Wednesday, 28th June 2017  

Vijayavani

1. ಜಿಎಸ್​​ಟಿ ಜಾರಿಗೆ ಸಜ್ಜಾಗ್ತಿದೆ ಕೇಂದ್ರ ಸರ್ಕಾರ- ಜೂನ್​ 30ರ ಮಧ್ಯರಾತ್ರಿ ಅಧಿವೇಶನಕ್ಕೆ ಇಂದು ರಿಹರ್ಸಲ್​- ಸಂದೇಹ ನಿವಾರಣೆಗೆ ವಾರ್​ ರೂಂ 2. ಜಗತ್ತಿನಾದ್ಯಂತ ಮತ್ತೆ ಸೈಬರ್ ದಾಳಿ- ಪೆಟ್ಯಾ ರಾನ್ಸೋಮ್ವೇರ್​ಗೆ ಯುರೋಪ್ ತತ್ತರ- ಭಾರತದ ಐಟಿ ಕಂಪನಿಗಳಿಗೂ ಶುರುವಾಯ್ತು ಭೀತಿ 3. ಆರ್​ಜೆಡಿ ನಾಯಕರ ವಿರುದ್ಧ ಹೆಚ್ಚಿದ ಭ್ರಷ್ಟಾಚಾರ ಆರೋಪ- ಲಾಲು ಮೇಲೆ ನಿತೀಶ್ ಕುಮಾರ್​ ಮುನಿಸು- ಮುರಿದು ಬೀಳುತ್ತಾ ಮಹಾಘಟಬಂಧನ 4. ತೀವ್ರ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ- ಇಂದು ಹೈ ಕಮಾಂಡ್​ ಜತೆ ಸಿಎಂ ಮಾತುಕತೆ- ಯಾರಿಗೆ ಒಲಿಯುತ್ತೆ ಗೃಹಖಾತೆ 5. ಅವನು ಅಪ್ಪಾನಾ ಇಲ್ಲಾ ಇವನು ಅಪ್ಪಾನಾ- ತಂದೆಯ ಅವಳಿ ಸೋದರನ ಕಂಡು ಮಗು ಕನ್ಪ್ಯೂಸ್- ಕಂದನ ವಿಡಿಯೋ ಸಖತ್ ವೈರಲ್
Breaking News :

ಸಿಗಲಿ ಉತ್ತೇಜನ

Friday, 12.05.2017, 3:00 AM       No Comments

ರಾಜ್ಯದ 2017ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಸರಾಸರಿ ತೇರ್ಗಡೆ ಶೇ.52.38ರಷ್ಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ.4.82 ಇಳಿಕೆಯಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಇನ್ನು, ಪರೀಕ್ಷಾ ಸಾಧನೆಯಲ್ಲಿ ಎಂದಿನಂತೆ ಬಾಲಕಿಯರು ಮೇಲುಗೈ ಪಡೆದಿದ್ದಾರೆ. ಕಳೆದ ವರ್ಷ ಎರಡರೆಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದಾಗಿ ಸರ್ಕಾರ ಮುಜುಗರ ಎದುರಿಸಬೇಕಾಗಿ ಬಂದಿತ್ತು. ಆ ಕಹಿ ಅನುಭವದ ಹಿನ್ನೆಲೆಯಲ್ಲಿ ಈ ಸಲ ಹಲವು ಬದಲಾವಣೆಗಳನ್ನು ಮಾಡಿಕೊಂಡು, ‘ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್’ ವಿಧಾನದ ಮೂಲಕ ಪರೀಕ್ಷೆಗಳನ್ನು ನಡೆಸಲಾಯಿತು ಎಂಬುದು ಗಮನಿಸಬೇಕಾದ ಸಂಗತಿ. ಈ ಕಟ್ಟುನಿಟ್ಟಿನ ಕ್ರಮವೂ ಫಲಿತಾಂಶ ಇಳಿಕೆಗೆ ಕಾರಣ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೇ ಖುದ್ದು ಈ ವಿಷಯವನ್ನು ಹೇಳಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲದಂತೆ ನೋಡಿಕೊಂಡಿದ್ದು, ಪ್ರಶ್ನೆಪತ್ರಿಕೆ ಇರಿಸುವ ಖಜಾನೆಗಳಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಬಯೋಮೆಟ್ರಿಕ್ ಹಾಜರಾತಿ, ಬಾರ್​ಕೋಡ್ ವ್ಯವಸ್ಥೆ ಮುಂತಾದ ಕಾರಣಗಳಿಂದಾಗಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು, ಇದು ಫಲಿತಾಂಶ ಇಳಿಕೆಗೆ ಕಾರಣವಾಯಿತು ಎಂಬುದು ಸಚಿವ ಸೇಠ್ ವಿವರಣೆ. ‘ಫಲಿತಾಂಶ ಕಡಿಮೆಯಾದರೂ ನಾವು ಗುಣಮಟ್ಟಕ್ಕೆ ಆದ್ಯತೆ ನೀಡುತ್ತೇವೆ’ ಎಂದೂ ಹೇಳುವ ಮೂಲಕ, ಮುಂದಿನ ದಿನಗಳಲ್ಲಿಯೂ ಇದೇ ಮಾದರಿ ಮುಂದುವರಿಯುವ ಸುಳಿವು ನೀಡಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನಡುವೆ ತೇರ್ಗಡೆ ವಿಚಾರದಲ್ಲಿ ಇರುವ ಅಂತರ. ಈ ಸಲ ಗ್ರಾಮೀಣ ವಿದ್ಯಾರ್ಥಿಗಳು ನಗರ ಭಾಗದ ವಿದ್ಯಾರ್ಥಿಗಳಿಗಿಂತ ಶೇ.2ರಷ್ಟು ಕಡಿಮೆ ಫಲಿತಾಂಶ ಮಾಡಿದ್ದಾರೆ. ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಮುಂತಾದವು ಶೈಕ್ಷಣಿಕ ಜೀವನದ ಮಹತ್ವದ ಘಟ್ಟಗಳು. ಇಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬುದು ಎಲ್ಲರ ಕನಸು ಹಾಗೂ ಪ್ರಯತ್ನ. ಈ ನಿಟ್ಟಿನಲ್ಲಿ ಯಾರ್ಯಾರಿಗೆ ಏನೇನು ಸವಲತ್ತುಗಳು, ಅನುಕೂಲಗಳು ಇರುತ್ತವೆ ಎಂಬುದೂ ಮುಖ್ಯವಾಗುತ್ತದೆ. ಹಾಗೆನೋಡಿದರೆ, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಇರುವ ಮೂಲಸೌಕರ್ಯ, ಶಿಕ್ಷಣ ಸಂಸ್ಥೆಗಳು, ತರಬೇತಿ ಅವಕಾಶ ಮುಂತಾದವು ಕಡಿಮೆಯೇ. ಅಷ್ಟೇ ಏಕೆ, ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್ತಿನಂಥ ಮೂಲಭೂತ ಸೌಲಭ್ಯವೂ ಇರುವುದಿಲ್ಲ. ಹೀಗಿದ್ದರೂ, ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನೇ ಮಾಡುತ್ತ ಬಂದಿದ್ದಾರೆನ್ನಬೇಕು. ಆದರೆ ಅವರಿಗೂ ಸೂಕ್ತ ಅವಕಾಶ, ಸವಲತ್ತುಗಳನ್ನು ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ಈಗೇನೋ ಗ್ರಾಮೀಣ ಭಾಗದಲ್ಲೂ ಸಾಕಷ್ಟು ಖಾಸಗಿ ಟ್ಯೂಷನ್, ತರಬೇತಿ ಇತ್ಯಾದಿ ಸಿಗುತ್ತವಾದರೂ ಅದು ಎಲ್ಲರಿಗೂ ಕೈಗೆಟುಕುವಂತಿರುವುದಿಲ್ಲ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸವಲತ್ತುಗಳನ್ನು ಹೆಚ್ಚಿಸುವುದು ಇದಕ್ಕೆ ಕೆಲಮಟ್ಟಿಗೆ ಪರಿಹಾರವಾಗಬಹುದು.

Leave a Reply

Your email address will not be published. Required fields are marked *

2 × 5 =

Back To Top