Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಸಾಮಾಜಿಕ ಆರೋಗ್ಯಕ್ಕೆ ಪಂಥಗಳು ಮುಳುವಾಗದಿರಲಿ

Monday, 11.09.2017, 3:03 AM       No Comments

ರಾಜಕೀಯ ಹಿತಾಸಕ್ತಿಯ ಈಡೇರಿಕೆಗಾಗಿ ದೇವಮಾನವರ ನೇತೃತ್ವದ ಪಂಥಗಳ ಬಳಕೆಯಾಗುತ್ತಿರುವುದು ದಶಕಗಳ ಪರಿಪಾಠ. ಈ ಚಾಳಿಯು ‘ಮೈಗಳ್ಳ ರಾಜಕಾರಣ’ದ ರೋಗಲಕ್ಷಣ ಎನ್ನದೆ ವಿಧಿಯಿಲ್ಲ. ನಮ್ಮ ಸಮಾಜದ ಸಹಜ ಗುಣ-ವೈಶಿಷ್ಟ್ಯಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ, ಸಾರ್ವಜನಿಕ ಕ್ಷೇತ್ರದಲ್ಲಿ ವಿಚಾರಪರತೆಗೆ ಇನ್ನಾದರೂ ಆಸ್ಪದ ದೊರೆಯಬೇಕಿದೆ.

| ವರುಣ್ ಗಾಂಧಿ

ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಅತ್ಯಾಚಾರ ಆರೋಪದ ಮೇಲೆ ಜೈಲಿಗೆ ಕಳಿಸಿರುವುದು ಗೊತ್ತೇ ಇದೆ. ಸುಮಾರು 800 ಎಕರೆ ವ್ಯಾಪಿಸಿರುವ ಅವರ ಸಿರ್ಸಾ ಆಶ್ರಮದಲ್ಲಿ ಈಗ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಅಲ್ಲಿನ ಐಷಾರಾಮಿ ವ್ಯವಸ್ಥೆಗಳು, ಸುರಂಗ ಮತ್ತಿತರ ಸಂಗತಿಗಳು ಮಾಧ್ಯಮಗಳಲ್ಲಿ ಪ್ರಮುಖವಾಗಿ ವರದಿಯಾಗುತ್ತಿವೆ. ನಾನು ಇಲ್ಲಿ ಗುರುಮೀತ್ ಬಗ್ಗೆ ಅಥವಾ ನಿರ್ದಿಷ್ಟವಾಗಿ ಅವರ ಸಂಘಟನೆ ಬಗ್ಗೆ ರ್ಚಚಿಸಲು ಹೋಗುತ್ತಿಲ್ಲ. ಆದರೆ ಭಾರತದಲ್ಲಿ ಕೆಲ ಪಂಥಗಳು ಹೇಗೆ ವಿಕಾಸಗೊಂಡವು ಹಾಗೂ ಕ್ರಮೇಣ ಅವನ್ನು ಹೇಗೆ ರಾಜಕೀಯವಾಗಿಯೂ ಬಳಸಲಾಗುತ್ತಿದೆ ಎಂಬುದು ನನ್ನ ಈ ಲೇಖನದ ವಸ್ತು.

‘ಡೇರಾ’ ಎಂದರೆ ‘ಜನರು ನೆಲೆಸಿದ ಒಂದು ತಾಣ’ ಎಂಬುದಾಗಿ ಒಂದು ಕಾಲಕ್ಕೆ ವ್ಯಾಖ್ಯಾನಿಸಲಾಗುತ್ತಿತ್ತು. ತರುವಾಯದಲ್ಲಿ ಈ ಅರ್ಥವೂ ಮತ್ತಷ್ಟು ವಿಕಸನಗೊಂಡು, ಸೂಫಿ ಸಂತರೂ ಸೇರಿದಂತೆ ಆಧ್ಯಾತ್ಮಿಕ ವ್ಯಕ್ತಿಗಳು ಜಮಾವಣೆಗೊಳ್ಳುವ ಒಂದು ಸ್ಥಳ ಎನಿಸಿಕೊಂಡಿತು. ಚಾವಣಿಗೆ ಹುಲ್ಲು ಹೊದೆಸಲಾಗಿರುವ ಒಂದು ಗುಡಿಸಲಿನಂತೆಯೋ ಅಥವಾ ಒಂದು ಆವರಣಗೋಡೆ ಮತ್ತು ಕಚ್ಚಾ ಮೇಲ್ಚಾವಣಿ ಹೊಂದಿರುವ ಮನೆಯಂತೆಯೋ ಇಂಥ ‘ಡೇರಾ’ಗಳು ಇರುತ್ತಿದ್ದವು. ಮಿಕ್ಕಂತೆ, ದೇವಾಲಯ ಹಾಗೂ ಗುರುದ್ವಾರಗಳ ವಾಸ್ತುಶಿಲ್ಪ ಶೈಲಿಯ ಅಂಶಗಳು ಸಂಯೋಜಿತಗೊಂಡಿರುವ ರಚನೆಗಳಾಗಿ ಇಂಥ ಇತರ ನೆಲೆಗಳು ಕಾಣುತ್ತಿದ್ದವು. ಇತ್ತೀಚಿನ ದಿನಗಳಲ್ಲಂತೂ, ಇಂಥ ನೆಲೆಗಳಿಗೆ ಹವಾನಿಯಂತ್ರಿತ ಸಭಾಂಗಣಗಳ ಮತ್ತು ಅರಮನೆಯಂಥ ಸೌಧಗಳ ಸ್ವರೂಪವೂ ದಕ್ಕಿಬಿಟ್ಟಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಎನ್ನಿ.

ಪಾಶ್ಚಾತ್ಯ ದೇಶಗಳಲ್ಲಾದರೆ ಇಂಥ ಸಂಘಟನೆಗಳನ್ನು ‘ಪಂಥಗಳು‘ ಎಂಬುದಾಗಿ ವಿಶಿಷ್ಟವಾಗಿ ವ್ಯಾಖ್ಯಾನಿಸಲಾಗುತ್ತದೆ. ನಿಷ್ಕೃಷ್ಟವಾಗಿರುವ ಧಾರ್ವಿುಕ, ಸಾಮಾಜಿಕ ಮತ್ತು ದಾರ್ಶನಿಕ ನಂಬಿಕೆಗಳನ್ನೂ, ಸರ್ವೆಸಾಮಾನ್ಯವಾದ ಹಿತಾಸಕ್ತಿಯನ್ನೂ ಹಾಗೂ ಕೆಲವೊಮ್ಮೆ ನಿರ್ದಿಷ್ಟ ವ್ಯಕ್ತಿ, ಗುರಿ ಅಥವಾ ಉದ್ದೇಶದೆಡೆಗೆ ಅತಿರೇಕದ ಭಕ್ತಿಯನ್ನೂ ಹೊಂದಿರುವ ಒಂದು ಸಾಮಾಜಿಕ ಗುಂಪಿಗೆ ‘ಪಂಥ’ ಎಂದು ಕರೆಯುವುದು ಪಾಶ್ಚಾತ್ಯರ ವಾಡಿಕೆ. ಇನ್ನು ಕೆಲವು ಪಂಥಗಳು ವೈವಿಧ್ಯಮಯ ಸ್ವರೂಪ ಮತ್ತು ಆಕಾರಗಳಲ್ಲಿ ವ್ಯಕ್ತವಾಗುವುದೂ ಇದೆ. ಈ ಪೈಕಿ ಕೆಲ ಪಂಥಗಳು ಮೂಲಭೂತವಾಗಿ ‘ವಿನಾಶಕ‘ ಅಥವಾ ‘ರಚನಾತ್ಮಕವಲ್ಲದ‘ ಉದ್ದೇಶಗಳನ್ನು ಹೊಂದಿದ್ದು, ಪಂಥದ ಸದಸ್ಯರು ಅವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವೂ ಇರುತ್ತದೆ; ಹಿಂಬಾಲಕರ ಸಂಖ್ಯೆ ಹೆಚ್ಚಿದಂತೆ ‘ದಿವ್ಯಶಕ್ತಿಯುಳ್ಳ’ ಪಂಥದ ನಾಯಕರು ಅಧಿಕಾರಶಕ್ತಿಯನ್ನೂ ಹೆಚ್ಚಿಸಿಕೊಂಡು ನೀತಿಭ್ರಷ್ಟರಾಗುವುದರಿಂದಾಗಿ, ದೈಹಿಕ ಮತ್ತು ಮಾನಸಿಕ ಉಪದ್ರವಗಳಿಗೆ, ಅಷ್ಟೇಕೆ ಕೆಲವೊಮ್ಮೆ ಲೈಂಗಿಕ ಕಿರುಕುಳಕ್ಕೂ ಕಾರಣವಾಗುವುದು ಇಂಥ ಪಂಥಗಳಲ್ಲಿ ಕಾಣಬರುವ ದೃಶ್ಯ. ಅನೇಕ ಸಲ, ವರ್ತನೆಯಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಗಣನೀಯ ಬದಲಾವಣೆಗಳಾಗುವುದಕ್ಕೂ ಇಂಥ ಪಂಥಗಳು ಕಾರಣವಾಗುವುದು, ಅವುಗಳ ಸದಸ್ಯರು ತಮ್ಮ ವ್ಯಕ್ತಿಗತ ಅಸ್ಮಿತೆಯನ್ನೇ ಕಳೆದುಕೊಂಡು ಕುಟುಂಬದಿಂದ, ಸಮಾಜದಿಂದ ದೂರವಾಗಿಬಿಡುವುದು ಸಾಮಾನ್ಯ ದೃಶ್ಯವೆನಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. ಅಮೆರಿಕದ ಇಂಡಿಯಾನಾ ಸಂಸ್ಥಾನದ ರಾಜಧಾನಿ ಇಂಡಿಯಾನಾಪೊಲಿಸ್​ನಲ್ಲಿ ಜಿಮ್ ಜೋನ್ಸ್ ಎಂಬಾತ 1955ರಲ್ಲಿ ಹುಟ್ಟುಹಾಕಿದ ‘ಖಜಛಿ ಕಛಿಟಟ್ಝಛಿಠ ಖಛಿಞಟ್ಝಛಿ ಟ್ಛ ಠಿಜಛಿ ಈಜಿಠ್ಚಜಿಟ್ಝಛಿಠ ಟ್ಛ ಇಜ್ಟಜಿಠಠಿ’ ಎಂಬ ಆಂದೋಲನವು 1978ರ ನವೆಂಬರ್ 18ರಂದು, ಗಯಾನದಲ್ಲಿ ಸತ್ತ 276 ಮಕ್ಕಳೂ ಸೇರಿದಂತೆ 918 ಮಂದಿಯ ಸಾಮೂಹಿಕ ಆತ್ಮಹತ್ಯೆಯಾಗುವುದಕ್ಕೆ ಉತ್ತೇಜಿಸಿತು; ಸಯನೈಡ್ ಬೆರೆಸಲಾದ, ದ್ರಾಕ್ಷಿಯ ಪರಿಮಳವಿರುವ ‘ಓಟಟ್ಝ ಅಜಿಛ’ ಎಂಬ ಪೇಯವನ್ನು ಸಾರ್ವತ್ರಿಕವಾಗಿ ಕುಡಿದದ್ದೇ ಈ ದುರಂತಕ್ಕೆ ಕಾರಣವಾಗಿತ್ತು ಎಂಬುದು ನಂತರ ತಿಳಿದುಬಂತು.

ಭಾರತದಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಹೊಸಪೀಳಿಗೆಯ ಗುರುಗಳು ಮತ್ತು ಪಂಥಗಳ ಬೆಳವಣಿಗೆ/ಹರಡಿಕೆಯಾಗುತ್ತಿರುವುದು ಗೊತ್ತಿರುವ ಸಂಗತಿಯೇ; ಸಾಂಪ್ರದಾಯಿಕ ಧರ್ಮಗ್ರಂಥಗಳ ಸರಳೀಕೃತ ವ್ಯಾಖ್ಯಾನದೊಂದಿಗೆ ಗುರುಗಳೆನಿಸಿಕೊಂಡವರ ವ್ಯಕ್ತಿಗತ ಬೋಧನೆಗಳನ್ನೂ ಸೇರಿಸಿ, ಅದಕ್ಕೊಂದಿಷ್ಟು ಯೋಗ, ಧ್ಯಾನ ಮತ್ತು ಸಾಮಾಜಿಕ ಕಾರ್ಯದ ಲೇಪವನ್ನೂ ಕೊಟ್ಟು, ವಿವಿಧ ಸಾಮಾಜಿಕ ನಿಮಿತ್ತಗಳಿಗೆ ಆಧ್ಯಾತ್ಮಿಕ ಆಧಾರ ಮತ್ತು ಅರ್ಥವನ್ನು ಒದಗಿಸುವುದು ಇಂಥ ಆಂದೋಲನಗಳ ಆಶಯವಾಗಿರುತ್ತದೆ. ಈ ಪೈಕಿಯ ಕೆಲ ಪಂಥಗಳು ಸಾಮಾಜಿಕ ಅನಿಷ್ಟಗಳ ವಿರುದ್ಧ ಸೆಣಸಾಡುವ ನಿಟ್ಟಿನಲ್ಲಿ ಆರೋಗ್ಯಕರವಾಗಿಯೂ ಪರಿಣಾಮಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮತ್ತೆ ಕೆಲವು ತಮ್ಮ ನಾಯಕನ ‘ಆತ್ಮವೈಭವೋನ್ಮಾದ‘ ಅಥವಾ ಸ್ವಪ್ರತಿಷ್ಠೆಯ ಹುಚ್ಚಿನ ಪ್ರವರ್ತನೆಯ ಮಾಗೋಪಾಯಗಳಾಗಿಬಿಡುವುದು ದುರಂತ ಎನ್ನದೆ ವಿಧಿಯಿಲ್ಲ. ವಾಯವ್ಯ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣಗಳಲ್ಲಿ 9000ಕ್ಕೂ ಹೆಚ್ಚಿನ ‘ಡೇರಾಗಳು’ ವ್ಯಾಪಿಸಿದ್ದು, ಹಿಂದುಳಿದ ವರ್ಗಗಳಿಗೆ ಸೇರಿರುವ ಜನರು ಅಂಗೀಕರಿಸಲ್ಪಟ್ಟು ತಂತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳುವುದಕ್ಕೆಂದು ಇರುವ ಸುರಕ್ಷಿತ ತಾಣಗಳೆನಿಸಿಬಿಟ್ಟಿವೆ. ಇನ್ನು ಕೆಲವಂತೂ, ತಮ್ಮ ನಾಯಕನಿಗಿರುವ ಪ್ರಭಾವಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಲೋ ಎಂಬಂತೆ, ಅಕ್ಷರಶಃ ಸೈನ್ಯಯೋಗ್ಯ ರೀತಿಯಲ್ಲಿ ರಕ್ಷಣಾಕೋಟೆಯನ್ನು ನಿರ್ವಿುಸಿಕೊಂಡುಬಿಟ್ಟಿವೆ. ಇಂಥ ನೆಲೆಗಳಲ್ಲಿ ಕಂಡುಬರುವ ವಿಲಕ್ಷಣ ಗುರುಗಳಿಗೇನೂ ಕಮ್ಮಿಯಿಲ್ಲ; 1980ರ ದಶಕದಲ್ಲಿದ್ದ ದೇವ್​ರಹಾ ಬಾಬಾ, ಮರದ ಮೇಲೆ ಕುಳಿತುಕೊಂಡಿದ್ದು ಅನುಗ್ರಹ ಬಯಸಿ ಬರುವ ಭಕ್ತರ ತಲೆಗೆ ಕಾಲಿನಿಂದ ಒದೆಯುವ ಪರಿಪಾಠಕ್ಕೆ ಖ್ಯಾತರಾಗಿದ್ದುದು ಇದಕ್ಕೊಂದು ಉದಾಹರಣೆ.

ಭಾರತವು ಸಾಮಾಜಿಕ ಸುಧಾರಣೆಯ ಒಂದು ಇತಿಹಾಸವನ್ನೇ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಈ ಹೆಗ್ಗಳಿಕೆಯ ಹೊರತಾಗಿಯೂ, ‘ಏಕ-ವ್ಯಕ್ತಿತ್ವಗಳನ್ನು’ ಆಧರಿಸಿದ ಪಂಥಗಳು ಹಾಗೂ ಆಂದೋಲನಗಳು ಭಾರತದಲ್ಲಿ ವ್ಯಾಪಿಸಿಬಿಟ್ಟಿರುವುದು ವ್ಯಂಗ್ಯ ಎಂದೇ ಹೇಳಬೇಕಾಗುತ್ತದೆ. ರಾಜಾರಾಮ ಮೋಹನ್ ರಾಯ್ (1772-1833) ಚಾಲನೆ ನೀಡಿದ ‘ಬಂಗಾಳ ಪುನರುಜ್ಜೀವನ’ವು, ಧಾರ್ವಿುಕ ಮತ್ತು ಸಾಮಾಜಿಕ ಸುಧಾರಕರು, ಪತ್ರಕರ್ತರು, ವಿಜ್ಞಾನಿಗಳು ಮತ್ತು ಬರಹಗಾರರನ್ನು ಒಡಲಲ್ಲಿರಿಸಿಕೊಂಡು ಬಂಗಾಳಿಯರ ದೃಷ್ಟಿಕೋನ/ಭವಿಷ್ಯವನ್ನು ರೂಪಾಂತರಿಸುವ ಒಂದು ಮಹತ್ತರ ಆಂದೋಲನವಾಗಿತ್ತು. ಅಲ್ಲಿನ ‘ಯುವ ಬಂಗಾಳ ಆಂದೋಲನ‘ವು ಮೇಲ್ವರ್ಗದ ಸುಶಿಕ್ಷಿತ ಹಿಂದೂಗಳಿಗೆ ಸಂಬಂಧಿಸಿದಂತಿರುವ ಸಾರ್ವಜನಿಕ ವರ್ತನೆಯ ಮೇಲ್ಪಂಕ್ತಿಯಾಗಿ ವಿಚಾರವಾದ ಮತ್ತು ನಿರೀಶ್ವರವಾದವನ್ನು ಸಮರ್ಥಿಸಿತು. ಇಂಥ ಸುಧಾರಕರ ತೀವ್ರ ಉತ್ಸಾಹದ ಹೊರತಾಗಿಯೂ, ಭಾರತದ ಒಳನಾಡಿನಲ್ಲಿ ಬೇರುಗಳನ್ನು ಆಳಕ್ಕಿಳಿಸುವಲ್ಲಿ ಇಂಥ ಉಪಕ್ರಮಗಳು ವಿಫಲವಾದವು. ಶ್ರೀಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಬಹಳ ಹಿಂದೆ ಸಮೃದ್ಧವಾಗಿದ್ದು, ನಿರುದ್ಯೋಗ ಸಮಸ್ಯೆ ತೀವ್ರವಾಗಿರುವ ಪಂಜಾಬ್​ನಂಥ ರೈತಾಪಿ ಪ್ರದೇಶಗಳಲ್ಲಿನ ಜನರು, ಸ್ವಯಂ-ಕಾರ್ಯತಃ ಸಾಧಿಸಬೇಕಾದ ಸುದೀರ್ಘ ಪ್ರಕ್ರಿಯೆಗಳಿಗಿಂತ ಹೆಚ್ಚಾಗಿ ವರಪ್ರಸಾದ/ಅನುಗ್ರಹಕ್ಕೆ ಆದ್ಯತೆ ನೀಡುವಂಥ ಆಧ್ಯಾತ್ಮಿಕ ಮತ್ತು ಐಹಿಕ ಹಂಚಿಕೆಗಿರುವ ಕ್ಷಿಪ್ರ ಮಾಗೋಪಾಯವನ್ನು ಆರಿಸಿಕೊಳ್ಳುತ್ತಾರೆ. ಇದು ಇಲ್ಲಿಗಷ್ಟೇ ಸೀಮಿತವಲ್ಲ; ಉತ್ತರ ಕರ್ನಾಟಕದಲ್ಲಿ ಮತ್ತು ಕೇರಳದ ಪಾಲಕ್ಕಾಡ್​ನಲ್ಲಿ ಹೊಸ ಪಂಥಗಳು ರೂಪುಗೊಳ್ಳುತ್ತಿರುವುದನ್ನೂ ನಾವು ಕಾಣಬಹುದು. ಇದಕ್ಕೆ ಹೋಲಿಸಿದಾಗ, ಬುಂದೇಲ್​ಖಂಡದಂಥ ಐತಿಹಾಸಿಕವಾಗಿ ದುರ್ದೆಸೆಗೆ ಸಿಲುಕಿದ ಪ್ರದೇಶಗಳಲ್ಲಿನ ರೈತರು ‘ನಾಳಿನ ಗತಿ ಏನು?’ ಎಂಬ ಸ್ಥಿತಿಯಲ್ಲೇ ದಿನದೂಡುತ್ತಿದ್ದಾರೆ. ಹೀಗಾಗಿ, ಸಹಜವಾಗಿ ಬರುತ್ತದೆ ಎಂಬುದಾಗಿ ನಾವು ಒಂದು ಕಾಲಕ್ಕೆ ಭಾವಿಸಿದ್ದ ವಿಚಾರಪರತೆಯು ಮತ್ತಷ್ಟು ದೂರ ಸಾಗಿದಂತಾಗಿದೆ.

ಸಾಮಾಜಿಕ ಆಂದೋಲನಗಳು ಅಥವಾ ಚಳವಳಿಗಳ ವೈಫಲ್ಯದಿಂದ ನಿರಾಶರಾಗಿರುವ ಸಮಾಜದ ಕೆಳಸ್ತರದ ಗುಂಪುಗಳಿಗೆ ಸೇರಿದವರು, ವಿಶೇಷವಾಗಿ ಪಂಜಾಬ್​ನಲ್ಲಿನ ಇಂಥ ಸಮುದಾಯಗಳು (ಇಲ್ಲಿ ಶೇ. 34ರಷ್ಟು ದಲಿತ ಜನಸಂಖ್ಯೆಯಿದೆ), ‘ಡೇರಾ’ ಪಂಥದ ಏಜೆನ್ಸಿಯ ಮೂಲಕ ಸಾಮಾಜಿಕ ಚಲನಶೀಲತೆಯನ್ನು ಸಾಧಿಸುವುದಕ್ಕೆ ಮೊರೆಹೋಗಿದ್ದಾರೆ- ಈ ಸಂಘಟನೆಯಲ್ಲಿ ಅವರ ವಿರುದ್ಧ ಯಾರೂ ಪಕ್ಷಪಾತ ತೋರುವುದಿಲ್ಲ ಮತ್ತು ಇದು ತಮ್ಮದೇ ನೆಲೆ ಎಂಬುದಾಗಿ ಅವರು ಗಟ್ಟಿದನಿಯಲ್ಲಿ ಹೇಳಿಕೊಳ್ಳಬಹುದು ಎಂಬುದೇ ಇದಕ್ಕೆ ಕಾರಣ. ಗಾಂಧಿ ಮತ್ತು ಅಂಬೇಡ್ಕರ್ ಆಯ್ದುಕೊಂಡಿದ್ದಂಥ, ದೇವಾಲಯಗಳಿಗೆ ಪ್ರವೇಶ ಬಯಸುವ ತಂತ್ರಕ್ಕೆ ಬದಲಾಗಿ, ಹಿಂದುಳಿದ ಜಾತಿಗಳು ಮತ್ತು ವರ್ಗಗಳಿಗೆ ಸೇರಿದ ಡೇರಾ ಅನುಯಾಯಿಗಳು ತಮ್ಮದೇ ಆದ ಆರಾಧನಾ ಮಂದಿರಗಳನ್ನು ನಿರ್ವಿುಸುತ್ತಿದ್ದಾರೆ. ಸಾಮಾಜಿಕ ಬಹಿಷ್ಕಾರ ಮತ್ತು ಬೇರ್ಪಡಿಸುವಿಕೆಯನ್ನು ನಿರಂತರ ಎದುರಿಸುತ್ತ ಬಂದಿರುವ ಇಂಥ ಸಮುದಾಯಗಳು ಹೊಸ ಅಸ್ಮಿತೆಗಳನ್ನು ಕಟ್ಟಿಕೊಳ್ಳುವೆಡೆಗೆ ಗಮನಹರಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂಬುದನ್ನು ನಾವು ಗಮನಿಸಬೇಕು. ನಿರ್ದಿಷ್ಟ ಜಾತಿಗಳು ಹಾಗೂ ಪ್ರದೇಶಗಳನ್ನು ಇಂಥ ಪಂಥಗಳು ಪ್ರತಿನಿಧಿಸುವ ಪರಿಪಾಠ ಹೆಚ್ಚುತ್ತಲೇ ಇದ್ದು, ರಾಜಕೀಯ ಮತ್ತು ಐಹಿಕ ಬಲವನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಧನವೊಂದು ಸಿಕ್ಕಂತಾಗಿದೆ.

ಮುಖ್ಯವಾಹಿನಿಯ ಧಾರ್ವಿುಕ ಮತ್ತು ಸಾಮಾಜಿಕ ಆಂದೋಲನಗಳಲ್ಲಿ ಪೋಷಣೆ/ಆಧಾರವನ್ನು ಕಂಡುಕೊಳ್ಳಲು ವಿಫಲವಾದ ನಂತರ, ಪರ್ಯಾಯ ಜೀವನಸಿದ್ಧಾಂತವೊಂದರೆಡೆಗೆ ತಿರುಗುವ ಅನುಯಾಯಿಗಳ ಪ್ರವೃತ್ತಿಯಿಂದ ಇಂಥ ಪಂಥಗಳು ಮತ್ತು ಆಂದೋಲನಗಳು ಪೋಷಿಸಲ್ಪಡುತ್ತವೆ ಎಂದರೆ ಅತಿಶಯೋಕ್ತಿಯಲ್ಲ. ಇಂಥ ಪಂಥಗಳು ಮತ್ತು ಆಂದೋಲನಗಳಿಗೆ ಇದೆಯೆನ್ನಲಾಗುವ ಶಕ್ತಿಯು ರಾಜಕಾರಣಿಗಳ ಪಾಲಿಗೆ ಪ್ರಯೋಜನದ ಭಂಡಾರವೇ ಆಗಿಬಿಡುತ್ತದೆ; ಧಾರ್ವಿುಕ ಪ್ರವೃತ್ತಿಯ ಜನರಿಗೆ ಒತ್ತಾಸೆ ನೀಡುವಂಥ ಕಾರ್ಯನೀತಿಗಳನ್ನು ರೂಪಿಸುವ ಮೂಲಕ ರಾಜಕಾರಣಿಗಳು ಇಂಥ ಪಂಥಾನುಯಾಯಿಗಳನ್ನು ಓಲೈಸುತ್ತಾರೆ, ಆಕರ್ಷಿಸುತ್ತಾರೆ. ಅಷ್ಟಕ್ಕೂ, ಧಾರ್ವಿುಕತೆಯ ಬುನಾದಿಯಿರುವ ಮತಬ್ಯಾಂಕ್ ಒಂದರ ಮೇಲೆ ಪ್ರಭಾವ ದಕ್ಕಿಸಿಕೊಳ್ಳುವುದು ಸುಲಭಜಯಕ್ಕೆ ಮಾಗೋಪಾಯ ಎಂಬುದನ್ನು ಇವರಿಗೆ ಯಾರೂ ಹೇಳಿಕೊಡಬೇಕಿಲ್ಲವಲ್ಲ.

ಭಾರತದಲ್ಲಂತೂ, ಹೊಸ ಆಂದೋಲನಗಳ ಉದಯಕ್ಕೆ ಉತ್ತೇಜನ ನೀಡುವಲ್ಲಿ ಆಳುಗವ್ಯವಸ್ಥೆಯು ಎಲ್ಲ ಕಾಲಕ್ಕೂ ಸಹಯೋಗ ತೋರುತ್ತ ಬಂದಿರುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸಾಮಾಜಿಕ ಚಲನಶೀಲತೆಗೆ ಸಂಬಂಧಿಸಿದ ಕಟ್ಟಾಸೆಯೊಂದನ್ನು ‘ಬಹುಮತದ ನಿರ್ಣಯಗಳಾಗಿ’ ಮಾರ್ಪಡಿಸುವ ಸ್ವಹಿತಾಸಕ್ತಿಯೇ ಇದಕ್ಕೆ ಕಾರಣ. ಹೀಗಾಗಿ, ತಥಾಕಥಿತ ದೇವಮಾನವರ ನೇತೃತ್ವವಿರುವ ಪಂಥಗಳು ಹಾಗೂ ಆಂದೋಲನಗಳನ್ನು ಬಳಸಿಕೊಂಡು ಪ್ರಬಲ ರಾಜಕಾರಣಿಗಳಾಗಿ ಹೊರಹೊಮ್ಮುವಂತಾಗುವ ಪರಿಪಾಠವನ್ನು ನಮ್ಮ ಸಮಾಜ ನಿರಂತರ ನೋಡಿಕೊಂಡೇ ಬಂದಿದೆ. ತಮ್ಮ ಹಿತಾಸಕ್ತಿಯ ಈಡೇರಿಕೆಗೆಂದು ಸ್ಥಳೀಯ ಪಂಥಗಳನ್ನು ತೆಕ್ಕೆಗೆ ಸೇರಿಸಿಕೊಳ್ಳುವ ರಾಜಕಾರಣಿಗಳ ಈ ವಿಲಕ್ಷಣ ಪರಿಪಾಠವು, ‘ಮೈಗಳ್ಳ ರಾಜಕಾರಣ’ದ ರೋಗಲಕ್ಷಣ ಎನ್ನದೆ ಮತ್ತೇನು ಹೇಳಬೇಕು?

ಮೂಲಭೂತವಾಗಿ ಹೇಳುವುದಾದರೆ, ಡೇರಾಗಳು ಮತ್ತು ಇಂಥದೇ ಇತರ ಪಂಥಗಳು ಹಾಗೂ ಆಂದೋಲನಗಳು, ವಿಕಸನದ ಹಾದಿಯಲ್ಲಿರುವ ಸಮಾಜವೊಂದನ್ನು ಪ್ರತಿಬಿಂಬಿಸುತ್ತವೆ. ಸಮಾಜ ವ್ಯವಸ್ಥೆಯೊಂದಿಗೆ ಮಿಳಿತವಾಗುವುದಕ್ಕೆ ಅಥವಾ ಅದರ ಬೇರಿನಾಳಕ್ಕೆ ಅವು ಇಳಿಯುವುದಕ್ಕೆ ಸುದೀರ್ಘ ಕಾಲವೇ ಹಿಡಿಯುತ್ತದೆ. ಆದರೆ, ಅತಿರೇಕದ ಭಕ್ತಿಗೆ ಎದುರಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರಂತರ ಕಾಯ್ದುಕೊಂಡು ಹೋಗುವಲ್ಲಿ ಭಾರತ ಯಶಸ್ವಿಯಾಗುವುದೇ ಎಂಬುದನ್ನು ಕಾದುನೋಡಬೇಕಿದೆ. ಇಂಥ ಧಾರ್ವಿುಕ ಗುಂಪುಗಳೊಂದಿಗೆ ರಾಜಕೀಯವೂ ಬೆರೆಯುವಂತಾದರೆ, ಸಾಮಾಜಿಕ ಸೇನಾ ಕಾರ್ಯಾಚರಣೆ ಮತ್ತು ಧಾರ್ವಿುಕ ಸ್ಪರ್ಧೆಯನ್ನು ಹುಟ್ಟುಹಾಕುವ ಸಾಮಾಜಿಕ ಅಸ್ತವ್ಯಸ್ತತೆಯಂಥ ಒಂದು ಭುಗಿಲೇಳುವ ಪರಿಸ್ಥಿತಿ ತಲೆದೋರಬಹುದು. ನಮ್ಮ ಸಮಾಜದ ಸಹಜ ಗುಣ-ವೈಶಿಷ್ಟ್ಯಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ, ಸಾರ್ವಜನಿಕ ಕ್ಷೇತ್ರದಲ್ಲಿ ವಿವೇಚನಾಶೀಲತೆ ಅಥವಾ ವಿಚಾರಪರತೆಯೆಡೆಗೆ ಮರಳಬೇಕಾದ ಅಗತ್ಯವಿಂದು ಹಿಂದೆಂದಿಗಿಂತ ಹೆಚ್ಚಿದೆ.

Leave a Reply

Your email address will not be published. Required fields are marked *

Back To Top