Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಸಿಎಂ ಗಾದಿ ತಿರಸ್ಕರಿಸಿ ಹೃದಯ ಸಿಂಹಾಸನ ಏರಿದ ರಾಜಕುಮಾರ

Friday, 21.04.2017, 3:05 AM       No Comments

| ಗಣೇಶ್ ಕಾಸರಗೋಡು

ಕನ್ನಡದ ವರನಟ ಡಾ. ರಾಜ್​ಕುಮಾರ್ ಅವರು ರಾಜಕೀಯಕ್ಕಿಳಿದಿದ್ದರೆ ಒಂದಲ್ಲ ಒಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದರೆ? ಹಂಡ್ರೆಡ್ ಪರ್ಸೆಂಟ್ ನಿಜ ಎನ್ನುತ್ತಾರೆ ರಾಜ್​ಕುಮಾರ್ ಅವರನ್ನು ತೀರಾ ಹತ್ತಿರದಿಂದ ಬಲ್ಲ ಹೆಸರು ಹೇಳಲಿಚ್ಛಿಸದ ಹಿರಿಯ ಪತ್ರಕರ್ತರೊಬ್ಬರು. ಈಗಲೂ ಆಂಗ್ಲ ಪತ್ರಿಕೆಯೊಂದರ ಅತಿಥಿ ಅಂಕಣಕಾರರಾಗಿರುವ ಆ ಪತ್ರಕರ್ತರು, ‘ರಾಜ್​ಕುಮಾರ್ ಅವರಂಥ ಮತ್ತೊಬ್ಬ ನಿಸ್ವಾರ್ಥ ಕಲಾವಿದನನ್ನು ನನ್ನ ಜೀವಮಾನದಲ್ಲೇ ಕಂಡಿಲ್ಲ. ಅಧಿಕಾರ ಬಂದು ಬಾಗಿಲು ಬಡಿದಾಗಲೂ ಅದನ್ನು ನಯವಾಗಿಯೇ ನಿರಾಕರಿಸಿ ತಾವಾಯಿತು, ತಮ್ಮ ಸಿನಿಮಾ ಬದುಕಾಯಿತೆಂದು ನಿರುಮ್ಮಳವಾಗಿದ್ದ ರಾಜ್​ಕುಮಾರ್ ನನ್ನ ಈ 40 ವರ್ಷಗಳ ಪತ್ರಿಕಾ ಬದುಕಿನಲ್ಲಿ ಕಂಡ ಅದ್ಭುತ..’ ಎನ್ನುತ್ತಾರೆ.

ರಾಷ್ಟ್ರಾದ್ಯಂತ ದೂಷಣೆಗೆ ಒಳಗಾಗಿದ್ದ ತುರ್ತು ಪರಿಸ್ಥಿತಿ ಕಾರಣಕ್ಕಾಗಿ ಇಮೇಜ್ ಕೆಡಿಸಿಕೊಂಡು ಕಳೆಗುಂದಿದ್ದ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭ ಒದಗಿಬಂತು. ಆಗ ಅವರ ವಿರುದ್ಧ ಯಾರು ಸ್ಪರ್ಧಿಸಿದರೆ ಗೆಲ್ಲಬಹುದೆಂಬ ಲೆಕ್ಕಾಚಾರ ನಡೆಯಿತು. ಆ ಹೊತ್ತಿಗೆ ಆಯ್ಕೆಯಾದ ಒಂದೇ ಒಂದು ಹೆಸರೆಂದರೆ ವರನಟ ರಾಜ್​ಕುಮಾರ್. ಜನತಾ ಪಕ್ಷದ ಅತಿರಥ ಮಹಾರಥ ನಾಯಕರೆಲ್ಲ ಇದೇ ರಾಜ್​ಕುಮಾರ್ ಮನೆ ಮುಂದೆ ಕ್ಯೂ ನಿಂತರು, ಓಲೈಸಲೆಂದೇ ಬೆನ್ನು ಬಾಗಿಸಿದರು. ಕಾಡಿದರು, ಬೇಡಿದರು, ಆದರೂ ರಾಜ್​ಕುಮಾರ್ ಈ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಮತ್ತೆ ಮತ್ತೆ ಒತ್ತಡ ಅತಿಯಾದಾಗ ರಾಜ್​ಕುಮಾರ್ ಅವರು ಅನಿವಾರ್ಯವಾಗಿ ಕೆಲವು ದಿನ ಕಾಲ ಯಾರ ಸಂಪರ್ಕಕ್ಕೂ ಸಿಗಲಿಲ್ಲ! ಈ ವಿಷಯವನ್ನು ಆ ಕಾಲದಲ್ಲಿ ವರದಿ ಮಾಡಿದ ಆ ಹಿರಿಯ ಪತ್ರಕರ್ತರು ರಾಜ್ ಬಗ್ಗೆ ಹೀಗೆ ಬರೆಯುತ್ತಾರೆ. ‘ಚುನಾವಣೆಗೆ ಸ್ಪರ್ಧಿಸುವುದು ದೊಡ್ಡ ಪ್ರಶ್ನೆಯಾಗಿರಲಿಲ್ಲ, ಸ್ಪರ್ಧಿಸಿ ಗೆಲ್ಲುವುದೂ ದೊಡ್ಡ ಪ್ರಶ್ನೆಯಾಗಿರಲಿಲ್ಲ. ಆದರೆ ರಾಜಕೀಯ ನನ್ನ ಕ್ಷೇತ್ರವಲ್ಲ ಎಂಬ ನಂಬಿಕೆ ಅವರದ್ದಾಗಿತ್ತು. ಒಮ್ಮೆ ಮಾತಿಗೆ ಸಿಕ್ಕ ರಾಜ್ ನನ್ನ ಮುಂದೆ ಈ ವಿಚಾರ ಹೇಳಿ ನಿಟ್ಟುಸಿರು ಬಿಟ್ಟಿದ್ದರು. ನಾನು ನೆಮ್ಮದಿಯಿಂದಿದ್ದೇನೆ. ಕನ್ನಡ ಜನರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಅದನ್ನು ಜೋಪಾನವಾಗಿ ಉಳಿಸಿಕೊಂಡರೆ ಸಾಕಾಗಿದೆ. ಈ ಅಧಿಕಾರ ಯಾರಿಗೆ ಬೇಕು? ಇದು ಶಾಶ್ವತವೂ ಅಲ್ಲ. ನನಗೆ ಸಿಕ್ಕಿರುವ ಈ ಜನಪ್ರಿಯತೆ ಪೂರ್ವಜನ್ಮದ ಪುಣ್ಯ. ನಾನು ನಟ, ಬಣ್ಣ ಹಚ್ಚಿ ನಟಿಸುವುದು ಮಾತ್ರ ನನಗೆ ಗೊತ್ತು. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ..’ ಈ ಅರ್ಥ ಬರುವ ರಾಜ್ ಮಾತುಗಳನ್ನು ಅದೇ ಪತ್ರಕರ್ತರು, ಆ ದಿನಗಳ ತಮ್ಮ ಅಂಕಣದಲ್ಲಿ ಬರೆದಿದ್ದರು. ಆ ಚುನಾವಣೆ ಸಂದರ್ಭದಲ್ಲಿ ಕೆಲ ದಿನ ಅದೃಶ್ಯರಾಗಿದ್ದ ರಾಜ್ ಮತ್ತೆ ಮತ್ತೆ ಮಹಾಜನತೆ ಮುಂದೆ ಕಾಣಿಸಿಕೊಂಡಿದ್ದು ಚುನಾವಣೆ ಫಲಿತಾಂಶ ಪ್ರಕಟವಾಗಿ ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಗೆದ್ದ ನಂತರವೇ! ಸ್ವಾತಂತ್ರ್ಯ ಪೂರ್ವದಲ್ಲೇ ಜನಿಸಿದ ರಾಜ್ ಅವರಿಗೆ ಸಹಜವಾಗಿ ನೆಹರೂ, ಗಾಂಧಿಯವರಂಥ ರಾಷ್ಟ್ರನಾಯಕರ ಬಗ್ಗೆ ವಿಪರೀತ ಗೌರವವಿತ್ತು. ಆದರೆ ಅವರೆಂದೂ ಪಕ್ಷ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಒಂದು ವೇಳೆ ರಾಜ್​ಕುಮಾರ್ ಅವರು ಚಿಕ್ಕಮಗಳೂರಿನ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಇಂದಿರಾಗಾಂಧಿ ವಿರುದ್ಧ ಗೆದ್ದಿರುತ್ತಿದ್ದರೆ ಏನಾಗುತ್ತಿತ್ತು? ಈ ಪ್ರಶ್ನೆಯನ್ನು ಆ ಹಿರಿಯ ಪತ್ರಕರ್ತರಿಗೆ ಕೇಳಿದಾಗ ಅವರು ನಸುನಕ್ಕು ಉತ್ತರಿಸಿದ್ದು ಹೀಗೆ: ‘ರಾಜ್​ಕುಮಾರ್ ಮುಂದೊಮ್ಮೆ ಮುಖ್ಯಮಂತ್ರಿಯಾಗುತ್ತಿದ್ದರು! ಚಿಕ್ಕಮಗಳೂರಿನ ಗೆಲುವೊಂದೇ ಇದಕ್ಕೆ ಆಧಾರವಲ್ಲ. ನಂತರದ ವಿಧಾನಸಭಾ ಚುನಾವಣೆಯಲ್ಲೂ ರಾಜ್ ಸ್ಪರ್ಧಿಸುವಂತೆ ರಾಜಕೀಯ ಪಕ್ಷಗಳಿಂದ ಒತ್ತಡ ಬರುತ್ತಿತ್ತು. ಆಗಲೂ ಅನಿವಾರ್ಯವಾಗಿ ರಾಜ್ ಸ್ಪರ್ಧಿಸಬೇಕಾಗುತ್ತಿತ್ತು. ಗೆಲುವು ನಿಶ್ಚಿತ. ಯಾವ ಪಕ್ಷದಿಂದ ರಾಜ್ ಸ್ಪರ್ಧಿಸುತ್ತಿದ್ದರೋ ಆ ಪಕ್ಷದಲ್ಲಿ ಇವರಿಗಿಂತ ಹೆಚ್ಚು ಜನಾಕರ್ಷಣೆಯ ಮತ್ತೊಬ್ಬ ವ್ಯಕ್ತಿ ಬೇರೆ ಯಾರೂ ಇರುತ್ತಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜ್ ಅವರೇ ಮೊದಲ ಮತ್ತು ಕೊನೆಯ ಆಯ್ಕೆಯಾಗಿರುತ್ತಿದ್ದರು. ಆದರೆ ಕರ್ನಾಟಕವೆಂದರೆ ಅದು ಆಂಧ್ರಪ್ರದೇಶವಲ್ಲ ಅಥವಾ ತಮಿಳುನಾಡಲ್ಲ. ಆಗ ಆಂಧ್ರದಲ್ಲಿ ಎನ್.ಟಿ. ರಾಮರಾಯರು ಮುಖ್ಯಮಂತ್ರಿಯಾಗಿದ್ದರು. ತಮಿಳುನಾಡಲ್ಲಿ ಎಂ.ಜಿ. ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದರು. ರಾಜ್​ಕುಮಾರ್ ಮನಸ್ಸು ಮಾಡಿದ್ದಿದ್ದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಪದವಿ ಅವರಿಗಾಗಿಯೇ ಕಾಯುತ್ತಿತ್ತು! ಆದರೆ ರಾಜಕೀಯದ ಕುರಿತ ಅವರ ನಿರಾಸಕ್ತಿಯೇ ಅವರನ್ನು ಒಬ್ಬ ಪರಿಪಕ್ವ ಮನುಷ್ಯನನ್ನಾಗಿಯೇ ಉಳಿಸಿಕೊಂಡಿತು…!

ಎರಡು ಬಹುಮುಖ್ಯ ಸಂದರ್ಭಗಳಲ್ಲಿ ರಾಜ್​ಕುಮಾರ್ ಅವರ ಜನಪ್ರಿಯತೆ ಆಕಾಶದೆತ್ತರಕ್ಕೆ ಏರಿತು. ಕನ್ನಡ ನಾಡು ನುಡಿ ಸಂಸ್ಕೃತಿಯ ವಿಚಾರ ಬಂದಾಗ ರಾಜ್​ಕುಮಾರ್ ಎಂದೂ ಮೌನವಾಗಿರುತ್ತಿರಲಿಲ್ಲ. ಅವುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಿದ ಸಾಕಷ್ಟು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಇಂಥದ್ದೊಂದು ಅವಕಾಶ ರಾಜ್ ಅವರಿಗೆ ಸಿಕ್ಕಿದ್ದು ಅರವತ್ತರ ದಶಕದಲ್ಲಿ. ಕರ್ನಾಟಕದಲ್ಲಿ ನಡೆದ ಭೀಕರ ಪ್ರವಾಹ ಮತ್ತು ಅದರಿಂದುಂಟಾದ ಸಂತ್ರಸ್ತರ ಬವಣೆಗಳನ್ನು ಕಣ್ಣಾರೆ ಕಂಡು ಕಣ್ಣೀರಾದ ರಾಜ್, ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಟಿಸುತ್ತಾ ಕೂರಲಿಲ್ಲ. ಬದಲಿಗೆ ಮೇಕಪ್ ಕಳಚಿಟ್ಟು ನಿಜ ಬದುಕಿನ ಹೀರೋನಂತೆ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಬೀದಿಗಿಳಿದರು. ಕನ್ನಡದ ನೂರಾರು ಮಂದಿ ಕಲಾವಿದರು ರಾಜ್ ಅವರಿಗೆ ಸಾಥ್ ನೀಡಿದರು. ಅದೊಂದು ಆ ಕಾಲದ ಮಹಾನ್ ಚಳವಳಿಯಾಗಿತ್ತು. ಜನರೂ ಸ್ಪಂದಿಸಿ ಕೋಟ್ಯಂತರ ರೂಪಾಯಿಗಳನ್ನು ದಾನ ಮಾಡಿದರು. ಇದೇ ವೇಳೆ ರಾಜ್​ಕುಮಾರ್ ಅವರ ಜನಪ್ರಿಯತೆಯ ಸತ್ವಪರೀಕ್ಷೆಯೂ ನಡೆದು ಹೋಯಿತು. ಜನ ಮುಗಿಬಿದ್ದು ರಾಜ್​ಕುಮಾರ್ ಅವರನ್ನು ನೋಡಿದರು. ಫೋಟೋ ತೆಗೆಸಿಕೊಂಡರು, ಮೈಮುಟ್ಟಿ ಆನಂದಿಸಿದರು. ಜೇಬಿನಲ್ಲಿರುವುದನ್ನು ರಾಜ್ ಜೋಳಿಗೆಗೆ ಹಾಕಿ ಸಂಭ್ರಮಿಸಿದರು.

ಇದರ ಪರಿಣಾಮವೆಂದರೆ ರಾಜಕಾರಣಿಗಳಿಗಿಂತ ನಾಡಿನ ಜನತೆಯ ಮೇಲೆ ನೇರ ಪ್ರಭಾವ ಬೀರುವ ಶಕ್ತಿಯಾಗಿ ರಾಜ್​ಕುಮಾರ್ ರೂಪುಗೊಂಡರು. ಎಷ್ಟೊಂದು ದೊಡ್ಡಮಟ್ಟದ ಪ್ರಭಾವವೆಂದರೆ ಆಯಾ ಸಂದರ್ಭಗಳ ಮುಖ್ಯಮಂತ್ರಿಗಳಿಗಿಂತಲೂ ಶಕ್ತಿವಂತರಾಗಿ ರಾಜ್ ಪ್ರಕಟಗೊಂಡರು. ರಾಜಕಾರಣದಲ್ಲಿರುವ ಎಲ್ಲರೂ ಇವರಿಗೆ ಮಿತ್ರರಾಗಿದ್ದರು, ಬಂಧುವಾಗಿದ್ದರು. ಆದರೆ ನಾಡು-ನುಡಿಯ ವಿಚಾರಕ್ಕೆ ಬಂದಾಗ ಮಾತ್ರ ಅವರೆದುರೇ ಸಿಡಿದು ನಿಂತು ಸೆಡ್ಡು ಹೊಡೆಯುತ್ತಿದ್ದರು. ಬೀದಿಗಿಳಿದು ಪ್ರತಿಭಟಿಸುತ್ತಿದ್ದರು.

ರಾಮಕೃಷ್ಣ ಹೆಗಡೆಯವರಾಗಲೀ, ವೀರಪ್ಪ ಮೊಯ್ಲಿಯವರಾಗಲೀ, ಗುಂಡೂರಾವ್ ಅವರಾಗಲೀ ಅಥವಾ ಬಂಗಾರಪ್ಪನವರೇ ಆಗಲಿ.. ಅವರವರ ಕಾಲಕ್ಕೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಯಾರ ವೈರತ್ವ ಕಟ್ಟಿಕೊಂಡರೂ, ರಾಜ್​ಕುಮಾರ್ ಅವರ ಸ್ನೇಹವನ್ನು ಸಂಪಾದಿಸಿಕೊಳ್ಳುತ್ತಿದ್ದರು!

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೇ ರಾಜ್​ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದರೆ ಅದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದ್ದಾಗಲೂ ಕನ್ನಡ ನಾಡು-ನುಡಿಗಾಗಿ ಹೋರಾಡಲು ರಾಜ್​ಕುಮಾರ್ ಹಿಂಜರಿಯಲಿಲ್ಲ. ಗೋಕಾಕ್ ವರದಿ ಜಾರಿಗೊಳಿಸುವಂತೆ ರಾಜ್​ಕುಮಾರ್ ಪಟ್ಟು ಹಿಡಿದು ನಾಡಿನಾದ್ಯಂತ ಹೋರಾಡಿದ್ದು ಅದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ವಿಶೇಷವೆಂದರೆ ಗೋಕಾಕ್ ವರದಿ ಜಾರಿಗೆ ಸಂಬಂಧಿಸಿ ನಡೆದ ಆ ಹೋರಾಟ ಅಂದಿನ ಗುಂಡೂರಾಯರ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವಷ್ಟು ತೀವ್ರವಾಗಿತ್ತು. ಈ ಘಟನೆಯ ನಂತರ ಅಧಿಕಾರಕ್ಕೇರಿದ ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರು, ಓಲೈಸಲೆಂದೇ ಕನ್ನಡ ವಾಕ್ಚಿತ್ರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಅತ್ಯಂತ ಅದ್ದೂರಿಯಾಗಿ ರಾಜ್​ಕುಮಾರ್ ಅವರನ್ನು ಸನ್ಮಾನಿಸಿ ಬೀಗಿದ ಘಟನೆಯೂ ನಡೆದಿದೆ. ಈ ಮೂಲಕ ಹಾಕಿದ ಗಾಳಕ್ಕೆ ರಾಜ್ ಸಿಕ್ಕಿಹಾಕಿಕೊಂಡರೆಂದೇ ಹೆಗಡೆಯವರು ಭ್ರಮಿಸಿದ್ದರು. ಆದರೆ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಜಾರಿಯ ವಿಷಯ ಬಂದಾಗ ರಾಜ್​ಕುಮಾರ್ ಅದೇ ಸರ್ಕಾರದ ವಿರುದ್ಧವೇ ರಣಕಹಳೆ ಊದಿದ್ದರು! ಇದೇ ಸಮಯದಲ್ಲಿ ಹೆಗಡೆಯವರು ಒಂದು ಜಾಣತನ ಪ್ರದರ್ಶಿಸಲು ಹೊರಟರು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರು ರಾಜ್​ಕುಮಾರ್ ಅವರಿಗೆ ತುಂಬ ಹತ್ತಿರದ ಸ್ನೇಹಿತರು ಎಂದರಿತ ಹೆಗಡೆಯವರು, ಎಂ.ಜಿ.ಆರ್. ಮೂಲಕ ರಾಜ್ ಅವರಿಗೆ ಒಂದು ವಿಚಿತ್ರ ಸಂದೇಶ ರವಾನಿಸಿದರು. ಹೆಗಡೆ ಸರ್ಕಾರಕ್ಕೆ ದಯವಿಟ್ಟು ಸಹಕರಿಸಿ ಎನ್ನುವುದು ಎಂ.ಜಿ.ಆರ್. ಸಂದೇಶ. ಆದರೆ ರಾಜ್ ಅವರು ಈ ಸಂದೇಶಕ್ಕೆ ಕಿವಿಗೊಡದೆ ಕನ್ನಡ ನಾಡಿನ ಜನರಿಗೆ ಹೋರಾಡುತ್ತಲೇ ಮುಂದುವರಿದರು.

ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ರಾಜ್ಯಾದ್ಯಂತ ಕಾವೇರಿ ನೀರಿನ ವಿವಾದ ಭುಗಿಲೆದ್ದಿತು. ವರಸೆಯಲ್ಲಿ ರಾಜ್ ಅವರಿಗೆ ಬಂಗಾರಪ್ಪ ಬೀಗರು. ಆದರೂ ಕಾವೇರಿಗಾಗಿ ಜನರ ಪರ ನಿಂತು ಹೋರಾಡಿದರು ರಾಜ್​ಕುಮಾರ್. ಈ ಸಂದರ್ಭದಲ್ಲೇ ಬಂಗಾರಪ್ಪನವರ ನೇತೃತ್ವದಲ್ಲಿ ನಡೆದ ಚಿತ್ರೋತ್ಸವದ ಉದ್ಘಾಟನೆಗಾಗಿ ರಾಜ್ ಅವರನ್ನು ಆಹ್ವಾನಿಸಲಾಯಿತು. ಆದರೆ ಕಾವೇರಿ ಹೋರಾಟದಲ್ಲಿ ತೊಡಗಿದ್ದ ರಾಜ್ ತಮ್ಮ ಬೀಗರ ಈ ಆಹ್ವಾನವನ್ನು ತಿರಸ್ಕರಿಸಿದ್ದು ಮಾತ್ರವಲ್ಲ, ಇಡೀ ಚಿತ್ರೋತ್ಸವವನ್ನು ಬಹಿಷ್ಕರಿಸಿ ತಮ್ಮ ಜನಪರ ನಿಲುವನ್ನು ಬಂಗಾರಪ್ಪನವರಿಗೆ ನೇರವಾಗಿ ಮತ್ತು ಸ್ಪಷ್ಟವಾಗಿ ತೋರಿಸಿಕೊಟ್ಟರು. ಆದರೂ ಅದೇ ಬಂಗಾರಪ್ಪನವರ ಸರ್ಕಾರ ರಾಜ್​ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

ನಂತರದ ವರ್ಷಗಳಲ್ಲಿ ವೀರಪ್ಪ ಮೊಯ್ಲಿ ಸರ್ಕಾರ ಬಂತು. ಈ ಸಂದರ್ಭದಲ್ಲಿ ರಾಜ್​ಕುಮಾರ್ ಅವರಿಗೆ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಲಾಯಿತು. ವೀರಪ್ಪ ಮೊಯ್ಲಿಯವರ ಕಥೆಯಾಧಾರಿತ ‘ಸಾಗರದೀಪ’ ಸಿನಿಮಾವೊಂದರಲ್ಲಿ ರಾಜ್ ಪುತ್ರ ರಾಘವೇಂದ್ರ ರಾಜ್​ಕುಮಾರ್ ಅಭಿನಯಿಸಿದ್ದರು.

ಹೀಗೆ ಕಾಲದಿಂದ ಕಾಲಕ್ಕೆ ಬದಲಾದ ಸರ್ಕಾರಗಳೆಲ್ಲಾ ವರನಟ ರಾಜ್​ಕುಮಾರ್ ಅವರ ನಿಲುವಿಗೆ ಪೂರಕವಾಗಿ ಸ್ಪಂದಿಸಿದವೇ ಹೊರತು ವಿರುದ್ಧ ದಿಕ್ಕಿನಲ್ಲಿ ನಿಲ್ಲುವ ಅಪಾಯ ತಂದುಕೊಳ್ಳಲಿಲ್ಲ. ಒಂದೇ ಒಂದು ಕ್ಷಣ ಮನಸ್ಸು ಮಾಡಿದ್ದರೂ ಸಾಕಿತ್ತು; ರಾಜ್​ಕುಮಾರ್ ಈ ರಾಜ್ಯದ ಮುಖ್ಯಮಂತ್ರಿಯಾಗಿ ಸಿಂಹಾಸನವನ್ನೇರಬಹುದಿತ್ತು. ಆದರೆ, ಅವರಿಗೆ ಅಂಥ ಆಕಾಂಕ್ಷೆ ಇರಲೇ ಇಲ್ಲ. ಆದ್ದರಿಂದಲೇ ಈ ರಾಜಕುಮಾರ ಕನ್ನಡ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದು ಅಮರರಾದರು.

(ಮಾಹಿತಿ, ಚಿತ್ರ: ರಾಜ್​ಕುಮಾರ್ ಒಂದು ಬೆಳಕು)

 (ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

Leave a Reply

Your email address will not be published. Required fields are marked *

Back To Top