲ, ಮೂವತ್ತು ಅಡಿ, ಅಷ್ಟೇ’ ಎನ್ನುತ್ತಾ ಇದರ ಒಡೆಯ ರಮೇಶ್ ಹೆಗಡೆ ನಿಮಗೆ ತೋರಿಸಿಯಾರು. ಕುಸಿದರೇನಂತೆ, 1974ರಲ್ಲಿ ತೋಡಿದ ಸುರಂಗ ಇಂದಿಗೂ ಅನುದಿನವೂ ನೀರು ಕೊಡುತ್ತಿದೆ. ಅದೂ ಅಷ್ಟಿಷ್ಟಲ್ಲ, ಎರಡಿಂಚು. ಬೇಸಿಗೆ ಕೊನೆಗೂ ಒಂದೂಕಾಲು ಇಂಚಿಗಡ್ಡಿಯಿಲ್ಲ. ಕೆರೆಯಲ್ಲಿ ತುಂಬಿ ಮೂರು ಎಕರೆ ಅಡಕೆ ತೋಟ ನೆನೆಸುತ್ತದೆ!

ಸುರಂಗ ಎಂದಾಕ್ಷಣ ರಮೇಶ್ ಹೆಗಡೆಯವರ ನೆನಪು ಓಡುವುದು ಅಪ್ಪ ದಿ. ಗಣಪತಿ ಹೆಗಡೆಯವರ ಬಳಿ. ಅವರಿಗೆ ಈ ಐಡಿಯಾ ಕೊಟ್ಟದ್ದು ಹೆಣ್ಣು ಕೊಟ್ಟ ಮಾವ ಗೋಟಗಾರು ರಾಮಚಂದ್ರಯ್ಯ. ಅವರಲ್ಲಿದ್ದ ಸುರಂಗ ನೋಡಿ ಇಲ್ಲೂ ತೆಗೆದರೆ ಹೇಗೆ ಅನಿಸಿತು. ಮಾವನಿಗೆ ಪ್ರೇರಣೆ ದಕ್ಷಿಣ ಕನ್ನಡದಿಂದ ಅಂತೆ. ಆದರೆ ಮಾವನ ಸುರಂಗ ನೀರೇ ಕೊಟ್ಟಿರಲಿಲ್ಲ. ಅಳಿಯನಿಗೆ ಅದು ಮನಸಾರೆ ನೀರು ಹರಿಸಿತು. ನಾಲ್ಕು ದಶಕದ ಪರಿಸರ ಅವನತಿಯನ್ನೂ ಕಡೆಗಣಿಸಿ ಡಿಸ್ಕೌಂಟ್ ಮಾಡದೆ ನೀರೂಡುತ್ತಿದೆ.

‘ಅಪ್ಪಯ್ಯ ಮತ್ತು ಆಳುಗಳು ಸೇರಿ ಸುರಂಗ ತೋಡಿದ್ದರು. ಒಳಗೆ ಕತ್ತಲೆ ತಾನೇ. ಬಿಸಿಲಿಗೆ ಕನ್ನಡಿ ಒಡ್ಡಿ ಅದರ ಬೆಳಕನ್ನು ಒಳಕ್ಕೆ ಹಾಯಿಸುತ್ತಿದ್ದೆವು. ಆಗಿನ್ನೂ ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಆದರೆ ಅಲ್ಪಸ್ವಲ್ಪ ಕೆಲಸದಲ್ಲಿ ಸೇರಿದ್ದೆ’ ಎಂದು ನೆನೆಯುತ್ತಾರೆ ರಮೇಶ್ ಹೆಗಡೆ.

ಆಗೆಲ್ಲಾ ಈ ಸುರಂಗ ತೋಡುವುದನ್ನು ನೋಡಲೆಂದೇ ಜನ ಬರುತ್ತಿದ್ದರಂತೆ. ನೋಡಿ ನೋಡಿ ಕಲಗಾರು ಎಂಬಲ್ಲಿನ ಕೃಷಿಕರು ತಾವೂ ಒಂದು ತೋಡಿದ್ದರಂತೆ. ಇಪ್ಪತ್ತು ಅಡಿ ಹೋದರೂ ಅದು ಗಂಗಮ್ಮನನ್ನು ತೋರಿಸಿಕೊಡಲಿಲ್ಲ. ಅಲ್ಲಿಗೆ ಆ ಮನೆಯವರು ಅದನ್ನು ಕೈಬಿಟ್ಟರು.

ಬಂಜಗಾರಿನದು ಕಲ್ಲುಮಿಶ್ರ ಕೆಮ್ಮಣ್ಣು. ಸಿಕ್ಕಿದ ಮೊದಲ ಯಶಸ್ಸಿನಿಂದ ಗಣಪತಿ ಹೆಗಡೆಯವರ ಉತ್ಸಾಹ ಇಮ್ಮಡಿಸಿತು. ಅನತಿ ದೂರದಲ್ಲಿ ಇನ್ನೂ ಒಂದು ತೋಡಿದರು. ಅದಲ್ಲೂ ಈಗ ಮುಕ್ಕಾಲು ಇಂಚು ನೀರಿಗೆ ಅಡ್ಡಿಯಿಲ್ಲ. ‘ಆಗೆಲ್ಲಾ ಹಲವು ಬಾರಿ ಸುರಂಗದ ಒಳಗೆ ಹೋಗಿ ಬರುತ್ತಲೇ ಇದ್ದೆ. ಈಗ ನೋಡಿ, ಕುಸಿದ ನಂತರ ಭಯವಾಗುತ್ತಿದೆ’ ಎನ್ನುತ್ತಾರೆ ರಮೇಶ್.

ಶಿವಮೊಗ್ಗ ಜಿಲ್ಲೆಯಲ್ಲಿ ಬೇರೆಲ್ಲಾದರೂ ಈ ಥರ ಸುರಂಗ ಇದೆಯೋ ಗೊತ್ತಿಲ್ಲ. ಆದರೆ ಸಾಗರದ ಈ ಸುರಂಗ, ಅದು ಇನ್ನೂ ಮೂರು ಎಕರೆಗೆ ನೀರು ಕೊಡುತ್ತಿರುವುದು ನೀರುಪ್ರಿಯರಿಗೆ, ವಿದ್ಯಾರ್ಥಿಗಳಿಗೆ ಒಂದು ಅಧ್ಯಯನಯೋಗ್ಯ ವಿಷಯವೇ. ಸುರಂಗದ ಬಗ್ಗೆ ತಿಳಿದಿರಬೇಕಾದ ಒಂದು ಮುಖ್ಯ ಅಂಶವೆಂದರೆ ಇದನ್ನು ಎಲ್ಲಿ ಬೇಕೋ ಅಲ್ಲಿ ತೋಡಬರುವುದಿಲ್ಲ. ಜಂಬಿಟ್ಟಿಗೆಯೇ (ಮುರ ಮಣ್ಣು, ಲ್ಯಾಟರೈಟ್) ಸೂಕ್ತ. ಅದೂ ಹಾಗೆ, ಮಣ್ಣಿನ ರಚನೆ ತೀರಾ ಗಟ್ಟಿ ಇರಲೂಬಾರದು, ತುಂಬ ಮೆತ್ತಗಿದ್ದರೂ ಆಗದು. ಗಟ್ಟಿಯಿದ್ದರೆ ಅಗೆದು ತೋಡುವುದು ಹರಸಾಹಸ. ಮೆತ್ತಗಿದ್ದರೆ ತೋಡುವಾಗಲೇ ಕುಸಿದು ಬೀಳುವ ಆತಂಕ.

ರಮೇಶ್ ಅವರೊಡನೆ ಮಾತು ಮುಂದುವರಿಸಿದರೆ ಬಂಜಗಾರಿನ ನೀರ ಸುಸ್ಥಿತಿಯ ಕಾರಣಗಳನ್ನು ಊಹಿಸಲು ಕಷ್ಟವಿಲ್ಲ. ಈ ಸರಹದ್ದಿನಲ್ಲಿ ಪುಣ್ಯಕ್ಕೆ ಇನ್ನೂ ಯಾರಿಗೂ ಕೊಳವೆಪ್ರೀತಿ, ಅಂದರೆ, ಕೊಳವೆಬಾವಿ ಮೋಹ ಹತ್ತಿಲ್ಲ. ಸುರಂಗ ಇರುವ ಎಡೆಯಿಂದ ಮೇಲಿನ ಜಮೀನಿನಲ್ಲಿ ಐವತ್ತು ಮೀಟರ್ ದೂರದಲ್ಲೇ ದಟ್ಟ ಕಾಡು ಇದೆ. ಅಲ್ಲಿ ಪ್ರಕೃತಿ ಮಾಡುತ್ತಿರುವ ಮಳೆ ಠೇವಣಿಯನ್ನು ಇವರಿಗೆ ಸುರಂಗ ನಗದು ಮಾಡಿ ಕೊಡುತ್ತಿರಬೇಕು.

ಎರಡನೆ ಸುರಂಗದ ಮಾತೆತ್ತಿದೆವಲ್ಲಾ, ಅದರ ನೀರು ಇನ್ನಷ್ಟು ಕೃಷಿಗೆ ಹೋಗುತ್ತಿದೆ. ಇವೆಲ್ಲ ರಕ್ತಸಂಬಂಧಿಗಳ ಹತ್ತಿರಹತ್ತಿರ ಇರುವ ತೋಟಗಳು. ಮುಕ್ಕಾಲು ಇಂಚಿನ ನೀರು ರಮೇಶ್ ಹೆಗಡೆಯವರ ಪಾಲಿಗೆ. ಇವರಿಗೆ 24 ಗುಂಟೆ ಅಡಕೆ ತೋಟ, ಅಷ್ಟೇ ತೆಂಗು ಕೃಷಿ ಇದೆ. ಹಿಂದೆ ಈ ನೀರು ಸಾಕಾಗುತ್ತಿತ್ತು. ಈಚೀಚೆಗೆ ಕೊರತೆ ಆಗುತ್ತಿದೆ.

ಈ ಅಂಕಣದ ಓದುಗರಾದ ರಮೇಶ್ ಓದುತ್ತಾ ಓದುತ್ತಾ ಅಪ್ಪನಂತೆಯೇ, ಈ ಭಾಗಕ್ಕೇ ಹೊಸದಾದ ಒಂದು ಪ್ರಯೋಗ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮಣ್ಣಿನ ವರ್ಗದಲ್ಲಿ ಸುರಂಗ ಹೇಗೂ ಗೆದ್ದಿದೆ. ಆದರೆ ಈಗಿನ ದಿನಮಾನದಲ್ಲಿ ಬಹುದೂರದಿಂದ ಸುರಂಗಕರ್ವಿುಗಳನ್ನು ಗೊತ್ತುಮಾಡಿ ಇಲ್ಲಿ ಕರೆತಂದು ಕೆಲಸ ಮಾಡಿಸುವುದು ತುಂಬ ಕಷ್ಟ. ಬದಲಿಗೆ ಯಂತ್ರಸಹಾಯದಿಂದ ಸುರಂಗದ್ದೇ ತತ್ತ್ವದಲ್ಲಿ ಯಾರಾದರೂ ನೀರು ಮಾಡಿ ಕೊಟ್ಟಾರೇ?

ಹೀಗೆಲ್ಲ ಆಗಾಗ ಮನದಲ್ಲಿ ಐಡಿಯಾ ಹೊಳೆಹೊಳೆದು ಮತ್ತೆ ಮಾಯವಾಗುತ್ತಿತ್ತು. ಇತ್ತೀಚೆಗೆ ಒಂದಲ್ಲ ಎರಡು ಬಾರಿ ಯಂತ್ರಸಹಾಯದಿಂದ ಕೊರೆಯುವ ಅಡ್ಡ ಬೋರಿನ ಬಗ್ಗೆ ರಮೇಶ್ ಈ ಅಂಕಣದಲ್ಲಿ ಓದಿದ್ದಾರೆ. ರಾಜಸ್ಥಾನದ ಮೂಲದ, ಗೋವಾಕ್ಕೆ ಪ್ರತಿವರ್ಷ ತಂಡದೊಂದಿಗೆ ಬಂದು ಅಡ್ಡ ಬೋರ್ ಕೊರೆಯುವ ಗೋವಿಂದ್ ಭಾಯ್ ಅವರ ಫೋನ್ ನಂಬರು ಬರೆದಿಟ್ಟಿದ್ದಾರೆ. ಸುರಂಗ ತೋಡುವ ಸಾಹಸಕ್ಕೆ ಬದಲು ಇಲ್ಲಿ ಅಡ್ಡ ಬೋರು ಕೊರೆಸಿದರೆ ಅಪ್ಪನಿಗೆ ಒಲಿದ ಅದೇ ಗಂಗಮ್ಮ ನನಗೂ ಒಲಿದಾಳು ಎಂಬ ವಿಶ್ವಾಸ ಇವರಲ್ಲಿ ಗಟ್ಟಿಯಾಗಿದೆ.

ಜಮೀನಿನ ಮೇಲ್ಭಾಗದಲ್ಲಿ ಮಳೆನೀರು ತಡೆದು ಭೂಮಿಗೆ ಕುಡಿಸುವ ವ್ಯವಸ್ಥೆ ಇರುವ, ಭೂಮಿಯನ್ನು ಕೊಳವೆಬಾವಿ ಮೂಲಕ ಬಗೆಯದ ಊರುಗಳಲ್ಲಿ ಅಡ್ಡ ಬೋರು ಪ್ರಯತ್ನಿಸಿ ನೋಡಬಹುದು. ಸಿಕ್ಕಿದರೆ 24 ಗಿ 30 ಗಿ 12 ಅಲ್ಲವೇ? ವಿದ್ಯುತ್ತಿನ ಹಂಗೂ ಇಲ್ಲ, ಡೀಸೆಲೂ ಬೇಡ. ರಮೇಶ್ ಹೆಗಡೆ 94493 95764 (ರಾತ್ರಿ 9.30ರಿಂದ 10.15)

(ಲೇಖಕರು ಅಡಿಕೆ ಪತ್ರಿಕೆ ಸಂಪಾದಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top