Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಸವಾಲುಗಳನ್ನು ಮಣಿಸುವ ಛಲವೇ ಜೀವನಕ್ಕೆ ಸ್ಪೂರ್ತಿ

Tuesday, 12.12.2017, 3:00 AM       No Comments

| ಡಾ.ಮಂಜುನಾಥ್‌ ಬಿ.ಎಚ್‌

ಕೆಲವು ದಿನಗಳ ಹಿಂದೆ ನಮ್ಮ ಸ್ಪತ್ರೆಗೆ ಯುವಕನೊಬ್ಬ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ. ಕ್ರೀಡಾಪಟುವಾಗಿದ್ದ ಆತ ಅಪಘಾತವೊಂದರಲ್ಲಿ ಕಾಲಿಗೆ ಏಟು ಮಾಡಿಕೊಂಡು ಶಸ್ತ್ರಚಿಕಿತ್ಸೆಗೊಳಗಾದ. ‘ಡಾಕ್ಟ್ರೇ, ನಾನು ಇನ್ನು ಅಂಗಳಕ್ಕಿಳಿಯಲು, ಮೊದಲಿನಂತೆ ಓಡಲು ಸಾಧ್ಯವೇ ಇಲ್ಲವೇ? ಕ್ರೀಡಾಕ್ಷೇತ್ರದಲ್ಲಿ ಸಾಧಿಸಬೇಕೆಂಬ ಕನಸುಗಳಾವುವೂ ಈಡೇರುವುದಿಲ್ಲವೇ?’ ಎಂದು ಕೇಳಿದ. ಕ್ರೀಡಾಳುಗಳ ಶಸ್ತ್ರಚಿಕಿತ್ಸಕನಾದ್ದರಿಂದ ಕ್ರೀಡೆ ಹಾಗೂ ಕ್ರೀಡಾಳುಗಳ ಬಗ್ಗೆ ಒಂದಿಷ್ಟು ಹೆಚ್ಚೇ ಗಮನ ಇಟ್ಟಿರುತ್ತೇನೆ ನಾನು. ಆ ಯುವಕನಿಗೆ ಸ್ಪೂರ್ತಿಯಾಗಲೆಂದು ಒಂದೆರಡು ಕತೆಗಳನ್ನು ಹೇಳಿದೆ. ಅವುಗಳನ್ನು ನಿಮ್ಮ ಮುಂದೆಯೂ ಹಂಚಿಕೊಳ್ಳುತ್ತೇನೆ.

ಸಚಿನ್ ತೆಂಡುಲ್ಕರ್! ಭಾರತೀಯ ಕ್ರಿಕೆಟ್​ನ ಜೀವಂತ ದಂತಕತೆ. ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವಂತೆ ಸಚಿನ್ ಮಾಡಿದ್ದೆಲ್ಲವೂ ದಾಖಲೆಯೇ. ಸುನಿಲ್ ಗಾವಸ್ಕರ್ ಬಳಿಕ ಇನ್ನಾರು ದಿಕ್ಕು ಎಂದು ಯೋಚಿಸುವಾಗ ಭಾರತೀಯ ಕ್ರಿಕೆಟ್​ನ ಸಂಪೂರ್ಣ ನಕ್ಷೆಯನ್ನೇ ಬದಲಿಸಿದವರು ಸಚಿನ್ ರಮೇಶ್ ತೆಂಡುಲ್ಕರ್. ಟೆಸ್ಟ್ ಕ್ರಿಕೆಟ್, ಏಕದಿನ ಎರಡರಲ್ಲೂ ಅತಿ ಹೆಚ್ಚು ರನ್ ಪೇರಿಸಿದರು. ಅಂತಹ ಸಚಿನ್ ಸಹ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಹೇಳಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದರು!

2004ರ ಆರಂಭದ ದಿನಗಳು. ಸಚಿನ್​ಗೆ ಟೆನ್ನಿಸ್ ಎಲ್ಬೋ ನೋವು ಕಾಡತೊಡಗಿತು. ಮಣಭಾರದ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದ ಅವರಿಗೆ ಆ ಬ್ಯಾಟ್​ನ ಭಾರದಿಂದಲೇ ಕೈಗಂಟಿನಲ್ಲಿ ನೋವು ಆರಂಭವಾಯಿತು. ಟೆನಿಸ್ ಎಲ್ಬೋ ತನ್ನಿಂದತಾನೇ ಆರಂಭವಾಗಿ ಕಡಿಮೆಯಾಗುವಂತಹ ಸಮಸ್ಯೆ. ಕೆಲವರಿಗೆ ಏಳೆಂಟು ತಿಂಗಳು ಕಾಡಿ ಕಡಿಮೆಯಾದರೆ ಇನ್ನೂ ಕೆಲವರಿಗೆ ವರ್ಷಗಳ ಕಾಲ ಅದು ತೊಂದರೆ ಕೊಡಬಹುದು. ದೃಢವಾಗಿ ಬ್ಯಾಟ್ ಹಾಗೂ ಬಾಲ್ ಹಿಡಿಯುವುದೇ ದುಸ್ತರವೇನೋ ಎನಿಸುವಂತೆ ಈ ಸಮಸ್ಯೆ ಮಾಡಿಬಿಡುತ್ತದೆ.

ಒಂದು ವೇಳೆ ಕಷ್ಟಪಟ್ಟು ಬಿಗಿಯಾಗಿ ಬ್ಯಾಟ್ ಹಿಡಿದು ಚೆಂಡನ್ನೆದುರಿಸಲು ನಿಂತರೂ ಶರವೇಗದಿಂದ ನುಗ್ಗಿಬರುವ ಚೆಂಡು ಬ್ಯಾಟ್​ಗೆ ಬಡಿದಾಗ ಕೈಯನ್ನು ನಡುಗಿಸಿ, ನೋವಿನಿಂದ ಪ್ರಾಣ ಹಿಂಡಿಬಿಡುತ್ತದೆ. ಟೆನಿಸ್ ಎಲ್ಬೋಗೆ ಶಸ್ತ್ರಚಿಕಿತ್ಸೆ ಲಭ್ಯವಿದ್ದರೂ ಅದು 100% ಫಲಕಾರಿ ಎನ್ನಲು ಸಾಧ್ಯವಿಲ್ಲ. ಕೈ ನೋವು ಸಹಿಸಲಸಾಧ್ಯ ಎನಿಸಿದಾಗ ಸಚಿನ್ ಕ್ರಿಕೆಟ್​ಗೆ ನಿವೃತ್ತಿ ಘೊಷಿಸಿಬಿಡಲೇ ಎಂದೂ ಅಂದುಕೊಂಡಿದ್ದರಂತೆ. ಕಷ್ಟಪಟ್ಟು, ಬ್ಯಾಟಿನ ತೂಕ ಕಡಿಮೆಗೊಳಿಸಿ ತೆಂಡುಲ್ಕರ್ ಆಟ ಮುಂದುವರಿಸಿದರೂ ಬ್ಯಾಟಿಂಗ್​ನಲ್ಲಿನ ತಲ್ಲೀನತೆ, ಪರಿಪೂರ್ಣತೆ ಸಿಗುತ್ತಲೇ ಇರಲಿಲ್ಲ.

ಸಚಿನ್ ಗುರುಗಳಾದ ರಮಾಕಾಂತ್ ಅಚ್ರೇಕರ್ ಸಚಿನ್ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ವಿಕೆಟ್ ಮೇಲೆ ಒಂದು ರೂಪಾಯಿ ನಾಣ್ಯವನ್ನಿಟ್ಟು ಅವರನ್ನು ಔಟ್ ಮಾಡಿದವರಿಗೆ ಆ ನಾಣ್ಯ ಸಿಗುತ್ತದೆ. ಒಂದು ವೇಳೆ ಯಾರಿಗೂ ವಿಕೆಟ್ ಒಪ್ಪಿಸದಿದ್ದರೆ ಆ ನಾಣ್ಯ ಸಚಿನ್ ಅವರಿಗೇ ಎನ್ನುತ್ತಿದ್ದರಂತೆ. ಅದರಂತೆ ಯಾವ ಕಾರಣಕ್ಕೂ ಸೋಲೊಪ್ಪಲಾರೆ ಎಂಬ ಮನಸ್ಥಿತಿಯ ಸಚಿನ್ ದಿನವಿಡೀ ಆಡಿದರೂ ವಿಕೆಟ್ ಒಪ್ಪಿಸದೆ ನಾಣ್ಯ ಕಿಸೆಗಿಳಿಸಿ ಮನೆಗೆ ಹೋಗುತ್ತಿದ್ದರಂತೆ. ಟೆನಿಸ್ ಎಲ್ಬೋದ ನೋವನ್ನೂ ಸಚಿನ್ ಸ್ವೀಕರಿಸಿದ್ದು ಈ ಸವಾಲಿನಂತೆಯೇ! ನೆಟ್​ನಲ್ಲಿ ಔಟ್ ಮಾಡಲು ಕಾದಿದ್ದ ಬೌಲರುಗಳಂತೆ ಈ ಬಾರಿ ಕಾದಿದ್ದಿದ್ದು ಟೆನಿಸ್ ಎಲ್ಬೋ. ವಿಕೆಟ್ ಮೇಲೆ ಇದ್ದದ್ದು ಒಂದು ರೂಪಾಯಿ ನಾಣ್ಯದ ಬದಲಿಗೆ ಸಚಿನ್ ಕ್ರಿಕೆಟ್ ಭವಿಷ್ಯ! ಇಲ್ಲೂ ಸೋಲೊಪ್ಪದ ಜಾಯಮಾನವೇ ಆತನನ್ನು ಪಾರು ಮಾಡಿತು. ಎರಡು ವರ್ಷಗಳ ಪರಿಶ್ರಮ, ಶಸ್ತ್ರಚಿಕಿತ್ಸೆ, ವ್ಯಾಯಾಮ ಸಚಿನ್​ರನ್ನು ಟೆನಿಸ್ ಎಲ್ಬೋದಿಂದ ಮುಕ್ತರನ್ನಾಗಿಸಿತು. ಮುಂದೆ ಆತ ಬರೆದದ್ದು ಇತಿಹಾಸ!

ಅದು 1996ರ ಅಟ್ಲಾಂಟಾ ಒಲಿಂಪಿಕ್ಸ್. ಅಮೆರಿಕ ತಂಡ ಜಿಮ್ನಾಸ್ಟಿಕ್ ವಿಭಾಗದಲ್ಲಿ ಫೈನಲ್ ಹಂತಕ್ಕೇರಿತ್ತು. ಉತ್ತಮ ಪ್ರದರ್ಶನ ನೀಡುತ್ತ ಚಿನ್ನದ ಪದಕಕ್ಕೆ ಮುತ್ತಿಡುವ ಪ್ರಯತ್ನದಲ್ಲಿ ಅಮೆರಿಕ ತಂಡ ದಾಪುಗಾಲಿಡುತ್ತಿತ್ತು. ಜಿಮ್ನಾಸ್ಟಿಕ್ ನೋಡಲು ತುಂಬ ಚಂದವೆನಿಸುವ ಕ್ರೀಡೆಯಾದರೂ, ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ವಾಲ್ಟ್ ನಡೆಸುವುದೆಂದರಂತೂ ಇನ್ನಷ್ಟು ಕಠಿಣ!

ಭಾರತದ ಹೆಮ್ಮೆಯ ಜಿಮ್ನಾಸ್ಟ್ ದೀಪಾ ಕರ್ವಕರ್ 2016 ರಿಯೋ ಒಲಿಂಪಿಕ್ಸ್ ನಲ್ಲಿ ಸ್ವಲ್ಪದರಲ್ಲೇ ಕಂಚಿನ ಪದಕ ಕಳೆದುಕೊಂಡರೂ, ಫೈನಲ್​ನಲ್ಲಿ ಭಾಗವಹಿಸಿದ ಮೊದಲ ಜಿಮ್ನಾಸ್ಟ್ ಎಂದು ದೇಶಕ್ಕೆ ಹೆಮ್ಮೆ ತಂದರು. 1996 ಆ ದಿನ ಅಮೆರಿಕ ತಂಡದ ಪರ ಫೈನಲ್​ನಲ್ಲಿ ವಾಲ್ಟ್ ಪ್ರದರ್ಶಿಸಲು ಬಂದವರು 19 ವರ್ಷದ ಕೆರ್ರಿ ಆಲಿಸನ್ ಸ್ಟ್ರಗ್. ಆಕೆಯೇನಾದರೂ ತನ್ನ ಪೂರ್ಣ ಸಾಮರ್ಥ್ಯ ತೋರಿ ಯಶಸ್ವಿ ವಾಲ್ಟ್ಗಳನ್ನು ನಿರ್ವಹಿಸಿದರೆ ಅಮೆರಿಕ ತಂಡದ ಕತ್ತಿಗೆ ಚಿನ್ನದ ಪದಕ ಬೀಳುತ್ತಿತ್ತು. ಅಮೆರಿಕದ ಕ್ರೀಡಾಳುಗಳು, ಅಭಿಮಾನಿಗಳು, ಕೋಚ್​ಗಳ ಆಶಾವಾದಿ ಕಣ್ಣುಗಳು ಕೆರ್ರಿ ಪ್ರದರ್ಶನದ ಮೇಲಿದ್ದವು.

ದೂರದಿಂದ ಓಡಿಬಂದ ಕೆರ್ರಿ ಚಿಮ್ಮುಹಲಗೆ ಮೇಲೆ ಕೈ ಇಟ್ಟು ಜಿಗಿದೇ ಬಿಟ್ಟರು. ಗಾಳಿಯಲ್ಲಿ ಎರಡು ಸುತ್ತು ತಿರುಗಿ ನೆಲಕ್ಕೆ ಕಾಲೂರುತ್ತಿದ್ದಂತೆ ಬಿದ್ದಂತಾಗಿ, ಮತ್ತೆ ಮೇಲೆದ್ದು ತೀರ್ಪಗಾರರಿಗೆ, ವೀಕ್ಷಕರಿಗೆ ಕೈ ಬೀಸಿ ನಡೆದರು. ಆದರೆ ಆ ಜಿಗಿತ ಮುಗಿಸಿ ಜಿಮ್ನಾಸ್ಟಿಕ್ ಫೋ›ರ್​ನಲ್ಲಿ ಕಾಲೂರುತ್ತಿದ್ದಂತೆ ಎಲ್ಲೋ ಚಳಕ್ ಎಂದ ಸದ್ದು ಕೆರ್ರಿ ಕಿವಿಗೆ ಬಿದ್ದಿತು. ಅದರೊಂದಿಗೇ ಸಹಿಸಲಸಾಧ್ಯವಾದ ಕಾಲುನೋವೂ ಶುರುವಾಯಿತು!

ಆ ಜಿಗಿತದ ವೇಳೆ ಆಕೆಯ ಪಾದದ ಮೂಳೆ ಸಣ್ಣಗೆ ಮುರಿದಿತ್ತು! ಅಮೆರಿಕದ ಚಿನ್ನದ ಆಸೆ ಈಡೇರಲು ಕೆರ್ರಿ ಮುಂದಿನ ವಾಲ್ಟ್ ಪ್ರದರ್ಶಿಸಲೇಬೇಕಾದ ಅನಿವಾರ್ಯತೆ! ವೀಕ್ಷಕರು, ಆಕೆಯ ತಂಡದ ಸದಸ್ಯರು ನಿರಾಸೆಗೊಳಗಾಗಿದ್ದರು. ಇನ್ನೊಮ್ಮೆ ಜಿಗಿಯುವ ಸ್ಥಿತಿಯಲ್ಲಿ, ದೃಢವಾಗಿ ಜಿಗಿತ ಮುಗಿಸಿ ನಿಲ್ಲುವ ಸ್ಥಿತಿಯಲ್ಲಿ ಕೆರ್ರಿಯ ಎಡಗಾಲು ಇರಲೇ ಇಲ್ಲ. ಪದಕದ ಆಸೆ ಕೈಬಿಟ್ಟ ತಂಡದ ಸದಸ್ಯರು ಪೆಚ್ಚಗಾಗಿದ್ದರು.

ಊಹುಂ. ಮೀನಗಂಟು ಮುರಿದಿದ್ದರೂ 19ರ ಹುಡುಗಿ ಕೆರ್ರಿಯ ಛಲ ಮುರಿದಿರಲಿಲ್ಲ. ಒಲಿಂಪಿಕ್ಸ್ ಫೈನಲ್​ಗೇರುವುದೇ ಸಾಹಸ. ಅಂತಹದ್ದರಲ್ಲಿ ಏನಾದರಾಗಲಿ, ಪ್ರಯತ್ನ ಪಡುವುದರಿಂದ ಕಳೆದುಕೊಳ್ಳುವುದೇನು ಎಂಬ ಯೋಚನೆ ಕೆರ್ರಿಯದು. ತಾನು ಜಿಗಿದೇ ಸಿದ್ಧ ಎಂದು ನೋವು ನಿವಾರಕ ಸ್ಪ್ರೇಗಳನ್ನು ಸುರಿದು ಆಕೆ ನಿಂತಾಯಿತು.

ಕಾಲು ನೋವನ್ನೂ ಮರೆತು ಓಡಿದ ಕೆರ್ರಿ, ಮತ್ತೊಮ್ಮೆ ಚಿಮ್ಮುಹಲಗೆ ಸಮೀಪಿಸಿದರು. ಕಾಲ ಮೇಲೆ ಭಾರ ಬಿಟ್ಟು ಗಾಳಿಯಲ್ಲಿ ಚಿಮ್ಮಿ, 2 ಸುತ್ತು ತಿರುಗಿ, ವೀಕ್ಷಕರು ಬೆರಗಾಗಿ ನೋಡುತ್ತಿದ್ದಂತೆಯೇ ದೃಢವಾಗಿ ನಿಂತಿದ್ದರು ಕೆರ್ರಿ! ಸಹಿಸಲಸಾಧ್ಯ ನೋವು, ಮೂಳೆ ಇನ್ನಷ್ಟು ಮುರಿದಿತ್ತು. ಎಡಗಾಲು ಊರಲಾಗದೆ ಬಲಗಾಲ ಮೇಲೆ ನಿಂತು, ನೆಲಕ್ಕುರುಳಿದರು. ಪರ್ಫೆಕ್ಟ್ ವಾಲ್ಟ್! ಅಮೆರಿಕ ತಂಡ ಚಿನ್ನ ಗೆದ್ದಿತ್ತು. ಕೆರ್ರಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಂದು ಕಾಲಲ್ಲಿ ನಿಂತು ಆಕೆ ಕತ್ತಿಗೆ ಚಿನ್ನದ ಪದಕ ಧರಿಸಿಕೊಂಡಾಗ ನೆರೆದವರ ಕಣ್ಣಂಚಲ್ಲಿ ನೀರಿತ್ತು.

ಬರಿಯ ಕ್ರೀಡೆಯೆಂದಲ್ಲ. ನಮಗೆ ಜೀವನದುದ್ದಕ್ಕೂ ಒಂದಿಲ್ಲೊಂದು ಸವಾಲುಗಳು ಬರುತ್ತಲೇ ಇರುತ್ತವೆ. ಅಡೆತಡೆಗಳು ಸಿಗುತ್ತಲೇ ಇರುತ್ತವೆ. ಅದನ್ನು ನಾವು ಹೇಗೆ ದಾಟುತ್ತೇವೆ ಎಂಬುದರ ಹಿಂದೆ ನಮ್ಮ ಯಶಸ್ಸು ಅಡಗಿದೆ. ಅಪಘಾತಗಳು, ನೋವುಗಳು ನಮ್ಮ ತಪ್ಪಿದ್ದರೂ, ಇಲ್ಲದಿದ್ದರೂ ಸಂಭವಿಸುತ್ತವೆ. ಆದರೆ ಅದನ್ನು ಮೀರಿ ಮುಂದೆ ನೋಡುವುದರಲ್ಲಿ ಯಶಸ್ಸು ಅಡಗಿದೆ. ಇಂತಹ ಸಂದರ್ಭಗಳಲ್ಲಿ ಯಾರೇ ಆದರೂ ಖಿನ್ನತೆಗೊಳಗಾಗುವ ಸಂಭವವಿರುತ್ತದೆ. ಆದರೆ ಅದನ್ನು ಮೀರಿ ಬೆಳೆಯುವ ಛಲ ನಮ್ಮಲ್ಲಿರಬೇಕು.

ಇಷ್ಟೆಲ್ಲ ಮಾತುಗಳನ್ನಾಡಿದ ಬಳಿಕ, ಚಿಂತೆಗೊಳಗಾಗಿದ್ದ ಯುವಕನ ಕಣ್ಣಲ್ಲಿ ನಿಧಾನವಾಗಿ ಹೊಳಪು ಕಾಣತೊಡಗಿತು. ‘ಇನ್ನಾರು ತಿಂಗಳಲ್ಲಿ ನೀನು ಮರಳಿ ಸ್ಪರ್ಧಿಸುವಂತೆ ಮಾಡುವ ಜವಾಬ್ದಾರಿ ನನ್ನದು, ಆದರೆ ಮೈದಾನದಲ್ಲಿ ಯಶಸ್ವಿಯಾಗುವ ಹೊಣೆ ನಿನ್ನದು’ ಎಂದೆ. ‘ಸರ್, ಅಷ್ಟಾದರೆ ಸಾಕು. ಮುಂದಿನ ಸ್ಪರ್ಧೆಯಲ್ಲಿ ಗೆದ್ದು, ಪದಕ ತಂದು ಮೊದಲು ನಿಮಗೇ ತೋರಿಸುತ್ತೇನೆ’ ಎಂದನಾತ. ನಾನು ಅವನ ಗೆಲುವಿಗಾಗಿ, ಪದಕಕ್ಕಾಗಿ ಹಾರೈಸಿದೆ.

(ಲೇಖಕರು ತಜ್ಞವೈದ್ಯರು, ಸಾಮಾಜಿಕ ಕಾರ್ಯಕರ್ತರು)

Leave a Reply

Your email address will not be published. Required fields are marked *

Back To Top