Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಸಿದ್ಧಗಂಗಾ ಶ್ರೀಗಳಿಗೆ ಆಮಿಷ

Thursday, 14.09.2017, 3:02 AM       No Comments

 

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿ. ಸೋಮಣ್ಣ ಸೇರಿ ಹಲವು ಬಿಜೆಪಿ ಮುಖಂಡರು, ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸಲಿದ್ದು, ವೀರಶೈವ ಲಿಂಗಾಯತ ಎರಡೂ ಒಂದೇ; ಅದಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕಾಗಿಲ್ಲ ಎಂದು ಶ್ರೀಗಳಿಂದ ಹೇಳಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ ಎಂದು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಗಂಭೀರ ಆರೋಪ ಮಾಡುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತೆ ಮಹಾದೇವಿ, ಪ್ರಶಸ್ತಿಗಿಂತ ಸಮಾಜ, ಧರ್ಮವನ್ನು ಉಳಿಸುವುದು ಕರ್ತವ್ಯ ಎಂದು ಹಿರಿಯ ಶ್ರೀಗಳಿಗೆ ಮನವರಿಕೆ ಮಾಡುವಂತೆ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಿಗೆ ನಾವು ಮನವಿ ಮಾಡುತ್ತಿದ್ದೇವೆ ಎಂದರು.

ಸಿದ್ಧಗಂಗಾ ಶ್ರೀಗಳಿಗೆ ವಯಸ್ಸಹಜ ನೆನಪಿನ ಶಕ್ತಿ ಕಡಿಮೆ ಆಗಿದೆ. ಇದನ್ನೇ ದುರುಪಯೋಗ ಪಡಿಸಿಕೊಂಡು ಇವರೆಲ್ಲ ತಮಗೆ ಬೇಕಾದ ರೀತಿಯಲ್ಲಿ ಟೈಪ್ ಮಾಡಿಸಿಕೊಂಡು ಅದಕ್ಕೆ ಶ್ರೀಗಳಿಂದ ಸಹಿ ಮಾಡಿಸಿದ್ದಾರೆ. ಸಿದ್ಧಗಂಗಾ ಮಠ ಲಿಂಗಾಯತ ಧರ್ಮದ ಶುದ್ಧ ಸಂಪ್ರದಾಯದ ಅನುಯಾಯಿಯೇ ಹೊರತು ಬೇರೆ ಅಲ್ಲ. ಹೀಗಾಗಿ ಹಿರಿಯ ಶ್ರೀಗಳು ಸಚಿವ ಎಂ.ಬಿ.ಪಾಟೀಲ ಅವರಿಗೆ ಹೇಳಿರುವುದು ಸತ್ಯವಾದರೆ ತಾವು ಖಂಡಿತವಾಗಿಯೂ ಗುರುಗಳನ್ನು ಪ್ರಶಂಸಿಸುತ್ತೇವೆ ಎಂದರು. ಸಿದ್ಧಗಂಗಾ ಶ್ರೀಗಳು ವೀರಶೈವ ಲಿಂಗಾಯತ ಎರಡು ಒಂದೇ ಎಂದು ಹೇಳಿದ್ದರೆ ಅದನ್ನು ತಾವು ಒಪ್ಪಲು ಸಾಧ್ಯವಿಲ್ಲ. ಲಿಂಗಾಯತ ಧರ್ಮ ಹೋರಾಟ ಮುಂದುವರಿಯುತ್ತದೆ ಎಂದರು.


ಪ್ರತ್ಯೇಕ ಧರ್ಮ ಕುರಿತು ತಜ್ಞರ ಸಮಿತಿ ರಚನೆ?

ಬೆಂಗಳೂರು: ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕವಲ್ಲ ಎಂದು ಸಿದ್ಧಗಂಗಾ ಶ್ರೀಗಳು ಸ್ಪಷ್ಟಪಡಿಸಿದ ಮೇಲೂ ರಾಜಕೀಯ ಮುಖಂಡರ ನಡುವಿನ ಹಗ್ಗ ಜಗ್ಗಾಟ ಮುಗಿದಿಲ್ಲ. ವೀರಶೈವ ಮಹಾಸಭಾ ಮಾತ್ರ ಪ್ರತ್ಯೇಕ ಧರ್ಮದ ಬಗ್ಗೆ ಒಂದೇ ಧ್ವನಿಯಲ್ಲಿ ಮಾತನಾಡಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದೆ.

ವೀರಶೈವ ಹಾಗೂ ಲಿಂಗಾಯತ ಸಮನ್ವಯ ಕುರಿತಂತೆ ವೈದ್ಯ ಶಿಕ್ಷಣ ಸಚಿವ ಶರಣುಪ್ರಕಾಶ ಪಾಟೀಲ್ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಯಾರೊಬ್ಬರೂ ಸಾರ್ವಜನಿಕವಾಗಿ ಟೀಕೆ ಟಿಪ್ಪಣಿ ಮಾಡಬಾರದು. ಸಭೆ ನಡೆಸಬಹುದು, ಆದರೆ ಆರೋಪ-ಪ್ರತ್ಯಾರೋಪಗಳಿಗೆ ಅದು ವೇದಿಕೆಯಾಗಕೂಡದು ಎಂದು ಒಮ್ಮತದ ನಿರ್ಣಯ ಮಾಡಲಾಗಿದೆ. ವಿಚಿತ್ರವೆಂದರೆ ಈ ಸಮನ್ವಯ ಸಭೆಯಿಂದ ಎಂ.ಬಿ.ಪಾಟೀಲ್ ದೂರ ಸರಿದಿದ್ದಾರೆ. ಹಾಗೆಯೇ ಪ್ರತ್ಯೇಕ ಧರ್ಮ ಹಾಗೂ ಮುಂದಿನ ನಡೆಯ ವಿಚಾರವಾಗಿ ಸೂಕ್ತ ನಿರ್ಧಾರ ಮಾಡಲು ಪ್ರತ್ಯೇಕ ತಜ್ಞರ ಸಮಿತಿ ರಚನೆಗೆ ಒಲವು ಮೂಡಿಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಲಿದೆ ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

 

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ಧಗಂಗಾ ಶ್ರೀಗಳ ಹೆಸರನ್ನು ಎಳೆದು ತಂದಿ ರುವ ಸಚಿವ ಎಂ.ಬಿ. ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಎಂ.ಬಿ. ಪಾಟೀಲರು ಈಗಲಾದರೂ ಮೌನವಾಗಿ ಇರುವುದು ಅವರಿಗೆ ಗೌರವದ ಸಂಗತಿ.

| ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

 

ವೀರಶೈವ – ಲಿಂಗಾಯತ ಎರಡೂ ಒಂದೇ. ಈ ನಿಲುವನ್ನು ಸಿದ್ದಗಂಗಾ ಶ್ರೀಗಳು ಪುರಸ್ಕರಿಸಿದ್ದಾರೆ. ಹೋರಾಟ ಮುಂದುವರಿಸುತ್ತೇವೆ. ಯಾರೂ ಶ್ರೀಗಳಿಗೆ ಅಗೌರವ ತೋರಿಲ್ಲ.

| ಈಶ್ವರ ಖಂಡ್ರೆ ಸಚಿವ

 

ಇನ್ನೆರಡು ದಿನ ಬಿಟ್ಟು ಮಾಧ್ಯಮದ ಮುಂದೆ ಬಂದು ಎಲ್ಲವನ್ನೂ ತಿಳಿಸುತ್ತೇನೆ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನನಗೆ ಸೂಚನೆ ನೀಡಿದ್ದಾರೆಂಬುದು ಉಹಾಪೋಹ.

| ಎಂ.ಬಿ.ಪಾಟೀಲ್ ಸಚಿವ

 


ಸಿದ್ಧಗಂಗಾ ಶ್ರೀಗಳ ಕ್ಷಮೆಯಾಚಿಸಲಿ

ಕಲಬುರಗಿ: ತುಮಕೂರು ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಮಹಾಸ್ವಾಮಿಗಳ ಹೇಳಿಕೆ ತಿರುಚಿ ಅಪಚಾರ ಎಸಗಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಶ್ರೀಗಳ ಕ್ಷಮೆಯಾಚಿಸಬೇಕು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಲಬುರಗಿ ಜಿಲ್ಲಾ ಮಠಾಧೀಶರ ಒಕ್ಕೂಟ ಅಧ್ಯಕ್ಷ ಶ್ರೀ ರೇವಣಸಿದ್ದ ಶಿವಾಚಾರ್ಯರು ಆಗ್ರಹಿಸಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮವಾಗ ಬೇಕೆಂದು ಪೂಜ್ಯರು ಹೇಳಿದ್ದಾರೆ ಎಂದು ಪಾಟೀಲ ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸಿದ್ದಾರೆ. ಸ್ವಾರ್ಥ ರಾಜಕೀಯಕ್ಕೆ ಮಠದ ಹೆಸರು ದುರ್ಬಳಕೆ ಮಾಡಿದ್ದು ಖಂಡನೀಯ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

Back To Top