Friday, 19th October 2018  

Vijayavani

 ಹಾಲು, ತುಪ್ಪ ಮಾರೋ ನೆಪದಲ್ಲಿ ಬರ್ತಾನೆ -ಒಂಟಿ ಮನೆಗಳಲ್ಲಿ ಚಿನ್ನ ಎಗರಿಸ್ತಾನೆ - ಸಿಕ್ಕಿಬಿದ್ದ ಚೋರ ಈಗ ಕಂಬಿ ಎಣಿಸ್ತಾನೆ         ಗೃಹಿಣಿ ಜತೆ ಅಂಕಲ್ ಸ್ನೇಹ ‘ಸಂಬಂಧ’ -ಬೇಡ ಅಂದಿದ್ದಕ್ಕೆ 18 ಬಾರಿ ಇರಿದ -ಚಾಕು ಹಿಡಿದೇ ಪೊಲೀಸರಿಗೆ ಶರಣಾದ        ಬಸ್ಸಲ್ಲಿ ಹೋಗೋ ಮಹಿಳೆಯರೇ ಹುಷಾರು -ನಿಮ್ಮ ಕೂದಲನ್ನೇ ಕತ್ತರಿಸ್ತಾರೆ ಚೋರರು - ಖದೀಮನಿಗೆ ಗ್ರಹಚಾರ ಬಿಡಿಸಿದ ಜನರು         ಸರ್ಕಾರಿ ವೈದ್ಯರ ಅಟೆಂಡೆನ್ಸ್ ಮೇಲೆ ಕಣ್ಣು -ಹಾಜರಾತಿಗೆ ಆಧಾರ್ ಕಡ್ಡಾಯ- ರೂಲ್ಸ್ ತರಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧಾರ        ರಾಜಧಾನಿಯಲ್ಲಿ ಆಯುಧ ಪೂಜೆ ಸಡಗರ -ಮಾರುಕಟ್ಟೆಗಳಲ್ಲಿ ಜೋರಾಯ್ತು ಹೂವು, ಹಣ್ಣು ವ್ಯಾಪಾರ -ಪೊಲೀಸ್ ಠಾಣೆಗಳಲ್ಲೂ ಪೂಜೆ       
Breaking News

ಸಿಎಸ್​ಕೆಗೆ ಧೋನಿ ಸೇರ್ಪಡೆ ಖಚಿತ

Thursday, 07.12.2017, 3:04 AM       No Comments

ಬೆಂಗಳೂರು: ಐಪಿಎಲ್​ನಲ್ಲಿ ಸತತ ಎಂಟು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಮರಳಿ ಅದೇ ತಂಡವನ್ನು ಕೂಡಿಕೊಳ್ಳುವ ನಿಟ್ಟಿನಲ್ಲಿ ಇದ್ದ ಅಡೆತಡೆಗಳನ್ನು ಐಪಿಎಲ್ ಆಡಳಿತ ಮಂಡಳಿ ನಿವಾರಣೆ ಮಾಡಿದೆ. 2018ರ ಐಪಿಎಲ್​ಗೆ ಪ್ರತಿ ತಂಡಗಳು ತಲಾ ಐವರು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ಸಿಕ್ಕಿದ್ದು, ಎರಡು ವರ್ಷಗಳ ಅಮಾನತು ಶಿಕ್ಷೆ ಮುಗಿಸಿ ಲೀಗ್​ಗೆ ಸೇರಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ 2015ರಲ್ಲಿ ಆಯಾ ತಂಡಗಳು ಹೊಂದಿದ್ದ ಆಟಗಾರರನ್ನು ರಿಟೇನ್ ಮಾಡಿಕೊಳ್ಳಬಹುದೆಂದು ತಿಳಿಸಿದೆ.

ಕಳೆದ ತಿಂಗಳು ಫ್ರಾಂಚೈಸಿ ಮಾಲೀಕರ ವರ್ಕ್ ಶಾಪ್​ನಲ್ಲಿ ನಡೆದಿದ್ದ ಚರ್ಚೆಗಳಿಗೆ ಬುಧವಾರ ಐಪಿಎಲ್ ಆಡಳಿತ ಮಂಡಳಿ ಹಾಗೂ ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಂತಿಮ ಮುದ್ರೆ ನೀಡಿತು. ಆಟಗಾರರ ರಿಟೆನ್ಷನ್ ನಿಯಮ, ಸಂಭಾವನೆ, ಆಟಗಾರರ ನಿಯಮಾವಳಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಿರ್ಧಾರ ತಳೆಯಲಾಯಿತು.

‘ಎಲ್ಲ ಐಪಿಎಲ್ ಫ್ರಾಂಚೈಸಿಗಳು ಆಟಗಾರರ ರಿಟೆನ್ಷನ್ (ಹರಾಜಿಗೂ ಮುನ್ನ) ಹಾಗೂ ರೈಟ್ ಟು ಮ್ಯಾಚ್-ಆರ್​ಟಿಎಂ (ಆಟಗಾರರ ಹರಾಜಿನ ವೇಳೆ) ಮೂಲಕ ಗರಿಷ್ಠ ಐದು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. 2015ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದ ಆಟಗಾರರನ್ನು ಉಳಿಸಿಕೊಳ್ಳಲು ಈ ಎರಡು ತಂಡಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಆಟಗಾರರು 2017ರ ಐಪಿಎಲ್​ನಲ್ಲಿ ಪುಣೆ ಸೂಪರ್​ಜೈಂಟ್ಸ್ ಅಥವಾ ಗುಜರಾತ್ ಲಯನ್ಸ್ ತಂಡದ ಪರವಾಗಿ ಆಡಿರಬೇಕು’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜಸ್ಥಾನದ ಆಯ್ಕೆ ಯಾರು

ಕಳೆದೆರಡು ಆವೃತ್ತಿಯಲ್ಲಿ ಪುಣೆ ಅಥವಾ ಗುಜರಾತ್ ಪರ ಆಡಿದ್ದ ರಾಜಸ್ಥಾನದ ಮಾಜಿ ಆಟಗಾರರಾದ ರಹಾನೆ, ಸ್ಟೀವನ್ ಸ್ಮಿತ್, ಅಂಕಿತ್ ಶರ್ಮ, ರಜತ್ ಭಾಟಿಯಾ, ಫೌಲ್ಕ್​ನರ್ ಹಾಗೂ ಧವಳ್ ಕುಲಕರ್ಣಿ ಉಳಿಸಿಕೊಳ್ಳಬಹುದು.

ಚೆನ್ನೈ ಯಾರನ್ನು ಇರಿಸಿಕೊಳ್ಳಬಹುದು

ಕಳೆದೆರಡು ಆವೃತ್ತಿಯಲ್ಲಿ ಪುಣೆ ಸೂಪರ್​ಜೈಂಟ್ಸ್ ಅಥವಾ ಗುಜರಾತ್ ಪರ ಆಡಿದ್ದ ಚೆನ್ನೈನ ಮಾಜಿ ಆಟಗಾರರಾದ ಎಂಎಸ್ ಧೋನಿ, ಆರ್.ಅಶ್ವಿನ್, ಫಾಫ್ ಡು ಪ್ಲೆಸಿಸ್, ಬಾಬಾ ಅಪರಾಜಿತ್, ಅಂಕುಂಶ್ ಬೈನ್ಸ್, ಸುರೇಶ್ ರೈನಾ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ಬ್ರೆಂಡನ್ ಮೆಕ್ಕಲಂ, ಡ್ವೈನ್ ಸ್ಮಿತ್, ಆಂಡ್ರ್ಯೂ ಟೈ, ಇರ್ಫಾನ್ ಪಠಾಣ್ ಹಾಗೂ ಈಶ್ವರ್ ಪಾಂಡೆಯನ್ನು ರಿಟೇನ್ ಅಥವಾ ಆರ್​ಟಿಎಂ ಮಾಡಬಹುದು.

ಆರ್​ಟಿಎಂ ಎಂದರೇನು?

ರೈಟ್ ಟು ಫರ್ಸ್ಟ್ ಚಾಯ್್ಸ ಎಂದೂ ಇದನ್ನು ಕರೆಯಲಾಗುತ್ತದೆ. ಉದಾಹರಣೆಗೆ ವಿರಾಟ್ ಕೊಹ್ಲಿ ಹರಾಜಿನ ಕಣದಲ್ಲಿರುತ್ತಾರೆ. ಚೆನ್ನೈ ತಂಡ ಇವರಿಗೆ 16 ಕೋಟಿ ಮೊತ್ತಕ್ಕೆ ಬಿಡ್ ಮಾಡುತ್ತದೆ ಎಂದಾದಲ್ಲಿ, ಕೊಹ್ಲಿ ಆಡಿದ ಹಿಂದಿನ ತಂಡವಾದ ಆರ್​ಸಿಬಿ ಆರ್​ಟಿಎಂ ಬಳಸಿ ಅವರನ್ನು ತಂಡದಲ್ಲಿಯೇ ಉಳಿಸಿಕೊಳ್ಳಬಹುದು. ಆದರೆ, ಚೆನ್ನೈ ಬಿಡ್ ಮಾಡಿದ 16 ಕೋಟಿ ರೂ. ಮೊತ್ತವನ್ನು ಕೊಹ್ಲಿಗೆ ನೀಡಬೇಕಾಗಿರುತ್ತದೆ.

ರಿಟೇನ್ ಮಾಡಿಕೊಂಡರೆ ಭರ್ಜರಿ ಸಂಭಾವನೆ

ಒಂದು ಫ್ರಾಂಚೈಸಿ ಮೊದಲ ಮೂರು ಆಯ್ಕೆ ರಿಟೇನ್ ಆಟಗಾರರನ್ನು ಪ್ರಕಟಿಸಿದಲ್ಲಿ, 33 ಕೋಟಿ ರೂ. ವೆಚ್ಚ ಮಾಡಬೇಕಿದೆ. ಮೊದಲ ಆಯ್ಕೆಯ ಆಟಗಾರನಿಗೆ 15 ಕೋಟಿ ರೂ, 2 ಹಾಗೂ 3ನೇ ಆಯ್ಕೆಯ ಆಟಗಾರನಿಗೆ ತಲಾ 11 ಹಾಗೂ 7 ಕೋಟಿ ರೂ. ನೀಡಬೇಕಿದೆ. ಇನ್ನು ತಂಡವೊಂದು ಇಬ್ಬರು ಆಟಗಾರರನ್ನು ರಿಟೇನ್ ಮಾಡಿದಲ್ಲಿ 21 ಕೋಟಿ ರೂ. ವೆಚ್ಚ ಮಾಡಬೇಕಿದೆ. ಮೊದಲ ಆಯ್ಕೆಗೆ 12.5 ಕೋಟಿ, 2ನೇ ಆಯ್ಕೆಗೆ 8.5 ಕೋಟಿ ರೂ. ನೀಡಬೇಕಿರುತ್ತದೆ. ಒಬ್ಬನೇ ಆಟಗಾರರನ್ನು ರಿಟೇನ್ ಮಾಡಿಕೊಂಡಲ್ಲಿ 12.5 ಕೋಟಿ ರೂ. ವೆಚ್ಚ ಮಾಡಬೇಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡದ ಆಟಗಾರನನ್ನು ರಿಟೇನ್ ಮಾಡಿಕೊಂಡಲ್ಲಿ 3 ಕೋಟಿ ರೂ. ವೆಚ್ಚವಾಗಲಿದೆ.

ಮೂಲಬೆಲೆ ಈಗ ರೂ. 20 ಲಕ್ಷ

ಹರಾಜಿನಲ್ಲಿ ದೇಶೀಯ ಕ್ರಿಕೆಟಿಗರ ಮೂಲಬೆಲೆಯನ್ನು 10 ಲಕ್ಷ ಏರಿಕೆ ಮಾಡಲಾಗಿದ್ದು, 2018ರ ಹರಾಜಿನಲ್ಲಿ ದೇಶೀಯ ಆಟಗಾರರ ಮೂಲಬೆಲೆ 20 ಲಕ್ಷ ಇರಲಿದೆ. ನಂತರದ ಎರಡು ವಿಭಾಗದ ಆಟಗಾರರ ಮೂಲಬೆಲೆ 30 ಹಾಗೂ 40 ಲಕ್ಷ ಇರಲಿದೆ. ಇನ್ನು ಅಂತಾರಾಷ್ಟ್ರೀಯ ಪಂದ್ಯವಾಡಿದ ಕ್ರಿಕೆಟಿಗರ ಕನಿಷ್ಠ ಮೂಲಬೆಲೆ ತಲಾ 50 ಹಾಗೂ 75 ಲಕ್ಷ ಇರಲಿದೆ. ಇದಕ್ಕೂ ಮುನ್ನ 20 ಹಾಗೂ 50 ಲಕ್ಷವಿತ್ತು. ಇನ್ನು ಗರಿಷ್ಠ ಮೂಲ ಬೆಲೆ 2, 1.5 ಹಾಗೂ 1 ಕೋಟಿ ರೂ. ಇರಲಿದೆ.

ರಿಟೆನ್ಷನ್/ಆರ್​ಟಿಎಂ ಕಾರ್ಯನಿರ್ವಹಣೆ

ಹಾಲಿ ತಂಡದ ಐವರು ಆಟಗಾರರನ್ನು ಉಳಿಸಿಕೊಳ್ಳಲು ರಿಟೆನ್ಷನ್ ಅಥವಾ ಆರ್​ಟಿಎಂಅನ್ನು ಫ್ರಾಂಚೈಸಿ ಬಳಸಿಕೊಳ್ಳಬಹುದು. ಆರ್​ಟಿಎಂಅನ್ನು ಹರಾಜಿನ ವೇಳೆ ಮಾತ್ರವೇ ಬಳಸಬಹುದು. ರಿಟೆನ್ಷನ್ ಮೂಲಕ ಗರಿಷ್ಠ ಮೂವರನ್ನು ಅಥವಾ ಆರ್​ಟಿಎಂ ಮೂಲಕ ಗರಿಷ್ಠ ಮೂವರನ್ನು ಉಳಿಸಿಕೊಳ್ಳಬಹುದು. ಹರಾಜಿನವರೆಗೆ ತಂಡವೊಂದು ಯಾವ ಆಟಗಾರನನ್ನೂ ರಿಟೇನ್ ಮಾಡದೇ ಇದ್ದ ಪಕ್ಷದಲ್ಲಿ 3 ಆರ್​ಟಿಎಂ ಅವಕಾಶ ಇರಲಿದೆ. ಹರಾಜಿಗೂ ಮುನ್ನ 3 ರಿಟೇನ್ ಮಾಡಿಕೊಂಡಿದ್ದಲ್ಲಿ ತಂಡಕ್ಕೆ ಹರಾಜಿನ ವೇಳೆ ಎರಡು ಆರ್​ಟಿಎಂ ಮಾತ್ರ ಇರಲಿದೆ. ತಂಡವೊಂದು ಎಷ್ಟೇ ರಿಟೇನ್/ಆರ್​ಟಿಎಂ ಬಳಸುವುದಿದ್ದರೂ, ಗರಿಷ್ಠ ಮೂವರು ಭಾರತೀಯ ಆಟಗಾರರು, ಗರಿಷ್ಠ ಇಬ್ಬರು ವಿದೇಶಿ ಆಟಗಾರರು, ಗರಿಷ್ಠ ಇಬ್ಬರು ಭಾರತೀಯ ದೇಶೀಯ ಆಟಗಾರರನ್ನು ಉಳಿಸಿಕೊಳ್ಳಬಹುದು.

2018ರ ಹರಾಜಿನಲ್ಲಿ ಬದಲಾವಣೆ ಏನು?

ಆಟಗಾರರನ್ನು ಖರೀದಿಸಲು ಫ್ರಾಂಚೈಸಿ ಗಳಿಗೆ ಹೆಚ್ಚಿನ ಹಣ ನೀಡಲಾಗಿದೆ. ಇದರಿಂದಾಗಿ ಇನ್ನಷ್ಟು ದೊಡ್ಡ ಮೊತ್ತದ ಹರಾಜಿನ ದಾಖಲೆಗಳು ಈ ಬಾರಿ ನಿರ್ವಣವಾಗಬಹುದು. 2017ರಲ್ಲಿ ಆಟಗಾರರನ್ನು ಖರೀದಿಗೆ 66 ಕೋಟಿ ಮಾತ್ರವೇ ವಿನಿಯೋಗ ಮಾಡಬಹುದಿತ್ತು. ಈ ಬಾರಿ 80 ಕೋಟಿಗೆ ಏರಿಸಲಾಗಿದೆ. 2019 ಹಾಗೂ 2020ರಲ್ಲಿ ಕ್ರಮವಾಗಿ 82 ಹಾಗೂ 85 ಕೋಟಿಗೆ ಏರಿಕೆಯಾಗಲಿದೆ.

Leave a Reply

Your email address will not be published. Required fields are marked *

Back To Top