Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಸವಾಲುಗಳ ಪರ್ವ

Friday, 08.09.2017, 3:00 AM       No Comments

ಸ್ವಾತಂತ್ರೊ್ಯೕತ್ತರ ಭಾರತದ ಮೊಟ್ಟಮೊದಲ ಪೂರ್ಣಕಾಲಿಕ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರೆದುರು ಹಲವು ಸವಾಲುಗಳು

ಮಂಡಿಯೂರಿ ಕುಳಿತಿವೆ. ವಾಣಿಜ್ಯೋದ್ಯಮ ಖಾತೆಯ ಸಹಾಯಕ ಸಚಿವೆಯಾಗಿ ಕಾರ್ಯನಿರ್ವಹಣೆಯಲ್ಲಿ ಅವರು ತೋರಿದ ಕಾರ್ಯಕ್ಷಮತೆ ಹಾಗೂ ಪಕ್ಷದ ವಕ್ತಾರೆಯಾಗಿ ಒತ್ತಿರುವ ಛಾಪು ಇವರೆಡನ್ನು ಪರಿಗಣಿಸಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಥದೊಂದು ಮಹತ್ವದ ಖಾತೆಯ ನೊಗವನ್ನು ನಿರ್ಮಲಾರಿಗೆ ಹೊರಿಸಿದ್ದಾರೆಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ನಿರ್ಮಲಾರ ದಕ್ಷತೆ ಮತ್ತು ಸಾಮರ್ಥ್ಯಗಳ ಕುರಿತು ಎರಡು ಮಾತಿಲ್ಲ; ಆದರೆ ಅವರು ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಈ ಕಾಲಘಟ್ಟವೇ ಸವಾಲಿನದ್ದಾಗಿರುವುದರಿಂದ, ಅವರು ಇದನ್ನು ಹೇಗೆ ನಿಭಾಯಿಸಬಲ್ಲರು ಎಂಬುದು ಬಹುತೇಕರಲ್ಲಿ ಮನೆಮಾಡಿರುವ ಸಹಜ ಕುತೂಹಲ ಮತ್ತು ನಿರೀಕ್ಷೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಪಾಕಿಸ್ತಾನದ ಕುಮ್ಮಕ್ಕಿನ ಉಗ್ರರು, ಪ್ರತ್ಯೇಕತಾವಾದಿಗಳು ಮತ್ತು ವಿಧ್ವಂಸಕ ಕೃತ್ಯಗಳನ್ನೆಸಗುವವರನ್ನು ತಹಬಂದಿಗೆ ತರುವುದರ ಜತೆಗೆ, ದೇಶಕ್ಕೆ ಒದಗಿರುವ ಬಾಹ್ಯ ಬೆದರಿಕೆಗೂ ತಕ್ಕ ಉತ್ತರ ಹೇಳಬೇಕಾದ ಸಂದರ್ಭವೀಗ ಸೃಷ್ಟಿಯಾಗಿದೆ. ಡೋಕ್ಲಂ ವಿವಾದದ ಕಾರಣದಿಂದಾಗಿ ಭಾರತ ಮತ್ತು ಚೀನಾ ನಡುವೆ ರೂಪುಗೊಂಡಿದ್ದ ಯುದ್ಧೋನ್ಮಾದಕ್ಕೆ ಈಗ ತಾತ್ಕಾಲಿಕ ವಿರಾಮ ದಕ್ಕಿದೆಯಾದರೂ, ಪರಿಸ್ಥಿತಿ ಹೀಗೇ ಮುಂದುವರಿಯುತ್ತದೆ ಎನ್ನಲಾಗದು. ಕಾರಣ ಭಾರತಕ್ಕೆ ಕಿರುಕುಳ ನೀಡುವ ವಿಷಯದಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕಿರುವ ಸಮಾನಾಸಕ್ತಿ. ಒಂದೆಡೆ ಪಾಕಿಸ್ತಾನದ ಕಿರುಕುಳ ಏರುಗತಿಯಲ್ಲಿರುವುದು, ಮತ್ತೊಂದೆಡೆ ಚೀನಾ ಭಾರತದ ಗಡಿಪ್ರದೇಶಗಳನ್ನು ಹಂತಹಂತವಾಗಿ ನುಂಗುವ ಹುನ್ನಾರವನ್ನು ಮುಂದುವರಿಸಿರುವುದು ಈ ಮಾತಿಗೆ ಸಾಕ್ಷಿ. ಈ ಗ್ರಹಿಕೆಯಿಟ್ಟುಕೊಂಡೇ, ಈ ಎರಡೂ ದೇಶಗಳೊಂದಿಗೆ ಭಾರತ ಏಕಕಾಲಕ್ಕೆ ಯುದ್ಧ ಮಾಡಬೇಕಾದ ಸನ್ನಿವೇಶವನ್ನು ತಳ್ಳಿಹಾಕುವಂತಿಲ್ಲ ಎಂದು ಎಚ್ಚರಿಸಿದ್ದಾರೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್. ರಕ್ಷಣಾ ಖಾತೆಯ ಆಳ-ಅಗಲಗಳು ಹಾಗೂ ಹೂಡಬೇಕಿರುವ ವ್ಯೂಹಾತ್ಮಕ ಕಾರ್ಯತಂತ್ರಗಳ ಕುರಿತು ಇನ್ನಷ್ಟೇ ಅರಿಯಬೇಕಿರುವ ನೂತನ ರಕ್ಷಣಾ ಸಚಿವೆ ಈ ಸವಾಲನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಎಂಬುದು ಬಹುತೇಕರ ನಿರೀಕ್ಷೆ.

ಇನ್ನು, ದೇಶದ ರಕ್ಷಣಾ ವ್ಯವಸ್ಥೆಗೆ ಅಗತ್ಯವಿರುವ ಯುದ್ಧೋಪಕರಣಗಳಿಗೆ ಅನ್ಯದೇಶವನ್ನು ನೆಚ್ಚದೆ, ದೇಶೀಯ ತಯಾರಿಕೆಗೇ ಒತ್ತುನೀಡುವುದಾಗಿ ಅವರು ತಿಳಿಸಿದ್ದಾರೆ. ಹೇರಳ ವಿದೇಶಿ ವಿನಿಮಯವನ್ನು ಉಳಿಸುವ ಹಾಗೂ ತಯಾರಿಕಾ ವಲಯದಲ್ಲಿನ ಸ್ವಾವಲಂಬನೆಗೆ ಒತ್ತಾಸೆಯಾಗಿ ನಿಲ್ಲುವ ಈ ಚಿಂತನೆ ನಿಜಕ್ಕೂ ಸ್ವಾಗತಾರ್ಹವಾದರೂ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಹಾಗೂ ಇನ್ನಿತರ ರಕ್ಷಣಾ ಸಾಮಗ್ರಿ ತಯಾರಿಕಾ ಸಂಸ್ಥೆಗಳ ಬಲವರ್ಧನೆ ಕಡೆಗೂ ಮೊದಲು ಗಮನ ಹರಿಸುವ ಅಗತ್ಯವಿದೆ. ಇದಕ್ಕೆಲ್ಲ ಅಪಾರ ಮೊತ್ತದ ಹಣದ ಅಗತ್ಯವೂ ಇದೆ. ನಿರ್ಮಲಾ ಸೀತಾರಾಮನ್​ರ ಸಾಮರ್ಥ್ಯ ಬಲ್ಲವರು, ಅವರು ಈ ರಂಗದಲ್ಲೂ ಯಶಸ್ಸಿನ ಹೆಜ್ಜೆಗುರುತು ಮೂಡಿಸುವ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಈ ವಿಶ್ವಾಸವೇ ವಾಸ್ತವವಾಗಿ ಪರಿಣಮಿಸುವಂತಾಗುವಲ್ಲಿ ಹಲವು ನೆಲೆಗಟ್ಟಿನ ಬೆಂಬಲ ಮತ್ತು ಸಮಷ್ಟಿ ಯತ್ನದ ಅಗತ್ಯವಿದೆ. ಒಟ್ಟಾರೆಯಾಗಿ, ದೇಶದ ಮೊದಲ ಪೂರ್ಣಕಾಲಿಕ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಯ ಸಾಂಕೇತಿಕತೆಗೆ ಮಾತ್ರ ಸೀಮಿತವಾಗದೆ ಅವರು ಈ ಹೊಣೆಗಾರಿಕೆಯನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬುದನ್ನು ದೇಶ ಕಾದುನೋಡುತ್ತಿದೆ.

Leave a Reply

Your email address will not be published. Required fields are marked *

Back To Top