Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ

Saturday, 07.10.2017, 3:00 AM       No Comments

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ಚುನಾವಣೆ ನೇತೃತ್ವದ ಬಗ್ಗೆ ಕಾಂಗ್ರೆಸ್​ನಲ್ಲಿದ್ದ ಗೊಂದಲಕ್ಕೆ ತೆರೆಬಿದ್ದಿದೆ. ಆದರೆ, ಸಿಎಂ ಹುದ್ದೆ ಬಗ್ಗೆ ಯಾವುದೇ ಸ್ಪಷ್ಟತೆ ನೀಡದ ಹಿನ್ನೆಲೆಯಲ್ಲಿ, ಶಾಸಕರು ಅಥವಾ ಮುಖಂಡರು ಈ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. ಈ ಮೂಲಕ ‘ನಾನೇ ಮುಂದಿನ ಸಿಎಂ’ ಎಂದು ಹೇಳಿಕೊಳ್ಳುತ್ತಿದ್ದ ಸಿಎಂ ಸಿದ್ದರಾಮಯ್ಯಗೂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ‘ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ. ಯಾರೊಬ್ಬರೂ ನಾಯಕತ್ವ ಅಥವಾ ಮುಖ್ಯಮಂತ್ರಿ ಹುದ್ದೆ ಬಗ್ಗೆ ಗೊಂದಲದ ಹೇಳಿಕೆ ಸೃಷ್ಟಿಸಬೇಡಿ. ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಪ್ರಥಮ ಆದ್ಯತೆ‘ ಎಂದು ವಿಧಾನಸೌಧದಲ್ಲಿ ಶುಕ್ರವಾರ ನಡೆದ ಶಾಸಕಾಂಗ ಸಭೆಯಲ್ಲಿ ವೇಣುಗೋಪಾಲ್ ಖಡಕ್ ಆಗಿ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ವೇಣುಗೋಪಾಲ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ಬಳಿಕ ಮಾತನಾಡಿದ ವೇಣುಗೋಪಾಲ್, ಪಕ್ಷದ ಹೆಸರಲ್ಲಿ ಗೆದ್ದಿದ್ದೀರಿ, ಪಕ್ಷ ಸಂಘಟನೆಯಲ್ಲೂ ಪ್ರತಿಯಾಗಿ ಪಾಲ್ಗೊಳ್ಳಿ ಎಂದು ಶಾಸಕರು ಹಾಗೂ ಸಚಿವರಿಗೆ ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಖಾತೆ ತೆರೆಯದವರಿಗೆ ತರಾಟೆ: ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯದ ಸಚಿವರು ಹಾಗೂ ಶಾಸಕರನ್ನು ತರಾಟೆಗೆ ತೆಗೆದುಕೊಂಡಿರುವ ವೇಣುಗೋಪಾಲ್, ಇನ್ನೊಂದು ದಿನದಲ್ಲಿ ಪ್ರತಿಯೊಬ್ಬ ಶಾಸಕ ಹಾಗೂ ಸಚಿವರು ಫೇಸ್​ಬುಕ್, ಟ್ವಿಟರ್ ಖಾತೆ ಹೊಂದಿರಬೇಕು ಎಂದು ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿರುವ ಸಚಿವರು ಹಾಗೂ ಶಾಸಕರ ಪಟ್ಟಿ ತಂದಿದ್ದ ವೇಣುಗೋಪಾಲ್, ಅವರ ಹೆಸರನ್ನು ಉಲ್ಲೇಖಿಸಿ ಅಭಿನಂದನೆ ಸಲ್ಲಿಸಿದರು. ‘ನಾವು ಕೆಲವರು ತಾಂತ್ರಿಕವಾಗಿ ಹಿಂದಿದ್ದೇವೆ‘ ಎಂದು ಕೆಲ ಶಾಸಕರು ಭಿನ್ನರಾಗ ಹಾಡಿದಾಗ, ನಿಮಗೆ ಆಪ್ತ ಸಹಾಯಕರು ಇರುವುದೇತಕ್ಕೆ? ಅವರಿಂದಲೇ ಖಾತೆ ನಿರ್ವಹಣೆ ಮಾಡಿಸಿ. ನಾನು ಯಾವುದೇ ನೆಪಗಳನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ ಸರ್ಕಾರದ ಯೋಜನೆ ಪರವಾಗಿ ಸುದ್ದಿಗೋಷ್ಠಿ ಮೂಲಕ ಮಾತನಾಡುವ ಸಚಿವರ ಪಟ್ಟಿಯನ್ನು ಮಾಡಿಕೊಂಡಿದ್ದ ಅವರು, ನಾಲ್ಕೈದು ಸಚಿವರು ಮಾತ್ರ ಮಾತನಾಡುತ್ತಿದ್ದಾರೆ. ಉಳಿದವರು ಬಾಯಿ ಮುಚ್ಚಿಕೊಂಡಿದ್ದಾರೆ. ಇದನ್ನು ಸಹಿಸಲಾಗದು ಎಂದಿದ್ದಾರೆ.

ಉಮಾಶ್ರೀ ವಿರುದ್ಧ ಅಸಮಾಧಾನ: ಸಾಮಾಜಿಕ ಜಾಲತಾಣಗಳಲ್ಲಿ ಸಚಿವರು ಇಲ್ಲದಿರುವ ಬಗ್ಗೆ ಪ್ರಸ್ತಾಪಿಸಿದ ವೇಣುಗೋಪಾಲ್, ನೇರವಾಗಿ ಉಮಾಶ್ರೀ ವಿರುದ್ಧ ಅಸಮಾಧಾನವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲದಿದ್ದರೆ ಹೇಗೆ? ನೀವು ಮಾಡಿರುವ ಕೆಲಸವನ್ನು ಎಲ್ಲಿ ಹೇಳಿಕೊಳ್ಳುತ್ತೀರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ವರದಿಗೆ ಸೂಚನೆ: ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಶಾಸಕರು ಲಘುವಾಗಿ ತೆಗೆದು ಕೊಂಡಿದ್ದಾರೆ. ಪಕ್ಷದ ನಾಯಕರ ನಿರೀಕ್ಷೆಯಂತೆ ಕೆಲಸವಾಗುತ್ತಿಲ್ಲ. ಈ ಅಭಿಯಾನದ ಕುರಿತಂತೆ ಪ್ರತಿ ದಿನವೂ ವರದಿ ನೀಡಬೇಕು. ಬೂತ್ ಮಟ್ಟದ ಸಮಿತಿ ರಚನೆಗೂ ಒತ್ತು ನೀಡಬೇಕು ಎಂದು ಸೂಚಿಸಿದ್ದಾರೆ.

ಮೂವರ ಭಾಷಣಕ್ಕೆ ಸೀಮಿತ

ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಶಾಸಕಾಂಗ ಸಭೆಯಾಗಿರುವ ಹಿನ್ನೆಲೆಯಲ್ಲಿ ಸಚಿವರು ವಿರುದ್ಧ ಹರಿಹಾಯಲು ಶಾಸಕರು ತಯಾರಿ ನಡೆಸಿಕೊಂಡು ಬಂದಿದ್ದರು. ಕೆಲ ಶಾಸಕರು ಮಾತನಾಡುವ ಪ್ರಯತ್ನವನ್ನೂ ಮಾಡಿದರು. ಆದರೆ, ಯಾವುದೇ ವಿವಾದ ಹಾಗೂ ಭಿನ್ನಮತಕ್ಕೆ ಆಸ್ಪದ ನೀಡಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ, ವೇಣುಗೋಪಾಲ್ ಹಾಗೂ ಪರಮೇಶ್ವರ್ ಮಾತ್ರ ಮಾತನಾಡಿದರು.

ಮತದಾರರ ಮನೆ ಮನೆಗೆ ಸರ್ಕಾರದ ಸಾಧನೆ ತಲುಪಿಸಿ. ಶೀಘ್ರದಲ್ಲಿಯೇ ಪ್ರತಿ ಜಿಲ್ಲಾ ಹಂತದಲ್ಲಿ ಸರ್ಕಾರದ ಸಾಧನಾ ಸಮಾವೇಶ ನಡೆಸಲಾಗುವುದು.

| ಸಿದ್ದರಾಮಯ್ಯ ಮುಖ್ಯಮಂತ್ರಿ

 

ರಾಜ್ಯ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗೋಣ. ಆದರೆ ಉಸ್ತುವಾರಿ ಸಚಿವರು ಜಿಲ್ಲಾ ಘಟಕದೊಂದಿಗೆ ಕೈಜೋಡಿಸಬೇಕು.

| ಡಾ.ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ

 

ಪರಿಸ್ಥಿತಿಗೆ ಉಸ್ತುವಾರಿಯೇ ಸುಸ್ತು!

ಬೆಂಗಳೂರು: ಸಚಿವರು, ಶಾಸಕರು ‘ಮನೆಮನೆಗೆ’ ಹೋಗಲಿಲ್ಲ, ಪಕ್ಷದ ಸಭೆಗಳಲ್ಲೂ ಕಾಣಿಸಿಕೊಳ್ಳದಿರುವುದನ್ನು ಕಂಡು ಚುನಾವಣೆ ಪಕ್ಷವನ್ನು ಸಜ್ಜುಗೊಳಿಸಲು ಬಂದಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿಯೇ ಈಗ ಸುಸ್ತು ಹೊಡೆದಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸರಣಿ ಸಭೆ ನಡೆಸಿದ ಕೆ.ಸಿ. ವೇಣುಗೋಪಾಲ್, ತಮ್ಮ ನಿರ್ದೇಶನಗಳನ್ನೇ ಪಾಲಿಸದ ಮಂತ್ರಿಗಳು, ಶಾಸಕರು, ಮುಖಂಡರ ವರ್ತನೆಗೆ ಬೇಸರ ಹೊರಹಾಕಿದರು. ಜತೆಗೆ ಚುನಾವಣೆಗೆ ಸಜ್ಜಾಗದ ನಾಯಕರನ್ನು ಬಡಿದೆಚ್ಚರಿಸುವ ಕೆಲಸ ಮಾಡಿದ ಅವರು, ಮುಂದಿನ ಭೇಟಿಯ ಸಂದರ್ಭದಲ್ಲಾದರೂ ಕೊಟ್ಟ ಕೆಲಸ ಮುಗಿಸಿ ಎಂದು ತಾಕೀತು ಮಾಡಿದ್ದಾರೆ.

ಬೆಂಗಳೂರು ಶಾಸಕರೊಂದಿಗೆ ಸಭೆ, ಪದಾಧಿಕಾರಿಗಳ ಸಭೆ, ಸೇರಿ ವಿವಿಧ ಘಟಕಗಳೊಂದಿಗೆ ಸಭೆ ನಡೆಸಿದ ವೇಣುಗೋಪಾಲ್ ಅವರೊಂದಿಗೆ ಡಾ.ಜಿ.ಪರಮೇಶ್ವರ, ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಮತ್ತಿತರರು ಸಾಥ್ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಮೊದಲ ಸಭೆಯಲ್ಲಿ ಮಾತ್ರ ಇದ್ದರು. ಮನೆಮನೆಗೆ ಕಾಂಗ್ರೆಸ್ ಅಭಿಯಾನ ಮಕಾಡೆ ಮಲಗಿರುವುದನ್ನು ಪಕ್ಷ ಒಪ್ಪಿಕೊಂಡಿದೆ. ಆದರೆ, ಕಾರ್ಯಕ್ರಮ ವಿಫಲವಾಗಲು ಮಳೆಯ ಕಾರಣ ನೀಡಿದೆ. ಅ.15ರ ವರೆಗೆ ನಡೆಯಬೇಕಿದ್ದ ಅಭಿಯಾನವನ್ನು ಇನ್ನೂ ಒಂದು ವಾರ ವಿಸ್ತರಿಸುತ್ತಿದ್ದು, ಎಲ್ಲ ಮಂತ್ರಿಗಳು, ಶಾಸಕರು, ಪದಾಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಲೇಬೇಕೆಂದು ವೇಣುಗೋಪಾಲ್ ಫರ್ವನು ಹೊರಡಿಸಿದರು. ಅಕ್ಟೋಬರ್ ಕೊನೆಯಲ್ಲಿ ಪುನಃ ವೀಕ್ಷಕರು ಪರಿಶೀಲನೆ ನಡೆಸುವರು. ಒಂದು ವೇಳೆ ಈಗಲೂ ಉದಾಸೀನ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

 

ಮಹಿಳಾಧ್ಯಕ್ಷರಿಗೆ ಮಂಗಳಾರತಿ

ಕೆಪಿಸಿಸಿ ಮುಂಚೂಣಿ ಘಟಕ ಮತ್ತು ಮಹಿಳಾ ಘಟಕಗಳು ಬರೀ ಒಂದು ಪೋಸ್ಟ್ ಸೃಷ್ಟಿ ಮಾಡಿಕೊಂಡಿದ್ದೀರಿ ಅಷ್ಟೆ. ಮೂರು ತಿಂಗಳಿಂದ ನಿಮ್ಮ ಸಾಧನೆ ಏನು ಎಂದು ಉಸ್ತುವಾರಿ ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡರು. ಆಗ ಸಮರ್ಥನೆಗೆ ಮುಂದಾದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟ್ಟಾಗಿ, ಸಲಹೆ ಕೊಡುವುದೇ ಸಾಧನೆ ಅಲ್ಲ, ಮೂರು ತಿಂಗಳಿಂದ ಗ್ಯಾಸ್ ದರ ಏರಿಕೆಯಾಗಿದ್ದು, ನೀವು ಎಷ್ಟು ಬಾರಿ ಪ್ರತಿಭಟನೆ ಮಾಡಿದಿರಿ ಎಂದು ಪ್ರಶ್ನಿಸಿದರು. ಹೈಟೆಕ್ ಪಾಲಿಟಿಕ್ಸ್ಗೆ ಗುಡ್ ಬೈ ಹೇಳಿ, ಕೇಡರ್ ಬೇಸ್ ಕೆಲಸ ಶುರು ಮಾಡಿ ಎಂದು ಎಲ್ಲ ಘಟಕಗಳಿಗೆ ಇದೆ ವೇಳೆ ಸೂಚಿಸಿದರು.

 ಶಾಲೆಗಳಲ್ಲಿ ರಾಮಾಯಣ, ಭಗವದ್ಗೀತೆಗೆ ವಿರೋಧವಿಲ್ಲ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ, ಭಗವದ್ಗೀತೆ ಕಲಿಯಬೇಕು ಎಂಬುದಕ್ಕೆ ನಮ್ಮ ವಿರೋಧವಿಲ್ಲ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಮಹಾತ್ಮ ಗಾಂಧಿ ರಾಮಾಯಣದ ಮಹತ್ವ, ರಾಮರಾಜ್ಯದ ಪರಿಕಲ್ಪನೆ ತಿಳಿಸಿದ್ದರು. ಎಲ್ಲರೂ ರಾಮಾಯಣವನ್ನು ಅಧ್ಯಯನ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ್ಕೆ ಧಕ್ಕೆಯಾಗದಂತೆ ಎಲ್ಲ ಶಾಲೆ ಹಾಗೂ ಎಲ್ಲ ಸರ್ಕಾರಿ ಗ್ರಂಥಾಲಯಗಳಲ್ಲಿ ರಾಮಾಯಣ, ಭಗವದ್ಗೀತೆ, ಮಹಾಭಾರತ ಇರುವುದರಲ್ಲಿ ತಪ್ಪಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ ಬೋಧಿಸಲು ಮುಂದಾಗಿದ್ದ ವಿವಿಧ ರಾಜ್ಯಗಳ ಬಿಜೆಪಿ ಸರ್ಕಾರಗಳ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸಿದ್ದರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ವೈಯಕ್ತಿಕ ಅಭಿಪ್ರಾಯವನ್ನಷ್ಟೇ ತಿಳಿಸುತ್ತಿರುವುದಾಗಿ ಹೇಳಿದರು.

Leave a Reply

Your email address will not be published. Required fields are marked *

Back To Top