Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಸರ್ವಋತು ಪ್ರವಚನಕಾರ

Thursday, 22.06.2017, 3:02 AM       No Comments

|ಎ.ಆರ್. ರಘುರಾಮ್ ಬೆಂಗಳೂರು

ಉಪನಿಷತ್ತು ಮುಖೋದ್ಗತ. ವೇದಾಂತ ಕರಗತ. ಮಾತಿನ ನಡುವೆ ಮಹಾಕಾವ್ಯದ ಉದಾಹರಣೆ. ವಿದ್ವತ್ತು ಅಪಾರವಾಗಿದ್ದರೂ ಮಾತು ಸರಳ, ನಡೆ ಗಂಭೀರ. ಯಾರಿಗೂ ನೋವುಂಟುಮಾಡದ ಸ್ಪಂದನೆ. ಗುರುಕೃಪೆ ಸ್ಮರಿಸುತ್ತಲೇ ಗಮ್ಯದೆಡೆಗೆ ನಡಿಗೆ. ಇವೆಲ್ಲ ವಿಶೇಷಣಗಳು ಅನ್ವಯಿಸುವುದು ಕಿಕ್ಕೇರಿ ಗುಂಡಪ್ಪ – ಸೀತಾಲಕ್ಷ್ಮಮ್ಮ ದಂಪತಿಯ ಪುತ್ರ ಸುಬ್ರಾಯ ಶರ್ಮಾ ಅವರಿಗೆ.

ಹೌದು, ಕೆಲವು ವಿದ್ವಾಂಸರು ಉಪನ್ಯಾಸವನ್ನು ಹವ್ಯಾಸವಾಗಿ, ಪ್ರವೃತ್ತಿಯಾಗಿ ರೂಢಿಸಿಕೊಂಡಿರುತ್ತಾರೆ. ಆದರೆ ಶರ್ಮರಿಗೆ ವೃತ್ತಿ, ಪ್ರವೃತ್ತಿ ಎಲ್ಲವೂ ಉಪನ್ಯಾಸವೇ. ಇವರ ದಿನಚರಿ ಆರಂಭವಾಗುವುದೇ ಉಪನ್ಯಾಸದಿಂದ. ಭಾನುವಾರ, ಹಬ್ಬ, ಬಿಸಿಲು-ಮಳೆ; ಯಾವುದಿದ್ದರೂ ರಜೆ ಎಂಬುದೇ ಇಲ್ಲದ ಸರ್ವಋತು ಉಪನ್ಯಾಸಕಾರ. 1965ರಿಂದ ಪ್ರತಿನಿತ್ಯ ಐದು ಕಡೆ ಉಪನ್ಯಾಸ ಆರಂಭಿಸಿದ್ದು, ಅನುದಿನವೂ ನಡೆಯುತ್ತಿದೆ. ಐವತ್ತು ವರ್ಷಗಳಿಂದ ಈ ಅಚಲ ನಿಷ್ಠೆ. ಇಂದಿನವರೆಗೆ ಲಕ್ಷಕ್ಕೂ ಮೀರಿ ಉಪನ್ಯಾಸ ನೀಡಿದ್ದರೂ ದಣಿವಿಲ್ಲ. 70ರಲ್ಲೂ 17ರ ಉತ್ಸಾಹ.

1970ರಲ್ಲಿ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ‘ಅಧ್ಯಾತ್ಮಪ್ರಕಾಶ ಕಾರ್ಯಾಲಯ’ವನ್ನು ಸ್ಥಾಪನೆ ಮಾಡಿ ಕೊಟ್ಟಾಗಿನಿಂದ ಅದರ ಜವಾಬ್ದಾರಿ, ಮೂವತ್ತು ವರ್ಷ

‘ಶಂಕರ ಭಾಸ್ಕರ’ ಮಾಸಪತ್ರಿಕೆಯ ಸಂಪಾದಕತ್ವವನ್ನು ನಿಭಾಯಿಸುವುದರೊಂದಿಗೆ ನಿತ್ಯದ ಉಪನ್ಯಾಸವನ್ನೂ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿರುವುದು ಅವರ ಸಂಕಲ್ಪಶಕ್ತಿಗೆ ಹಿಡಿದ ಕನ್ನಡಿ. ಗುರುಕುಲ ಪದ್ಧತಿಯಲ್ಲಿ ಹದಿನೇಳು ವರ್ಷ ತಮ್ಮನ್ನು ಒರೆಗೆ ಹಚ್ಚಿಕೊಂಡ ಫಲವಾಗಿ ಶರ್ಮಾ ಸಾಣೆ ಹಿಡಿದ ರತ್ನವಾದರು. ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನವನ್ನು ಸಮರ್ಥವಾಗಿ ನಿಭಾಯಿಸಲು ಉತ್ತಮ ಚಿಂತನೆ ಬೇಕು. ಇದಕ್ಕೆ ವೇದಾಂತ ಅತ್ಯಂತ ಸಹಕಾರಿ ಎಂದು ನಿಶ್ಚಯಿಸಿ ಗುರುಗಳು ನೀಡಿದ ಜ್ಞಾನಭಿಕ್ಷೆಯನ್ನು ಸಕಲರಿಗೂ ಹಂಚುವ ಕಾಯಕಯೋಗಿ ಶರ್ವ. ಮಕ್ಕಳು ಪ್ರಶ್ನಿಸಿದರೂ, ಜ್ಞಾನಿಗಳು ಕೆಣಕಿದರೂ ಅಷ್ಟೇ ತಾಳ್ಮೆಯಿಂದ ಸೂಕ್ತ ಉತ್ತರ ನೀಡುವ ವಾಕ್ಪಟುತ್ವ ಅವರಲ್ಲಿದೆ. 85 ಕೃತಿಗಳ ರಚನೆ, ಉಪನ್ಯಾಸಕ್ಕೆ ವಿಶ್ವ ಪರ್ಯಟನೆ, ಅಪ್ಪಟ ಭಾರತೀಯ ಶೈಲಿಗೆ ಜೀವನ ಸಮರ್ಪಣೆ, ಅದ್ವೈತ ವೇದಾಂತಕ್ಕೆ ಬಹು ಸಮಯ ಮೀಸಲು. ಹಾಗಾಗಿ ಅವರ ಉಪನ್ಯಾಸಗಳು ಬಹು ಜನಪ್ರಿಯ.

ಕೀರ್ತಿಯ ಕಾಮನೆ, ಲಾಭದ ಲೋಭ, ಪ್ರತಿಷ್ಠೆಯ ಪ್ರತೀಕ್ಷೆ, ಅಗ್ಗದ ಅನಿಸಿಕೆ, ನನ್ನಿಂದಾಗಿದೆ ಎಂಬ ಠೇಂಕಾರ – ಇವ್ಯಾವುಗಳ ಸೊಲ್ಲು ಕೂಡ ಶರ್ಮರ ಬಳಿ ಸುಳಿದಿಲ್ಲ. ಸನಾತನಧರ್ಮ, ವೇದಾಂತಕ್ಕೆ ಸಂಬಂಧಿಸಿ ಏನೇ ಮಾಡಿದರೂ ಅದು ತನ್ನ ಕರ್ತವ್ಯವೆಂಬ ಭಾವಗಳೇ ಇವರನ್ನು ವೇದಾಂತ ವಾರಿಧಿಯಾಗಿಸಿವೆ. ಈ ಅನನ್ಯ ಕೊಡುಗೆ ಪರಿಗಣಿಸಿ ಈವರೆಗೆ ನೂರಾರು ಸಂಸ್ಥೆಗಳು, ಮಠಗಳು ಬಿರುದು ಬಾವಲಿ ನೀಡಿ ಸನ್ಮಾನಿಸಿವೆ. ಅಯೋಧ್ಯೆಯಲ್ಲಿ ನಡೆದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಮಹಾಮಹೋಪಾಧ್ಯಾಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಬಿರುದುಗಳು ಇವರನ್ನು ಅಲಂಕರಿಸಿವೆ. ‘ಬಾಳೆ ಗೊನೆ ಬಿಟ್ಟಮೇಲೆ ಬಾಗುತ್ತದೆ. ತಿಳಿಯುತ್ತ ಹೋದಂತೆ ನಾವು ಸರಳವಾಗಬೇಕು’ ಎನ್ನುವ ಶರ್ಮರ ಧೋರಣೆ ಅವರ ಪಾಂಡಿತ್ಯಕ್ಕೆ ದ್ಯೋತಕ.

ಕುಟುಂಬದ ಪ್ರೀತಿಯೇ ಸ್ಪೂರ್ತಿ: ‘ಗುರುಗಳ ಕರುಣೆ, ಪತ್ನಿ ರಾಜೇಶ್ವರಿಯ ಸಹಕಾರ ಮತ್ತು ಇಬ್ಬರು ಪುತ್ರಿಯರು ಅನನ್ಯವಾಗಿ ನೀಡುತ್ತಿರುವ ಬೆಂಬಲವೇ ನನ್ನ ಉಪನ್ಯಾಸ ಮತ್ತು ಕೃತಿರಚನಾ ಕಾರ್ಯಕ್ಕೆ ಸ್ಪೂರ್ತಿ’ ಎನ್ನುತ್ತಾರೆ ಶರ್ವ. ‘ಗೃಹಸ್ಥನಾದವನು ಮೊದಲು ಕುಟುಂಬಕ್ಕೆ ಆದ್ಯತೆ ನೀಡಬೇಕು. ಬೆಳಗ್ಗೆ ಉಪನ್ಯಾಸ, ನಂತರ ಅಧ್ಯಯನ, ಸಂಜೆ ವೇಳೆಗೆ ಬರವಣಿಗೆ. ಇದರ ನಡುವೆ ಕುಟುಂಬದೊಂದಿಗೆ ಕುಳಿತು ಸ್ವಲ್ಪಹೊತ್ತು ತೂಗುಮಂಚದಲ್ಲಿ ಜೋಕಾಲಿ ಆಡುತ್ತೇನೆ’ ಎಂದು ಸಂಭ್ರಮದಿಂದ ಹೇಳುತ್ತಾರೆ ಶರ್ವ. ಸದಾ ಉಪನ್ಯಾಸದಲ್ಲೇ ನಿರತರಾದ ಶರ್ಮಾ ಅತಿ ಸರಳವಾಗಿ ವಿವಾಹವಾದದ್ದೂ ಅಧ್ಯಾತ್ಮಪ್ರಕಾಶ ಕಾರ್ಯಾಲಯದಲ್ಲೇ.ವೇದದ ಒಂದು ಚಿಕ್ಕ ಮಂತ್ರ. ಅದು ಧ್ವನಿಸುವ ಅರ್ಥದ ವಿಶ್ಲೇಷಣೆ, ಸರಳ ಕನ್ನಡದಲ್ಲಿ ನಿರೂಪಣೆ, ಚಂದದ ಧಾರ್ವಿುಕ, ಸಾಮಾಜಿಕ ಉದಾಹರಣೆ, ಅದು ಹೇಗೆ ವರ್ತಮಾನಕ್ಕೆ ಹೊಂದಿಕೆಯಾಗುತ್ತದೆಂಬ ವಿವರ, ಇನ್ನೂ ಸ್ಪಷ್ಟವಾಗಿ ತಿಳಿದುಕೊಳ್ಳಲು ತಿಳಿಹಾಸ್ಯ, ಜೀವನಸ್ಪೂರ್ತಿಯನ್ನು ಕಟ್ಟಿಕೊಡುವ ಸಂದೇಶ – ಹೀಗೆ ಸಾಗುವ ಉಪನ್ಯಾಸ ಎಲ್ಲ ವಯೋಮಾನದವರಿಗೂ ಪ್ರಿಯವಾಗುತ್ತದೆ. ಇಂಥ ಲಕ್ಷಾಂತರ ಉಪನ್ಯಾಸಗಳ ಮೂಲಕ ಜಿಜ್ಞಾಸುಗಳ ಮನ ತಣಿಸುವ ಉಪನ್ಯಾಸಕಾರ ಮಹಾಮಹೋಪಾಧ್ಯಾಯ ಕೆ.ಜಿ. ಸುಬ್ರಾಯ ಶರ್ಮಾ ಅವರ ಪರಿಚಯ ಹಾಗೂ ಸಂದರ್ಶನವಿದು.

ನಾನು ಉಪನ್ಯಾಸ ಮಾಡುತ್ತೇನೆ. ತಿಳಿದ ಜ್ಞಾನವನ್ನು ಬರೆಯುವ ಹವ್ಯಾಸವಿದೆ ಅಷ್ಟೇ. ವೃದ್ಧರಿಂದ ಮಕ್ಕಳವರೆಗೂ ನನಗೆ ಶಿಷ್ಯರಿದ್ದಾರೆ. ಜಾತಿ-ಮತ-ದೇಶ-ಭಾಷೆ ಮೀರಿದ ಕೇಳುಗರಿದ್ದಾರೆ. ಬರೆದದ್ದನ್ನು ಪುಸ್ತಕ ಮಾಡಿ, ಅನ್ಯ ಭಾಷೆಗಳಿಗೂ ಅನುವಾದಿಸುವ ಅಭಿಮಾನಿ ಬಳಗದ ಶ್ರೀಮಂತಿಕೆ ಎನಗಿದೆ. ಜೀವನದಲ್ಲಿ ಶ್ರದ್ಧೆ, ಪ್ರೀತಿ, ವಿಶ್ವಾಸ ಮತ್ತು ಅಭಿಮಾನಗಳಿಂದ ನೀವು ಏನನ್ನಾದರೂ ಗಳಿಸಬಹುದು, ಸಾಧಿಸಬಹುದು.

ನುಡಿಯುವುದು, ನಡೆಯುವುದು, ಮಾಡುವುದು ಮತ್ತು ಅಚಲ ನಿಷ್ಠೆ – ಎಲ್ಲವೂ ವೇದಾಂತವೇ. ನೀರಸವಲ್ಲದ, ಬೇಸರವಿಲ್ಲದ, ಸದಾ ಲವಲವಿಕೆಯಿಂದ ಕೂಡಿದ, ಸಂಸಾರಿಯಾಗಿದ್ದರೂ ಪರಮಾರ್ಥ ಚಿಂತನೆಯ ಬದುಕನ್ನು ನಿರ್ವಹಿಸುತ್ತಿರುವ ಬಹುಶ್ರುತ ವಿದ್ವಾಂಸರು ಶರ್ಮ. ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಸಾರಸಂಗ್ರಹವಿದು.

ವೇದಾಂತ ಕಲಿಕೆ ಆರಂಭವಾಗಿದ್ದು ಯಾವಾಗ?

ಬಾಲ್ಯದಲ್ಲಿ ಬಡತನ. ಎಂಟನೇ ವರ್ಷಕ್ಕೆ ಉಪನಯನವಾಗಿತ್ತು. ಅಧ್ಯಾತ್ಮಕ್ಷೇತ್ರದಲ್ಲಿ ಅಭಿನವ ಶಂಕರ ಎಂದೇ ಖ್ಯಾತರಾಗಿರುವ ಹೊಳೆನರಸೀಪುರದ

ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ಭಿಕ್ಷಾ ಜೋಳಿಗೆಗೆ ಒಂದು ದಿನ ನಮ್ಮ ತಂದೆ ನನ್ನನ್ನೇ ಅರ್ಪಿಸಿಬಿಟ್ಟರು. ‘ಈತ ಇನ್ನು ಮುಂದೆ ನಿಮ್ಮ ಸುಪರ್ದು. ಉದ್ಧಾರ ಮಾಡಿ’ ಎಂದು ಬೇಡಿದರು. ಅಂದಿನಿಂದ ನಾನು ಗುರುಗಳ ಶಿಷ್ಯ. ನಿರಂತರ 17 ವರ್ಷ ಹೊಳೆನರಸೀಪುರ ಆಶ್ರಮದಲ್ಲಿದ್ದು ಗುರುಸೇವೆ ಮಾಡಿದೆ. ಗುರು-ಶಿಷ್ಯ ಅನುಬಂಧದೊಂದಿಗೆ ಅಜ್ಜ-ಮೊಮ್ಮಗನ ವಾತ್ಯಲ್ಯವೂ ಬೆಳೆದುಬಿಟ್ಟಿತು. ಕುಳಿತರೂ, ನಿಂತರೂ, ಪ್ರಸಾದ ಸ್ವೀಕರಿಸುವಾಗಲೂ ನನಗೆ ಪಾಠ. ವಿಷ್ಣು ಸಹಸ್ರನಾಮದಿಂದ ಆರಂಭಿಸಿ 16 ಸಾವಿರ ಶ್ಲೋಕಗಳನ್ನು ಕಂಠಸ್ಥ ಮಾಡಿಸಿದರು. ಯಾವಾಗ ಕೇಳಿದರೂ ಅವರಿಗೆ ಒಪ್ಪಿಸುವಷ್ಟು ಗಟ್ಟಿ ಮಾಡಿದರು. ಇದು ನನ್ನ ಪ್ರಾಕ್ತನ ಪುಣ್ಯ.

 ಉಪನ್ಯಾಸಕ್ಕೆ ಏನು ಪ್ರೇರಣೆ?

ಬಡತನ, ಗುರು ಕೊಟ್ಟ ಜ್ಞಾನ, ಕಲಿಯಲೇಬೇಕೆಂಬ ಛಲ, ಕಲಿತ ವೇದಾಂತವನ್ನು ನಾಲ್ಕಾರು ಜನರಿಗೆ ಹಂಚುವ ಹಂಬಲ. ಇತರರೊಂದಿಗೆ ಹಂಚಿಕೊಂಡಷ್ಟೂ ವೃದ್ಧಿಯಾಗುವುದು ಜ್ಞಾನ ಮಾತ್ರ. ಗುರುವಿನಿಂದ ಬಂದದ್ದನ್ನು ಗುರುವಿನ ಅಂತರಾತ್ಮಕ್ಕೇ ಸಮರ್ಪಣೆ ಮಾಡುವ ಕಾರ್ಯಕ್ಕೆ ಉಪನ್ಯಾಸದ ಪ್ರಕಾರವನ್ನು ಆಯ್ಕೆ ಮಾಡಿಕೊಂಡೆ. ಮಡದಿ-ಮಕ್ಕಳೂ ಪ್ರೋತ್ಸಾಹ ನೀಡುತ್ತಲೇ ಇದ್ದಾರೆ.

ವೇದಾಂತದ ಬಗ್ಗೆ ನಿಮ್ಮ ವ್ಯಾಖ್ಯೆ ಏನು?

ವೇದ ಅನಾದಿ. ಅದರ ಸಾರವೇ (ಹೃದಯ) ವೇದಾಂತ. ಇದಕ್ಕೆ ಪೋಷಕ (ಕೈಕಾಲು) ವೇದಾಂಗ. ವೇದಾಂತ ಎಂಬುದು ಗೊಡ್ಡು ಕಥೆಯಲ್ಲ. ಇದು ಮೋಸ್ಟ್ ಪ್ರಾಕ್ಟಿಕಲ್, ರ್ಯಾಷನಲ್, ತತ್ತ್ವಬೋಧಕ. ಅಂದಮಾತ್ರಕ್ಕೆ ಸಪ್ಪೆಯಲ್ಲ, ರಂಜನೆ ರಸವೂ ಮಿಳಿತಗೊಂಡಿದೆ. ಒಳಗಿನ ಅರಿವುಗಳನ್ನು ಅರಳಿಸುತ್ತದೆ. ನಿನ್ನಂತೆ ಪರರನ್ನೂ ನೋಡು ಎನ್ನುತ್ತದೆ. ದುಃಖ ಬಂದಾಗ ಅದು ಅನಿತ್ಯ ಎಂದು ಸಮಾಧಾನಿಸುತ್ತದೆ. ಜೀವನಕ್ಕೆ ಸದಾ ಪ್ರೇರಣೆ, ಪುಷ್ಟಿ ಮತ್ತು ಪುನಶ್ಚೇತನ ನೀಡಿ ಸಾಧನೆಗೆ ದೇಹ-ಮನಸ್ಸುಗಳನ್ನು ಅಣಿ ಮಾಡುತ್ತದೆ. ರಾಮಾಯಣ-ಭಾರತಗಳು ನೀತಿಬೋಧಕ. ವೇದಾಂತ ತತ್ವಬೋಧಕ.

ವೇದಾಂತ ಯಾರಿಗೆ ಅನ್ವಯವಾಗುತ್ತದೆ?

ಅನೇಕರು ವೃದ್ಧರಿಗೆ, ನಿವೃತ್ತರಿಗೆ ಎಂದು ಭಾವಿಸಿದ್ದಾರೆ. ಇದು ಎಲ್ಲ ವಯೋಮಾನದವರಿಗೂ ಅಮೃತ. ಜಾತಿ, ಮತ, ಲಿಂಗ, ವಯಸ್ಸುಗಳ ಗೋಡೆ, ಗೊಡವೆ ಇದಕ್ಕಿಲ್ಲ. ಔಟಡಛಿ ಅ್ಝ ಏಚಠಿಛಿ ಘಟ್ಞಛಿ. ಎಲ್ಲರೂ ಒತ್ತಡ, ವ್ಯಸನ ಮತ್ತು ಒಲ್ಲದ ವಿಚಾರಗಳಿಂದ ಮುಕ್ತರಾಗಿ ಮನಸ್ಸನ್ನು ಪರಿಶುದ್ಧವಾಗಿರಿಸಿಕೊಂಡು ಸುಖಮಯ ಜೀವನಕ್ಕೆ ಸಹಕರಿಸುತ್ತದೆ. ನ್ಯಾಯಬದ್ಧ, ಯುಕ್ತಬದ್ಧ ವಿಚಾರವನ್ನು ಎಲ್ಲರ ಹೃದಯಕ್ಕೆ ಮುಟ್ಟುವಂತೆ ಹೇಳುವ ಕಲೆ ಇದ್ದರೆ ಎಲ್ಲರೂ ಕೇಳುತ್ತಾರೆ.

 ಉಪನ್ಯಾಸ ಕೇಳಲು ಏನಾದರೂ ಮನೋಭೂಮಿಕೆ ಬೇಕೆ?

ಇಂದು ಗುರುಕುಲಗಳಿಲ್ಲ, ಆದರೆ ತಿಳಿಯುವ ಶ್ರದ್ಧೆ ಇದ್ದರೆ ಸಾಕು. ಆ ಕಾಲದ ಉಡುಪು ಮರೆಯಾಗುತ್ತಿದ್ದರೂ ಮನಸ್ಸು ಬಿಳಿ-ತಿಳಿಯಾಗಿದ್ದರೆ ಸಾಕು. ಸಂಸ್ಕೃತ-ಸಂಸ್ಕೃತಿಗಳ ಬಗ್ಗೆ ಪ್ರೀತಿ ಇದ್ದರೆ ಸಾಕು. ಕಣ್ಣಿಗೆ ಕಾಣುವುದನ್ನೂ ಮೀರಿ ಜೀವನಕ್ಕೆ ಇನ್ನೂ ಅನೇಕ ದರ್ಶನಗಳಿವೆ. ಅದನ್ನು ಒಂದಲ್ಲ ಒಂದು ದಿನ ನೋಡಿ ಧನ್ಯನಾಗುವೆ ಎಂಬ ಆಶಾವಾದವಿದ್ದರೆ ಉಪನ್ಯಾಸ ಅಂತರಾಳಕ್ಕೆ ಇಳಿಯುತ್ತದೆ. ಯಾರಿಗೆ, ಯಾವ ಸಂದರ್ಭಕ್ಕೆ, ಏನನ್ನು, ಎಷ್ಟು ಪ್ರಮಾಣದಲ್ಲಿ ಹೇಳಬೇಕು ಎಂಬ ಕಲೆಗಾರಿಕೆ ಉಪನ್ಯಾಸಕಾರನಿಗೆ ಬೇಕು.

ಹೊಸ ಪೀಳಿಗೆಯ ಬಗ್ಗೆ ಏನನ್ನಿಸುತ್ತದೆ?

ಅತೀವ ಭರವಸೆ ಇದೆ. ನಿತ್ಯವೂ ಎಳೆಯರಿಗೆ ನಾನು ಸ್ತುತಿ, ವೇದ, ನೀತಿಪಾಠ ಹೇಳುವೆ. ಅವರ ಕಲಿಕಾ ಉತ್ಸಾಹ ಅಪಾರವಾಗಿದೆ. ಪಾಲಕರು ಬೆಂಬಲಿಸಬೇಕಷ್ಟೇ. ಮಕ್ಕಳು ಕೆಡುತ್ತಿದ್ದಾರೆ ಎಂದರೆ ಇದರಲ್ಲಿ ಅವರ ತಪ್ಪೇನೂ ಇಲ್ಲ. ಸಂಸ್ಕಾರ ಕೊಡುವಲ್ಲಿ ಹಿರಿಯರೇ ಎಡವಿದ್ದಾರೆಂದರ್ಥ. ಇಂದಿನ ಅಪ್ಪ-ಅಮ್ಮಂದಿರಿಗೆ ಜೀವನದ ಪರಮ ಗುರಿ, ರಹಸ್ಯಗಳು ಮೊದಲು ಅರ್ಥವಾಗಿರಬೇಕು. ವಾರಕ್ಕೆ ಒಂದು ದಿನವಾದರೂ ಅವರೇ ರಾಮಾಯಣ-ಮಹಾಭಾರತದ ಸಣ್ಣ ಕಥೆಯನ್ನಾದರೂ ಹೇಳಬೇಕು.

ಶ್ರೋತೃವರ್ಗಕ್ಕೆ ನಿಮ್ಮ ಕಿವಿಮಾತುಗಳೇನು?

rigidity ಬೇಡ. ಮತ-ಮಠ-ಪಂಥಗಳ ಬಿಗಿಯಾದ ಚೌಕಟ್ಟು ತೊರೆಯೋಣ. ಶಾಂತಿ, ಸಮಾಧಾನದಿಂದ ಸಮೃದ್ಧವಾದ ಜೀವನ ನಿರ್ವಹಿಸು, ನಿರಂತರ ಕಲಿಕೆ ಮತ್ತು ಸಾಧನೆಯಿಂದ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು.

ನಿಮ್ಮ ಕೃತಿಗಳ ರಚನೆ ಹೇಗಾಯಿತು?

ಉಪನ್ಯಾಸ ಮಾಡಿದ್ದು ಕೆಲವು ದಿನ ಮಾತ್ರ ಕೇಳುಗರ ತಲೆಯಲ್ಲಿ ಉಳಿಯುತ್ತದೆ. ಆದರೆ ಅದನ್ನೇ ಅವರಿಗೆ ಕೃತಿರೂಪದಲ್ಲಿ ನೀಡಿದರೆ ಯಾವಾಗ ಬೇಕಾದರೂ ಅವಲೋಕಿಸಿ ಜ್ಞಾನ ಪಡೆಯಬಹುದು ಎಂಬ ಚಿಂತನೆ ಬಂತು. ನೀತಿಕಥೆಗಳನ್ನು ಆಧರಿಸಿದ ‘ಪ್ರಭೇದ ಚಿಂತಾಮಣಿ’ ಬರೆದೆ. ಇದು ಕನ್ನಡದಲ್ಲಿ ಮಾತ್ರವಲ್ಲ, ಸಂಸ್ಕೃತ, ಹಿಂದಿ, ಮರಾಠಿ, ತಮಿಳು ಸೇರಿ ಹತ್ತು ಭಾಷೆಗಳಿಗೆ ಅನುವಾದವಾಯಿತು. ‘ವೇದಾಂತ ಸಂವತ್ಸರ’ (ಉಪನಿಷತ್ತುಗಳ ಸರಳ ಸಂದೇಶ) ನಾಲ್ಕು ಭಾಷೆಗಳಿಗೆ ಅನುವಾದಗೊಂಡಿತು. ಹೀಗೇ 85ಕ್ಕೂ ಹೆಚ್ಚು ಕೃತಿಗಳ ರಚನೆಯಾಗಿದೆ. ಎಲ್ಲವೂ ಗುರುಗಳ ಕೃಪೆ, ಶಿಷ್ಯವರ್ಗದ ಪ್ರೀತಿಗೆ ಸಮರ್ಪಣೆ. ಹಾಗಾಗಿ ಜ್ಞಾನಾಸಕ್ತರಿಗೆ ಉಚಿತ ವಿತರಣೆ. 1998ರಲ್ಲಿ ನನ್ನ 50ನೇ ಜನ್ಮದಿನಕ್ಕೆ ಅಭಿಮಾನಿಗಳು ‘ವಿವೇಕ ಭಾಸ್ಕರ’ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದರು. ಅಂದು ಐವತ್ತು ವಿದ್ವಾಂಸರಿಗೆ ಸನ್ಮಾನಿಸಿ ಆಶೀರ್ವಾದ ಪಡೆದು ನನ್ನ ಕಾರ್ಯಕ್ಷೇತ್ರದ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡೆ.

ನಿಮ್ಮ ಕೇಳುಗ ವರ್ಗದವರ ಬಗ್ಗೆ ಹೇಳಿ.

ಮೊದಲೆಲ್ಲಾ ಮುದುಕರೇ ಬರುತ್ತಿದ್ದರು. ಈಗ ಐಟಿ-ಬಿಟಿಗಳ ಯುವಸಮೂಹವೂ ಬರುತ್ತಿದೆ. 10 ಗಂಟೆಗೆ ಕಚೇರಿ ಎಂದರೆ ಬೆಳಗ್ಗೆ 7-8 ಗಂಟೆಯ ಉಪನ್ಯಾಸಕ್ಕೆ ಹಾಜರ್. ನೋಟ್ಸ್ ಮಾಡಿಕೊಂಡು ಸೀರಿಯಸ್ಸಾಗಿ ಸ್ಟಡಿ ಮಾಡ್ತಾರೆ. ಅದಕ್ಕಾಗಿ ‘ಮಡಿ’ ಚೌಕಟ್ಟನ್ನು ನಾನು ಸ್ವಲ್ಪ ರಿಲ್ಯಾಕ್ಸ್​ಗೊಳಿಸಿದ್ದೇನೆ. ವಿದೇಶೀಯರೂ ನನ್ನಲ್ಲಿಗೆ ಬರುತ್ತಾರೆ. ಪ್ರಾರಬ್ಧ ದೂರವಾಗಬೇಕು ಎಂದರೆ ಕೊಂಚವಾದರೂ ಪರಮಾರ್ಥ ಚಿಂತನೆ ಬೇಕು.

ಸಂಸ್ಕೃತಿ ನಂಟು ಕಡಿಮೆಯಾಗಲು ಏನು ಕಾರಣ?

‘ಗತಾನುಗತಿಕೋ ಲೋಕಃ’ – ‘ಇತರರಂತೆಯೇ ನಾವು ಬದುಕಬೇಕು’ ಎಂಬ ಧ್ಯೇಯ, ಅದಕ್ಕಾಗಿ ಕೊಳ್ಳಬಾಕ ಸಂಸ್ಕೃತಿ, ಯಾರನ್ನೋ ಮೆಚ್ಚಿಸಲು ನಮಗೆ ಎಟುಕದ ವಸ್ತು-ವಿಷಯಗಳ ಬಗ್ಗೆ ವ್ಯಾಮೋಹ – ಇವೆಲ್ಲವೂ ಇಂದು ನಮ್ಮನ್ನು ಭಾರತೀಯತೆಯಿಂದ ದೂರ ಮಾಡುತ್ತಿವೆ. ಇಂಥವರನ್ನೂ ಪರಿವರ್ತಿಸುವ ಶಕ್ತಿ ವೇದಾಂತಕ್ಕಿದೆ.

ಸರಳ ಜೀವನ, ಉನ್ನತ ಚಿಂತನೆ

‘ಜೀವನ ಯಾವಾಗಲೂ ಸರಳವಾಗಿರಬೇಕು. ಚಿಂತನೆ ಉನ್ನತವಾಗಿರಬೇಕು’ ಎನ್ನುವ ಶರ್ಮಾ ಅವರು ಸದಾ ಶ್ವೇತವಸ್ತ್ರಧಾರಿ. ಮನೆ-ಉಪನ್ಯಾಸ ಸ್ಥಳ ಮಾತ್ರವಲ್ಲ, ಜರ್ಮನಿ ವಿಶ್ವ ವಿದ್ಯಾಲಯದಿಂದ ಅಮೆರಿಕದ ವೈಟ್​ಹೌಸ್​ವರೆಗೂ ಸಾಧಾರಣ ಬಿಳಿಯ ಪಂಚೆ, ಶಲ್ಯದಲ್ಲೇ ತೆರಳಿ ಜ್ಞಾನಝುರಿ ಹರಿಸಿದ್ದಾರೆ. ಜರ್ಮನಿ ವಿಶ್ವವಿದ್ಯಾಲಯ, ಫ್ಲೋರಿಡಾ ವಿಶ್ವವಿದ್ಯಾಲಯ, ಅಮೆರಿಕನ್ ಎಂಬೆಸಿಗಳಲ್ಲಿ ತಿಂಗಳುಗಟ್ಟಲೆ ವೇದಾಂತ ಬೋಧಿಸಿದ ಹಿರಿಮೆ ಇವರದು. ತನು-ಮನ ಮತ್ತು ಅಲಂಕಾರದಲ್ಲಿ ಶುದ್ಧತೆ ಇರಬೇಕೇ ಹೊರತು ಡಾಂಭಿಕತೆ ಬೇಡ ಎನ್ನುವುದು ಅವರ ನಿಲುವು.

 

 

 

Leave a Reply

Your email address will not be published. Required fields are marked *

Back To Top