Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಸುಧಾರಣೆಯ ಹಾದಿಯಲ್ಲಿ ಹೊಸ ಪಯಣ

Tuesday, 27.06.2017, 3:00 AM       No Comments

ದೇಶದಲ್ಲಿ ಗೋವುಗಳ ಸಂಖ್ಯೆ ಕ್ಷೀಣಿಸಿದರೆ ಅದರಿಂದ ಎಲ್ಲರಿಗೂ ಆಪತ್ತು. ಆ ಸಂಕಟದ ಬಿಸಿ ಹಿಂದುಗಳಿಗೂ ತಾಗುತ್ತದೆ, ಮುಸಲ್ಮಾನರಿಗೂ ತಾಗುತ್ತದೆ. ಆದ್ದರಿಂದ, ರಾಷ್ಟ್ರಹಿತಕ್ಕೆ ಪೂರಕವಾದ ವಿಷಯಗಳನ್ನಾದರೂ ಮತ-ಪಂಥದ ಕನ್ನಡಕದಿಂದ ನೋಡುವುದನ್ನು ಬಿಡಬೇಕು. ಆಗಲೇ ನಿಜವಾದ ಬದಲಾವಣೆಯತ್ತ ಹೆಜ್ಜೆ ಇಡಬಹುದು, ಸುಧಾರಣೆಯತ್ತ ಪಯಣಿಸಬಹುದು.

ಭಾರತ ಮುಂಚೆಯಿಂದಲೂ ಕೃಷಿಪ್ರಧಾನ ರಾಷ್ಟ್ರ. ಹಾಗಾಗಿ, ಕೃಷಿ ವ್ಯವಸ್ಥೆಗೆ ಬೆನ್ನೆಲುಬಾದ ಗೋವು ಮತ್ತು ಎತ್ತು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿಯೇ ಬೆಳೆದು ಬಂದವು. ಕಾಲಕಾಲಕ್ಕೆ, ವಿದೇಶಿಯರು ಬೇರೆ-ಬೇರೆ ಕಾರಣಗಳ ನಿಮಿತ್ತ ಭಾರತಕ್ಕೆ ಬಂದು ನೆಲೆಸಿದಾಗ ಅವರೂ ಕೂಡ ಇಲ್ಲಿನ ಕೃಷಿ ವ್ಯವಸ್ಥೆ ಮತ್ತು ಅದರೊಂದಿಗೆ ಗೋವು-ಎತ್ತು ಹೊಂದಿರುವ ತಾದಾತ್ಮ್ಯ ಇವಗಳನ್ನು ಅರಿತು ಆ ಸಂಸ್ಕೃತಿಯ ಭಾಗವಾಗಿಯೇ ನಡೆದುಕೊಂಡರು. ಆಗೆಲ್ಲ, ಮನುಷ್ಯನಿಗೆ ಉಪಕಾರ ಮಾಡುವ ಪ್ರಾಣಿ ಎಂದೇ ಗೋವನ್ನು ಗೌರವಿಸಲಾಗುತ್ತಿತ್ತು. ನಮ್ಮ ಕೃಷಿಕನಂತೂ ಗೋವಿನ ಜತೆ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಪದಗಳಲ್ಲಿ ವಿವರಿಸಲಾಗದು. ಖ್ಯಾತ ಕವಿ ರಸಖಾನ್ ತನ್ನ ಕಾವ್ಯದಲ್ಲಿ ಗೋವಿಗೆ ಮಹತ್ವದ ಸ್ಥಾನ ನೀಡಿರುವುದನ್ನು ಗಮನಿಸಿದರೆ ಆಗಲೇ ಗೋವು ಭಾರತದ ಆತ್ಮ ಎಂಬ ವಾಸ್ತವವನ್ನು ಮನಗಾಣಲಾಗಿತ್ತು ಎಂಬುದು ಅರಿವಿಗೆ ಬರುತ್ತದೆ. ಅಂದರೆ, ಯಾವುದೋ ಒಂದು ಮತ, ಧರ್ಮವಷ್ಟೇ ಗೋವು ನಮಗೆ ಪೂಜ್ಯ ಎಂದು ಹೇಳಿರಲಿಲ್ಲ. ಎಲ್ಲ ಧರ್ಮ-ಪಂಥಗಳು ಗೋವು ಮತ್ತು ಅದರ ಮಹತ್ವವನ್ನು ಚೆನ್ನಾಗಿಯೇ ಅರಿತುಕೊಂಡಿದ್ದವು. ಆದರೆ, ಯಾವಾಗ ಕೈಗಾರಿಕಾ ಕ್ರಾಂತಿಯ ನೆರಳು ಭಾರತದ ಮೇಲೆ ಬಿತ್ತೋ ಆಗ ನಮ್ಮ ಅಂಗಳಗಳಲ್ಲಿನ ಗೋವುಗಳು ಕಣ್ಮರೆಯಾಗತೊಡಗಿದವು, ಹಟ್ಟಿಯಲ್ಲಿನ ಎತ್ತುಗಳು ಕಾಣದಂತಾದವು. ಔದ್ಯೋಗಿಕ ಕ್ರಾಂತಿ ಕೆಲ ಪ್ರಯೋಜನಗಳನ್ನು ತಂದಿದ್ದು ಹೌದಾದರೂ ಅದು ಗೋವಂಶದ ಮೇಲೆ, ಗೋಸಂಸ್ಕೃತಿಯ ಮೇಲೆ ಕುಠಾರಾಘಾತ ಮಾಡಿತು ಎನ್ನುವುದು ಸತ್ಯ. ಹಣದ ವ್ಯಾಮೋಹ ಹೆಚ್ಚಿ, ಪಶು-ಮನುಷ್ಯನ ನಡುವೆ ಇದ್ದ ಆ ಪ್ರೀತಿ ಕರಗಿತು. ಇದು ಹೊಸಬಗೆಯ ತಲ್ಲಣವನ್ನು ಹುಟ್ಟುಹಾಕಿತು. ಆದರೆ, ದೂರದರ್ಶಿತ್ವ ಹೊಂದಿದ್ದ ಭಾರತೀಯರು ಇದರ ದುಷ್ಪರಿಣಾಮವನ್ನೂ ಅರಿತಿದ್ದರು. ಭಾರತ ನೆಲಕ್ಕೆ ವರದಾನದ ರೂಪದಲ್ಲಿ ದೊರೆತಿರುವ ಗೋವು-ಎತ್ತುಗಳು ಹೇಗೆ ನಮ್ಮ ಜೀವನದೊಂದಿಗೆ ಬೆಸೆದುಕೊಂಡಿವೆ ಎಂಬುದನ್ನು ಅವಲೋಕಿಸಿದರು. ಇದರ ಪರಿಣಾಮವೇ ಗೋರಕ್ಷಣೆಯ ಕಾರ್ಯ ವೇಗ ಹಾಗೂ ವಿಸ್ತಾರ ಪಡೆದುಕೊಳ್ಳುತ್ತಿದೆ ಎಂಬುದು ಗಮನಾರ್ಹ.

ಹಲವು ನೆಲೆಗಳಲ್ಲಿ ರಕ್ಷಣಾಕಾರ್ಯ: ಗೋವುಗಳ ರಕ್ಷಣೆಗೆ ಮೀಸಲಾಗಿರುವ ಗೋಶಾಲೆಗಳ ಸಂಖ್ಯೆ ಹೆಚ್ಚಿದೆ, ಹೆಚ್ಚುತ್ತಿದೆ. ಗೋವು-ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸಬಾರದು ಎಂಬ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ಅರಿವು, ಜಾಗೃತಿ ಮೂಡಿಸುವ ಆಂದೋಲನಗಳು ನಡೆಯುತ್ತಿವೆ. ವಿಶೇಷವಾಗಿ, ಗೋವುಗಳ ಮಹತ್ವ ಅರಿತಿರುವ ಜಾಗೃತ ಮುಸಲ್ಮಾನರು ತಾವೇ ಗೋಶಾಲೆಗಳನ್ನು ನಡೆಸುತ್ತಿರುವ ನಿದರ್ಶನಗಳನ್ನು ಹಲವೆಡೆ ಕಾಣಬಹುದಾಗಿದೆ. ಇಂಥ ಕ್ರಮಗಳು ಅವಶ್ಯಕವೂ ಹೌದು, ಅನಿವಾರ್ಯವೂ ಹೌದು. ಏಕೆಂದರೆ, ರೈತ ಭೂಮಿತಾಯಿಯ ಪುತ್ರ. ಆತನಿಗೆ ಯಾವುದೇ ಮತ-ಪಂಥದ ಹಂಗಿಲ್ಲ. ಎಲ್ಲರಿಗೂ ಅನ್ನ ನೀಡುವ ಅನ್ನದಾತ ಆತ. ಆದ್ದರಿಂದ, ಆ ಅನ್ನದಾತ ಹಿಂದು ಆಗಿರಲಿ ಮುಸಲ್ಮಾನ ಆಗಿರಲಿ ಗೋವು ಸಲ್ಲಿಸುವ ಸೇವೆ ಒಂದೇ. ಅದಕ್ಕೆ ರೈತ ಚಿರಋಣಿಯಾಗಿರುವ ಬಗೆಯೂ ಒಂದೇ.

ಖಾನ್​ಗೆ ಮುಬಾರಕ್: ಇತ್ತೀಚೆಗೆ ನಾನು ಮುಸಲ್ಮಾನರು ನಡೆಸುತ್ತಿರುವ ಗೋಶಾಲೆಗೆ ಭೇಟಿ ನೀಡಿದ್ದೆ. ಮಹಾರಾಷ್ಟ್ರದ ಪುಣೆ ಪ್ರದೇಶದ ಪಿಂಪರಿ-ಚಿಂಚವಡ್ ಬಳಿ ಒಂದು ಪುಟ್ಟಹಳ್ಳಿ ಇದೆ. ಆರ್ಡವ್ ಆ ಗ್ರಾಮದ ಹೆಸರು (ತಾಲೂಕು ಮಾವಲ್). ಈ ಪ್ರದೇಶದಲ್ಲಿ ಪೌವನಾ ನದಿ ಹರಿಯುತ್ತದೆ. ಈ ಆರ್ಡವ್ ಗ್ರಾಮದಲ್ಲಿ 70ರ ಗಡಿದಾಟಿರುವ ತಂದೆ, 38 ವರ್ಷದ ಅವರ ಪುತ್ರ ಇಬ್ಬರೂ ಸೇರಿ ಗೋಶಾಲೆ ನಡೆಸುತ್ತಿದ್ದಾರೆ. ತಂದೆ ಹೆಸರು ಹಾಜಿ ಅಬ್ಬಾಸ್ ಕಾಸಮ್ ಮತ್ತು ಮಗನ ಹೆಸರು ಮುಬಾರಕ್ ಶೇಖ್. ಇವರ ಗೋಶಾಲೆಯಲ್ಲಿ 39 ಗೋವುಗಳಿವೆ. ಅಷ್ಟಕ್ಕೂ ಇವರು ಈ ಗೋಶಾಲೆ ಆರಂಭಿಸಿರುವುದರ ಹಿನ್ನೆಲೆ ರೋಚಕವಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ಬಡರೈತರು ಗೋವು-ಎತ್ತುಗಳನ್ನು ಸಾಕಲಾಗದೆ ಕಸಾಯಿಖಾನೆಗೆ ಕಳುಹಿಸುತ್ತಿದ್ದರು. ದಿನದಿಂದ ದಿನಕ್ಕೆ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿದಾಗ ಇವುಗಳ ರಕ್ಷಣೆಗೆ ಏನಾದರೂ ಮಾಡಬೇಕು ಎಂದು ಸಂಕಲ್ಪಿಸಿದ ಮುಬಾರಕ್ ಖಾನ್ ‘ಕಸಾಯಿಖಾನೆಗೆ ಮಾರುವ ಬದಲು ಆ ಗೋವು-ಎತ್ತುಗಳನ್ನು ನನಗೆ ನೀಡಿ. ಅದಕ್ಕೆ ತಕ್ಕಷ್ಟು ಹಣವನ್ನು ನೀಡುತ್ತೇನೆ’ ಎಂದರು. ರೈತರಿಗೂ ಇದು ಸರಿಯೆನಿಸಿತು. ಅವರು ಕಸಾಯಿಖಾನೆಗೆ ಮಾರುವ ಬದಲು ಇಲ್ಲಿ ಗೋವುಗಳನ್ನು ನೀಡತೊಡಗಿದರು ಮತ್ತು ಕೆಲಗ್ರಾಮಗಳಲ್ಲಿ ಗೋವನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕೊಡನೆ ಅಲ್ಲಿಗೆ ತೆರಳಿ ಅವುಗಳನ್ನು ತಮ್ಮ ಗದ್ದೆಗೆ ತೆಗೆದುಕೊಂಡು ಬರತೊಡಗಿದರು. ಹೀಗೆ 3-4 ಗೋವುಗಳಿಂದ ಆರಂಭವಾದ ಈ ಗೋಶಾಲೆಯಲ್ಲಿ ಈಗ 39 ಗೋವುಗಳಿವೆ. ತಂದೆ-ಮಗ ಇಬ್ಬರೂ ಸಮರ್ಪಿತರಾಗಿ ದುಡಿಯುತ್ತಿದ್ದಾರೆ. ಈ ಗೋವುಗಳು ಸಹ ಅಷ್ಟೇ, ಇವರಿಬ್ಬರನ್ನು ಕಂಡಾಕ್ಷಣ ಹರ್ಷದಿಂದ ನಲಿಯುತ್ತವೆ. ಈಗಂತೂ ತೀರಾ ಬಡರೈತರು ನೇರವಾಗಿ ಇವರ ಗದ್ದೆಗೆ ಬಂದು ಗೋವುಗಳನ್ನು ಬಿಟ್ಟುಹೋಗುತ್ತಾರೆ. ಸ್ವಂತ ಗದ್ದೆಯ ಕೆಲಸವನ್ನೂ ನೋಡಿಕೊಳ್ಳಬೇಕಾಗುವುದರಿಂದ ಗೋಶಾಲೆಯ ವ್ಯವಸ್ಥಿತ ನಿರ್ವಹಣೆಗೆ ಮೂವರು ಸಿಬ್ಬಂದಿಯನ್ನು ಸಂಬಳದ ಆಧಾರದ ಮೇಲೆ ನೇಮಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಗೋಶಾಲೆಗೆ ನೆರವಿನ ಪ್ರಮಾಣ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ಸ್ಥಳೀಯ ಮುಸ್ಲಿಂ ಯುವಕರು, ಸೋಲ್ಲಾಪುರದ ಕೆಲ ಸಂಘಟನೆಗಳು ಇವರ ನೆರವಿಗೆ ನಿಂತಿವೆ.

ಜನಜಾಗೃತಿಯ ಯತ್ನ: ಮುಬಾರಕ್ ಗೋಶಾಲೆ ನಡೆಸುವ ಕಾರ್ಯಕ್ಕಷ್ಟೇ ಸೀಮಿತವಾಗಿ ಉಳಿದುಕೊಂಡಿಲ್ಲ. ‘‘ಪ್ರತಿನಿತ್ಯ ಅಸಂಖ್ಯ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತದೆ. ಇವುಗಳ ರಕ್ಷಣೆ ಮೊದಲ ಆದ್ಯತೆಯಾಗಬೇಕು. ಗೋವುಗಳೆಲ್ಲ ಕಸಾಯಿಖಾನೆ ಪಾಲಾಗುತ್ತಿದ್ದರೆ ಇತ್ತ ಎಷ್ಟು ಗೋಶಾಲೆಗಳನ್ನು ತೆರೆದರೂ ಏನು ಪ್ರಯೋಜನ? ಹಾಗಾಗಿ, ಈ ನಿಟ್ಟಿನಲ್ಲಿ ಜನಜಾಗೃತಿ ಅವಶ್ಯ’’ ಎನ್ನುವ ಮುಬಾರಕ್ ಈ ಉದ್ದೇಶಕ್ಕಾಗಿ ‘ಮಾತೃಭೂಮಿ ದಕ್ಷತಾ ತಲ್​ವಲ್’ ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಘಟನೆಯಿಂದ ಪುಣೆ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಲ್ಲೂ ಜನಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಗೋರಕ್ಷಣೆಯ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ. ಗೋರಕ್ಷಣೆಯ ಬಗ್ಗೆ ಸೂಕ್ತ ಹಾಗೂ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರದ ಮೇಲೂ ಒತ್ತಡ ತರಲಾಗುತ್ತಿದೆ. ಈ ಪ್ರಯತ್ನಗಳ ಫಲವಾಗಿ, ಕಸಾಯಿಖಾನೆೆ ಪಾಲಾಗುತ್ತಿದ್ದ ನೂರಾರು ಗೋವುಗಳ ಪ್ರಾಣ ಉಳಿದಿದೆ. ಈ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಗೋರಕ್ಷಣೆ ವಿಷಯವನ್ನು ಸರ್ಕಾರ ಮತ್ತು ಸಮಾಜ ಎರಡೂ ಗಂಭೀರವಾಗಿ ಪರಿಗಣಿಸುವವರೆಗೆ ಈ ವಿಷಯದಲ್ಲಿ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎನ್ನುವ ಮುಬಾರಕ್ ಅದಕ್ಕೆ ಜನಜಾಗೃತಿಯೊಂದೇ ಉತ್ತಮ ಪರಿಹಾರ ಎಂದು ಅರಿತು ಆ ನಿಟ್ಟಿನಲ್ಲಿ ಮುಂದುವರಿದಿದ್ದಾರೆ. ಹಿಂದೆ ನಮ್ಮ ಬಹುತೇಕ ಹಳ್ಳಿಗಳು ಗೋವುಗಳಿಂದ ಸಮೃದ್ಧವಾಗಿದ್ದವು. ಆದ್ದರಿಂದಲೇ ರೈತನೂ ಸ್ವಾವಲಂಬಿಯಾಗಿದ್ದ, ಗ್ರಾಮವೂ ಸ್ವಾವಲಂಬಿಯಾಗಿತ್ತು. ಗೋಸಂಪತ್ತಿನಿಂದ ಗ್ರಾಮಗಳು ಆರ್ಥಿಕ ಶಕ್ತಿಯಾಗಿ ಜೀವ ತಳೆದಿದ್ದವು. ಆದರೆ, ಯಾವಾಗ ಗದ್ದೆಗಳಿಂದ, ಕೃಷಿಕರ ಮನೆಯಂಗಳದಿಂದ ಗೋವುಗಳು ಮಾಯವಾಗತೊಡಗಿದವೋ ಆಗ ಪರಿಸ್ಥಿತಿ ವಿಷಮಿಸಿತು ಎನ್ನುವುದು ಒಪ್ಪಲೇಬೇಕಾದ ಸತ್ಯ. ಗೋವುಗಳ ರಕ್ಷಣೆ ಯಾರದೋ ಉದ್ಧಾರಕ್ಕಲ್ಲ, ನಮ್ಮ ರೈತನ, ಕೃಷಿಯ, ಗ್ರಾಮಗಳ ಉದ್ಧಾರಕ್ಕೆ ಅತ್ಯಂತ ಜರೂರಾಗಿ ಆಗಬೇಕು ಎಂಬ ಅರಿವು, ತಿಳಿವಳಿಕೆಯನ್ನು ಮತ್ತೆ ಮೂಡಿಸಬೇಕಿದೆ.

ರಾಜಸ್ಥಾನದ ಜೋಧಪುರ್ ಬಳಿ ಅಂಜುಮನ್ ಇಸ್ಲಾಮ್ ಸಂಘಟನೆ ಗೋಶಾಲೆ ನಡೆಸುತ್ತಿರುವುದು ತಿಳಿದ ವಿಷಯವೇ. ಈ ಬಗ್ಗೆ ಹಿಂದೊಮ್ಮೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಸಮಾಧಾನದ ಸಂಗತಿ ಎಂದರೆ ದೇಶದ ಹಲವೆಡೆ ಇಂಥ ಪ್ರಯತ್ನಗಳು ತೀವ್ರಗೊಳ್ಳುತ್ತಿವೆ. ಮುಸ್ಲಿಂ ಸಮುದಾಯ ಗೋವಿನ ಮಹತ್ವ ಅರಿತು ಅದರ ರಕ್ಷಣೆಗೆ ಮುಂದಾಗಿದೆ. ಇದು ನಮ್ಮ ಸಂಸ್ಕೃತಿಗೆ ಇರುವ ನಿಜವಾದ ಶಕ್ತಿ. ದೇಶದ ಕೆಲವು ಭಾಗಗಳಲ್ಲಿ ಗೋವನ್ನು ನಿಮಿತ್ತವಾಗಿಸಿಕೊಂಡು ಕೆಲ ಶಕ್ತಿಗಳು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದರೆ ಮತ್ತೊಂದೆಡೆ ಸದ್ದೇ ಇಲ್ಲದಂತೆ ಗೋರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಗಮನಿಸಬೇಕಾದ ಬೆಳವಣಿಗೆ.

ಗೋಮಾತೆ ಕಾಮಧೇನು. ಆಕೆ ಉಳಿದರೆ ಮನುಕುಲ, ನಮ್ಮ ಕೃಷಿರಂಗ ಉಳಿದೀತು ಎಂಬ ಸಣ್ಣ ಅರಿವನ್ನು ನಮ್ಮೊಳಗೆ ಸದಾ ಜಾಗೃತವಾಗಿ ಇರಿಸಿಕೊಂಡರೆ ಆ ತಾಯಿ ನಮ್ಮನ್ನು ಸಲಹುತ್ತಾಳೆ, ಪೊರೆಯುತ್ತಾಳೆ. ಆದರೆ, ಮನುಷ್ಯ ತನ್ನ ಸ್ವಾರ್ಥದ ಭರದಲ್ಲಿ ವಿವೇಚನೆ ಕಳೆದುಕೊಳ್ಳುತ್ತಿದ್ದಾನೆ. ಆ ಮೂಲಕ ತಾನಾಗೇ ಸಂಕಟಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾನೆ. ಹಾಗಾಗಿ, ವಾಸ್ತವದತ್ತ ಮುಖಮಾಡಿ, ರಾಷ್ಟ್ರಹಿತವನ್ನು ಕಾಪಾಡುವ ಧ್ಯೇಯ ಎಲ್ಲರದ್ದಾಗಬೇಕು.

ಭಾರತ ಮಾತ್ರವಲ್ಲ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲೂ ಗೋಶಾಲೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಉಪಕಾರ ಮಾಡುವ ಪ್ರಾಣಿಗೆ ಯಾವುದೇ ಕಾರಣಕ್ಕೂ ಅಪಕಾರ ಮಾಡಬಾರದು. ನಮ್ಮ ದೇಶದ ಹಲವು ರಂಗಗಳಿಗೆ ಗೋವಿನ ಕೊಡುಗೆ ಮಹತ್ವಪೂರ್ಣ. ಆದರೆ, ಕೆಲವರು ಈ ಸತ್ಯವನ್ನು ಮರೆಮಾಚಿ, ಭ್ರಮೆಗಳನ್ನು ಬಿತ್ತಲು ಯತ್ನಿಸುತ್ತಿದ್ದಾರೆ. ಗೋವು ಕೇವಲ ಒಂದು ಧರ್ಮಕ್ಕೆ ಸೇರಿದ್ದು ಎಂಬಂತೆ ಬಿಂಬಿಸುತ್ತಿದ್ದಾರೆ. ಇವರಿಗೆಲ್ಲ ಸೂಕ್ತ ಉತ್ತರ ಎಂಬಂತೆ ಮುಸ್ಲಿಂರು ಕೂಡ ಗೋರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಇತರರಿಗೂ ಅರಿವು, ಜಾಗೃತಿ ಮೂಡಿಸುತ್ತಿದ್ದಾರೆ ಎಂಬುದು ಸಮಾಧಾನದ ಬೆಳವಣಿಗೆ. ಹೀಗಾಗಿ, ಗೋರಕ್ಷಣೆ ಆ ಮೂಲಕ ನಮ್ಮ ಸಂಸ್ಕೃತಿ ರಕ್ಷಣೆಯ ನಿಟ್ಟಿನಲ್ಲಿ ಹೊಸ ಪಯಣ ಆರಂಭವಾಗಿದ್ದು, ಇದು ಯಾವುದೇ ಅಡೆತಡೆ ಇಲ್ಲದಂತೆ ಸಾಗಲಿ ಎಂಬುದಷ್ಟೇ ಆಶಯ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

 

Leave a Reply

Your email address will not be published. Required fields are marked *

Back To Top