Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಸಿಎಂ ನಗರ ಪ್ರದಕ್ಷಿಣೆ, ಮಳೆ ಹಾನಿ ವೀಕ್ಷಣೆ

Thursday, 14.09.2017, 3:04 AM       No Comments

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳ ಗಾಗಿರುವ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಳೆ ಹಾನಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ತಾವು ಅವರಿಗಿಂತ ಕಡಿಮೆಯಿಲ್ಲ ಎಂಬಂತೆ ಸಿಎಂ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ನಡೆಸಿದರು. ಮಧ್ಯಾಹ್ನ 3 ಗಂಟೆಯಿಂದ 6 ಗಂಟೆವರೆಗೆ ಮಳೆ ಹಾನಿ ಪ್ರದೇಶಗಳಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ಈ ವೇಳೆ ಜನರ ಬಳಿ ಸಮಸ್ಯೆ ಆಲಿಸುವುದಕ್ಕಿಂತ ಹೆಚ್ಚಾಗಿ, ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರು ಮತ್ತು ಪಕ್ಷದ ಮುಖಂಡರಲ್ಲಿ ಕೇಳಿ ತಿಳಿದುಕೊಂಡರು. ಅಲ್ಲದೆ, ಮುಂದೆ ಮಳೆಯಿಂದ ಯಾವುದೇ ಹಾನಿ ಸಂಭವಿಸದಂತೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರು.

ಕಟ್ಟಡ ತೆರವಿಗೆ ಸೂಚನೆ: ಮೊದಲಿಗೆ ಜೆ.ಸಿ.ರಸ್ತೆ ಬಳಿಯ ಕುಂಬಾರ ಗುಂಡಿಯಲ್ಲಿ ಮಳೆ ಹಾನಿಗೊಳಗಾಗಿದ್ದ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಅಲ್ಲಿನ ರಾಜಕಾಲುವೆ ಮಾರ್ಗ ಬದಲಿಸಿ, ಆ ಜಾಗದಲ್ಲಿ 3 ಕಟ್ಟಡಗಳು ನಿರ್ವಣವಾಗಿರುವ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಆರ್.ವಿ. ದೇವರಾಜ್ ಮಾಹಿತಿ ನೀಡಿದರು. ಕಟ್ಟಡಗಳನ್ನು ತೆರವು ಮಾಡಿ ರಾಜಕಾಲುವೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಸಿಎಂ ಸೂಚನೆ ನೀಡಿದರು.

ಡಿಪೋ ಪ್ರವೇಶಿಸದೆ ಪರಿಶೀಲನೆ: ಪ್ರವಾಹಕ್ಕೆ ಸಿಲುಕಿದ್ದ ಶಾಂತಿನಗರ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ ಡಿಪೋಗಳಿಗೆ ಭೇಟಿ ನೀಡಲು ಬಂದರು. ಆದರೆ, ಡಿಪೋದೊಳಗೆ ಹೋಗದೆ ರಸ್ತೆಯಲ್ಲಿ ನಿಂತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಸಿಎಂಗೆ ಮಾಹಿತಿ ನೀಡಿದ ಬಿಬಿಎಂಪಿ ಅಧಿಕಾರಿಗಳು, ರಾಜಕಾಲುವೆಗಿಂತ ಕೆಳಮಟ್ಟದಲ್ಲಿ ಡಿಪೋಗಳಿವೆ. ಹೀಗಾಗಿ ರಾಜಕಾಲುವೆಯಲ್ಲಿ ಹೆಚ್ಚು ನೀರು ಹರಿದಾಗ ಡಿಪೋಗೆ ನುಗ್ಗಿ ಪ್ರವಾಹ ಉಂಟಾಗುತ್ತದೆ ಎಂದು ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬಿಎಂಟಿಸಿಯಿಂದ 450 ಮೀ. ಜಾಗ ಪಡೆದು ಹೊಸದಾಗಿ ಕಾಲುವೆ ನಿರ್ಮಾಣ ಮಾಡುವಂತೆ ಆದೇಶಿಸಿದರು.

ಶಾಸಕ ಹ್ಯಾರಿಸ್ ಮೇಲೆ ಜಾರ್ಜ್ ಮುನಿಸು

ಪ್ರತಿವರ್ಷ ಇಲ್ಲಿ ಮಳೆಯಾದಾಗ ಪ್ರವಾಹ ಆಗುತ್ತದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಿಎಂ ಜತೆ ಶಾಂತಿನಗರ ಶಾಸಕ ಹ್ಯಾರೀಸ್ ವಾದ ಮಾಡಲು ಶುರು ಮಾಡಿದರು. ಆಗ ಮಧ್ಯಪ್ರವೇಶಿಸಿದ ಜಾರ್ಜ್, ಮಳೆಯಿಂದಾಗಿರುವ ಹಾನಿ ನಿವಾರಣೆಗೆ 15 ಕೋಟಿ ರೂ. ನೀಡಿದ್ದೇವೆ. ಅದು ಬೇಕೋ? ಬೇಡವೋ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಆಗ ತಣ್ಣಗಾದಂತೆ ಕಂಡ ಹ್ಯಾರೀಸ್, ಅನುದಾನ ಬೇಕು ಸಾರ್. ಆದರೆ, ಹೆಚ್ಚು ಹಣ ಬೇಕು ಎಂದರು. ಜಾರ್ಜ್ ಹಾಗೂ ಹ್ಯಾರೀಸ್ ನಡುವಿನ ಮಾತುಕತೆ ಗಮನಿಸಿದ ಸಿಎಂ, ಹ್ಯಾರೀಸ್ ಕಡೆ ತಿರುಗಿ ‘ಸಹನೆ ಇರಬೇಕು ಕಣಯ್ಯ. ಅಸಹನೆ ಇರಬಾರದು. ಸಮಸ್ಯೆ ನಿವಾರಿಸುವತ್ತ ಗಮನಹರಿಸು’ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದರು.

ಜನರಿಂದ ದೂರ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಗಳಿಗೆ ಹೋದಲೆಲ್ಲ ಜನರಿಂದ ಸಮಸ್ಯೆ ಆಲಿಸದೆ ಕೇವಲ ಪಕ್ಷದ ಮುಖಂಡರಿಂದ ಮಾಹಿತಿ ಪಡೆದರು. ಜನರಿಂದ ದೂರ ಉಳಿದ ಸಿಎಂ ಬಗ್ಗೆ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕೆಲವೆಡೆ ಚುನಾವಣೆಗೆ ಪ್ರಚಾರ ನಡೆಸುತ್ತಿರುವಂತೆ ಕಂಡು ಬಂದಿತು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಹಾರಗಳನ್ನು ಹಾಕಿಸಿಕೊಳ್ಳುತ್ತ ಸಿಎಂ ಕುಶಲೋಪರಿ ಮಾತನಾಡುತ್ತಿದ್ದರು.

ರಾಜಕಾಲುವೆ ಒತ್ತುವರಿ ವೀಕ್ಷಿಸಲೇ ಇಲ್ಲ ಸಿಎಂ ಹೋದಲೆಲ್ಲ ರಾಜಕಾಲುವೆ ಒತ್ತುವರಿಯಾಗಿತ್ತು. ಆದರಲ್ಲೂ ಪೈ ಲೇಔಟ್, ರಾಮಮೂರ್ತಿನಗರದ ಅಂಬೇಡ್ಕರ್ ಕಾಲನಿಯಲ್ಲಿ 33 ಅಡಿಗಳಿರಬೇಕಿದ್ದ ರಾಜಕಾಲುವೆ 3 ಅಡಿಗೆ ಇಳಿಕೆಯಾಗಿತ್ತು. ಆದರೆ, ಸಿಎಂ ಅದನ್ನು ನೋಡಲು ಬಿಡದ ಸ್ಥಳೀಯ ಶಾಸಕ ಬಿ.ಎ. ಬಸವರಾಜು, ಬೇರೆಡೆ ಪರಿಶೀಲಿಸುವಂತೆ ವಾಪಸ್ ಕರೆದುಕೊಂಡು ಬಂದರು.

ನಾವು ಬದುಕಿದ್ದಾಗಲೆ ಕಾಮಗಾರಿ ಮುಗಿಸಿ

ಸಿಎಂ ಅವರಲ್ಲಿ ಎಚ್​ಎಸ್​ಆರ್ ಲೇಔಟ್ ನಿವಾಸಿಗಳ ಸಮಸ್ಯೆಯನ್ನು ಶಾಸಕ ಸತೀಶ್ ರೆಡ್ಡಿ ವಿವರಿಸಿದರು. 30 ವರ್ಷಗಳ ಹಿಂದೆಯೇ ಈ ಬಡಾವಣೆ ನಿರ್ವಣವಾಗಿದೆ. ಆದರೂ ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. 8 ವರ್ಷಗಳಿಂದ ಚರಂಡಿಗಳ ಹೂಳು ತೆಗೆದಿಲ್ಲ. ಜಲಮಂಡಳಿ 5 ವರ್ಷದಿಂದ ಚರಂಡಿ ನಿರ್ಮಾಣ ಕಾಮಗಾರಿ ನಡೆಸುತ್ತಿದೆ ಎಂದರು. ನಾವು ಬದುಕಿದ್ದಾಗಲೇ ಚರಂಡಿ ನಿರ್ಮಾಣ ಪೂರ್ಣಗೊಳಿಸಿ ಎಂದು ನಿವಾಸಿಗಳು ಜೋರಾಗಿ ಕೂಗಿದರು. ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಕರೆದು ಕೂಡಲೇ ಕಾಮಗಾರಿ ಮುಗಿಸುವಂತೆ ಸಿಎಂ ಸೂಚಿಸಿದರು. ಬಳಿಕ ಕೆ.ಆರ್.ಪುರದ ಪೈ ಲೇಔಟ್, ರಾಮಮೂರ್ತಿನಗರದ ಅಂಬೇಡ್ಕರ್ ಕಾಲನಿಗೆ ಸಿಎಂ ಭೇಟಿ ನೀಡಿದರು.

‘ಗುಹೆಯಲ್ಲಿ ವಾಸ’

ಎಚ್​ಎಸ್​ಆರ್ ಲೇಔಟ್​ಗೆ ಭೇಟಿ ನೀಡಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುತ್ತುವರಿದ ನಿವಾಸಿಗಳು, ‘ಜೋರಾಗಿ ಮಳೆ ಬಂದರೆ ಹಾವು, ಸತ್ತ ನಾಯಿಗಳು ಮನೆಯೊಳಗೆ ಬರುತ್ತಿವೆ. ನಾವೆಲ್ಲ ಗುಹೆ, ಕಾಡಲ್ಲಿ ಬದುಕುತ್ತಿದ್ದೇವೆಯೇ’ ಎಂಬ ಬರಹವಿದ್ದ ಫಲವನ್ನು ಪ್ರದರ್ಶಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡರು.

ಕೈ ಕೊಟ್ಟ ಬಸ್

ನಗರ ಪರಿವೀಕ್ಷಣೆಗೆ ಹೊರಟ ಸಿಎಂ ಬಿಎಂಟಿಸಿ ಬಸ್ ಕೈಕೊಟ್ಟಿತು. ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಹೊರಟ ಬಸ್​ನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಅದರಿಂದಾಗಿ ಶಾಸಕ ಬಿ.ಎ. ಬಸವರಾಜು, ಬಿಬಿಎಂಪಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ‘ಸಿಎಂ ಬರುತ್ತಾರೆ ಎಂದರೆ ಯಾವ ಬಸ್ ತರಬೇಕು ಎಂಬುದು ಗೊತ್ತಾಗುವುದಿಲ್ಲವೇ. ಅವರ ಲೆವೆಲ್ ಏನು ಎಂಬುದು ಗೊತ್ತಿಲ್ಲವೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಂತಿನಗರದಲ್ಲಿ ಪರಿಶೀಲನೆ ವೇಳೆ ಎಸಿ ಹಾಳಾಗಿದ್ದ ಬಸ್ ಬದಲಿಸಿ ಹೊಸ ಬಸ್ ಅನ್ನು ಸಿಎಂ ನಗರ ಪ್ರದಕ್ಷಿಣೆಗಾಗಿ ತರಲಾಯಿತು. ಆದರೆ, ರಾಮಮೂರ್ತಿನಗರದ ಅಂಬೇಡ್ಕರ್ ಕಾಲನಿ ಬಳಿ ಬರುತ್ತಿದ್ದಂತೆ ಆ ಬಸ್ ಕೂಡ ಹಾಳಾಗಿ, ಸ್ಟಾರ್ಟ್ ಆಗದಂತಾಯಿತು. ಹೀಗಾಗಿ ಸಿದ್ದರಾಮಯ್ಯ ಅಲ್ಲಿಂದ ಕಾರಿನ ಮೂಲಕ ಬೇರೆ ಕಾರ್ಯಕ್ರಮಕ್ಕೆ ತೆರಳಿದರು.

2 ಕಿ.ಮೀ. ಟ್ರಾಫಿಕ್ ಜಾಮ್

ಸಿಎಂ ತೆರಳುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರ ನಿರ್ಬಂಧಿಸ ಲಾಗಿತ್ತು. ಹೀಗಾಗಿ ಎಲ್ಲೆಡೆ ಸಂಚಾರ ದಟ್ಟಣೆ ಉಂಟಾಗುವಂತಾಗಿತ್ತು. ಪ್ರಮುಖವಾಗಿ ರಾಮಮೂರ್ತಿನಗರದ ಅಂಬೇಡ್ಕರ್ ಕಾಲನಿ ಪರಿಶೀಲನೆ ವೇಳೆ ಐಟಿಐ ಲೇಔಟ್​ನಿಂದ ರಿಂಗ್ ರಸ್ತೆ ಸಂರ್ಪಸುವ 2 ಕಿ.ಮೀ.ಗೂ ಹೆಚ್ಚು ದೂರಕ್ಕೆ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಹೀಗಾಗಿ ಜನರು ಸಿಎಂಗೆ ಹಿಡಿಶಾಪ ಹಾಕುವಂತಾಗಿತ್ತು. ಅದರಲ್ಲೂ ರಾಮಮೂರ್ತಿನಗರದ ರಸ್ತೆಯಲ್ಲಿ ನಿಂತಿದ್ದ ವಾಹನ ಸವಾರರು ಪೊಲೀಸರೆದುರೇ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಸಮಸ್ಯೆ ಆಲಿಸುವುದಕ್ಕೆ ಬರುವ ಬದಲು ಎಲ್ಲಿದ್ದರೋ ಅಲ್ಲೇ ಕೆಲಸ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಅವರು ಬಂದು ನಮ್ಮ ಕೆಲಸ ಹಾಳು ಮಾಡುತ್ತಿದ್ದಾರೆ. ಹೀಗೆ ಸಮಸ್ಯೆ ಉಂಟಾಗುವಂತೆ ಮಾಡುವುದಕ್ಕಾಗಿಯೇ ಸಿಎಂ ಇಲ್ಲಿಗೆ ಬಂದಿದ್ದಾರೆ’ ಎಂದು ಸವಾರರು ಕಿಡಿಕಾರಿದರು.

ಸಿಎಂಗೆ ಟ್ರಾಫಿಕ್ ಬಿಸಿ

ನಿತ್ಯ ಸಿಗ್ನಲ್ ಫ್ರೀನಲ್ಲಿ ಓಡಾಡುತ್ತಿದ್ದ ಸಿಎಂಗೆ ಬುಧವಾರ ನಗರದ ಸಂಚಾರ ದಟ್ಟಣೆ ಸಮಸ್ಯೆ ದರ್ಶನವಾಯಿತು. ಶಾಂತಿನಗರದಲ್ಲಿ ಪರಿಶೀಲನೆ ಮುಗಿಸಿ ಎಚ್​ಎಸ್​ಆರ್ ಲೇಔಟ್ ಕಡೆಗೆ ಸಿಎಂ ಹೊರಟರು. ಆಗ ಲಾಲ್​ಬಾಗ್ ಮುಖ್ಯದ್ವಾರಕ್ಕೆ ಸಿಎಂ ಕುಳಿತಿದ್ದ ಬಸ್ ಬರುತ್ತಿದ್ದಂತೆ ವಾಹನಗಳು ಸಂಚರಿಸಲು ಆರಂಭಿಸಿದವು. ಅದರಿಂದ ಸಿಎಂ ಸಂಚರಿಸುತ್ತಿದ್ದ ಬಸ್ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತಾಯಿತು. ಕೊನೆಗೆ ನಿಮ್ಹಾನ್ಸ್ ಬಳಿ ಪೊಲೀಸರು ಮತ್ತೆ ಸಿಗ್ನಲ್ ಫ್ರೀ ವ್ಯವಸ್ಥೆ ಕಲ್ಪಿಸಿದರು.

ಟ್ರಾಫಿಕ್​ನಲ್ಲಿ ಆಂಬುಲೆನ್ಸ್

ಸಿಎಂ ಹೋದಲೆಲ್ಲ ಸಿಗ್ನಲ್ ಫ್ರೀ ಮಾಡಿದ್ದರಿಂದಾಗಿ 4ಕ್ಕೂ ಹೆಚ್ಚು ಆಂಬುಲೆನ್ಸ್ ಗಳು ಟ್ರಾಫಿಕ್​ನಲ್ಲಿ ಸಿಲುಕಿದವು. ಅದರಲ್ಲೂ ಹೊಸೂರು ರಸ್ತೆಯಲ್ಲಿನ ನಿಮ್ಹಾನ್ಸ್, ಕಿದ್ವಾಯಿ ಸೇರಿ ಇನ್ನಿತರ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಆಂಬುಲೆನ್ಸ್​ಗಳು ಸಂಚಾರ ದಟ್ಟಣೆಗೆ ಸಿಲುಕಿ ಪರದಾಡುವಂತಾಗಿತ್ತು.

 

Leave a Reply

Your email address will not be published. Required fields are marked *

Back To Top