Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸುದೀರ್ಘ ಬಿಜೆಪಿ ಆಡಳಿತ ನಂತರದ ಗುಜರಾತ್…

Monday, 11.12.2017, 3:00 AM       No Comments

| ಪಿ. ಚಿದಂಬರಂ

ನಿರುದ್ಯೋಗ, ಬಡತನ, ಬೆಲೆಯೇರಿಕೆಯಂಥ ಮೂಲಭೂತ ಸಮಸ್ಯೆಗಳ ಕುರಿತು ಗುಜರಾತಿನ ಆಡಳಿತಾರೂಢ ಪಕ್ಷದ ಯಾರೊಬ್ಬರೂ ಮಾತಾಡುತ್ತಿಲ್ಲ. ಶೇ. 90ರಷ್ಟು ಜನ ಎಂದಿಗೂ ಹತ್ತದ ಬುಲೆಟ್ ಟ್ರೇನ್ ಬಗ್ಗೆ, ಸೌರಾಷ್ಟ್ರ ಭಾಗಕ್ಕೆ ನೀರುಣಿಸಲು ಈಗಲೂ ಅಸಮರ್ಥವಾಗಿರುವ ಸರ್ದಾರ್ ಸರೋವರ ಅಣೆಕಟ್ಟು ಕುರಿತಾಗಿಯೇ ಅವರು ಮಾತಾಡುವುದು ವಿಪರ್ಯಾಸ.

ಇತ್ತೀಚೆಗೆ, ಗುಜರಾತ್ ವಿಧಾನಸಭಾ ಚುನಾವಣೆ ಸಂಬಂಧಿತ 29 ಬಹಿರಂಗ ಸಭೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣಗಳನ್ನು ವಿಶ್ಲೇಷಿಸಿರುವುದಾಗಿ ಸಾಮಾಜಿಕ ಜಾಲತಾಣಗಳ ವ್ಯಾಖ್ಯಾನಕಾರರೊಬ್ಬರು ಹೇಳಿಕೊಂಡಿದ್ದಾರೆ. ಆಯಿತು, ಇದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಇದರಲ್ಲಿ ರಾಹುಲ್ ಗಾಂಧಿ ಕುರಿತಾಗಿ 621 ಬಾರಿ, ಕಾಂಗ್ರೆಸ್ ಪಕ್ಷದ ಕುರಿತಾಗಿ 427 ಬಾರಿ ಉಲ್ಲೇಖಿಸಲಾಗಿದ್ದರೆ, ‘ಗುಜರಾತ್ ಮಾದರಿ’ ಕುರಿತಾಗಿ ಅವರಿಂದ ಒಂದೇ ಒಂದು ಉಲ್ಲೇಖವೂ ಹೊರಬಿದ್ದಿಲ್ಲವಂತೆ! ಇದೊಂದು ಉತ್ಪ್ರೇಕ್ಷೆಯೇ ಇರಬಹುದು ಅಥವಾ ಲೆಕ್ಕಾಚಾರದಲ್ಲಿ ಅವರು ತಪ್ಪಿದ್ದಿರಬಹುದು; ಆದರೆ ಗುಜರಾತ್​ನಲ್ಲಿನ ಬಿಜೆಪಿಯ ಚುನಾವಣಾ ಪ್ರಚಾರ ಭಾಷಣದ ಒಂದು ಪ್ರಮುಖ ಅಂಶವನ್ನಂತೂ ಇದು ಎತ್ತಿಹಿಡಿದಿದೆ ಎನ್ನಬೇಕು. ಅಂದರೆ, ಈ ಪ್ರಚಾರಭಾಷಣ ವಿಕಾಸದ ಕುರಿತಾಗಿಯೂ ಇರಲಿಲ್ಲ, ಅಥವಾ ಅದು ‘ಅಚ್ಛೇ ದಿನ’ಗಳ ಕುರಿತಾದದ್ದೂ ಆಗಿರಲಿಲ್ಲ. ‘ಕಾಂಗ್ರೆಸ್​ನ ಕೆಟ್ಟದಿನಗಳು’ ಎನ್ನಲಾಗುವ ವಿಷಯದ ಕುರಿತೇ ಅದರ ಹೆಚ್ಚಿನ ಗಮನವಿತ್ತೆನ್ನಬೇಕು. ಆಡಳಿತಾರೂಢ ಪಕ್ಷದಿಂದ ಇದಕ್ಕಿಂತ ಹೆಚ್ಚು ನಕಾರಾತ್ಮಕವಾದ ಪ್ರಚಾರ ಭಾಷಣವನ್ನು ಪ್ರಾಯಶಃ ಯಾರೂ ಕಂಡು-ಕೇಳಿರಲಿಕ್ಕಿಲ್ಲ…..

1995ರಲ್ಲಿ ಕಾಂಗ್ರೆಸ್ ಗುಜರಾತ್​ನಲ್ಲಿ ಅಧಿಕಾರ ಕಳೆದುಕೊಂಡಿತು. ಕೇಂದ್ರದಲ್ಲಿ ಕಾಂಗ್ರೆಸ್​ನ ಅಧಿಕಾರಾವಧಿ ಮುಗಿದಿದ್ದು 2014ರ ಮೇ ತಿಂಗಳಲ್ಲಿ. ಹೀಗಾಗಿ ಗುಜರಾತ್ ವಿಧಾನಸಭಾ ಚುನಾವಣೆಯ ಚರ್ಚಾವಿಷಯವು, 1995ರ ತರುವಾಯದಲ್ಲಿ ಅನುಕ್ರಮಿಕ ಬಿಜೆಪಿ ಸರ್ಕಾರಗಳು ಗುಜರಾತ್ ಜನರಿಗೆ ಏನನ್ನು ನೀಡಿದವು, ಅವರ ಸದ್ಯದ ಅಗತ್ಯಗಳೇನು, ಅವರಿಗಿರುವ ಭಯ- ತಲ್ಲಣಗಳೇನು ಎಂಬುದರ ಕುರಿತಾಗಿರಬೇಕೇ ವಿನಾ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಕುರಿತಾಗಿ ಅಲ್ಲ.

ಬೆಲೆಯೇರಿಕೆ ಮತ್ತು ಅಭಿವೃದ್ಧಿ: ಲಭ್ಯ ವರದಿಗಳು ಮತ್ತು ಪುರಾವೆಗಳ ಪ್ರಕಾರ, ಗುಜರಾತ್ ಮತದಾರರ ಮನದಲ್ಲಿ ಕೆನೆಗಟ್ಟಿರುವ ನಾಲ್ಕು ಅಗ್ರಗಣ್ಯ ಚರ್ಚಾವಿಷಯಗಳೆಂದರೆ- ಬೆಲೆಯೇರಿಕೆ (ಶೇ. 18), ಅಭಿವೃದ್ಧಿ (ಶೇ. 13), ನಿರುದ್ಯೋಗ ಸಮಸ್ಯೆ (ಶೇ. 11) ಮತ್ತು ಬಡತನ (ಶೇ. 11). ಆಡಳಿತಾರೂಢ ಪಕ್ಷದ ಯಾರೊಬ್ಬರೂ ಬೆಲೆಯೇರಿಕೆ ಬಗ್ಗೆ ಮಾತಾಡುವುದಿಲ್ಲ; ಈ ಚರ್ಚಾವಿಷಯಕ್ಕೊಂದು ಚೌಕಟ್ಟು ನೀಡಿ ಅದರೆಡೆಗೆ ಗಮನಹರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೆಗಲಿಗೆ ಅದನ್ನು ದಾಟಿಸಲಾಯಿತು. ಹೀಗಾಗಿ, 2017ರ ಡಿಸೆಂಬರ್ 5ರಂದು ಆರ್​ಬಿಐ ಹೇಳಿದ್ದು ಹೀಗಿತ್ತು: ‘ಸದ್ಯೋಭವಿಷ್ಯದಲ್ಲಿ ಹಣದುಬ್ಬರದ ತೀವ್ರತೆ ಮುಂದುವರಿಯಬಹುದು…. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳಲ್ಲಿನ ಇತ್ತೀಚಿನ ಹೆಚ್ಚಳವು ಸುಸ್ಥಿರವಾಗಬಹುದು…. ಭೂ-ರಾಜಕೀಯ ಬೆಳವಣಿಗೆಗಳ ಕಾರಣದಿಂದಾಗಿ ಪೂರೈಕೆಗೆ ಪ್ರತಿಕೂಲವಾಗಿ ಪರಿಣಮಿಸುವ ಯಾವುದೇ ಆಘಾತವು ಬೆಲೆಗಳನ್ನು ಮತ್ತಷ್ಟು ಏರಿಸಬಹುದು’.

ಕಳೆದ ಮೂರು ವರ್ಷಗಳಿಂದ, ಕಚ್ಚಾತೈಲ ಬೆಲೆಗಳಲ್ಲಾದ ಕುಸಿತದಿಂದ ದಕ್ಕಿದ ‘ಆಕಸ್ಮಿಕ ಲಾಭಪ್ರಾಪ್ತಿ’ಯ ಪ್ರಯೋಜನವನ್ನು ಕೇಂದ್ರ ಸರ್ಕಾರ ಅನುಭವಿಸಿಕೊಂಡೇ ಬಂದಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸುವಂತೆ ಹಾಗೂ ಬಳಕೆದಾರರಿಗೆ ಒಂದಷ್ಟು ನಿರಾಳತೆ ಒದಗಿಸುವಂತೆ ಬಂದ ಬೇಡಿಕೆಗಳಿಗೆ ಅದು ಕವಡೆಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ಬೇಡಿಕೆ ಕರ್ಣಭೇದಕವಾಗಿ ಪರಿಣಮಿಸಿ, ಅದಕ್ಕೊಂದು ಸ್ಪಷ್ಟ ಪರಿಹಾರೋಪಾಯ ಇದ್ದಾಗಲೂ, ತನ್ನ ಆರ್ಥಿಕ ಸ್ಥಿತಿಗತಿಯ ಅರಿವಿದ್ದಾಗಲೂ ಸರ್ಕಾರದ ಕಲ್ಲುಹೃದಯ ಕರಗಿಲ್ಲ. ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಗೆ ತರುವುದೇ ಈ ಸಮಸ್ಯೆಗಿದ್ದ ಸ್ಪಷ್ಟ ಪರಿಹಾರೋಪಾಯವಾಗಿತ್ತು. ಒಂದೊಮ್ಮೆ ನಾನೇನಾದರೂ ಗುಜರಾತಿನ ಮತದಾರನಾಗಿದ್ದಿದ್ದರೆ, ಜಿಎಸ್​ಟಿ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ಹಾಗೂ ತತ್​ಕ್ಷಣದಿಂದಲೇ ಅನ್ವಯವಾಗುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀಟರ್​ಗೆ ಕನಿಷ್ಠಪಕ್ಷ 10 ರೂ.ನಷ್ಟು ತಗ್ಗಿಸುವ ಭರವಸೆ ನೀಡಿದ ಪಕ್ಷಕ್ಕೇ ನನ್ನ ಮತವನ್ನು ಚಲಾಯಿಸುತ್ತಿದ್ದೆ.

ಇನ್ನು, ಅಭಿವೃದ್ಧಿಯ ಕುರಿತಾಗಿಯೂ ಆಡಳಿತಾರೂಢ ಪಕ್ಷದ ಯಾರೊಬ್ಬರೂ ಮಾತಾಡುವುದಿಲ್ಲ; ಒಂದೊಮ್ಮೆ ಮಾತಾಡಿದರೂ, ಅದು ಶೇ. 90ರಷ್ಟು ಜನ ಎಂದಿಗೂ ಹತ್ತದ ಬುಲೆಟ್ ಟ್ರೇನ್ ಕುರಿತಾಗಿಯೇ ಇರುತ್ತದೆ. ಅಥವಾ, ಅದು ಸರ್ದಾರ್ ಸರೋವರ ಅಣೆಕಟ್ಟಿನ ಕುರಿತಾಗಿ ಇರುತ್ತದೆ; ಆದರೆ, 30,000 ಕಿ.ಮೀ.ನಷ್ಟಿರುವ ಕಾಲುವೆ ಜಾಲದ ಬಹುತೇಕ ಭಾಗವು ಕಳೆದ 22 ವರ್ಷಗಳಲ್ಲಿ ನಿರ್ವಣಗೊಂಡೇ ಇಲ್ಲದ ಕಾರಣ, ನೀರಿನ ಕೊರತೆಯಿಂದ ಬಳಲುತ್ತಿರುವ ಸೌರಾಷ್ಟ್ರ ಹಾಗೂ ಇತರ ಜಿಲ್ಲೆಗಳಿಗೆ ನೀರನ್ನು ಹಂಚಿಕೆ ಮಾಡುವಲ್ಲಿ ಈ ಜಲಾಶಯ ಅಸಮರ್ಥವಾಗಿದೆ ಎಂಬುದು ಜಗಜ್ಜಾಹೀರು. ಒಂದೊಮ್ಮೆ ನಾನೇನಾದರೂ ಗುಜರಾತಿನ ಮತದಾರನಾಗಿದ್ದಿದ್ದರೆ, ಸರ್ದಾರ್ ಸರೋವರ ಕಾಲುವೆ ಜಾಲವನ್ನು ಕ್ಷಿಪ್ರವಾಗಿ ಸಂಪೂರ್ಣಗೊಳಿಸುವ, ಪ್ರತಿಯೊಂದು ಪ್ರಾಂತದಲ್ಲೂ ಹೆದ್ದಾರಿಗಳು ಮತ್ತು ಸರ್ವಋತು ರಸ್ತೆಗಳನ್ನು ನಿರ್ವಿುಸುವ, ನಗರದ ರಸ್ತೆಗಳನ್ನು ದುರಸ್ತಿಗೊಳಿಸಿ ಸಮರ್ಪಕವಾಗಿ ನಿರ್ವಹಿಸುವ ಮತ್ತು ವಿಮಾನ ನಿಲ್ದಾಣಗಳನ್ನು ನಿರ್ವಿುಸುವ ಭರವಸೆ ನೀಡಿದಂಥ ಪಕ್ಷಕ್ಕೇ ಮತ ನೀಡುತ್ತಿದ್ದೆ.

ನಿರುದ್ಯೋಗ ಮತ್ತು ಬಡತನ: ಇನ್ನು ನಿರುದ್ಯೋಗ ಸಮಸ್ಯೆ ಕುರಿತಾಗಿ ಬಿಜೆಪಿಯ ಯಾರಾದರೂ ಮಾತಾಡಿದರೆ ಕೇಳಿ. ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ ತೀರಾ ಕಡಿಮೆಯಿರುವುದರ ಕುರಿತು ಬಿಜೆಪಿ ಬೆರಳುಮಾಡಿ ತೋರಿಸುತ್ತದೆ. ಇದು ಆತ್ಮಘಾತುಕ ವರ್ತನೆಯಲ್ಲದೆ ಮತ್ತೇನು? ಗುಜರಾತ್​ನಲ್ಲಿ ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿದ್ದು, ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವುದರಿಂದ ಉದ್ಯೋಗ ಸಿಕ್ಕಿಬಿಡುತ್ತದೆ ಎಂಬ ಭರವಸೆ ಯಾರಿಗೂ ಇಲ್ಲ. ಇಷ್ಟು ಸಾಲದೆಂಬಂತೆ, ಅಧಿಕ ಮುಖಬೆಲೆಯ ಹಳೆಯ ನೋಟುಗಳ ರದ್ದತಿಯಿಂದಾಗಿ ಮತ್ತು ಲೋಪದೋಷ-ಯುಕ್ತ ಜಿಎಸ್​ಟಿ ಪದ್ಧತಿಯಿಂದ ಸಣ್ಣ ಹಾಗೂ ಮಧ್ಯಮ ಗಾತ್ರದ ಅನೇಕ ಉದ್ಯಮಗಳು ಉಸಿರುಕಟ್ಟುವ ಸ್ಥಿತಿಯಲ್ಲಿರುವುದರಿಂದಾಗಿ ಗುಜರಾತ್ ಮತ್ತು ಇನ್ನೂ ಅನೇಕ ಭಾಗಗಳಲ್ಲಿ ಸಾವಿರಾರು ಜನರ ಉದ್ಯೋಗಗಳಿಗೆ ಸಂಚಕಾರ ಒದಗಿದೆ. ಹೀಗಾಗಿ, ಗುಜರಾತ್​ನ ಯುವನಾಯಕರು ಸಾವಿರಾರು ಯುವಕರನ್ನು ಆಕರ್ಷಿಸುತ್ತಿರುವುದೇಕೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಒಂದು ವೇಳೆ, ನಾನು ಗುಜರಾತಿನ ಮತದಾರ ಆಗಿದ್ದಿದ್ದರೆ, ಖಾಲಿ ಬಿದ್ದಿರುವ ಸಾವಿರಾರು ಸರ್ಕಾರಿ ಹುದ್ದೆಗಳನ್ನು ಭರ್ತಿಮಾಡುವ, ಪೂರ್ವನಿಶ್ಚಿತ ಮೊತ್ತದ ಬದಲಿಗೆ ನ್ಯಾಯಸಮ್ಮತ ವೇತನ ನೀಡುವ, ಹೆಚ್ಚೆಚ್ಚು ಬೆಳೆದು ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಾಗುವುದಕ್ಕೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಉತ್ತೇಜಕ ಸೌಲಭ್ಯಗಳನ್ನು ನೀಡುವ ತಾಕತ್ತುಳ್ಳ ಪಕ್ಷಕ್ಕೇ ಮತ ಹಾಕುತ್ತಿದ್ದೆ.

ಗುಜರಾತಿನ ಬಿಜೆಪಿ ಸರ್ಕಾರವು ಬಡವರಿಗೆ ಬೆನ್ನು ತಿರುಗಿಸಿರುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಕ್ಕಳ ಆರೋಗ್ಯ, ಸಾಕ್ಷರತೆ, ಲಿಂಗಾನುಪಾತ ಹಾಗೂ ಸಾಮಾಜಿಕ ವಲಯಗಳಿಗೆ ತಲಾ ವಿನಿಯೋಗವಾಗುತ್ತಿರುವ ವೆಚ್ಚದ ವಿಷಯದಲ್ಲಿ ಗುಜರಾತ್ ಇತರ ರಾಜ್ಯಗಳಿಗಿಂತ ಹಿಂದೆಬಿದ್ದಿರುವುದೇಕೆ, ಅಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕಗಳು ನಿರಾಶಾದಾಯಕವಾಗಿರುವುದೇಕೆ ಎಂಬುದನ್ನು ಯಾರಾದರೂ ಹೇಳಿಯಾರೇ?! ಒಂದೊಮ್ಮೆ ನಾನು ಗುಜರಾತಿನ ಮತದಾರನಾಗಿದ್ದಿದ್ದಲ್ಲಿ, ಬಡವರು ಹಾಗೂ ಮಧ್ಯಮವರ್ಗೀಯರ ಸಂಕಷ್ಟಗಳನ್ನು ಪರಾನುಭೂತಿ ಶಕ್ತಿಯಿಂದ ಗ್ರಹಿಸುವ ಹಾಗೂ ಜಾತಿ-ಧರ್ಮಗಳನ್ನು ಲೆಕ್ಕಿಸದೆ ಅವರ ವಾಸ್ತವಿಕ ಸಮಸ್ಯೆಗಳನ್ನು ಪರಿಹರಿಸಲು ಸಮಯ-ಸಂಪನ್ಮೂಲಗಳನ್ನು ಪಣವಾಗಿರಿಸುವ ಪಕ್ಷಕ್ಕೇ ಮತ ಹಾಕುತ್ತಿದ್ದೆ.

ಚುನಾವಣೆ ಮತ್ತು ಉತ್ತರದಾಯಿತ್ವ: ಅಭಿವೃದ್ಧಿ, ಉದ್ಯೋಗಾವಕಾಶ ಸೃಷ್ಟಿ, ಬೆಲೆಯೇರಿಕೆಯಂಥ ವಿಷಯಗಳು ಎಲ್ಲ ರಾಜ್ಯಗಳಲ್ಲೂ ಸರ್ವೆಸಾಮಾನ್ಯವಾಗಿರುವಂಥವು ಎಂಬುದನ್ನು ನಾನು ಮನಃಪೂರ್ವಕವಾಗಿ ಒಪು್ಪತ್ತೇನೆ. ಹಿಂದೆ ಕೂಡ, ಆಡಳಿತಾರೂಢ ಪಕ್ಷಗಳು ವಾಸ್ತವಿಕ ಚರ್ಚಾವಿಷಯ/ಸಮಸ್ಯೆಗಳಿಂದ ನುಣಚಿಕೊಳ್ಳಲು ಯತ್ನಿಸಿದ್ದಿದೆ, ಆದರೆ ಬುದ್ಧಿವಂತ ಮತದಾರರು ಅಂಥ ಸರ್ಕಾರಗಳನ್ನೇ ಬದಲಿಸಿದ್ದಾರೆ ಮತ್ತು ಚುನಾವಣೆಯಿಂದ ಚುನಾವಣೆಗೆ ಅವರು ಪ್ರಬುದ್ಧರಾಗುತ್ತಿದ್ದಾರೆ.

ಹಿಂದುತ್ವ, ಅಯೋಧ್ಯ, ವೈಯಕ್ತಿಕ ಕಾನೂನುಗಳು, ಗೋ-ಸಂರಕ್ಷಣೆ, ಅತಿರೇಕದ ರಾಷ್ಟ್ರೀಯತೆ ಮತ್ತು ಸಮಾಜದಲ್ಲಿನ ಒಡಕುಗಳಂಥ ವಿಷಯಗಳನ್ನೇ ಬಿಜೆಪಿ ಕೆದಕಲು, ಪ್ರಚೋದಿಸಲು ಬಯಸುತ್ತದೆ ಎಂಬುದು ಚರ್ಚೆಯ ಸಂಗತಿಯೇ ಸರಿ. ಪ್ರಧಾನಮಂತ್ರಿಯವರು ಭಾಷಣ ಮಾಡುವಾಗೆಲ್ಲ, ಈ ವಿಷಯಗಳ ಪೈಕಿ ಒಂದನ್ನೋ ಅಥವಾ ಹೆಚ್ಚಿನದನ್ನೋ ಹೆಕ್ಕಿಕೊಂಡು ಮಾತಾಡುತ್ತಾರೆ ಮತ್ತು ಅದು ಆ ದಿನದ ಪ್ರಮುಖ ಸುದ್ದಿ ಆಗಿಬಿಡುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ಕರ್ಣಕಠೋರ ಚರ್ಚೆಗೆ ವೇದಿಕೆಯಾಗಿಬಿಡುತ್ತವೆ. ಅದೃಷ್ಟವಶಾತ್, ಇದುವರೆಗೂ ಯಾವ ಪಕ್ಷವೂ ಆ ಜಾಲದಲ್ಲಿ ಸಿಲುಕಿಲ್ಲ; ಅಭಿವೃದ್ಧಿಯ ಮೇಲೆ, ಉದ್ಯೋಗಾವಕಾಶ ಸೃಷ್ಟಿ ಹಾಗೂ ಬೆಲೆಯೇರಿಕೆಯಂಥ ಚರ್ಚಾವಿಷಯಗಳ ಕುರಿತೇ ಅವು ಗಮನವನ್ನು ಕೇಂದ್ರೀಕರಿಸಿವೆ.

ಚುನಾವಣೆ ಫಲಿತಾಂಶದ ಕುರಿತು ಯಾರಿಗೂ ಭವಿಷ್ಯ ನುಡಿಯಲಾಗದು. ಚುನಾವಣಾ ಸಮೀಕ್ಷೆಗಳಿಗೆ ವ್ಯತಿರಿಕ್ತವಾದ ಫಲಿತಾಂಶವನ್ನು ಬಿಹಾರ ಕಟ್ಟಿಕೊಟ್ಟರೆ, ಜನಮತ ಸಂಗ್ರಹದಲ್ಲಿ ವ್ಯಕ್ತವಾದ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ಫಲಿತಾಂಶಕ್ಕೆ ಉತ್ತರಪ್ರದೇಶ ಸಾಕ್ಷಿಯಾಯಿತು. ಗುಜರಾತ್​ನ ಸಲುವಾಗಿ ಮತ್ತು ಮುಂಬರುವ 16 ತಿಂಗಳಲ್ಲಿ ಕೇಂದ್ರದಲ್ಲಿ ಉತ್ತಮವಾದ ಆಳುಗ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರುವಂತಾಗುವ ಸಲುವಾಗಿ, ಚುನಾವಣೆ ಎಂಬುದು ಉತ್ತರದಾಯಿತ್ವವನ್ನು ಚಲಾಯಿಸುವ ಒಂದು ಕಾಲಘಟ್ಟವಾಗಿರುತ್ತದೆ ಎಂಬುದನ್ನು ಗುಜರಾತಿನ ಮತದಾರರು ನೆನಪಿಟ್ಟುಕೊಳ್ಳಲಿ ಎಂಬುದನ್ನಷ್ಟೇ ನಾವು ಆಶಿಸಬಹುದು.

(ಲೇಖಕರು ರಾಜ್ಯಸಭಾ ಸದಸ್ಯರು ಹಾಗೂ ಮಾಜಿ ವಿತ್ತ ಸಚಿವರು)

Leave a Reply

Your email address will not be published. Required fields are marked *

Back To Top